ಗೋವುಗಳನ್ನು ಏಕೆ ಕಡಿಯಬಾರದು ಎಂದ ಸಚಿವರು ಯಾರನ್ನು ಓಲೈಸುತ್ತಿದ್ದಾರೆ?: ಬೊಮ್ಮಾಯಿ ಪ್ರಶ್ನೆ
ಬೆಂಗಳೂರು, ಜೂನ್ 04: ಎಮ್ಮೆ, ಕೋಣಗಳನ್ನು ಕಡಿಯುವುದಾದರೆ ಹಸುಗಳನ್ನು ಏಕೆ ಕಡಿಯಬಾರದು? ಎಂದಿರುವ ಪಶುಸಂಗೋಪನೆ ಮತ್ತು ರೇಷ್ಮೆ ಸಚಿವ ಕೆ.ವೆಂಕಟೇಶ್ ಹೇಳಿಕೆ ಆಶ್ಚರ್ಯ ತಂದಿದೆ. ಯಾರ ಓಲೈಕೆಗಾಗಿ ಅವರು ಹೀಗೆ ಮಾತನಾಡಿದ್ದಾರೆ ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಕಿಡಿ ಕಾರಿದ್ದಾರೆ.
ಭಾನುವಾರ ಈ ಕುರಿತು ಸರಣಿ ಟ್ವೀಟ್ ಮಾಡಿರುವ ಬಸವರಾಜ ಬೊಮ್ಮಾಯಿ ಅವರು, ಗೋವಿನೊಂದಿಗೆ ಭಾರತೀಯರಾದ ನಾವು ಭಾವನಾತ್ಮಕ ಸಂಬಂಧ ಹೊಂದಿದ್ದು, ತಾಯಿ ಸ್ಥಾನದಲ್ಲಿ ಗೋವನ್ನು ಪೂಜಿಸುತ್ತೇವೆ. ಸಚಿವರಾದ ಕೆ.ವೆಂಕಟೇಶ್ ಅವರು ಯಾರ ಓಲೈಕೆಗಾಗಿ ಈ ರೀತಿಯ ಹೇಳಿಕೆ ನೀಡಿದ್ದಾರೆ?, ತಮಗೆ ನೀಡಿರುವ ಖಾತೆಯನ್ನು ಬದಲಾಯಿಸಲಿ ಎಂದೊ? ಇಲ್ಲಾ ಹೈ ಕಮಾಂಡ್ ಮೆಚ್ಚಿಸಲೊ ಎಂದು ಬೊಮ್ಮಾಯಿ ಪ್ರಶ್ನಿಸಿದ್ದಾರೆ.

ಗೋಹತ್ಯೆ ನಿಷೇಧ ಪ್ರಥಮವಾಗಿ ಪ್ರತಿಪಾದಿಸಿದ್ದು ರಾಷ್ಟ್ರಪಿತ ಮಹಾತ್ಮಾ ಗಾಂಧಿಜಿಯವರು. ಪೂಜ್ಯ ಮಹಾತ್ಮಾ ಗಾಂಧಿ ಪ್ರತಿಪಾದಿಸಿದ ಗೋಹತ್ಯೆ ನಿಷೇಧವನ್ನು 1960 ರ ದಶಕದಲ್ಲಿ ಹಲವಾರು ರಾಜ್ಯಗಳಲ್ಲಿ ಕಾನೂನು ತರಲಾಗಿದೆ ಎಂದರು.
ಸಚಿವರ ಹೇಳಿಕೆಯಿಂದ ರಾಜ್ಯದಲ್ಲಿ ದೊಡ್ಡ ಪ್ರಮಾಣದಲ್ಲಿ ಗೋವುಗಳ ಕಳ್ಳ ಸಾಗಾಣಿಕೆ, ಸಾಮೂಹಿಕ ಗೋ ಹತ್ಯೆ ಮಾಡುವ ಕಾನೂನು ಬಾಹಿರ ಕಾರ್ಖಾನೆಗಳು ತಲೆ ಎತ್ತಲಿವೆ. ನಮ್ಮ ಸರ್ಕಾರದ ಅವಧಿಯಲ್ಲಿ ಕಾನೂನು ಬಾಹಿರ ಕಸಾಯಿ ಖಾನೆಗಳನ್ನು ತಡೆಗಟ್ಟಲು ಕಾನೂನು ತರಲಾಗಿದೆ. ಕರ್ನಾಟಕದಲ್ಲಿ ಹೊಸ ಕಾಯಿದೆ ತಂದಿಲ್ಲ. ಇರುವ ಕಾನೂನಿಗೆ ಬಲ ತುಂಬಿದ್ದೇವೆ ಎಂದು ತಿಳಿಸಿದ್ದಾರೆ.
ಈ ರೀತಿಯ ಹೇಳಿಕೆ ಖಂಡನೀಯ. ಸಚಿವರಾದ ನೀವು ಹೀಗೆ ಹೇಳಿಕೆ ನೀಡುವ ಮೊದಲು ಸಚಿವರು ಆಲೋಚನೆ ಮಾಡಬೇಕು. ಗೊಹತ್ಯೆ ವಿಚಾರ ಕುರಿತು ಸಚಿವ ಕೆ. ವೆಂಕಟೇಶ್ವ ಅವರಿಗೆ ಸಲಹೆ ನೀಡುವ ತುರ್ತು ಅಗತ್ಯತೆ ಇದೆ ಬಸವರಾಜ ಬೊಮ್ಮಾಯಿ ಟೀಕಿಸಿದರು.

ಸಚಿವರು ಹೇಳಿದ್ದೇನು?
ರಾಜ್ಯದಲ್ಲಿ ಈ ಹಿಂದೆ ಬಿಜೆಪಿ ಜಾರಿಗೆ ತಂದಿರುವ ಗೋಹತ್ಯೆ ನಿಷೇಧ ಕಾಯ್ದೆ ಹಿಂಪಡೆಬೇಕೆ? ಬೇಡವೇ ಎಂಬುದರ ಬಗ್ಗೆ ನಿರ್ಧರಿಸಲಾಗುತ್ತದೆ. ಈ ಮೂಲಕ ಗೋಹತ್ಯೆ ನಿಷೇಧ ವಾಪಾಸ್ ಪಡೆಯುವ ಸುಳಿವು ನೀಡಿದ್ದಾರೆ.
ಎಮ್ಮೆ, ಕೋಣಗಳನ್ನು ಕಡಿಯುವುದಾದರೆ, ಹಸುಗಳನ್ನು ಏಕೆ ಕಡಿಯಬಾರದು?. ಹಾಗಾಗಿ ಈ ಬಗ್ಗೆ ಚರ್ಚೆಗಳಾಗುತ್ತಿವೆ. ನನ್ನ ಮನೆಯಲ್ಲೂ ಮೂರು ನಾಲ್ಕು ಹಸುಗಳಿಗೆ. ಅದರಲ್ಲಿ ಒಂದು ಹಸು ಸತ್ತಾಗ ಗುಂಡಿ ತೋಡಿ ಹೂಳಲು ಕಷ್ಟಪಡಬೇಕಾಯಿತು. ಸುಮಾರು 20-25 ಮಂದಿಗೆ ಕಷ್ಟಪಡಬೇಕಾಯಿತು ಎಂದು ಹೇಳಿದ್ದಾರೆ. ಇದಕ್ಕೆ ಈಗ ಆಕ್ರೋಶ ವ್ಯಕ್ತವಾಗುತ್ತಿದೆ.












Click it and Unblock the Notifications