'ಇಸ್ಲಾಂ ಧರ್ಮ ಶ್ರೇಷ್ಠ' ಹೇಳಿಕೆ: ಸಚಿವ ರಾಯರೆಡ್ಡಿ ವಿರುದ್ಧ ಬೊಮ್ಮಾಯಿ ಕಿಡಿ, ಸಂಪುಟದಿಂದ ವಜಾಕ್ಕೆ ಆಗ್ರಹ
ಬೆಂಗಳೂರು: ವಿಶ್ವದಲ್ಲೇ ಇಸ್ಲಾಂ ಧರ್ಮ ಶ್ರೇಷ್ಠ ಎಂದಿರುವ ಸಚಿವ ಬಸವರಾಜ ರಾಯರೆಡ್ಡಿ ಅವರು ಹೊಸ ಚರ್ಚೆ ನಾಂದಿ ಹಾಡಿದ್ದಾರೆ. ಅವರ ವಿರುದ್ಧ ಸಾಕಷ್ಟು ಆಕ್ರೋಶ ಹೊರ ಹಾಕಿದ್ದು, ಸಂಪುಟದಿಂದ ವಜಾಗೊಳಿಸಬೇಕು ಎಂದು ಕೆಲವರು ಆಗ್ರಹಿಸಿದ್ದಾರೆ. 'ಬಸವರಾಜ ರಾಯರೆಡ್ಡಿ ಅವರ ಹೇಳಿಕೆಯಿಂದ ಮುಸ್ಲಿಮೇತರರ ಭಾವನೆಗೆ ಧಕ್ಕೆ ಉಂಟಾಗಿದೆ. ರಾಯರೆಡ್ಡಿಯಿಂದ ಸಂವಿಧಾನಕ್ಕೆ ಅಪಚಾರವಾಗಿದೆ' ಎಂದು ಮಾಜಿ ಮುಖ್ಯಮಂತ್ರಿ ಮತ್ತು ಬಿಜೆಪಿ ಸಂಸದ ಬಸವರಾಜ ಬೊಮ್ಮಾಯಿ ಕಿಡಿ ಕಾರಿದರು.
ಸೋಮವಾರ ಈ ಕುರಿತು ಎಕ್ಸ್ ಪೋಸ್ಟ್ ಮಾಡಿರುವ ಬೊಮ್ಮಾಯಿ ಅವರು, ರಾಜ್ಯದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸರ್ಕಾರದಲ್ಲಿ ಅತಿ ಬುದ್ಧವಂತ ಸಚಿವ ಬಸವರಾಜ ರಾಯರೆಡ್ಡಿ ಮತ್ತೊಮ್ಮೆ ವಿವಾದಾತ್ಮಕ ಹೇಳಿಕೆ ನೀಡಿ ತಾವು ಪ್ರಮಾಣ ವಚನ ಮಾಡಿರುವ ಸಂವಿಧಾನಕ್ಕೆ ಅಪಚಾರ ಮಾಡಿದ್ದಾರೆ. ಸಚಿವ ರಾಯರೆಡ್ಡಿ ಹೇಳಿಕೆಯಿಂದ ಇಸ್ಲಾಮೇತರ ಧರ್ಮಿಯರ ಮನಸ್ಸಿಗೆ ನೋವಾಗಿದೆ ಎಂದರು.

ಸಂವಿಧಾನದ ಮೂಲ ಆಶಯ ಧರ್ಮ ನಿರಪೇಕ್ಷತೆಯನ್ನು ಹೇಳಿದೆ. ಒಬ್ಬ ಸಚಿವರಾಗಿ ಒಂದು ಧರ್ಮ ಇನ್ನೊಂದು ಧರ್ಮಕ್ಕಿಂತ ಶ್ರೇಷ್ಠ ಎನ್ನುವ ಮಾತನಾಡುವ ಮುಖಾಂತರ ಇಸ್ಲಾಂ ಅಲ್ಲದ ಇತರದ ಧರ್ಮಿಯರ ಮನಸಿಗೆ ನೋವು ಉಂಟು ಮಾಡಿದೆ ಎಂದು ತಿಳಿಸಿದ್ದಾರೆ.
ರಾಯರೆಡ್ಡಿಯವರು ಸಮಾಜದಲ್ಲಿ ಕೋಮು ಸೌಹಾರ್ದತೆ ಕೆದಕಿದ್ದಾರೆ. ಇದು ಒಬ್ಬ ಸಚಿವರು ಮಾಡುವ ಕೆಲಸವಲ್ಲ. ಕೂಡಲೇ ಅವರು ಕ್ಷಮಾಪಣೆ ಕೇಳಬೇಕು ಇಲ್ಲದಿದ್ದರೆ, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರ ಮೇಲೆ ಕ್ರಮ ಜರುಗಿಸಬೇಕೆಂದು ರಾಜ್ಯದ ಜನತೆಯ ಆಗ್ರಹವಾಗಿದೆ ಎಂದು ಹೇಳಿದರು.
ರಾಯರೆಡ್ಡಿಯನ್ನು ಸಂಪುಟದಿಂದ ವಜಾಗೊಳಿಸಿ: ಶಾಸಕ ಆಗ್ರಹ
ಸಚಿವ ಬಸವರಾಜ ರಾಯರೆಡ್ಡಿ ಅವರ ಇಸ್ಲಾಂ ಧಮ್ ಕುರಿತ ಹೇಳಿಕೆಗೆ ಮಂಗಳೂರು ಉತ್ತರ ನಗರ ಕ್ಷೇತ್ರ ಬಿಜೆಪಿ ಶಾಸಕ ಡಾ.ವೈ.ಭರತ್ ಶೆಟ್ಟಿ ಅವರು ಆಕ್ರೋಶ ಹೊರ ಹಾಕಿದ್ದಾರೆ. ರಾಯರೆಡ್ಡಿ ಅವರನ್ನು ಸಂಪುಟದಿಂದ ಕೈ ಬಿಡಬೇಕೆಂದು ಶಾಸಕರು ಆಗ್ರಹಿಸಿದ್ದಾರೆ. ಮತಗಳಿಗೆ ಬಗೆ ಬಗೆಯ ನಾಟವಾಡುತ್ತಿದ್ದಾರೆ ಎಂದು ಟೀಕಿಸಿದರು.
ಬಸವರಾಜ ರಾಯರೆಡ್ಡಿ ಹೇಳಿದ್ದೇನು?
ಜಗತ್ತಿನಲ್ಲಿ ಇಸ್ಲಾಂ ಧರ್ಮ ಅತ್ಯಂತ ಶ್ರೇಷ್ಠವಾಗಿದೆ. ನನಗೆ ಹಜ್ ಯಾತ್ರೆ ಹೋಗುವ ಆಸೆ ಇದೆ. ನಾನು ಹೆಚ್ಚಾಗಿ ಮಠ, ಮಂದಿರಕ್ಕೆ ಹೋಗಲ್ಲ. ಆದರೆ ಒಂದು ಬಾರಿಯಾದರೂ ಹಜ್ ಯಾತ್ರೆಗೆ ಹೋಗಬೇಕಿದೆ ಎಂದು ಅವರು ಕೊಪ್ಪಳದ ಕುಕನೂರಿನಲ್ಲಿ ನಡೆದ ಮುಸ್ಲಿಂ ಸಮಾಜದ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಸಚಿವ ಬಸವರಾಜ ರಾಯರೆಡ್ಡಿ ಹೇಳಿದ್ದಾರೆ. ಅವರ ಈ ಹೇಳಿಕೆ ಸಾಕಷ್ಟು ಹೊಸ ಚರ್ಚೆಗೆ ಕಾರಣವಾಗಿದೆ.
ಮುಂದುವರಿದು ಅವರು, ಇಸ್ಲಾಂ ಅತ್ಯಂತ ಮಾನವೀಯತೆಯಿಂದ ಕೂಡಿದ ಧರ್ಮವಾಗಿದೆ. ಆದರೆ ನಾಡಿನಲ್ಲಿ ಈ ಧರ್ಮ ಕುರಿತು ತಪ್ಪ ಪರಿಕಲ್ಪನೆ ಮೂಡಿಸಲಾಗುತ್ತಿದೆ. ಈ ಧರ್ಮವು ಮನುಷ್ಯ ಹೇಗೆ ಬದುಕಬೇಕೆಂದು ಹೇಳಿಕೊಡುತ್ತದೆ. ಮೊಹಮ್ಮದ್ ಪೈಗಂಬರರು ಇಡೀ ಜಗತ್ತಿಗೆ ಕುರಾನ್ ನೀಡಿದ್ದಾರೆ. ಯಾರು ಬೇಕಾದರೂ ಕುರಾನ್ ಓದಬಹುದು. ನಾನು ಅದರ ಅಧ್ಯಯನಕ್ಕೆ ಸಿದ್ಧನಿದ್ದೇನೆ ಎಂದು ಅವರು ತಿಳಿಸಿದ್ದರು.


Click it and Unblock the Notifications
