Vande Bharat Express: ಬೆಂಗಳೂರು-ಧಾರವಾಡ ವಂದೇ ಭಾರತ್ ರೈಲು ಸಂಚಾರ ಬೆಳಗಾವಿಗೆ ವಿಸ್ತರಣೆ: ವೇಳಾಪಟ್ಟಿ
ಬೆಳಗಾವಿ ಜಿಲ್ಲೆಯ ಜನರ ಬಹಳ ದಿನಗಳ ಬೇಡಿಕೆ ಈಡೇರಿದೆ. ದೀಪಾವಳಿ ಸಂಭ್ರಮದಲ್ಲಿದ್ದ ಜಿಲ್ಲೆಯ ಜನತೆಗೆ ಭಾರತೀಯ ರೈಲ್ವೆ ಸಚಿವಾಲಯ ಸಿಹಿ ಸುದ್ದಿ ಕೊಟ್ಟಿದೆ. ಬೆಂಗಳೂರು-ಧಾರವಾಡ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲನ್ನು ಬೆಳಗಾವಿಯವರೆಗೆ ವಿಸ್ತರಣೆ ಮಾಡಿ ರೈಲ್ವೆ ಸಚಿವಾಲಯ ಆದೇಶ ನೀಡಿದೆ.
ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ತಮ್ಮ ಟ್ವಿಟರ್ ಖಾತೆಯಲ್ಲಿ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. "ಜಿಲ್ಲೆಯ ಜನರ ಬಹು ದಿನಗಳ ಬೇಡಿಕೆಯಾದ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲನ್ನು ಬೆಂಗಳೂರು-ಧಾರವಾಡ ದಿಂದ ಬೆಳಗಾವಿಯವರೆಗೆ ವಿಸ್ತರಣೆ ಮಾಡಿ ರೈಲ್ವೆ ಸಚಿವಾಲಯ ಆದೇಶ ನೀಡಿದೆ." ಎಂದು ರೈಲು ವೇಳಾಪಟ್ಟಿ ಮಾಹಿತಿ ನೀಡಿದ್ದಾರೆ.

"ನನ್ನ ಮನವಿಗೆ ಸ್ಪಂದಿಸಿ ಶೀಘ್ರ ರೈಲಿನ ವ್ಯವಸ್ಥೆ ಮಾಡಿದ ಕೇಂದ್ರ ರೈಲ್ವೆ ಸಚಿವ ಅಶ್ವಿನ್ ವೈಷ್ಣವ್ ಅವರಿಗೆ ಹಾಗೂ ರೈಲ್ವೆ ಇಲಾಖೆಗೆ" ಈ ಮೂಲಕ ಧನ್ಯವಾದಗಳನ್ನು ತಿಳಿಸುತ್ತಿದ್ದೇನೆ" ಎಂದು ಟ್ವೀಟ್ ಮಾಡಿದ್ದಾರೆ.
ವಂದೇಭಾರತ್ ವೇಳಾಪಟ್ಟಿ
ರೈಲು ವೇಳಾಪಟ್ಟಿಯನ್ನು ಪ್ರಕಟಿಸಲಾಗಿದ್ದು, ದಿನಾಂಕವನ್ನು ಇನ್ನೂ ನಿಗದಿ ಮಾಡಿಲ್ಲ, ಆದರೆ ಅತಿ ಶೀಘ್ರದಲ್ಲೇ ಬೆಂಗಳೂರು ಬೆಳಗಾವಿ ನಡುವೆ ವಂದೇ ಭಾರತ್ ರೈಲು ಸಂಚರಿಸಲಿದೆ.
ಬೆಂಗಳೂರು-ಬೆಳಗಾವಿ ರೈಲು ಸಂಖ್ಯೆ (20661) ಬೆಳಗ್ಗೆ5.45 ಕ್ಕೆ ಬೆಂಗಳೂರು ನಿಲ್ದಾಣದಿಂದ ಹೊರಟು ಮಧ್ಯಾಹ್ನ 01.30 ಗಂಟೆಗೆ ಬೆಳಗಾವಿ ತಲುಪಲಿದೆ. ರೈಲು ಸಂಖ್ಯೆ (20662) ಮಧ್ಯಾಹ್ನ 02 ಗಂಟೆಗೆ ಬೆಳಗಾವಿಯಿಂದ ಹೊರಟು ರಾತ್ರಿ 10.10 ಕ್ಕೆ ಬೆಂಗಳೂರು ನಿಲ್ದಾಣ ತಲುಪಲಿದೆ.
ರೈಲ್ವೇ ಸಚಿವಾಲಯದ ಆದೇಶ ಈ ಭಾಗದ ಜನರಲ್ಲಿ ಸಂತಸ ಮೂಡಿಸಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ಹಲವರು ಸಂತಸ ಹಂಚಿಕೊಂಡಿದ್ದು, ರೈಲ್ವೆ ಸಚಿವಾಲಯಕ್ಕೆ ಧನ್ಯವಾದ ತಿಳಿಸಿದ್ದಾರೆ.
ಬೆಂಗಳೂರು- ಧಾರವಾಡ ವಂದೇ ಭಾರತ್ ಎಕ್ಸ್‌ಪ್ರೆಸ್ ಸೇವೆಯನ್ನು ಬೆಳಗಾವಿಗೆ ವಿಸ್ತರಿಸುವಂತೆ ಸ್ವತಃ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡ ಮನವಿ ಮಾಡಿಕೊಂಡಿದ್ದರು. ಅಲ್ಲದೆ ಈ ಭಾಗದ ಜನಪ್ರತಿನಿಧಿಗಳು ಕೂಡ ಮನವಿ ಮಾಡಿದ್ದರು, ಈಗ ಎಲ್ಲರ ಮನವಿಗೆ ಸ್ಪಂಧಿಸಿರುವ ರೈಲ್ವೆ ಸಚಿವಾಲಯ ವಿಸ್ತರಣೆಗೆ ಅನುಮತಿ ನೀಡಿದೆ.
ಬೆಂಗಳೂರ -ಹುಬ್ಬಳ್ಳಿ -ಧಾರವಾಡ ನಡುವೆ ಜೂನ್ 27ರಿಂದ ವಂದೇ ಭಾರತ್ ರೈಲು ಸಂಚಾರ ಪ್ರಾರಂಭಗೊಂಡಿತ್ತು, ಬೆಂಗಳೂರ -ಬೆಳಗಾವಿ ನಡುವೆ ಸದ್ಯದಲ್ಲೇ ಈ ರೈಲಿನ ಪ್ರಾಯೋಗಿಕ ಸಂಚಾರ ಆರಂಭವಾಗಲಿದೆ. ಬೆಂಗಳೂರು-ಬೆಳಗಾವಿ ನಡುವೆ ಪ್ರತಿನಿತ್ಯ ಸಾವಿರಾರು ಜನ ಪ್ರಯಾಣ ನಡೆಸುತ್ತಿದ್ದು, ವಂದೇ ಭಾರತ್ ಎಕ್ಸ್‌ಪ್ರೆಸ್‌ನಿಂದ ಸಾಕಷ್ಟು ಅನುಕೂಲವಾಗುವ ಸಾಧ್ಯತೆ ಇದೆ.












Click it and Unblock the Notifications