ನಕ್ಷತ್ರ ಆಮೆ ರವಾನೆಗೆ ಯತ್ನ: ಕುರ್ವಿ ಸಿಕ್ಕಿಬಿದ್ದ, ಕಿಂಗ್‌ಪಿನ್ ಎಸ್ಕೇಪ್
ಬೆಂಗಳೂರು, ನ. 16: ನಕ್ಷತ್ರ ಆಮೆ. ಮೈ ತುಂಬಾ ನಕ್ಷತ್ರಗಳನ್ನು ಹೊಂದಿರುವ ಈ ಆಮೆ ತಳಿಗೆ ವಿದೇಶದಲ್ಲಿ ಬಹು ಬೇಡಿಕೆ! ಹೀಗಾಗಿ ವಿದೇಶಗಳಿಗೆ ದೊಡ್ಡ ಮಟ್ಟದಲ್ಲಿ ಅಕ್ರಮ ಸಾಗಣೆ ಮಾಡುವ ದೊಡ್ಡ ಜಾಲವೇ ಇದೆ! ಈ ನಕ್ಷತ್ರ ಆಮೆಗೆ ದುರುಳರು ಇಟ್ಟಿರುವ ಕೋರ್ಡ್ ವರ್ಡ್ 20 ಚಾನೆಲ್. 401 ನಕ್ಷತ್ರ ಆಮೆಗಳನ್ನು ಮಾರಾಟ ಮಾಡಲು ಯತ್ನಿಸಿದ ಕುರ್ವಿ ಬೆಂಗಳೂರು ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ. ಕಿಂಗ್ ಪಿನ್ ಪರಾರಿಯಾಗಿದ್ದಾನೆ. ಈ ಕುರಿತ ರೋಚಕ ಸ್ಟೋರಿ ಇಲ್ಲಿದೆ.
ನಕ್ಷತ್ರ ಆಮೆ. ಇದು ಬನ್ನೇರುಘಟ್ಟದಿಂದ ಹಿಡಿದು, ಕೋಲಾರ, ಚಿಕ್ಕಬಳ್ಳಾಪುರ ಒಳಗೊಂಡಂತೆ ಆಂಧ್ರ, ಒಡಿಶಾ ಗಡಿಭಾಗದ ಕುರುಚಲು ಕಾಡಲ್ಲಿ ಯಥೇಚ್ಛವಾಗಿ ಸಿಗುವ ಆಮೆ ತಳಿಗಳು. ಸ್ಥಳೀಯ ಭಾಷೆಯಲ್ಲಿ ವಾಸ್ತು ಆಮೆ ಎಂದೂ ಪ್ರತೀತಿ. ದೇವಸ್ಥಾನದ ಧ್ವಜ ಸ್ಥಂಭಗಳ ಕಡೆ ಸಿಗುವ ಈ ಆಮೆ ಪೂಜಿಸಿದರೆ ಒಳಿತು ಎಂಬ ನಂಬಿಕೆಯನ್ನು ಹುಟ್ಟು ಹಾಕಿ ಕೆಲವು ಜ್ಯೋತಿಷಿಗಳು ನಕ್ಷತ್ರ ಆಮೆ ಉಂಗುರ ವಹಿವಾಟನ್ನು ದೊಡ್ಡ ಮಟ್ಟದಲ್ಲಿಯೇ ಹುಟ್ಟು ಹಾಕಿದ್ದಾರೆ. ಇದಕ್ಕೆ ಈ ದಂಧೆಕೋರರು 20 ರಿಂಗ್ ಚಾನೆಲ್ ಎಂಬ ಕೋಡ್ ವರ್ಡ್ ಇಟ್ಟುಕೊಂಡಿದ್ದಾರೆ. ನಕ್ಷತ್ರ ಅಮೆ ಮೈಮೇಲೆ 20 ರಿಂಗ್ ಮಾದರಿ ನಕ್ಷತ್ರ ಕಾಣುತ್ತದೆ. ಹೀಗಾಗಿ ಇದಕ್ಕೆ ರಿಂಗ್ ಚಾನೆಲ್ 20 ಎಂಬ ಕೋರ್ಡ್ ವರ್ಡ್ ಇಟ್ಟಿದ್ದಾರೆ. ಇದೇ ಹೆಸರಿನಲ್ಲಿ ನಕ್ಷತ್ರ ಆಮೆಗಳ ಮಾರಾಟ ಜಾಲ ಹಬ್ಬಿಕೊಂಡಿದೆ.

ವಿದೇಶದಲ್ಲಿ ಬಹು ಬೇಡಿಕೆ
ಚೀನಾ, ಜಪಾನ್ ಸೇರಿದಂತೆ ವಿದೇಶದಲ್ಲಿ ಈ ನಕ್ಷತ್ರ ಆಮೆಗಳನ್ನು ಸಾಕುತ್ತಾರೆ. ವಾಸ್ತು ಆಮೆ ಎಂಬ ನಂಬಿಕೆ. ಹೀಗಾಗಿ ಆ ಆಮೆಗಳಿಗೆ ವಿದೇಶದಲ್ಲಿ ಸಾವಿರಾರು ರೂಪಾಯಿಗೆ ಮಾರಾಟ ವಾಗುತ್ತವೆ. ಇದನ್ನು ಅರಿತ ಕೆಲ ದುರುಳರು ನಕ್ಷತ್ರ ಅಮೆಗಳನ್ನು ಮಾರಾಟ ಮಾಡುವುದನ್ನೇ ಕಾಯಕವನ್ನಾಗಿ ರೂಪಿಸಿಕೊಂಡಿದ್ದಾರೆ. ಭಾರತದ ವನ್ಯಜೀವಿ ಸಂರಕ್ಷಣಾ ಕಾಯ್ದೆ ಪ್ರಕಾರ ಈ ನಕ್ಷತ್ರ ಆಮೆಗಳನ್ನು ಸಾಕುವಂತೆಯೂ ಇಲ್ಲ, ಮಾರಾಟ ಮಾಡುವಂತಿಲ್ಲ. ಆದರೆ, ಇವುಗಳಿಗೆ ಇರುವ ಬೆಲೆ ಅರಿತಿರುವ ಹಕ್ಕಿ ಪಿಕ್ಕಿ ಜನ ಮತ್ತು ಕುರಿಗಾಹಿಗಳು ನಕ್ಷತ್ರ ಅಮೆಗಳನ್ನು ತಂದು ಮಾರಾಟ ಮಾಡುತ್ತಾರೆ. ಇವನ್ನು ಸಾಗಿಸಲೆಂದೇ ಹೊಸ ವರ್ಗವಿದೆ. ಅವರನ್ನು ಈ ಕಿಂಗ್‌ಪಿನ್‌ಗಳು ಗಡಿ ದಾಟಿಸಲು ಬಳಸಿಕೊಳ್ಳುತ್ತಾರೆ. ಅವರನ್ನು ಕುರ್ವಿ ಎಂದೇ ಕರೆಯುತ್ತಾರೆ.

ತಮಿಳುನಾಡಿನ ಕುರ್ವಿಗಳು
ಕರ್ನಾಟಕದಲ್ಲಿ ಈ ದಂಧೆ ಹೆಚ್ಚಾಗಿ ನಕ್ಷತ್ರ ಆಮೆಗಳು ಕಣ್ಣಿಗೆ ಕಾಣುವುದೇ ಅಪರೂಪವಾಗಿದೆ. ಮಳೆಗಾಲದಲ್ಲಿ ಮರಿ ಹಾಕುವ ಈ ನಕ್ಷತ್ರ ಆಮೆಗಳ ಮರಿಗಳನ್ನು ಹಿಡಿದು ಮಾರಾಟ ಮಾಡುತ್ತಾರೆ. ಇವನ್ನು ಖರೀದಿಸುವ ದಂಧೆಕೋರರು ಗಡಿ ದಾಟಿಸಲು, ವಿದೇಶಕ್ಕೆ ಸಾಗಿಸಲು ತಮಿಳುನಾಡಿನ ಕುರ್ವಿಗಳನ್ನು ಬಳಸಿಕೊಳ್ಳುತ್ತಾರೆ. ಒಂದು ಜಾಗದಲ್ಲಿ ಬ್ಯಾಗ್ ಕೊಟ್ಟು ಇನ್ನೊಂದು ಜಾಗಕ್ಕೆ ತಲುಪಿಸುತ್ತಾರೆ. ಕಾಸು ಕೊಟ್ಟರೆ ವಿದೇಶಕ್ಕೂ ಹೋಗಿ ಬರುತ್ತಾರೆ. ಇತ್ತೀಚೆಗೆ ಆಮೆಗಳನ್ನು ಸಾಗಿಸಲು ದಂಧೆಕೋರರು ಈ ಕುರ್ವಿಗಳನ್ನು ಬಳಸಿಕೊಳ್ಳುತ್ತಿದ್ದಾರೆ. ಬಹುತೇಕ ಕರ್ನಾಟಕದಲ್ಲಿ ನಕ್ಷತ್ರ ಅಮೆ ಸಂತತಿಯೇ ಇಲ್ಲದಂತೆ ಮಾಡುತ್ತಿದ್ದಾರೆ. ಇದೀಗ ಕರ್ನಾಟಕದ ಗಡಿ ಹಾಗೂ ಆಂಧ್ರ ಪ್ರದೇಶದಲ್ಲಿ ದೊಡ್ಡ ದಂಧೆಯಾಗಿದೆ ಎಂದು ವನ್ಯ ಜೀವಿ ಸಂರಕ್ಷಕ ಶರತ್ ಒನ್ಇಂಡಿಯಾ ಕನ್ನಡಕ್ಕೆ ತಿಳಿಸಿದ್ದಾರೆ.

ಆಪರೇಷನ್ ನಕ್ಷತ್ರ ಆಮೆ
ಬೆಂಗಳೂರಿನಿಂದ ಚೆನ್ನೈಗೆ 401 ನಕ್ಷತ್ರ ಆಮೆಗಳನ್ನು ಅಕ್ರಮವಾಗಿ ಸಾಗಣೆ ಮಾಡುತ್ತಿದ್ದ ವ್ಯಕ್ತಿಯನ್ನು ಕಲಾಸಿಪಾಳ್ಯ ಪೊಲೀಸರು ಬಂಧಿಸಿದ್ದಾರೆ. ಬಂಧಿತನಿಂದ 401 ನಕ್ಷತ್ರ ಆಮೆಗಳನ್ನು ವಶಪಡಿಸಿಕೊಂಡಿದ್ದು, 21 ಆಮೆಗಳು ಸಾವನ್ನಪ್ಪಿವೆ. ಉಳಿದ ಆಮೆಗಳನ್ನು ಬನ್ನೇರುಘಟ್ಟ ವನ್ಯ ಜೀವಿ ಉದ್ಯಾನವನದಲ್ಲಿ ಬಿಡಲಾಗಿದೆ. ಮಹಮದ್ ಬಂಧಿತ ಆರೋಪಿ. ತಮಿಳುನಾಡು ಮೂಲದ ಈತನ ವಿರುದ್ಧ ಕಲಾಸಿಪಾಳ್ಯ ಪೊಲೀಸರು ಕೇಸು ದಾಖಲಿಸಿದ್ದಾರೆ. ತಲೆಮರೆಸಿಕೊಂಡಿರುವ ದಂಧೆಯ ಕಿಂಗ್ ಪಿನ್ ಕುಮಾರ್‌ಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ.

ತಮಿಳುನಾಡು ಪೊಲೀಸರಿಂದ ಹುಡುಕಾಟ
ಎರಡು ದಿನದ ಹಿಂದೆ ವ್ಯಕ್ತಿಯೊಬ್ಬ ನಕ್ಷತ್ರ ಆಮೆ ತುಂಬಿದ್ದ ಎರಡು ಬಾಕ್ಸನ್ನು ಬೆಂಗಳೂರಿನಿಂದ ಚೆನ್ನೈಗೆ ತಲುಪಿಸಲು ನ್ಯಾಷನಲ್ ಟ್ರಾವೆಲ್ಸ್‌ಗೆ ಕೊಟ್ಟಿದ್ದ. ಎರಡು ಬ್ಯಾಗ್ ಕೊಟ್ಟು ಅಲ್ಲಿಂದ ವ್ಯಕ್ತಿ ಎಸ್ಕೇಪ್ ಆಗಿದ್ದ. ಎರಡು ಬಾಕ್ಸ್ ತೆಗೆದು ನೋಡಿದಾಗ ಸುಮಾರು 250 ನಕ್ಷತ್ರ ಆಮೆಗಳಿದ್ದವು. ಇದಾಗಿ ಎರಡನೇ ದಿನದ ಬಳಿಕ ಮತ್ತೆ ಎರಡು ಬಾಕ್ಸ್ ನ್ಯಾಷನಲ್ ಟ್ರಾವೆಲ್ಸ್ ಬಳಿ ತಂದಿಟ್ಟಿದ್ದ. ಅವನ್ನು ಚೆನ್ನೈಗೆ ಸಾಗಿಸಲು ಸೂಚಿಸಿದ್ದ. ಈ ವೇಳೆ ಎಚ್ಚೆತ್ತ ಟ್ರಾವೆಲ್ಸ್ ಸಿಬ್ಬಂದಿ ಪರಿಶೀಲನೆ ಮಾಡಿದಾಗ ಆಮೆ ನಕ್ಷತ್ರ ಇರುವುದು ಗೊತ್ತಾಗಿತ್ತು. ಆರೋಪಿ ಮಹಮದ್ ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಚೆನ್ನೈಗೆ ಈ ನಕ್ಷತ್ರ ಆಮೆಗಳನ್ನು ಸಾಗಿಸಲು ಹೇಳಿದ್ದ ಕುಮಾರ್ ಬಗ್ಗೆ ಬಾಯಿ ಬಿಟ್ಟಿದ್ದಾನೆ. ಕಿಂಗ್‌ಪಿನ್ ಕುಮಾರ್ ತಲೆ ಮರೆಸಿಕೊಂಡಿದ್ದು, ಆತನಿಗಾಗಿ ತಮಿಳುನಾಡು ಪೊಲೀಸರು ಕೂಡ ಹುಡುಕುತ್ತಿದ್ದಾರೆ.
Recommended Video
ದತ್ತು ತೆಗೆದುಕೊಳ್ಳಲು ಅವಕಾಶ
ನಕ್ಷತ್ರ ಆಮೆಗಳ ಸಂತತಿಯನ್ನು ಇಲ್ಲದಂತೆ ಮಾಡಲಾಗುತ್ತಿದೆ. ಯಾರಾದರೂ ನಕ್ಷತ್ರ ಆಮೆಗಳನ್ನು ಹಿಡಿದರೆ, ಅಥವಾ ಮಾರಾಟ ಮಾಡಿದರೆ ಕೂಡಲೇ ತಿಳಿಸುವಂತೆ ವನ್ಯ ಜೀವಿ ಸಂರಕ್ಷಕ ಶರತ್ ಮನವಿ ಮಾಡಿದ್ದಾರೆ. ಇನ್ನು ಈ ನಕ್ಷತ್ರ ಆಮೆಗಳನ್ನು ದತ್ತು ತೆಗೆದುಕೊಂಡು ಸಾಕಲು ಅವಕಾಶವಿದೆ. ಯಾರಾದರೂ ದತ್ತು ತೆಗೆದುಕೊಳ್ಳುವರು ಇದ್ದರೂ ತನ್ನನ್ನು ಸಂಪರ್ಕಿಸಬಹುದು ಎಂದು ಇದೇ ವೇಳೆ ಅವರು ಸ್ಪಷ್ಟಪಡಿಸಿದರು. ಮಾಹಿತಿ ನೀಡುವರ ವಿವರ ಗೌಪ್ಯವಾಗಿಡಲಾಗುತ್ತದೆ. ಶರತ್ : ಮೊಬೈಲ್ ನಂಬರ್ : 98801 08801.












Click it and Unblock the Notifications