ಬೆಂಗಳೂರು: ದಕ್ಷಿಣ ಪಿನಾಕಿನಿ ನದಿಯ ಪ್ರವಾಹ- ಇ-ಸ್ಟೋರ್ ಗೋಡೌನ್‌ಗಳ ಸಂಪರ್ಕ ಕಡಿತ
ಬೆಂಗಳೂರು, ಸೆಪ್ಟೆಂಬರ್ 08: ದಕ್ಷಿಣ ಪಿನಾಕಿನಿ ನದಿಯ ಪ್ರವಾಹದಿಂದಾಗಿ ಬಿಗ್ ಬಾಸ್ಕೆಟ್, ಫ್ಲಿಪ್‌ಕಾರ್ಟ್ ಮತ್ತು ಅಮೆಜಾನ್‌ನಂತಹ ದೊಡ್ಡ ಬ್ರಾಂಡ್‌ಗಳ ಗೋದಾಮುಗಳನ್ನು ಹೊಂದಿರುವ ಬೆಂಗಳೂರಿನ ಹೊಸಕೋಟೆ ತಾಲೂಕು ಮತ್ತು ಕೊರಲೂರು ಗ್ರಾಮ ಪಂಚಾಯಿತಿ ನಡುವಿನ ಸಂಪರ್ಕ ಕಡಿತಗೊಂಡಿದೆ. ಹೊಸಕೋಟೆ ಪಂಚಾಯಿತಿಯ ಕೆಳಭಾಗದ ಪ್ರದೇಶಗಳು ಸಂಪೂರ್ಣವಾಗಿ ಜಲಾವೃತಗೊಳಿಸುತ್ತಿವೆ.
ದಕ್ಷಿಣ ಪಿನಾಕಿನಿ ನದಿ ತುಂಬಿ ಹರಿಯುತ್ತಿರುವುದರಿಂದ ಪಂಚಾಯ್ತಿ ವ್ಯಾಪ್ತಿಯ ಬೆಂಗಳೂರಿನಿಂದ ಸಂಪರ್ಕ ಕಲ್ಪಿಸುವ ಪ್ರಮುಖ ಕೊಂಡಿಯಾಗಿರುವ ಚನ್ನಸಂದ್ರ ಸೇತುವೆ ಮುಳುಗಡೆಯಾಗಿದೆ. ಸ್ಥಳೀಯರು ಹಾಗೂ ಗೋದಾಮುಗಳಿಗೆ ಭೇಟಿ ನೀಡಬೇಕಾದವರು ಈಗ ಓಡಾಡಲು ಸಾಧ್ಯವಾಗದೆ ಪರದಾಡುವಂತಾಗಿದೆ.
Recommended Video
ಬೆಂಗಳೂರು ನಗರದ ಮಹದೇವಪುರ, ಬೆಳ್ಳಂದೂರು, ವರ್ತೂರು, ಸರ್ಜಾಪುರ, ವೈಟ್‌ಫೀಲ್ಡ್ ಮತ್ತು ಸುತ್ತಮುತ್ತಲಿನ ಪ್ರದೇಶಗಳ ಜಲಾವೃತ ಪ್ರದೇಶಗಳಿಗೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವರ್ತೂರು ಮತ್ತು ಬೆಳ್ಳಂದೂರು ಕೆರೆಗಳಿಂದ ಹೆಚ್ಚಿನ ಪ್ರಮಾಣದ ನೀರನ್ನು ಕೆಳಕ್ಕೆ ಬಿಡುಗಡೆ ಮಾಡಿದ್ದರಿಂದ ನದಿಯು ತುಂಬಿ ಹರಿಯುತ್ತಿದೆ ಎಂದು ಹೇಳಲಾಗಿದೆ.

ಶಾಲೆಗಳು ಆಫ್‌ಲೈನ್ ತರಗತಿಗಳಿಗೆ ರಜೆ
ಈ ಪ್ರದೇಶವು ಪಂಚಾಯತ್ ವ್ಯಾಪ್ತಿಯಲ್ಲಿ ಬರುತ್ತದೆ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತದ ಅಡಿಯಲ್ಲಿದೆ. ಇದು ಬಿಬಿಎಂಪಿ ಮಿತಿಯ ಕೊನೆಯ ಹಂತವಾಗಿದೆ. ಸಾರಿಗೆ ಸಂಪೂರ್ಣ ಸ್ಥಗಿತಗೊಂಡಿರುವುದರಿಂದ ಆ ಪ್ರದೇಶದ ಶಾಲೆಗಳು ಆಫ್‌ಲೈನ್ ತರಗತಿಗಳಿಗೆ ರಜೆ ಘೋಷಿಸಿವೆ. ನೀರು ನಿಲ್ಲದ ಕಾರಣ ಹಲವು ಕಾರ್ಮಿಕರು ಗೋದಾಮುಗಳಲ್ಲಿ ಸಿಲುಕಿಕೊಂಡಿದ್ದಾರೆ. ಸತತ ಮಳೆಯಿಂದಾಗಿ ನದಿ ತುಂಬಿದ್ದು ಸರ್ಜಾಪುರ, ಹೊಸಕೋಟೆ ಹಾಗೂ ಸುತ್ತಮುತ್ತಲಿನ ಪ್ರದೇಶಗಳಿಗೆ ಸಂಪರ್ಕ ಕಲ್ಪಿಸುವ ಕೆರೆಗಳು ಕೂಡ ಸಂಪೂರ್ಣ ಭರ್ತಿಯಾಗಿವೆ.

ಸೇತುವೆ ಬಳಿ ಅಕ್ರಮ ಮರಳು ದಂಧೆ
"ಕಳೆದ ಎರಡು ದಿನಗಳಿಂದ ನಾವು ನಮ್ಮ ಮನೆಗಳಲ್ಲಿ ಸಿಲುಕಿಕೊಂಡಿದ್ದೇವೆ. ಬೆಂಗಳೂರಿಗೆ ಪ್ರಯಾಣಿಸಲು ಚನ್ನಸಂದ್ರ ಸೇತುವೆ ಒಂದೇ ಕೊಂಡಿ. ಇನ್ನೊಂದು ರಸ್ತೆ, ಹೊಸಕೋಟೆ ರಸ್ತೆ ಕೂಡ ಜಲಾವೃತಗೊಂಡಿದ್ದರಿಂದ ಬಂದ್ ಆಗಿದೆ. ಸೇತುವೆ ಬಳಿ ಆರು ತಿಂಗಳಿಂದ ಅಕ್ರಮ ಮರಳು ದಂಧೆ ನಡೆಯುತ್ತಿರುವುದರಿಂದ ನದಿ ಸೇತುವೆ ಮೇಲಿನ ರಸ್ತೆ ತಗ್ಗು ಪ್ರದೇಶವಾಗಿದೆ.
ಇದೀಗ ಬೆಂಗಳೂರಿನಿಂದ ಕಣಿವೆಗಳಿಗೆ ಹೆಚ್ಚಿನ ಪ್ರಮಾಣದಲ್ಲಿ ನೀರು ಬಿಡಲಾಗುತ್ತಿದ್ದು, ನದಿಯ ಉಬ್ಬರ ಮತ್ತು ಮಳೆಯ ಜೊತೆಗೆ ನದಿಯು ತುಂಬಿ ಹರಿಯುತ್ತಿದೆ ಮತ್ತು ಪ್ರವಾಹ ಉಂಟಾಗಿದೆ. ಕಳೆದ ಎರಡು ದಿನಗಳಿಂದ ನಮಗೆ ಯಾವುದೇ ಸರ್ಕಾರಿ ಸಂಸ್ಥೆಗಳಿಂದ ಸಹಾಯ ಸಿಕ್ಕಿಲ್ಲ' ಎಂದು ಕೊರಲೂರು ಗ್ರಾಮದ ನಿವಾಸಿ ರಮಣ ಎಂ. ಅಳಲು ತೋಡಿಕೊಂಡಿದ್ದಾರೆ.

ಹಾಲು ಮತ್ತು ತರಕಾರಿ ಪೂರೈಕೆಗೆ ಸಮಸ್ಯೆ
ತಿರುಮಲಶೆಟ್ಟಿಹಳ್ಳಿ, ಸಮೇತನಹಳ್ಳಿ ಮತ್ತಿತರ ಸುತ್ತಮುತ್ತಲಿನ ನಿವಾಸಿಗಳೂ ಇದೇ ಅಳಲು ತೋಡಿಕೊಂಡಿದ್ದಾರೆ. ಈ ಪ್ರದೇಶಗಳಲ್ಲಿ ವೈಟ್‌ಫೀಲ್ಡ್ ಮತ್ತು ಹೊಸಕೋಟೆಯಲ್ಲಿ ವೈದ್ಯಕೀಯ, ಆರೋಗ್ಯ ಸೌಲಭ್ಯಗಳು ಮತ್ತು ಮನೆಯ ಅಗತ್ಯಗಳಿಗಾಗಿ ವಾಣಿಜ್ಯ ಸಂಸ್ಥೆಗಳನ್ನು ಅವಲಂಬಿಸಿರುವ ಅನೇಕ ಎತ್ತರದ ಅಪಾರ್ಟ್ಮೆಂಟ್ ಸಂಕೀರ್ಣಗಳಿವೆ. ಆದರೆ ಈಗ ದಿನನಿತ್ಯದ ಹಾಲು ಮತ್ತು ತರಕಾರಿ ಪೂರೈಕೆಗೆ ಸ್ಥಳೀಯ ಅಂಗಡಿಗಳನ್ನೇ ಅವಲಂಬಿಸುವಂತಾಗಿದೆ.

ಸ್ಥಳೀಯ ನಿವಾಸಿಗಳ ಅಳಲು
"ನಮಗೆ ಸೇತುವೆ ದಾಟಲು ಸಾಧ್ಯವಾಗುತ್ತಿಲ್ಲ. ಕಾರುಗಳು ಮತ್ತು ದ್ವಿಚಕ್ರ ವಾಹನಗಳು ಸಿಕ್ಕಿಹಾಕಿಕೊಳ್ಳುತ್ತಿವೆ. ಬಸ್‌ಗಳು ಪ್ರಯಾಣಿಸುವುದನ್ನು ನಿಲ್ಲಿಸಿವೆ ಮತ್ತು ನಮ್ಮನ್ನು ಸಾಗಿಸಲು ನಾವು ಟ್ರ್ಯಾಕ್ಟರ್‌ಗಳನ್ನು ಅವಲಂಬಿಸಿದ್ದೇವೆ. ರಸ್ತೆ, ಚರಂಡಿ ಮತ್ತು ನದಿಯ ನಡುವಿನ ವ್ಯತ್ಯಾಸ ತಿಳಿಯುತ್ತಿಲ್ಲ. ಇಲ್ಲಿ ಪ್ರಯಾಣ ತುಂಬಾ ಅಪಾಯಕಾರಿಯಾಗಿದೆ'' ಸ್ಥಳೀಯ ನಿವಾಸಿಗಳು ಹೇಳಿಕೊಂಡಿದ್ದಾರೆ.
''ಪ್ರವಾಹ ಅನಿರೀಕ್ಷಿತವಾಗಿತ್ತು. ವಿದ್ಯುತ್ ಸರಬರಾಜು ಕೂಡ ಅನಿಯಮಿತವಾಗಿದೆ. ಇದು ಪರಿಸ್ಥಿತಿಯನ್ನು ಇನ್ನಷ್ಟು ಹದಗೆಡಿಸುತ್ತದೆ "ಎಂದು ಇನ್ನೊಬ್ಬ ನಿವಾಸಿ ಪ್ರತೀಕ್ ಘೋಷ್ ಹೇಳಿದರು. ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತದ ಅಧಿಕಾರಿಗಳು ಸಮಸ್ಯೆಯನ್ನು ಪರಿಶೀಲಿಸುತ್ತಿದ್ದಾರೆ ಎಂದು ಹೇಳಿದರು. ನೀರು ಸರಾಗವಾಗಿ ಹರಿದು ಹೋಗಲು ಜೆಸಿಬಿ ಬಳಸಿ ಕಳೆ ತೆಗೆಯಲಾಗುತ್ತಿದ್ದು, ಈ ಕಾರ್ಯವೂ ಮಳೆಯಿಂದಾಗಿ ವಿಳಂಬವಾಗುತ್ತಿದೆ ಎಂದು ಅವರು ಹೇಳಿದರು.












Click it and Unblock the Notifications