ನಿಮ್ಮ ಅಮಾನತು ಶೂರತ್ವ ಬೇಡ: ಇನ್ನಷ್ಟು ಗ್ಯಾರಂಟಿ ಕೊಟ್ಟರು ತಕರಾರಿಲ್ಲ: ಮಾಜಿ ಸಿಎಂ
ಹುಬ್ಬಳ್ಳಿ, ಡಿಸೆಂಬರ್ 19: ರಾಜ್ಯದಲ್ಲಿ ಬ್ರೂಣ ಹತ್ಯೆ, ಮಹಿಳೆಯರ ಮೇಲಿನ ದೌರ್ಜನ್ಯ, ಅಭಿವೃದ್ಧಿ ಕಾರ್ಯ ಕುಂಠಿತ, ಗ್ಯಾರಂಟಿಗಳು ಜನರಿಗೆ ತಲುಪುವಲ್ಲಿನ ತಾಂತ್ರಿಕ ಕಾರಣದ ನೆಪ, ಉತ್ತರ ಕರ್ನಾಟಕದ ಕಡೆಗಣನೆ ಸೇರಿದಂತೆ ಇಂದಿನ ಆಡಳಿತ ನೋಡಿದರೆ ಹೊಸ ಸರ್ಕಾರ ಬಂದಿದೆ ಅಂತಲೇ ಅನ್ನಿಸುತ್ತಿಲ್ಲ ಎಂದು ಮಾಜಿ ಮುಖ್ಯಮಂತ್ರಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸರ್ಕಾರ ಬೇಕಿದ್ದರೆ ಇನ್ನಷ್ಟು ಗ್ಯಾರಂಟಿಗಳನ್ನು ಕೊಡಲಿ ನಮ್ಮ ತಕರಾರು ಇಲ್ಲ. ಆದರೆ ಅಷ್ಟೇ ಪ್ರಮಾಣದಲ್ಲಿ ಆದಾಯ ಹೆಚ್ಚಿಸಲು. ಅಭಿವೃದ್ಧಿ ಯೋಜನೆಗಳನ್ನು ನಿಲ್ಲಿಸುವುದು ಬೇಡ. ಕೇವಲ ಬಾಯಿ ಮಾತಿನಲ್ಲಿ, ಹೇಳಿಕೆಯಲ್ಲಿ ಕಾಮಗಾರಿಗಳ ಅಭಿವೃದ್ಧಿ ಬೇಡ ಎಂದು ರಾಜ್ಯ ಕಾಂಗ್ರೆಸ್ ಸರ್ಕಾರ ಆಡಳಿತ ವಿರುದ್ಧ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರು ಮಂಗಳವಾರ ಹರಿಹಾಯ್ದರು.

ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ಹೊಸ ಸರ್ಕಾರ ಬಂದಿದೆ ಅಂತಲೇ ಅನ್ನಿಸುತ್ತಿಲ್ಲ. ಯಾವುದೇ ಅಭಿವೃದ್ಧಿ ಕಾರ್ಯ ರಾಜ್ಯದಲ್ಲಿ ಆಗುತ್ತಿಲ್ಲ ಪ್ರಗತಿ ಸಂಪೂರ್ಣ ಶ್ಯೂನವಾಗಿದೆ. ನಾವು ಅನುಮೋದನೆ ಕೊಟ್ಟ ಕಾಮಗಾರಿಗಳನ್ನು ಮೌಖಿಕವಾಗಿ ನಿಲ್ಲಿಸಿದ್ದಾರೆ. ನಮಗೆ ಬಾಯಿ ಮಾತಿನ ಅಭಿವೃದ್ಧಿ ಬೇಡ ಎಂದು ದೂರಿದರು.
ಅಧಿವೇಶನದಲ್ಲಿ ಉತ್ತರ ಕರ್ನಾಟಕಕ್ಕೆ ಯಾವುದೇ ಅನುದಾನ ಘೋಷಣೆ ಮಾಡಿಲ್ಲ. ಅನುದಾನ ಹಂಚಿಕೆ ವಿಚಾರದಲ್ಲಿ ಸುಮ್ಮನೆ ಕೋರ್ಟ್ ನೆಪ ಹೇಳುತ್ತಿದ್ದಾರೆ. ಜನರನ್ನು ದಾರಿ ತಪ್ಪಿಸಲಾಗುತ್ತಿದೆ. ಈ ಸರ್ಕಾರದಿಂದ ಯಾವುದೇ ಸುಖ ಜನರಿಗೆ ಸಿಕ್ಕಿಲ್ಲ ಎಂದು ಆರೋಪಿಸಿದರು.

ಸಿಎಂಗೆ ಮಾಜಿ ಸಿಎಂ ಸವಾಲು
ಕೇಂದ್ರ ಸರ್ಕಾರದ ಅನುದಾನ ವಿಚಾರದಲ್ಲಿ ಸಿದ್ಧರಾಮಯ್ಯ ರಾಜಕೀಯ ಮಾಡುತ್ತಿದ್ದಾರೆ. ಸುಮ್ಮನೆ ರಾಜಕೀಯವಾಗಿ ಗೂಬೆ ಕೂರಿಸುವ ಕೆಲಸ ಮಾಡುತ್ತಿದ್ದಾರೆ. ಅವರು ಕೇಂದ್ರ ಏನು ಕೊಟ್ಟಿದೆ ಎಂದು ದಾಖಲೆ ಬಿಡುಗಡೆ ಮಾಡಲಿ. ನಾವು ಕೂಡ ದಾಖಲೆ ನೀಡುತ್ತೇವೆ ಎಂದು ಅವರು ಸವಾಲು ಹಾಕಿದರು.
ಸಿಎಂ-ಪಿಎಂ ಭೇಟಿ: ಬೊಮ್ಮಾಯಿ ಪ್ರತಿಕ್ರಿಯೆ
ಹಣಕಾಸು ನಿರ್ವಹಣೆಯಲ್ಲಿ ಈ ಸರ್ಕಾರ ಎಡವಿದೆ. ಗ್ಯಾರಂಟಿ ಕೂಡ ಅರ್ಹರಿಗೆ ಸಿಗುತ್ತಿಲ್ಲ. ಗೃಹ ಲಕ್ಷ್ಮಿಯಲ್ಲಿ, ರೈತರ ಪರಿಹಾರದಲ್ಲಿ ತಾಂತ್ರಿಕ ನೆಪ ಹೇಳುತ್ತಿದ್ದಾರೆ. ಮುಖ್ಯಮಂತ್ರಿಗಳು ದೆಹಲಿಗೆ ಪ್ರಧಾನಮಂತ್ರಿಗಳು ಬೇಟಿಗೆ ಹೋಗಿರುವುದು ಒಳ್ಳೆಯ ಬೆಳವಣಿಗೆ. ಪ್ರಧಾನಿಗಳು ಮುಕ್ತ ಮನಸ್ಸಿನವರು.
ಭೇಟಿಯ ವೇಳೆ ರಾಜ್ಯದ ಅಭಿವೃದ್ಧಿ ಬಗ್ಗೆ ಚರ್ಚೆ ಆಗಲಿ ಏನು ಬರುತ್ತದ ನೋಡೋಣ. ಖಂಡಿತಾ ಸಾಕಾರಾತ್ಮಕ ಬೆಳವಣಿಗೆ ನಡೆಯಲಿವೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
ಪೌರುಷವನ್ನು ಅಮಾನತಿನಲ್ಲಿ ತೋರಿಸಬೇಡಿ: ಕಿಡಿ
ರಾಜ್ಯದಲ್ಲಿ ಬ್ರೂಣ ಹತ್ಯೆ ನಿರಂತರವಾಗಿದೆ. ಕೋಲಾರದ ಮಾಲೂರಿನಲ್ಲಿ ವಿದ್ಯಾರ್ಥಿಗಳಿಂದ ಶೌಚಗುಂಡಿ ಸ್ವಚ್ಛಗೊಳಿಸಿದ್ದಾರೆ. ನಿಮ್ಮ ಪೌರುಷವನ್ನು ಅಧಿಕಾರಿಗಳ ಅಮಾನತ್ತಿನಲ್ಲಿ ತೋರಿಸಬೇಡಿ. ಕೋಲಾರದಂತಹ ಘಟನೆ ಮರುಕಳಿಸದಂತೆ ನೋಡಿಕೊಳ್ಳವಲ್ಲಿ ನಿಮ್ಮ ಶೂರತ್ವ ತೋರಿಸಿ ಎಂದು ಮುಖ್ಯಮಂತ್ರಿಗಳ ವಿರುದ್ಧ ಪರೋಕ್ಷವಾಗಿ ಅವರು ವಾಗ್ದಾಳಿ ನಡೆಸಿದರು.
ಇನ್ನೂ ಭ್ರೂಣ ಹತ್ಯೆ ಪ್ರಕರಣವನ್ನು ಸಿಐಡಿಗೆ ಹಸ್ತಾಂತರ ಮಾಡಿದರೆ ಎಲ್ಲ ಭಾರ ಅದರ ಮೇಲೆ ಹಾಕಿದರೆ ಏನು ಉಪಯೋಗ. ಸಿಐಡಿಗೆ ಕೊಟ್ಟರೆ ಇಂತಹ ಕೃತ್ಯಗಳ ಕುರಿತು ಯಾರಿಗೆ ಭಯ ಬರುತ್ತದೆ. ಇಂದಿಗೂ ಬ್ರೂಣ ಹತ್ಯೆ ನಡೆಯುತ್ತಿದೆ ಎಂದು ಅವರು ಹೇಳಿದರು.
ಎಚ್‌ಸಿ ಮಹಾದೇವಪ್ಪರಿಗೆ ಬೊಮ್ಮಾಯಿ ಟಾಂಗ್
ಕೋಲಾರದ ಘಟನೆ ಅತ್ಯಂತ ಅಮಾನವೀಯ. ಈ ಭಾಗದಲ್ಲಿ ಪದೇ ಪದೇ ಘಟನೆ ಈ ರೀತಿ ಆಗತ್ತಲೆ ಇವೆ. ಘಟನೆ ಆದ ಮೇಲೆ ಅಮಾನತ್ತು ಮಾಡಿದರೆ ಏನು ಉಪಯೋಗ. ಎಲ್ಲ ಮುಗಿಸಿ ಅಮಾನತ್ತು ಮಾಡುವುದರಲ್ಲಿ ಏನೂ ಶೂರತ್ವ ಇಲ್ಲ. ನಿಮ್ಮ ಪೌರುಷ ಅಮಾನತ್ತು ಮಾಡೋದರಲ್ಲಿ ಅಲ್ಲ ಎಂದು ಸಚಿವ ಎಚ್‌ಸಿ ಮಹಾದೇವಪ್ಪ ವಿರುದ್ಧ ಬೊಮ್ಮಾಯಿ ಗುಡುಗಿದರು.
ಇಂತಹ ಘಟನೆ ನಡೆಯದಂತೆ ನೋಡಿಕೊಳ್ಳುವುದು ನಿಮ್ಮ ಆಡಳಿತ ದಕ್ಷತೆ. ಬೆಳಗಾವಿ ಘಟನೆಯೂ ಅಮಾನವೀಯ
ಅಧಿವೇಶನ ನಡೆಯೋವಾಗಲೇ ಈ ರೀತಿ ಘಟನೆ ನಡದಿದೆ. ಕಳ್ಳರು ಕಾಕರಿಗೆ ಭಯ ಇಲ್ಲ ಅನಿಸುತ್ತದೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸರಿಯಾಗಿಲ್ಲ. ಜನ ಸಾಮಾನ್ಯರಿಗೆ ಆರ್ಥಿಕ ಹೊರೆಯಾಗಿದೆ ಎಂದು ಅವರು ಆಪಾದಿಸಿದರು.
ರಾಜ್ಯದ ಜನರ ಬದುಕು ದುಸ್ಥರವಾಗಿದೆ. ರಾಜ್ಯದಲ್ಲಿ ಅಧಿಕಾರಿಗಳಿಗೆ ಭಯ ಇಲ್ಲದಂತಾಗಿದೆ. ಇದಕ್ಕೆಲ್ಲ ವರ್ಗಾವಣೆಯೆ ಕಾರಣ. ಸರ್ಕಾರದವರು ಅಧಿಕಾರಿಗಳ ವರ್ಗಾವಣೆಯಲ್ಲಿ ದುಡ್ಡು ತಿಂದಿದ್ದಾರೆ. ಸರ್ಕಾರ ವರ್ಗಾವಣೆಗೆ ಟಾರ್ಗೆಟ್ ಫಿಕ್ಸ್ ಮಾಡಿದ್ದರು. ಹೊಸ ಸರ್ಕಾರ ಆಡಳಿತ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದು ತಿಳಿಸಿದರು.












Click it and Unblock the Notifications