ಧರೆಗುರುಳಿದ ಮರ ತೆರವಾಗದಿದ್ದರೆ ಟೆಂಡರ್ ಕ್ಯಾನ್ಸಲ್: ಬಿಬಿಎಂಪಿ ವಾರ್ನಿಂಗ್!
ಬೆಂಗಳೂರಿನಲ್ಲಿ ಸಾಧಾರಣ ಮಳೆಯಾದರೂ ಮರ, ಮರದ ರಂಬೆ - ಕೊಂಬೆಗಳು ಧರೆಗುರುಳಿ ಸಮಸ್ಯೆ ಆಗುತ್ತದೆ. ಮಳೆಯಿಂದ ಧರೆಗುರುಳುವ ಮರ, ಮರದ ರಂಬೆ- ಕೊಂಬೆಗಳನ್ನು ತೆರವು ಮಾಡದೆ ಬಿಬಿಎಂಪಿ ನಿರ್ಲಕ್ಷ್ಯ ವಹಿಸುವ ಬಗ್ಗೆಯೂ ಸಾರ್ವಜನಿಕರಿಂದ ಆಕ್ಷೇಪಣೆಗಳು ಕೇಳಿ ಬರುತ್ತಲ್ಲೇ ಇರುತ್ತವೆ. ಇದೀಗ ಎಚ್ಚೆತ್ತುಕೊಂಡಿರುವ ಬಿಬಿಎಂಪಿಯು ಸಕಾಲದಲ್ಲಿ ಮರ, ಮರದ ರಂಬೆ- ಕೊಂಬೆಗಳನ್ನು ತೆರವು ಮಾಡದ ಟೆಂಡರ್ ದಾರರ (ಗುತ್ತಿಗೆ ಸಿಬ್ಬಂದಿ)ಯ ಮೇಲೆ ಕ್ರಮ ತೆಗೆದುಕೊಳ್ಳುವುದಾಗಿ ಎಚ್ಚರಿಕೆ ನೀಡಿದೆ.
ಬಿಬಿಎಂಪಿ (ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ) ಮಳೆಗಾಲದಲ್ಲಿ ಮಳೆ,ಗಾಳಿಯು ಹೆಚ್ಚಾಗಿದ್ದು, ನಗರದಾದ್ಯಂತ ಸಾಕಷ್ಟು ಮರಗಳು,ರೆಂಬೆ ಕೊಂಬೆಗಳು ಧರೆಗುರುಳುತ್ತಿವೆ. ಸಾರ್ವಜನಿಕರಿಗೆ, ಸಾರಿಗೆ ಸಂಚಾರಕ್ಕೆ, ಆಸ್ತಿ-ಪಾಸ್ತಿಗಳಿಗೆ ಹಾನಿಯಾಗಿ ಸಂಚಾರಕ್ಕೆ ವ್ಯತ್ಯಾಸ ಸಹ ಆಗುತ್ತಿದೆ. ಇದರಿಂದ ಸಾರ್ವಜನಿಕರ ವಾಹನಗಳು ಸಹ ಜಖಂಗೊಂಡಿದ್ದು,ಲಕ್ಷಾಂತರ ರೂಪಾಯಿ ನಷ್ಟವೂ ಆಗಿದೆ.

ಮರಗಳ ತೆರವಿಗೆ 28 ತಂಡಗಳ ರಚನೆ
ಬೆಂಗಳೂರು ವ್ಯಾಪ್ತಿಯಲ್ಲಿ ಮಳೆ ಮತ್ತು ಗಾಳಿಯಿಂದ ಬಿಳುವಂತಹ ಮರಗಳ ರೆಂಬೆ, ಕೊಂಬೆಗಳನ್ನು ತೆರವುಗೊಳಿಸುವ ಹಾಗೂ ಅಪಾಯ ಸ್ಥಿತಿಯಲ್ಲಿ ಇರುವಂತಹ ಮರಗಳನ್ನು ತೆರವುಗೊಳಿಸುವ ನಿಟ್ಟಿನಲ್ಲಿ ಬೆಂಗಳೂರು ನಗರ ವಿಧಾನಸಭಾ ಕ್ಷೇತ್ರಕ್ಕೆ ಒಂದರಂತೆ ಒಟ್ಟು 28 ಮರಗಳ ವ್ಯವಸ್ಥಿತ ನಿರ್ವಹಣಾ ತಂಡಗಳನ್ನು ರಚಿಸಲಾಗಿದೆ ಎಂದು ಬಿಬಿಎಂಪಿಯು ಹೇಳಿದೆ.
ಈ ರೀತಿ ವಿಧಾನಸಭಾ ಕ್ಷೇತ್ರವಾರು ರಚಿಸಲಾಗಿರುವ ಮರಗಳ ವ್ಯವಸ್ಥಿತ ನಿರ್ವಹಣೆ ತಂಡಗಳಲ್ಲಿ ಒಂದು ತಂಡದಲ್ಲಿ ಒಟ್ಟು 8 ಜನ ಸಿಬ್ಬಂದಿ ಇರುವ ಮಾದರಿಯಲ್ಲಿ ತಂಡವನ್ನು ರಚಿಸಲಾಗಿದೆ. ಈ ನಿರ್ದಿಷ್ಟ ತಂಡಗಳಲ್ಲಿ ಮರಗಳ ಹಾಗೂ ರೆಂಬೆ,ಕೊಂಬೆಗಳನ್ನು ತೆರವು ಮಾಡುವುದಕ್ಕೆ ಅವಶ್ಯವಿರುವ ಎಲ್ಲಾ ಮಾದರಿಯ ಉಪಕರಣ ಇರಲಿದೆ. ಅಲ್ಲದೇ ನೈಪುಣ್ಯತೆ ಹೊಂದಿರುವ ಸಿಬ್ಬಂದಿಯನ್ನು ಸಹ ನಿಯೋಜಿಸಲಾಗಿದೆ.
ಇನ್ನು ಎಲ್ಲಾ ಕ್ಷೇತ್ರಗಳಲ್ಲಿ ಏಕ ಕಾಲಕ್ಕೆ ಗಾಳಿ,ಮಳೆ ಇರುವುದಿಲ್ಲ. ಆದರೆ, ಯಾವ ಪ್ರದೇಶದಲ್ಲಿ ಹೆಚ್ಚಿನ ಗಾಳಿ,ಮಳೆ ಬರುತ್ತದೆ ಎನ್ನುವುದನ್ನು ಗುರುತಿಸಬೇಕು. ತುರ್ತಾಗಿ ಅವಶ್ಯವಿದ್ದ ಕಡೆ ವಲಯದ ಜಂಟಿ ಆಯುಕ್ತರು, ವಲಯ ಮಟ್ಟದ ಅರಣ್ಯಾಧಿಕಾರಿಗಳು ಹಾಗೂ ಕೇಂದ್ರ ಕಚೇರಿಯ ಅರಣ್ಯ ಇಲಾಖೆಯ ಅಧಿಕಾರಿಗಳು ಕ್ರಮ ವಹಿಸಬೇಕು ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ನಿರ್ದೇಶನ ನೀಡಿದ್ದಾರೆ. ಮರಗಳ ವ್ಯವಸ್ಥಿತ ನಿರ್ವಹಣೆಯಲ್ಲಿರುವ ತಂಡಗಳ ವಿರುದ್ಧ ಯಾವುದೇ ದೂರುಗಳು ಬಂದರೂ, ಆಯಾ ವಲಯ ಮಟ್ಟದ ಅರಣ್ಯಾಧಿಕಾರಿಗಳೇ ನೇರ ಜವಾಬ್ದಾರರಾಗಿರುತ್ತಾರೆ ಎಂದು ಮುಖ್ಯ ಆಯುಕ್ತರು ಎಚ್ಚರಿಕೆ ನೀಡಿದ್ದಾರೆ.

ಅಸಮರ್ಪಕ ನಿರ್ವಹಣೆ ಸಹಿಸುವುದಿಲ್ಲ
ಬೆಂಗಳೂರಿನಲ್ಲಿ ಮರಗಳ ವ್ಯವಸ್ಥಿತ ನಿರ್ವಹಣೆ ಮಾಡುವ ಉದ್ದೇಶದಿಂದ ಈಗಾಗಲೇ ನಿಯೋಜನೆ ಮಾಡಿರುವ ತಂಡಗಳು ಸಮರ್ಪಕವಾಗಿ ಕಾರ್ಯ ನಿರ್ವಹಿಸದೆ ಇರುವುದು ಕಂಡು ಬಂದಿದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಹೇಳಿದ್ದಾರೆ.
ಈ ತಂಡಗಳು ಮಳೆ, ಗಾಳಿಗೆ ಬೀಳುವ ಅಥವಾ ಬೀಳಬಹುದಾದ ಮರ-ರೆಂಬೆ ಕೊಂಬೆಗಳನ್ನು ಹಾಗೂ ತ್ಯಾಜ್ಯವನ್ನು ಪರಿಶೀಲಿಸಿ ತ್ವರಿತವಾಗಿ ಸಾರ್ವಜನಿಕ ಸ್ಥಳಗಳಿಂದ ತೆರವುಗೊಳಿಸುತ್ತಿಲ್ಲ.
ಅಲ್ಲದೇ ರಸ್ತೆ ಬದಿಯಲ್ಲಿ ಒಣಗಿರುವ ಮತ್ತು ಅಪಾಯಸ್ಥಿತಿಯಲ್ಲಿ ಇರುವ ಮರಗಳ ತೆರವುಗೊಳಿಸದೇ ಇರುವುದರಿಂದ ಮಳೆ ಗಾಳಿಗೆ ಅಪಾಯಸ್ಥಿತಿಯಲ್ಲಿ ಇರುವ ಮರಗಳು ಬಿದ್ದು ಸಾರ್ವಜನಿಕರ ಪ್ರಾಣಕ್ಕೆ ಹಾಗೂ ಆಸ್ತಿ-ಪಾಸ್ತಿಗೆ ಹಾನಿಯಾಗಿರುವುದು ಸಹ ವರದಿಯಾಗಿದೆ. ಇನ್ನು ಸಾಕಷ್ಟು ಸಾರ್ವಜನಿಕರ ವಾಹನಗಳು ಸಹ ಹಾನಿಯಾಗಿವೆ.

ಸಾರ್ವಜನಿಕ ಸ್ಥಳಗಳಲ್ಲಿ ಬೀಳುವ, ಬೀಳಬಹುದಾದ ಮರ ಮತ್ತು ಮರದ ರಂಬೆ ಕೊಂಬೆಗಳನ್ನು ಕೂಡಲೇ ತೆರವು ಮಾಡಬೇಕು. ಅಪಾಯಸ್ಥಿತಿಯಲ್ಲಿ ಇರುವಂತಹ ಮರಗಳನ್ನು ಈ ಕೂಡಲೇ ನಿಯಮಾನುಸಾರ ತೆರವುಗೊಳಿಸಿ, ಅನಾಹುತಗಳನ್ನು ತಪ್ಪಿಸಬೇಕು. ತಪ್ಪಿದಲ್ಲಿ ಟೆಂಡರ್ ನಿಯಮಾದಂತೆ ಸಂಬಂಧಪಟ್ಟ ತಂಡಗಳ ವಿರುದ್ಧ ಕ್ರಮಕೈಗೊಳ್ಳಲಾಗುವುದು ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಎಚ್ಚರಿಕೆ ನೀಡಿದ್ದಾರೆ.












Click it and Unblock the Notifications