ಬೆಂಗಳೂರು–ಮಂಗಳೂರು ರಾಷ್ಟ್ರೀಯ ಹೆದ್ದಾರಿ ಕಾಮಗಾರಿ: ಮೇ ಒಳಗೆ ಸಂಚಾರ ಮುಕ್ತಗೊಳಿಸಲು ಸೂಚನೆ

ಹಾಸನ: ಬೆಂಗಳೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿಯ ಹಾಸನ ವ್ಯಾಪ್ತಿಯಲ್ಲಿನ ನಡೆಯುತ್ತಿರುವ ಕಾಮಗಾರಿಗಳಿಂದ ಉಂಟಾಗಿರುವ ಸಮಸ್ಯೆಗಳ ಕುರಿತು ಸಚಿವ ಕೃಷ್ಣ ಬೈರೇಗೌಡ ಅವರ ಅಧ್ಯಕ್ಷತೆಯಲ್ಲಿ ಹಾಸನ ಸಂಸದ ಶ್ರೇಯಸ್ ಎಂ.ಪಟೇಲ್ ಅವರು ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಗುತ್ತಿಗೆದಾರರೊಂದಿಗೆ ಮಹತ್ವದ ಸಭೆ ನಡೆಸಿದರು. ಸಭೆಯಲ್ಲಿ ಸಾರ್ವಜನಿಕರಿಗೆ ಆಗುತ್ತಿರುವ ತೊಂದರೆಗಳ ಬಗ್ಗೆ ಚರ್ಚಿಸಿ, ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸುವಂತೆ ಸ್ಪಷ್ಟ ನಿರ್ದೇಶನ ನೀಡಲಾಯಿತು.

ಸುಮಾರು 10 ಕಿಲೋಮೀಟರ್ ಉದ್ದದ ಹಾಸನ ಬೈಪಾಸ್‌ ರಸ್ತೆಯಲ್ಲಿ ಬಾಕಿ ಉಳಿದಿರುವ ರೈಲ್ವೆ ಓವರ್‌ಬ್ರಿಡ್ಜ್‌ ಹಾಗೂ ಸಂಪರ್ಕ ರಸ್ತೆ ಕಾಮಗಾರಿಗಳನ್ನು ಕೂಡಲೇ ಪೂರ್ಣಗೊಳಿಸಬೇಕು ಹಾಗೂ ಮೇ ತಿಂಗಳ ಒಳಗಾಗಿ ಸಂಚಾರಕ್ಕೆ ಮುಕ್ತಗೊಳಿಸುವಂತೆ ಸಭೆಯಲ್ಲಿ ಅಧಿಕಾರಿಗಳಿಗೆ ಸೂಚಿಸಲಾಯಿತು. ಇದರಿಂದ ನಗರ ಪ್ರದೇಶದಲ್ಲಿ ಸಂಚಾರ ಸಮಸ್ಯೆ ಕಡಿಮೆಯಾಗಲಿದೆ ಎಂದು ಸಭೆಯಲ್ಲಿ ಅಭಿಪ್ರಾಯ ವ್ಯಕ್ತವಾಯಿತು.

Bengaluru Mangaluru National Highway

ಇದೇ ವೇಳೆ, ದೋಣಿಗಾಳ್ ಬಳಿ ಇನ್ನೂ ಪೂರ್ಣಗೊಳ್ಳದ ಸುಮಾರು 600 ಮೀಟರ್ ರಸ್ತೆಯನ್ನು ತುರ್ತು ಆಧಾರದ ಮೇಲೆ ನಿರ್ಮಿಸಿ, ವಾಹನ ಸಂಚಾರಕ್ಕೆ ಅನುವು ಮಾಡಿಕೊಡುವಂತೆ ಗುತ್ತಿಗೆದಾರರಿಗೆ ಕಟ್ಟುನಿಟ್ಟಿನ ಸೂಚನೆಯೂ ನೀಡಲಾಯಿತು.

ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಅನುಮೋದನೆ

ಕಳೆದ ಮಳೆಗಾಲದಲ್ಲಿ ಸಕಲೇಶಪುರದಿಂದ ಮಾರ್ನಳ್ಳಿ ನಡುವಿನ ರಾಷ್ಟ್ರೀಯ ಹೆದ್ದಾರಿ ಭಾಗದಲ್ಲಿ ಹಲವು ಕಡೆ ಭೂ ಕುಸಿತ ಉಂಟಾಗಿದ್ದ ಹಿನ್ನೆಲೆ, ಆ ಭಾಗದ ದುರಸ್ತಿ ಮತ್ತು ರಕ್ಷಣಾ ಕಾಮಗಾರಿಗಳಿಗೆ ಈಗಾಗಲೇ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಅನುಮೋದನೆ ನೀಡಿದೆ. ಹೀಗಾಗಿ ಈ ಸಂಬಂಧಿತ ಕಾಮಗಾರಿಗಳನ್ನೂ ವಿಳಂಬವಿಲ್ಲದೆ ಪೂರ್ಣಗೊಳಿಸಬೇಕೆಂದು ಸಭೆಯಲ್ಲಿ ಸೂಚನೆ ನೀಡಲಾಗಿಯಿತು.

ಈ ಸಭೆಯಲ್ಲಿ ಹಾಸನ ಜಿಲ್ಲಾಧಿಕಾರಿ ಲತಾ ಕುಮಾರಿ, ಲೋಕೋಪಯೋಗಿ ಇಲಾಖೆ ಪ್ರಧಾನ ಕಾರ್ಯದರ್ಶಿ ಆದಿತ್ಯ ಆಮ್ಲಾನ್ ಬಿಶ್ವಾಸ್, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕ ಸಯ್ಯದ್ ಸೇರಿದಂತೆ ಸಂಬಂಧಿತ ಎಲ್ಲಾ ಇಲಾಖೆಗಳ ಅಧಿಕಾರಿಗಳು ಹಾಗೂ ಗುತ್ತಿಗೆದಾರರು ಉಪಸ್ಥಿತರಿದ್ದರು. ಸಭೆಯ ಅಂತ್ಯದಲ್ಲಿ, ನಿಗದಿತ ಸಮಯದಲ್ಲಿ ಕಾಮಗಾರಿಗಳು ಪೂರ್ಣಗೊಳ್ಳದಿದ್ದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂಬ ಎಚ್ಚರಿಕೆಯನ್ನೂ ನೀಡಲಾಯಿತು.

Bengaluru Mangaluru National Highway

6 ಪಥದ ರಸ್ತೆ

ದೇಶದ ಬಹುನಿರೀಕ್ಷತ ಹೆದ್ದಾರಿಗಳಲ್ಲಿ ಬೆಂಗಳೂರು-ಮಂಗಳೂರು ಎಕ್ಸ್‌ಪ್ರೆಸ್‌ ವೇ ಕೂಡ ಒಂದಾಗಿದ್ದು, ಈಗಾಗಲೇ ಕೆಲವು ಸಂಚಾರಕ್ಕೆ ಮುಕ್ತಾವಾಗಿದ್ದು, ಇನ್ನೂ ಕೆಲವು ನಿರ್ಮಾಣ ಹಂತದಲ್ಲಿವೆ. ಬೆಂಗಳೂರು-ಮಂಗಳೂರು ನಡುವೆ ಹೊಸ ಎಕ್ಸ್‌ಪ್ರೆಸ್‌ವೇ ಯೋಜನೆಯನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಘೋಷಣೆ ಮಾಡಿತ್ತು. ಇದು 6 ಪಥಗಳೊಂದಿಗೆ 335 ಕಿಲೋ ಮೀಟರ್ ವ್ಯಾಪ್ತಿಯನ್ನು ಹೊಂದಿದ್ದು, ಈ ಯೋಜನೆಯ ಕಾಮಗಾರಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಹಾಗೂ ಲೋಕೋಪಯೋಗಿ ಇಲಾಖೆಯಿಂದ ನಡೆಯುತ್ತಿದೆ. ಈ ಎಕ್ಸ್‌ಪ್ರೆಸ್‌ವೇ ಪೂರ್ಣಗೊಂಡಲ್ಲಿ ಎರಡೂ ನಗರಗಳ ನಡುವಿನ ಪ್ರಯಾಣದ ಸಮಯ 7ರಿಂದ 8 ಗಂಟೆಗಳಷ್ಟು ಕಡಿಮೆಯಾಗಲಿದೆ. ಇದರಿಂದ ಸಮಯ ಉಳಿತಾಯ ಆಗಲಿದ್ದು, ವಾಹನ ಸವಾರರಿಗೆ ಪ್ರಯಾಣ ಸುಲಭವಾಗಲಿದೆ.

ಹೆದ್ದಾರಿ ಅಗಲೀಕರಣ ಕಾಮಗಾರಿ ಆರಂಭವಾಗಿ 10 ವರ್ಷ ಕಳೆದರೂ ಇನ್ನೂವರೆಗೂ ಮುಗಿದಿಲ್ಲ ಎನ್ನುವುದು ಸ್ಥಳೀಯರ ಅಳಲು. ಕಳೆದ ವರ್ಷ ಕೂಡ ಮಳೆಗಾಲದಲ್ಲಿ ಭೂಕುಸಿತ ಉಂಟಾಗಿದ್ದರಿಂದ ಅವೈಜ್ಞಾನಿಕ ಕಾಮಗಾರಿ ಎಂದು ದೂರಿದ್ದರು. ಅಗಲೀಕರಣದ ವೇಳೆ ಸ್ಲೋಪ್ ಆಗಿ ಗುಡ್ಡವನ್ನು ಕಡಿಯುವ ಬದಲಿಗೆ, ಕಡಿದಾಗಿ ಗುಡ್ಡವನ್ನು ಕಡಿಯಲಾಗಿದೆ. ಇದರಿಂದ ಸ್ವಲ್ವ ಮಳೆ ಬಂದರೆ ಸಾಕು ಗುಡ್ಡ ಕುಸಿತವಾಗುತ್ತಿದೆ. ರಸ್ತೆ ಮೇಲೆ ಗುಡ್ಡ ಬಂದು ಬೀಳುತ್ತಿದೆ ಎಂದು ಆತಂಕ ವ್ಯಕ್ತವಾಗಿತ್ತು. ಇದು ರಾಷ್ಟ್ರೀಯ ಹೆದ್ದಾರಿ 75 ಬೆಂಗಳೂರಿನಿಂದ ಮಂಗಳೂರಿಗೆ ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆಯಾಗಿದ್ದು, ಹಾಸನ ಮಾರ್ಗವಾಗಿ ಎರಡು ಪ್ರಮುಖ ನಗರಗಳಿಗೆ ಸಂಪರ್ಕ ಸಾಧ್ಯವಾಗಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+