ಯೋಧನಾದವನು ಓಡಿಹೋಗಲ್ಲ! ಕುತೂಹಲ ಹೆಚ್ಚಿಸಿದ ಯತ್ನಾಳ್ ಟ್ವೀಟ್
ಕರ್ನಾಟಕ ವಿಧಾನಸಭೆ ಚುನಾವಣೆ ಫಲಿತಾಂಶ ಘೋಷಣೆಯಾದ 6 ತಿಂಗಳ ಬಳಿಕ ಬಿಜೆಪಿ ವಿಪಕ್ಷ ನಾಯಕನ ಆಯ್ಕೆ ಮಾಡಿದೆ. ಬೆಂಗಳೂರಿನ ಪದ್ಮನಾಭನಗರ ಶಾಸಕ ಆರ್. ಅಶೋಕ ವಿಪಕ್ಷ ನಾಯಕನಾಗಿ ಆಯ್ಕೆಯಾಗಿದ್ದಾರೆ.
ಐಟಿಸಿ ಗಾರ್ಡೇನಿಯಾ ಹೋಟೆಲ್ನಲ್ಲಿ ನಡೆದ ಬಿಜೆಪಿ ಶಾಸಕಾಂಗ ಸಭೆಯಲ್ಲಿ ಆರ್. ಅಶೋಕ ಅವರನ್ನು ವಿಪಕ್ಷ ನಾಯಕರೆಂದು ಘೋಷಣೆ ಮಾಡಲಾಗಿದೆ. ಇನ್ನು ಅಶೋಕ್ ಹೆಸರು ಘೋಷಣೆಯಾಗುತ್ತಿದ್ದಂತೆ ಯತ್ನಾಳ್ ಮಾಡಿರುವ ಟ್ವೀಟ್ ರಾಜಕೀಯ ವಲಯದಲ್ಲಿ ಆಸಕ್ತಿ ಮೂಡಿಸಿದೆ.

ಯೋಧನಾದವನು ಓಡಿ ಹೋಗಲ್ಲ ಎನ್ನುವ ಮೂಲಕ ಯತ್ನಾಳ್ ತಮ್ಮ ಅಸಮಾಧಾನವನ್ನು ಹೊರಹಾಕಿದ್ದಾರೆ. ಮೊದಲಿನಿಂದ ಕೂಡ ಯತ್ನಾಳ್ ವಿಪಕ್ಷ ನಾಯಕನ ಸ್ಥಾನದ ಮೇಲೆ ಕಣ್ಣಿಟ್ಟಿದ್ದರು, ಈಗ ಅದು ಕೈತಪ್ಪಿದೆ.
ಟ್ವೀಟ್ ಮಾಡಿರುವ ಅವರು, "ನ ದೈನ್ಯಂ, ನ ಪಲಾಯನಂ, ಒಬ್ಬ ಯೋಧ ಯಾವುದನ್ನೂ ದೂರಲು ಅಥವಾ ವಿಷಾದಿಸಲು ಸಾಧ್ಯವಿಲ್ಲ. ಅವನ ಜೀವನವು ಅಂತ್ಯವಿಲ್ಲದ ಸವಾಲು, ಮತ್ತು ಸವಾಲುಗಳು ಬಹುಶಃ ಒಳ್ಳೆಯದು ಅಥವಾ ಕೆಟ್ಟದ್ದಾಗಿರಲು ಸಾಧ್ಯವಿಲ್ಲ. ಸವಾಲುಗಳು ಸರಳವಾಗಿ ಸವಾಲುಗಳಾಗಿರುತ್ತವೆ" ಎಂದು ಹೇಳಿದ್ದಾರೆ.
ಭಿನ್ನಮತ ಸ್ಫೋಟ !
ಐಟಿಸಿ ಗಾರ್ಡೇನಿಯಾ ಹೋಟೆಲ್ನಲ್ಲಿ ಶಾಸಕಾಂಗ ಪಕ್ಷದ ಸಭೆಯ ಸಂದರ್ಭದಲ್ಲೇ ಬಿಜೆಪಿಯ ಹಿರಿಯ ನಾಯಕರಾದ ಬಸನಗೌಡ ಪಾಟೀಲ್ ಯತ್ನಾಳ್ ಮತ್ತು ರಮೇಶ್ ಜಾರಕಿಹೊಳಿ ಮತ್ತು ಅರವಿಂದ್ ಬೆಲ್ಲದ್ ಸಭೆಯಿಂದ ಹೊರ ನಡೆದಿದ್ದರು ಎಂದು ವರದಿಯಾಗಿದೆ.
ಸಭೆ ಆರಂಭಕ್ಕೆ ಮುನ್ನವೇ ಹಿರಿಯ ನಾಯಕರ ಜೊತೆ ಪಕ್ಷದ ವೀಕ್ಷಕರು ಸಭೆ ನಡೆಸಿದ್ದರು. ಈ ಸಂದರ್ಭದಲ್ಲಿ ಆರ್. ಅಶೋಕ್ ಹೆಸರು ಪ್ರಸ್ತಾಪವಾಗಿತ್ತು, ಆಗಲೇ ಅಶೋಕ್ ಆಯ್ಕೆ ಬಗ್ಗೆ ಸುಳಿವು ಸಿಗುತ್ತಿದ್ದಂತೆ ಶಾಸಕರಾದ ಬಸನಗೌಡ ಪಾಟೀಲ್ ಯತ್ನಾಳ್, ಅರವಿಂದ ಬೆಲ್ಲದ್, ರಮೇಶ್ ಜಾರಕಿ ಹೊಳಿ ಹೊರ ನಡೆದರು ಎಂದು ವರದಿಯಾಗಿದೆ.
ಚಹಾ ಕುಡಿಯುವ ನೆಪ!
ಸಭೆಯ ಮಧ್ಯದಲ್ಲೇ ಹೋಟೆಲ್‌ನಿಂದ ಹೊರ ಬಂದ ನಂತರ ಮಾಧ್ಯಮಗಳ ಜೊತೆ ಮಾತನಾಡಿದ ಯತ್ನಾಳ್, "ಇದು ಬಡವರು ಚಹಾ ಕುಡಿಯುವ ಜಾಗವಲ್ಲ, ಅದಕ್ಕಾಗಿ ಚಹಾ ಕುಡಿಯಲು ಹೊರಗೆ ಹೋಗುತ್ತಿದ್ದೇವೆ" ಎಂದು ಕಾರಣ ನೀಡಿದ್ದರು. ಯತ್ನಾಳ್ ಅವರ ಜೊತೆಯಲ್ಲಿ ರಮೇಶ್ ಜಾರಕಿಹೊಳಿ, ಅರವಿಂದ್ ಬೆಲ್ಲದ್ ಕೂಡ ಹೋಗಿದ್ದಾರೆ.
ಬಿಜೆಪಿ ರಾಜ್ಯಾಧ್ಯಕ್ಷರಾಗಿ ವಿಜಯೇಂದ್ರ ಆಯ್ಕೆ ಬಗ್ಗೆ ಅಸಮಾನತೆ ವ್ಯಕ್ತಪಡಿಸಿರುವ ಯತ್ನಾಳ್, ಕುಟುಂಬ ರಾಜಕಾರಣಕ್ಕೆ ತಲೆಬಾಗಲ್ಲ, ಪಕ್ಷ ಪ್ರಾದೇಶಿಕ ಸಮಾನತೆ ಕಡೆ ಗಮನಕೊಡಬೇಕು, ಉತ್ತರ ಕರ್ನಾಟಕ ನಾಯಕರಿಗೆ ಶಾಸಕಾಂಗ ಪಕ್ಷದ ನಾಯಕ ಸ್ಥಾನ ಕೊಡಬೇಕು ಎಂದು ಹೇಳಿದ್ದರು. ಇದು ಮುಂದಿನ ದಿನಗಳಲ್ಲಿ ಪಕ್ಷದ ಒಗ್ಗಟ್ಟಿನಲ್ಲಿ ಬಿರುಕು ಹೆಚ್ಚಾಗುವ ಸಾಧ್ಯತೆ ಇದೆ.
ವಿಪಕ್ಷ ನಾಯಕನಾಗಿ ಆರ್. ಅಶೋಕ್ ಮತ್ತು ರಾಜ್ಯ ಬಿಜೆಪಿ ಅಧ್ಯಕ್ಷರಾಗಿ ಬಿವೈ ವಿಜಯೇಂದ್ರ ಬಿಜೆಪಿಯಲ್ಲಿನ ಆಂತರಿಕ ಬೇಗುದಿಯನ್ನು ಹೇಗೆ ಶಮನ ಮಾಡುತ್ತಾರೆ ಎನ್ನುವುದನ್ನು ನೋಡಬೇಕಿದೆ.












Click it and Unblock the Notifications