ಸಾಹಿತ್ಯ ಸಮ್ಮೇಳನಾಧ್ಯಕ್ಷರ ಮೆರವಣಿಗೆಗೆ ಎತ್ತಿನ ಗಾಡಿ ಸಿದ್ಧ
ಬೆಂಗಳೂರು, ಜ. 29: ಶ್ರವಣಬೆಳಗೊಳದಲ್ಲಿ ಜ. 31, ಫೆಬ್ರವರಿ 1, 2 ಹಾಗೂ 3ರಂದು ನಡೆಯಲಿರುವ 81ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಸಿದ್ಧತೆಗಳು ಬಹುತೇಕ ಪೂರ್ಣಗೊಂಡಿವೆ.
ಸಾಹಿತ್ಯ ಸಮ್ಮೇಳನದ ಲಾಂಛನವನ್ನು 2014ರ ಡಿಸೆಂಬರ್ ತಿಂಗಳಿನಲ್ಲಿಯೇ ಬಿಡುಗಡೆ ಮಾಡಲಾಗಿತ್ತು. ಈಗ ಸಮ್ಮೇಳನಾಧ್ಯಕ್ಷರನ್ನು ಹೊತ್ತೊಯ್ಯುವ ಎತ್ತಿನ ಗಾಡಿಯ ಮಾದರಿಯನ್ನು ಕಂಪ್ಯೂಟರ್ ಮೂಲಕ ರಚಿಸಿ ಬಿಡುಗಡೆ ಮಾಡಲಾಗಿದೆ. [ಸಾಹಿತ್ಯ ಸಮ್ಮೇಳನದಲ್ಲಿ ಒಂದೇ ನಿರ್ಣಯ]

ಈ ಕುರಿತು 'ಒನ್ಇಂಡಿಯಾ ಕನ್ನಡ'ಕ್ಕೆ ಮಾಹಿತಿ ನೀಡಿರುವ ಅರಕಲಗೂಡು ಜಯಕುಮಾರ್, "ಇದೇ ಎತ್ತಿನಗಾಡಿಯಲ್ಲಿ ಸಾಹಿತ್ಯ ಸಮ್ಮೇಳನಾಧ್ಯಕ್ಷ ಡಾ. ಸಿದ್ದಲಿಂಗಯ್ಯ ಅವರನ್ನು ಮೆರವಣಿಗೆ ಮಾಡಲಾಗುವುದು. ಇದಕ್ಕೆ ಕನ್ನಡ ಸಾಹಿತ್ಯ ಪರಿಷತ್ತು ಈಗಾಗಲೇ ಒಪ್ಪಿಕೊಂಡಿದೆ" ಎಂದು ತಿಳಿಸಿದ್ದಾರೆ. [ಸಾಹಿತ್ಯ ಸಮ್ಮೇಳನದ ಲಾಂಛನ ಬಿಡುಗಡೆ]
"ಈ ಮಾದರಿಯನ್ನು ಕಂಪ್ಯೂಟರ್ ಮೂಲಕ ರಚಿಸಲಾಗಿದೆ. ಕಮಾನು ಕಟ್ಟಲಾಗುವುದು. ಬದಿಗಳಲ್ಲಿ ಕಬ್ಬನ್ನು ಲಗತ್ತಿಸಲಾಗುವುದು. ಒಟ್ಟಿನಲ್ಲಿ ಸಂಪೂರ್ಣ ಗ್ರಾಮೀಣ ಸಂಪ್ರದಾಯದಂತೆ ಎತ್ತಿನ ಗಾಡಿಯನ್ನು ಸಿಂಗರಿಸಲಾಗುವುದು" ಎಂದು ತಿಳಿಸಿದ್ದಾರೆ.

ಹೇಗಿದೆ ಎತ್ತಿನಗಾಡಿ? : ಇದೊಂದು ಎತ್ತಿನಗಾಡಿ ಆಗಿದ್ದರೂ ಚಿಕ್ಕ ರಥದಂತೆಯೇ ಕಂಡುಬರಲಿದೆ. ಗಾಡಿಯ ಜೊತೆಗೆ ಎತ್ತುಗಳನ್ನೂ ಸಿಂಗರಿಸಲಾಗುವುದು. ಎತ್ತುಗಳ ಮೇಲೆ ರತ್ನಗಂಬಳಿ ಹೊದಿಸಲಾಗುವುದು. [24 ಎಕರೆ ಜಾಗದಲ್ಲಿ ಸಮ್ಮೇಳನ]
ಗಾಡಿಯಲ್ಲಿ ಮಧ್ಯೆ ಸಮ್ಮೇಳನಾಧ್ಯಕ್ಷರು ಕುಳಿತುಕೊಳ್ಳುವ ಅಲಂಕೃತ ಕುರ್ಚಿ, ಮೇಲೆ ಸಮ್ಮೇಳನದ ಲಾಂಛನ, ಅಕ್ಕಪಕ್ಕದಲ್ಲಿ ಡೋಲು ಹಾಗೂ ವಾದ್ಯ ನುಡಿಸುವವರು ಮುಖ್ಯ ಆಕರ್ಷಣೆಯಾಗಲಿದ್ದಾರೆ.












Click it and Unblock the Notifications