ನ್ಯಾ.ಸದಾಶಿವ ಆಯೊಗದ ವರದಿ: ದಾರಿ ತಪ್ಪಿಸುತ್ತಿರುವ ಸರ್ಕಾರ: ಮಾಜಿ ಸಿಎಂ ಸವಾಲು
ಬೆಂಗಳೂರು, ಜನವರಿ 19: ಕಾಂಗ್ರೆಸ್ ನವರು 2013 ರಿಂದ ನ್ಯಾಯಮೂರ್ತಿ ಸದಾಶಿವ ಆಯೊಗದ ವರದಿಯನ್ನು ಜಾರಿ ಮಾಡುತ್ತೇವೆ ಎಂದು ಹೇಳುತ್ತಾ ಬಂದಿದ್ದಾರೆ. ಇವರಿಗೆ ಬದ್ಧತೆ ಇದ್ದರೆ ನ್ಯಾಯಮೂರ್ತಿ ಸದಾಶಿವ ಆಯೋಗದ ವರದಿ ಜಾರಿ ಮಾಡಲಿ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆಗ್ರಹಿಸಿದರು.
ಬೆಂಗಳೂರಿನ ಉತ್ತರಾದಿ ಮಠದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಡಾ. ಜಯಶ್ರೀ ಅರವಿಂದ ಅವರು ಸಂಗೀತ ಸಂಯೋಜನೆ ಮಾಡಿರುವ ಶ್ರೀರಾಮನ ಕುರಿತ ಗೀತೆಗಳ ಧ್ವನಿಸುರಳಿಯನ್ನು ಬಿಡುಗಡೆ ಮಾಡಿ ಬಳಿಕ ಸುದ್ದಿಗಾರರ ಜೊತೆ ಮಾತನಾಡಿದರು.

ಸದಾಶಿವ ಆಯೋಗದ ವರದಿ ಜಾರಿ ಮಾಡುವ ವಿಚಾರದಲ್ಲಿ ಮೊದಲಿನಿಂದಲೂ ಜನರ ದಾರಿ ತಪ್ಪಿಸುವ ಕೆಲಸ ಮಾಡುತ್ತಿದೆ. ಕಾಂಗ್ರೆಸ್ ನವರಿಗೆ ಬದ್ಧತೆ ಇದ್ದಿದ್ದೇ ಆದರೆ ನ್ಯಾಯಮೂರ್ತಿ ಸದಾಶಿವ ಆಯೋಗದ ವರದಿ ಜಾರಿ ಮಾಡಲಿ ಎಂದು ಅವರು ಸವಾಲು ಹಾಕಿದರು.
ತಾವೇ ಜಾರಿ ಮಾಡುವುದಾಗಿ ಹೇಳಿದ್ದರು?
ಒಳಮೀಸಲು ವಿಚಾರದಲ್ಲಿ ಸಂವಿಧಾನ ತಿದ್ದುಪಡಿ ಮಾಡಲು ಕೇಂದ್ರಕ್ಕೆ ಶಿಫಾರಸ್ಸು ಮಾಡುವುದಾಗಿ ಹೇಳುತ್ತಾರೆ. ಇನ್ನೊಂದೆಡೆ ಸದಾಶಿವ ಆಯೋಗದ ವರದಿಯನ್ನು ತಾವೇ ಜಾರಿ ಮಾಡುವುದಾಗಿ ಹೇಳುತ್ತಾರೆ. ಇವರಿಗೆ ಬದ್ದತೆ ಇದ್ದರೆ. ಸದಾಶಿವ ಆಯೋಗದ ವರದಿ ಜಾರಿ ಮಾಡಿ, ಒಳಮೀಸಲಾತಿ ಆಧಾರದಲ್ಲಿ ನೇಮಕಾತಿ ಹಾಗೂ ಭಡ್ತಿ ನೀಡಲಿ ಎಂದು ಅವರು ಒತ್ತಾಯಿಸಿದರು.

ಕೇಂದ್ರದಿಂದ ಅನುದಾನದ ಬರುತ್ತಿಲ್ಲ ಎಂದು ಆರೋಪಿಸಿರುವ ಸಿಎಂ ಸಿದ್ದರಾಮಯ್ಯ ಅವರ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಅವರು, ಕೇಂದ್ರದಿಂದ ಅನುದಾನ ಕುರಿತು ರಾಜ್ಯದ ವಿಚಾರಗಳಿಗೆ ಕಾಂಗ್ರೆಸ್ ತಿರುಚುವ ಕೆಲಸ ಮಾಡುತ್ತಿದೆ. ಅವರು ಬಹಿರಂಗ ಚರ್ಚೆಗೆ ಪ್ರಧಾನಿಗೆ ಆಹ್ವಾನ ಕೊಟ್ಟಿರುವುದಕ್ಕೆ ನಾವು ಉತ್ತರ ಕೊಟ್ಟಿದ್ದೇವೆ ಎಂದರು.
ರಾಜ್ಯಕ್ಕೆ ಅಧಿಕ ಅನುದಾನ ಹಂಚಿಕೆ ಆಗಿದೆ
ಪ್ರಧಾನಿ ಮೋದಿಯವರು ಬಹಳ ದೊಡ್ಡ ಕೆಲಸ ಮಾಡಿದ್ದಾರೆ. 14ನೇ ಹಣಕಾಸಿಗಿಂತ 15ನೇ ಹಣಕಾಸು ಆಯೋಗದ ಅವಧಿಯಲ್ಲಿ ರಾಜ್ಯಕ್ಕೆ 1ಲಕ್ಷ ಕೊಟಿ ರೂಪಾಯಿ ಹೆಚ್ಚಿಗೆ ಬಂದಿದೆ. ಕೇವಲ ಆಯುಷ್ಮಾನ್ ಭಾರತ ಯೊಜನೆ ಅಡಿಯಲ್ಲಿ 62 ಲಕ್ಷ ಜನರಿಗೆ ಪ್ರಯೋಜನವಾಗಿದೆ. ಕಾಂಗ್ರೆಸ್ ಅವಧಿಯಲ್ಲಿ ಆ ಯೋಜನೆಯನ್ನು ಅಳವಡಿಸಿಕೊಳ್ಳಲು ಹಿಂದೇಟು ಹಾಕಿದ್ದರು. ನಂತರ ಯೋಜನೆ ಒಳ್ಳೆಯದಿದೆ ಎಂದು ಒಪ್ಪಿಕೊಂಡರು.
ಕಾಂಗ್ರೆಸ್‌ನವರು ಮೊದಲು ಕೇಂದ್ರದ ಯೋಜನೆಗಳಿಗೆ ರಾಜ್ಯದ ಪಾಲು ಬಿಡುಗಡೆ ಮಾಡಬೇಕು. ಕೆಲವು ಯೋಜನೆಗಳು ನೇರವಾಗಿ ಫಲಾನುಭವಿಗಳಿಗೆ ತಲುಪುತ್ತಿದೆ. ಹೀಗಾಗಿ ಇವರು ರಾಜ್ಯಕ್ಕೆ ಕಡಿಮೆ ಅನುದಾನ ಬರುತ್ತಿದೆ ಎಂದು ದಾರಿ ತಪ್ಪಿಸುತ್ತಿದ್ದಾರೆ ಎಂದು ಕರ್ನಾಟಕ ಸರ್ಕಾರದ ವಿರುದ್ಧ ಬೊಮ್ಮಾಯಿ ದೂರಿದರು.












Click it and Unblock the Notifications