ಬೆಳಗಾವಿ; ಮಹಿಳೆ ವಿವಸ್ತ್ರ ಪ್ರಕರಣ, ಸಂತ್ರಸ್ತೆಗೆ ಭೂಮಿ ಮಂಜೂರು
ಬೆಂಗಳೂರು, ಫೆಬ್ರವರಿ 16: ಬೆಳಗಾವಿ ಜಿಲ್ಲೆಯ ಹೊಸ ವಂಟಮೂರಿ ಗ್ರಾಮದಲ್ಲಿ ಮಹಿಳೆಯನ್ನು ವಿವಸ್ತ್ರಗೊಳಿಸಿ ಹಲ್ಲೆ ನಡೆಸಿದ ಪ್ರಕರಣದ ಸಂತ್ರಸ್ತೆಗೆ ಎರಡು ಎಕರೆ ಭೂಮಿಯನ್ನು ನೀಡಲಾಗಿದೆ.
ರಾಜ್ಯ ಅಡ್ವೊಕೇಟ್ ಜನರಲ್ ಕೆ. ಶಿಶಿಕಿರಣ್ ಶೆಟ್ಟಿ, ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಠ ಪಂಗಡಗಳ ಅಭಿವೃದ್ಧಿ ಯೋಜನೆಯಡಿ ಘೋಷಿಸಿದಂತೆ ಸಂತ್ರಸ್ತೆಗೆ ಜಮೀನು ಮಂಜೂರು ಮಾಡಿದ್ದು, ಅದರ ಕ್ರಯಪತ್ರವನ್ನು ಸಹ ಹಸ್ತಾಂತರಿಸಲಾಗಿದೆ ಎಂದು ಸರ್ಕಾರದ ಪರವಾಗಿ ಹೈಕೋರ್ಟ್‌ಗೆ ಮಾಹಿತಿ ನೀಡಿದರು.

ಪ್ರಕರಣ ಸಂಬಂಧ ಹೈಕೋರ್ಟ್ ದಾಖಲಿಸಿಕೊಂಡಿರುವ ಸ್ವಯಂಪ್ರೇರಿತ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಪಿ. ಎಸ್. ದಿನೇಶ್ ಕುಮಾರ್ ಅವರ ನೇತೃತ್ವದ ವಿಭಾಗೀಯ ಪೀಠಕ್ಕೆ ಈ ಮಾಹಿತಿ ನೀಡಲಾಯಿತು.
ಅಡ್ವೊಕೇಟ್ ಜನರಲ್, ಪರಿಹಾರ ಹಣ ಪಾವತಿಯ ಹೊರತಾಗಿಯೂ ಸರ್ಕಾರ ಈ ಹಿಂದೆ ಘೋಷಿಸಿದಂತೆ ಪ್ರಕರಣದ ಸಂತ್ರಸ್ತೆಗೆ ಎರಡು ಎಕರೆ ಜಮೀನು ಮಂಜೂರು ಮಾಡಲಾಗಿದೆ. ಜತೆಗೆ, ಜಮೀನಿನ ಕ್ರಯಪತ್ರ ಸಹ ಹಸ್ತಾಂತರಿಸಲಾಗಿದೆ ಎಂದು ತಿಳಿಸಿದರು.
ಅಲ್ಲದೆ, ಇದೊಂದು ಸೂಕ್ಷ್ಮ ಪ್ರಕರಣವಾಗಿದೆ. ಸಂತ್ರಸ್ತೆ ಮೇಲಿನ ದೌರ್ಜನ್ಯಕ್ಕೆ ಸಂಬಂಧಿಸಿದ ಕ್ರಿಮಿನಲ್ ಪ್ರಕರಣದ ವಿಚಾರಣೆನ್ನು ತ್ವರಿತವಾಗಿ ಪೂರೈಸಲು ಸಂಬಂಧಪಟ್ಟ ವಿಚಾರಣಾ ನ್ಯಾಯಾಲಯಕ್ಕೆ ನಿರ್ದೇಶಿಸುವಂತೆ ಇದೇ ವೇಳೆ ಅಡ್ವೊಕೇಟ್ ಜನರಲ್ ನ್ಯಾಯಪೀಠವನ್ನು ಕೋರಿದರು. ಈ ಎಲ್ಲಾ ಅಂಶ ದಾಖಲಿಸಿಕೊಂಡ ನ್ಯಾಯಪೀಠ ವಿಚಾರಣೆ ಮುಂದೂಡಿತು.
ಪ್ರಕರಣದ ಹಿನ್ನೆಲೆ: ಬೆಳಗಾವಿ ತಾಲೂಕಿನ ಹೊಸ ವಂಟಮೂರಿ ಗ್ರಾಮದ 24 ವರ್ಷದ ಯುವಕ ಮತ್ತು 18 ವರ್ಷದ ಯುವತಿ ಪ್ರೀತಿಸುತ್ತಿದ್ದರು. ಯುವತಿಗೆ ಆಕೆಯ ಕುಟುಂಬದವರು ಬೇರೊಬ್ಬ ಯುವಕನೊಂದಿಗೆ ಮದುವೆ ನಿಗದಿಪಡಿಸಿ ನಿಶ್ಚಿತಾರ್ಥ ಇಟ್ಟುಕೊಂಡಿದ್ದರು.
ನಿಶ್ಚಿತಾರ್ಥದ ಹಿಂದಿನ ದಿನ ಮಧ್ಯರಾತ್ರಿ ಪ್ರೇಮಿಗಳಿಬ್ಬರು ಮನೆಬಿಟ್ಟು ಪರಾರಿಯಾಗಿದ್ದರು. ಇದರಿಂದ ರೊಚ್ಚಿಗೆದ್ದ ಯುವತಿಯ ಕುಟುಂಬದವರು, ಯುವಕನ ತಾಯಿಯನ್ನು (ಸಂತ್ರಸ್ತೆ) ವಿವಸ್ತ್ರಗೊಳಿಸಿ, ಹಲ್ಲೆ ನಡೆಸಿದ್ದರು. ಈ ಘಟನೆಯನ್ನು ಮಾಧ್ಯಮಗಳ ವರದಿ ಮಾಡಿದ್ದವು.
ಈ ವರದಿ ಆಧರಿಸಿ ಸ್ವಯಂ ಪ್ರೇರಿತ ಪಿಐಎಲ್ ದಾಖಲಿಸಿಕೊಂಡು ಹೈಕೋರ್ಟ್ ವಿಚಾರಣೆ ನಡೆಸುತ್ತಿದೆ. ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ಯೋಜನೆಯಡಿ ಘೋಷಣೆ ಮಾಡಿದಂತೆ ಸಂತ್ರಸ್ತೆಗೆ 2 ಎಕರೆ ಜಮೀನು ಮಂಜೂರು ಮಾಡಿ ಕ್ರಯಪತ್ರವನ್ನು ಹಸ್ತಾಂತರಿಸಬೇಕು ಎಂದು 2024ರ ಜ.17ರಂದು ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶಿಸಿತ್ತು.












Click it and Unblock the Notifications