ನಮ್ಮ ಹಿಂದೆ ಓಡಾಡಿದವರೆಲ್ಲಾ ಮಂತ್ರಿಯಾಗಿದ್ದಾರೆ : ಅಸಮಾಧಾನ ಹೊರ ಹಾಕಿದ ಬಸವರಾಜ ರಾಯರೆಡ್ಡಿ
ಕೊಪ್ಪಳ, ಆಗಸ್ಟ್ 02: ಕಾಂಗ್ರೆಸ್ ಪಾಳಯದಲ್ಲಿ ಸರ್ಕಾರ ರಚನೆಯ ಬಳಿಕ ಅಸಮಾಧಾನಿತರ ಸಂಖ್ಯೆ ಹೆಚ್ಚಾಗಿದ್ದು, ಮತ್ತೆ ಬಹಿರಂಗವಾಗಿಯೇ ಸಿದ್ದರಾಮಯ್ಯ ಅವರ ಆಪ್ತ ಹಾಗೂ ಶಾಸಕ ಬಸವರಾಜ ರಾಯರೆಡ್ಡಿ ಅಸಮಾಧಾನ ಹೊರಹಾಕಿದ್ದಾರೆ.
ಈ ಕುರಿತು ಮಂಗಳವಾರ ಕೊಪ್ಪಳ ಜಿಲ್ಲೆ ಕುಕನೂರು ಪಟ್ಟಣದ ಜನಸಂರ್ಪಕ ಸಭೆಯಲ್ಲಿ ಜನರನ್ನುದ್ದೇಶಿಸಿ ಮಾತನಾಡಿ, ನೀವು ದುಖಃ ಪಡುವ ಅಗತ್ಯವಿಲ್ಲ,ಒಮ್ಮೊಮ್ಮೆ ಮಂತ್ರಿಯಾಗೋಕೆ ಆಗಲ್ಲ. ಅದಕ್ಕೆ ಹಣೆ ಬರಹ ಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ದ ಪರೋಕ್ಷವಾಗಿ ಅಸಮಾಧಾನ ಹೊರಹಾಕಿದ್ದಾರೆ.

ನಮ್ಮ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನ ನೋಡಿ. ಕಾಂಗ್ರೆಸ್ ಗೆ ಬಂದು ಎರಡು ಬಾರಿ ಮುಖ್ಯಮಂತ್ರಿಯಾಗಿದ್ದಾರೆ. ಕಾಂಗ್ರೆಸ್ ನ ಹಳೇ(ಮೂಲ) ಮಂದಿ ಏನಂತಿರಬಹುದು, ಇದೆಲ್ಲಾ ಮನುಷ್ಯನ ಅದೃಷ್ಟ. ನಮ್ಮ ಹಿಂದೆ ಓಡಾಡಿದವರೆಲ್ಲಾ ಮಂತ್ರಿಯಾಗಿದ್ದಾರೆ ಎಂದು ಪರೋಕ್ಷವಾಗಿ ಅಸಮಾಧಾನ ವ್ಯಕ್ತಪಡಿಸಿದರು.
ಅವರಪ್ಪಂದಿರ ಜೊತೆ ನಾನು ಕೆಲಸ ಮಾಡಿದವನು. ಇವರು ನಮ್ಮ ಮುಂದೆ ಧಿಮಾಕು ಮಾಡ್ಕೊಂಡು ಓಡಾಡ್ತಾರೆ, ಹೆಚ್ ಡಿ ದೇವೆಗೌಡರ ಕ್ಯಾಬಿನೆಟ್ ನಲ್ಲಿ ನಾನು ಮಿನಿಸ್ಟರ್ ಆಗಿದ್ದವನು,
ಈ ಕುಮಾರಸ್ವಾಮಿ ನನ್ನ ಪಕ್ಕ ನಿಲ್ಲೋಕು ಹೆದರುತ್ತಿದ್ದ, ಏನ್ ಮಾಡೊದು ಅವನ ಹಣೆ ಬರಹದಲ್ಲಿ ಬರೆದಿತ್ತು ಎಂದು ಹೇಳಿದರು.
ಗ್ಯಾರಂಟಿ ಯೋಜನೆಗಳಿಂದಾಗಿ ಈ ವರ್ಷ ಅಭಿವೃದ್ಧಿ ಕಾರ್ಯಕ್ಕೆ ಅನುದಾನ ನೀಡಲು ಸಾಧ್ಯವಿಲ್ಲ ಎಂಬ ಡಿಸಿಎಂ ಡಿಕೆ ಶಿವಕುಮಾರ್ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಕಾಂಗ್ರೆಸ್ ಶಾಸಕ ಬಸವರಾಜ ರಾಯರೆಡ್ಡಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಒಳ್ಳೆಯ ಬಜೆಟ್ ನೀಡಿದ್ದಾರೆ. ಅಭಿವೃದ್ಧಿ ಯೋಜನೆಗಳಿಗಾಗಿ ಶೇಕಡಾ 64 ರಷ್ಟು ಹಣ ನೀಡಿದ್ದಾರೆ. ಈ ಹಿಂದೆ ಮುಖ್ಯಮಂತ್ರಿ ಆಗಿದ್ದ ಬಸವರಾಜ ಬೊಮ್ಮಾಯಿ ಅವರು ಅಭಿವೃದ್ಧಿ ಚಟುವಟಿಕೆಗಾಗಿ ಶೇ 61ರಷ್ಟು ಹಣ ಮೀಸಲಿಟ್ಟಿದ್ದರು. ಆದರೆ, ಸಿದ್ದರಾಮಯ್ಯನವರು ಅದಕ್ಕಿಂತ ಹೆಚ್ಚು ಅನುದಾನ ಘೋಷಿಸಿದ್ದಾರೆ ಎಂದು ರಾಯರೆಡ್ಡಿ ಹೇಳಿದರು.












Click it and Unblock the Notifications