'ಇವನಾರವ ಇವನಾರವ ಎಂದು ವಚನ ಹೇಳೋದು, ಈ ಕಡೆ ಬಂದು ಅವನ ಜಾತಿ ಕೇಳೋದು'
ಬೆಂಗಳೂರು, ಏಪ್ರಿಲ್ 30: ವಚನ ಎಂದರೆ ಮಾತು. ಶರಣರ ವಚನ ಜನರ ಭಾಷೆಯಲ್ಲಿವೆ. ಆದ್ದರಿಂದ ವಚನ ಸಾಹಿತ್ಯ, ಜನರ ಸಾಹಿತ್ಯವೇ ಆಗಿದೆ. ಹಿಂದೆ ಸಂಸ್ಕೃತ ಕಲಿತರೆ ಕಲಿಯುವ ಶೂದ್ರರ ಕಿವಿಗೆ ಕಾದ ಸೀಸ ಹುಯ್ಯುವ ಶಿಕ್ಷೆ ಇತ್ತು. ಇದರಿಂದಲೇ ಭಾರತೀಯ ಶೂದ್ರ ಸಮುದಾಯ ಅಕ್ಷರ ಸಂಸ್ಕೃತಿಯಿಂದ ವಂಚಿತರಾದರು. ಶಿಕ್ಷಣ ಇಲ್ಲದ ಕಾರಣಕ್ಕೆ ಅಸಮಾನತೆ ಬೆಳೆಯಿತು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಬಸವ ಜಯಂತಿ ಪ್ರಯುಕ್ತ ಕೂಡಲಸಂಗಮದಲ್ಲಿ ಆಯೋಜಿಸಿದ್ದ ಶರಣರ ವೈಭವ - 2025 ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ನಮ್ಮ ಸಂವಿಧಾನ ವೈರುದ್ಯತೆ ಇರುವ ಸಮಾಜದಲ್ಲಿ ಜಾರಿ ಆಗುತ್ತಿದೆ. ಪ್ರಜಾಪ್ರಭುತ್ವದ ಕಾರಣದಿಂದ ರಾಷ್ಟ್ರಪತಿಯಿಂದ ಪೌರ ಕಾರ್ಮಿಕರವರೆಗೂ ಎಲ್ಲರಿಗೂ ಒಂದೇ ಮತ ಎನ್ನುವ ರಾಜಕೀಯ ಸ್ವಾತಂತ್ರ್ಯ ಸಿಕ್ಕಿದೆ. ಆದರೆ, ಸಾಮಾಜಿಕ ಮತ್ತು ಆರ್ಥಿಕ ಸ್ವಾತಂತ್ರ್ಯ ಇನ್ನೂ ಸಿಕ್ಕಿಲ್ಲ. ಇದು ಸಿಗದೆ ರಾಜಕೀಯ ಸ್ವಾತಂತ್ರ್ಯಕ್ಕೆ ಅರ್ಥ ಇಲ್ಲ ಎನ್ನುವ ಅಂಬೇಡ್ಕರ್ ಅವರ ಮಾತು ಇಂದಿಗೂ ಮನನ ಮಾಡಿಕೊಳ್ಳುವಂತಹುದ್ದು ಎಂದರು.

ಇವನಾರವ ಇವನಾರವ ಎಂದು ವಚನ ಹೇಳೋದು, ಈ ಕಡೆ ಬಂದು ಅವನು ಯಾವ ಜಾತಿ ಎಂದು ಕೇಳೋದು ನಡೆಯುತ್ತಿದೆ. ಹೀಗಾದರೆ ಬಸವಣ್ಣನವರ ಆಶಯದಂತೆ ಜಾತಿ ನಿರ್ಮೂಲನೆ ಆಗಲ್ಲ. ಜಾತಿಗೆ ಚಲನೆಯಿಲ್ಲ. ವರ್ಗಕ್ಕೆ ಚಲನೆ ಇದೆ. ಎಲ್ಲಾ ಜಾತಿಗಳಿಗೂ ಆರ್ಥಿಕ ಚಲನೆ ಸಿಕ್ಕಾಗ ಮಾತ್ರ ಜಾತಿ ನಿರ್ಮೂಲನೆ ಸಾಧ್ಯ.
ಇವನಾರವ ಇವನಾರವ ಎಂದು ವಚನ ಹೇಳುತ್ತಲೇ ಜಾತಿ ಮಾಡುವವರು ಇದ್ದಾರೆ. ಬಸವಣ್ಣನವರು ಮತ್ತು ಶರಣರು ಕರ್ಮ ಸಿದ್ಧಾಂತದ ವಿರುದ್ಧ ಹೋರಾಟ ನಡೆಸಿದರು. ಆದರೆ ಈಗ ಶಿಕ್ಷಣ ಪಡೆದವರೇ ಜನ್ಮ ಜನ್ಮಗಳಲ್ಲಿ ನಂಬಿಕೆ ಇಟ್ಟು ಕರ್ಮ ಸಿದ್ಧಾಂತ ಆಚರಿಸುತ್ತಿದ್ದಾರೆ. ಒಂದು ಕಡೆ ಬಸವ ಜಯಂತಿ ಆಚರಿಸೋದು ಮತ್ತೊಂದು ಕಡೆ ಕರ್ಮಸಿದ್ಧಾಂತ ಆಚರಿಸೋದು ಮಾಡಿದರೆ ಬಸವ ಜಯಂತಿಗೆ ಅರ್ಥ ಇಲ್ಲ ಎಂದು ಹೇಳಿದರು.

ಬಸವಣ್ಣ ಅರ್ಥ ಆಗಬೇಕು ಅಂದರೆ ಮೊದಲು ಕರ್ಮಸಿದ್ಧಾಂತ ಮತ್ತು ಹಣೆಬರಹ ಎನ್ನುವ ಮೌಢ್ಯವನ್ನು ಬಿಡುವ ಶಪಥ ಮಾಡಬೇಕು.
ಆಚಾರವೇ ಸ್ವರ್ಗ-ಅನಾಚಾರವೇ ನರಕ ಎನ್ನುವ ಬಸವಣ್ಣನವರ ಮೌಲ್ಯ ಪಾಲಿಸುವ ಶಪಥ ಮಾಡಿ ನೋಡೋಣ. ಧರ್ಮ ಎಂದರೆ ಭಯಾನಕವಾಗಿ ರಾಶಿ ರಾಶಿ ಏನೇನೋ ಹೇಳ್ತಾರೆ. ಇದ್ಯಾವುದೂ ಧರ್ಮ ಅಲ್ಲ. ಬಸವಣ್ಣನವರು ಬಹಳ ಸರಳವಾಗಿ ದಯೆಯೇ ಧರ್ಮದ ಮೂಲವಯ್ಯ ಎಂದಿದ್ದಾರೆ. ಇಷ್ಟು ಸರಳ ಮತ್ತು ಸುಂದರವಾದ ಮೌಲ್ಯವೇ ಧರ್ಮ ಎಂದರು.
ಬಸವಣ್ಣನವರ ಆಶಯಗಳು, ಬಸವಣ್ಣನವರ ಮೌಲ್ಯಗಳು, ಅಂಬೇಡ್ಕರ್ ಅವರ ಸಂವಿಧಾನದ ಆಶಯ ಮತ್ತು ಮೌಲ್ಯಗಳು ಒಂದೇ ಆಗಿವೆ. ಇದನ್ನು ಅರ್ಥ ಮಾಡಿಕೊಂಡು, ಪಾಲಿಸದೇ ಹೋದರೆ ಕೇವಲ ಬಸವಣ್ಣನವರ ಬಗ್ಗೆ ಭಾಷಣ ಮಾಡುವುದರಿಂದ ಸಮಾಜಕ್ಕೆ ಎನೂ ಒಳ್ಳೆಯದು ಮಾಡಲು ಸಾಧ್ಯವಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡಲಸಂಗಮದಲ್ಲಿ ಆಯೋಜಿಸಿದ್ದ ಶರಣರ ವೈಭವ -2025 ಕಾರ್ಯಕ್ರಮದಲ್ಲಿ ಹೇಳಿದ್ದಾರೆ.












Click it and Unblock the Notifications