ಬೆಳಗಾವಿ; ಜೈನ ಮುನಿ ಕೊಲೆ ಪ್ರಕರಣದ ತನಿಖೆ ಸಿಐಡಿಗೆ
ಬೆಂಗಳೂರು, ಜುಲೈ 19; ಕರ್ನಾಟಕದಲ್ಲಿ ಜೈನ ಮುನಿ ಕಾಮಕುಮಾರ ನಂದಿಮಹಾರಾಜ ಭೀಕರ ಹತ್ಯೆ ಪ್ರಕರಣದ ಬಗ್ಗೆ ಭಾರೀ ಚರ್ಚೆ ನಡೆಯುತ್ತಿದೆ. ಕರ್ನಾಟಕ ಸರ್ಕಾರ ಈ ಹತ್ಯೆ ಪ್ರಕರಣದ ತನಿಖೆಯನ್ನು ಸಿಐಡಿಗೆ ವಹಿಸುವುದಾಗಿ ಘೋಷಣೆ ಮಾಡಿದೆ.
ಬುಧವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ವಿಧಾನಸಭೆ ಕಲಾಪದಲ್ಲಿ ಈ ಕುರಿತು ಘೋಷಣೆ ಮಾಡಿದರು. ಜೈನ ಮುನಿಗಳ ಹತ್ಯೆ ಪ್ರಕರಣದ ತನಿಖೆಯನ್ನು ಸಿಐಡಿ ತನಿಖೆಗೆ ವಹಿಸಲಾಗುತ್ತದೆ ಎಂದರು. ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಪೊಲೀಸರು ಸದ್ಯ ಪ್ರಕರಣದ ತನಿಖೆ ನಡೆಸುತ್ತಿದ್ದಾರೆ.

ಜೈನ ಮುನಿಗಳ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ 1 ನಾರಾಯಣ ಮಾಳಿ ಮತ್ತು ಆರೋಪಿ 2 ಹಸನ್ ಸಾಬ್‌ರನ್ನು ಪೊಲೀಸರು ಈಗಾಗಲೇ ಬಂಧಿಸಿದ್ದಾರೆ. ಕೋರ್ಟ್ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.
ವಿಧಾನಸಭೆಯಲ್ಲಿ ಮಾತನಾಡಿದ ಸಿದ್ದರಾಮಯ್ಯ, "ಜೈನ ಮುನಿ ಶ್ರೀ ಕಾಮಕುಮಾರ ನಂದಿ ಮಹಾರಾಜರ ಹತ್ಯೆ ಪ್ರಕರಣ ಸೂಕ್ಷ್ಮವಾಗಿರುವುದರಿಂದ, ಸಾರ್ವಜನಿಕರ ಕೋರಿಕೆಯ ಮೇರೆಗೆ ಪ್ರಕರಣದ ತನಿಖೆಯನ್ನು ಸಿಐಡಿಗೆ ಹಸ್ತಾಂತರಿಲಾಗುವುದು" ಎಂದು ಹೇಳಿದ್ದಾರೆ.
ಬೆಳಗಾವಿ ಜಿಲ್ಲೆಯ ಚಿಕ್ಕೋಡಿಯ ಹಿರೇಕೊಡಿ ನಂದಿ ಪರ್ವತದಲ್ಲಿರುವ ಆಶ್ರಮದಲ್ಲಿ ಜೈನ ಮುನಿ ಕಾಮಕುಮಾರ ನಂದಿಮಹಾರಾಜರನ್ನು ಹತ್ಯೆ ಮಾಡಲಾಗಿತ್ತು. ಶವವನ್ನು ತುಂಡು ತುಂಡು ಮಾಡಿ, ಕಬ್ಬಿನ ಗದ್ದೆಯಲ್ಲಿನ ಕೊಳವೆ ಬಾವಿಗೆ ಎಸೆದಿದ್ದರು.
ಕರ್ನಾಟಕದ ಪ್ರತಿಪಕ್ಷ ಬಿಜೆಪಿ ಜೈನ ಮುನಿ ಕಾಮಕುಮಾರ ನಂದಿಮಹಾರಾಜರ ಹತ್ಯೆ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಬೇಕು ಎಂದು ಪಟ್ಟು ಹಿಡಿದು ವಿಧಾಸಸಭೆಯ ಒಳಗೆ ಮತ್ತು ಹೊರಗೆ ಹೋರಾಟ ನಡೆಸಿತ್ತು. ಈ ಹತ್ಯೆಗೆ ಅಂತರಾಷ್ಟ್ರೀಯ ಉಗ್ರ ಸಂಘಟನೆ ಸಂಬಂಧವಿದೆ ಎಂದು ಹೇಳಿತ್ತು.
ಜೈನಮುನಿ ಶ್ರೀ ಕಾಮಕುಮಾರ ನಂದಿ ಮಹಾರಾಜರ ಹತ್ಯೆ ಪ್ರಕರಣ ಸೂಕ್ಷ್ಮವಾಗಿರುವುದರಿಂದ, ಸಾರ್ವಜನಿಕರ ಕೋರಿಕೆಯ ಮೇರೆಗೆ ಪ್ರಕರಣದ ತನಿಖೆಯನ್ನು ಸಿಐಡಿಗೆ ಹಸ್ತಾಂತರಿಲಾಗುವುದು.
— CM of Karnataka (@CMofKarnataka) July 19, 2023
- ಮುಖ್ಯಮಂತ್ರಿ @siddaramaiah pic.twitter.com/GDntXBeEJW
ಜೈನ ಮುನಿ ಹತ್ಯೆ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸುವ ಒತ್ತಾಯವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ, ಗೃಹ ಸಚಿವ ಡಾ. ಜಿ. ಪರಮೇಶ್ವರ ತಳ್ಳಿ ಹಾಕಿದ್ದರು. ರಾಜ್ಯದ ಪೊಲೀಸರು ಸಮರ್ಥರಿದ್ದಾರೆ. ಈಗಾಗಲೇ ಆರೋಪಿಗಳನ್ನು ಬಂಧಿಸಲಾಗಿದೆ. ಸಿಬಿಐ ತನಿಖೆಗೆ ವಹಿಸುವುದಿಲ್ಲ ಎಂದು ಹೇಳಿದ್ದರು.
ಹತ್ಯೆ ಪ್ರಕರಣದ ಇಬ್ಬರು ಆರೋಪಿಗಳನ್ನು ಚಿಕ್ಕೋಡಿಯ 7ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ಕೋರ್ಟ್ 7 ದಿನಗಳ ಕಾಲ ಪೊಲೀಸರ ವಶಕ್ಕೆ ನೀಡಿತು. ಜುಲೈ 17ರಂದು ಪುನಃ ಆರೋಪಿಗಳನ್ನು ಕೋರ್ಟ್‌ಗೆ ಹಾಜರುಪಡಿಸಲಾಗಿತ್ತು. ಸದ್ಯ ಆರೋಪಿಗಳು ನ್ಯಾಯಾಂಗ ಬಂಧನದಲ್ಲಿದ್ದು, ಬೆಳಗಾವಿಯ ಹಿಂಡಲಗಾ ಜೈಲಿನಲ್ಲಿದ್ದಾರೆ.
ಇಬ್ಬರು ಆರೋಪಿಗಳು ಜೈನ ಮುನಿ ಕಾಮಕುಮಾರ ನಂದಿಮಹಾರಾಜರನ್ನು ಕರೆಂಟ್ ಶಾಕ್ ನೀಡಿ ಹತ್ಯೆ ಮಾಡಿ, ಶವವನ್ನು ತುಂಡು ತುಂಡು ಮಾಡಿದ್ದಾರೆ. ಬಳಿಕ ಅವರ ಕೊಠಡಿಯಿಂದ ಶವದ ತುಂಡುಗಳು, ಬಟ್ಟೆ, ಡೈರಿಯನ್ನು ಕಬ್ಬಿನ ಗದ್ದೆಗೆ ತೆಗೆದುಕೊಂಡು ಬಂದಿದ್ದರು. ಡೈರಿ ಮತ್ತು ಬಟ್ಟೆಯನ್ನು ಸುಟ್ಟು ಹಾಕಿರುವ ಶಂಕೆ ಇದ್ದು, ಈ ಕುರಿತು ಪೊಲೀಸರು ತನಿಖೆ ಕೈಗೊಂಡಿದ್ದದಾರೆ.
ಜೈನ ಮುನಿಗಳ ಜೊತೆಗಿನ ಹಣಕಾಸು ವ್ಯವಹಾರವೇ ಕೊಲೆಗೆ ಕಾರಣ ಎಂದು ಪ್ರಾಥಮಿಕವಾಗಿ ಶಂಕಿಸಲಾಗಿದೆ. ಆದರೆ ಈ ಕುರಿತು ಪೊಲೀಸರು ಪತ್ರಿಕಾಗೋಷ್ಠಿ ನಡೆಸಿ ಯಾವುದೇ ಅಧಿಕೃತವಾದ ಮಾಹಿತಿ ನೀಡಿಲ್ಲ. ರಾಜ್ಯಾದ್ಯಂತ ಜೈನ ಸಮುದಾಯದವರು ಈ ಹತ್ಯೆ ಖಂಡಿಸಿ, ಮೌನ ಪ್ರತಿಭಟನೆ ನಡೆಸಿದ್ದರು, ಆರೋಪಿಗಳಿಗೆ ಕಠಿಣ ಶಿಕ್ಷೆ ನೀಡಬೇಕು ಎಂದು ಆಗ್ರಹಿಸಿದ್ದರು.
ಈ ಹತ್ಯೆ ಪ್ರಕರಣದ ಬಳಿಕ ಸ್ಥಳಕ್ಕೆ ಭೇಟಿ ನೀಡಿದ್ದ ಬಳಿಕ ಪ್ರತಿಕ್ರಿಯೆ ನೀಡಿದ್ದ ಗೃಹ ಸಚಿವ ಡಾ. ಜಿ. ಪರಮೇಶ್ವರ, "ಹತ್ಯೆ ಪ್ರಕರಣದ ತನಿಖೆಯನ್ನು ಸಿಬಿಐಗೆ ಕೊಡುವ ಅಗತ್ಯವಿಲ್ಲ. ಈಗಾಗಲೇ ಆರೋಪಿಗಳನ್ನು ಬಂಧಿಸಲಾಗಿದೆ. ರಾಜ್ಯದ ಪೊಲೀಸರು ಉತ್ತಮವಾಗಿ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ತನಿಖೆಯ ನಂತರ ಎಲ್ಲವೂ ಬಯಲಾಗಲಿದೆ" ಎಂದು ಹೇಳಿದ್ದರು.












Click it and Unblock the Notifications