ಭಗವದ್ಗೀತೆ ಶ್ರೀಕೃಷ್ಣನ ಸಾರದ ಭಾವಚಿತ್ರ ಹರಿದ ಘಟನೆ: ಬಸನಗೌಡ ಪಾಟೀಲ್ ಯತ್ನಾಳ್ ಕೆಂಡಾಮಂಡಲ
ಕೋಲಾರ, ಜನವರಿ 08: ಕೇಂದ್ರ ನಾಯಕ ಅಮಿತ್ ಶಾ ಅವರ ಡಾ.ಬಿ.ಆರ್.ಅಂಬೇಡ್ಕರ್ ವಿರುದ್ಧದ ಹೇಳಿಕೆ ಖಂಡಿಸಿ ನಡೆದಿದ್ದ ಕೋಲಾರ್ ಬಂದ್ ವೇಳೆ ಭಗವದ್ಗೀತೆಯ ಸಾರವನ್ನು ತೋರಿಸುವ ಭಾವಚಿತ್ರವನ್ನು ಹರಿದು ಹಾಕಲಾಗಿದೆ. ಈ ಪ್ರಕರಣದಲ್ಲಿ ಮೂವರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ.
ಹಿಂದೂಪರ ಸಂಘಟನೆಗಳು ತಪ್ಪಿತಸ್ಥರ ಗಡಿಪಾರಿಗೆ ಆಗ್ರಹಿಸಿದ ಬೆನ್ನಲ್ಲೆ ಬಿಜೆಪಿ ಶಾಸಕ, ಹಿಂದೂ ಫೈರ್ ಬ್ರ್ಯಾಂಡ್ ಬಸನಗೌಡ ಪಾಟೀಲ್ ಯತ್ನಾಳ್ ಅವರು ಭಾರೀ ಆಕ್ರೋಶ ಹೊರ ಹಾಕಿದ್ದಾರೆ. ದಲಿತ ಸಂಘಟನೆಗಳ ವಿರುದ್ಧ ಅಸಮಾಧಾನ ಹೊರ ಹಾಕಿದ್ದಾರೆ.

ಡಾ.ಬಿ.ಆರ್.ಅಂಬೇಡ್ಕರ್ ಹೆಸರಿನಲ್ಲಿ ಕೋಲಾರ ಬಂದ್ ಮಾಡಿ ಪ್ರತಿಭಟನೆ ಮಾಡಲಾಗಿತ್ತು. ಈ ವೇಳೆ ಕೋಲಾರ ನಗರದ ಸಾಕ್ಷರತಾ ಮತ್ತು ಶಾಲಾ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರ ಕಚೇರಿಯ ಕಾರಿಡಾರ್ ನಲ್ಲಿ ಶಿಷ್ಟಾಚಾರದ ನೆಪವನ್ನಿಟ್ಟುಕೊಂಡು ಭಗವದ್ಗೀತೆಯ ಸಾರವನ್ನು ತೋರಿಸುವ ಭಾವಚಿತ್ರವನ್ನು ಹರಿದುಹಾಕಲಾಗಿದೆ. ಈ ಪ್ರಸಂಗ ನಡೆದಿರುವುದು ಪ್ರತಿಭಟನಾಕಾರರ ಅಸಹಿಷ್ಣುತೆ ತೋರಿಸುತ್ತದೆ ಎಂದು ಪೋಸ್ಟ್‌ನಲ್ಲಿ ಯತ್ನಾಳ್ ಅವರು ಗುಡುಗಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ (ಎಕ್ಸ್) ಈ ಕುರಿತು ಫೋಟೋ ಹಂಚಿಕೊಂಡಿರುವ ಬಸನಗೌಡ ಪಾಟೀಲ್ ಯತ್ನಾಳ್ ಅವರು, ಶಿಷ್ಟಾಚಾರ ಪಾಲನೆ ಆಗದೆ ಇದ್ದರೆ ಅದಕ್ಕೆ ದೂರು ನೀಡುವ ವ್ಯವಸ್ಥೆ ಇದೆ. ಪ್ರತಿಭಟನೆ ಮಾಡುವ ಹಕ್ಕಿದೆ. ಅದೆಲ್ಲ ಬಿಟ್ಟು ಭಗವದ್ಗೀತೆಯ ಸಾರವನ್ನು ಹರಿದು ಹಾಕುವ ಹಕ್ಕು ಖಂಡಿತ ಇಲ್ಲ.
ರೈತರ ಜಮೀನುಗಳಿಗೆ ಯಾವುದೇ ನೋಟೀಸು ನೀಡದೆ ಆರ್.ಟಿ.ಸಿ.ಯ ಕಾಲಂ 11 ರಲ್ಲಿ ವಕ್ಫ್ ಬೋರ್ಡ್ ಹೆಸರು ನಮೂದಾದಾಗ ಈ ಪ್ರತಿಭಟನಕಾರರು ಎಲ್ಲಿದ್ದರು? ಹಾಗೂ ಯಾಕೆ ಪ್ರತಿಭಟನೆ ಮಾಡಲಿಲ್ಲ? ಎಂದು ಅವರು ಖಾರವಾಗಿ ಪ್ರತಿಭಟನಾಕಾರರನ್ನು ಪ್ರಶ್ನಿಸಿದ್ದಾರೆ.
ಅನ್ಯ ಕೋಮಿನ ಹಬ್ಬಗಳಲ್ಲಿ ಪ್ರಾಣಿ ಹತ್ಯೆ ಮಾಡಿದ್ದಾಗ ಅದರ ಬಗ್ಗೆ 'ಚ' ಕಾರವೆತ್ತದ ಇವರು, ಹಿಂದೂಗಳ ಪವಿತ್ರ ಗ್ರಂಥವನ್ನು ಅಪಮಾನಗೊಳಿಸಿದ್ದು ಅಕ್ಷಮ್ಯ ಅಪರಾಧ. ಪೊಲೀಸರು ಈ ರೀತಿಯಾದ Rent-a-Cause ಪ್ರತಿಭಟನಾಕಾರರ ಮೇಲೆ ಕೇಸು ದಾಖಲಿಸಿ ವಿಚಾರಣೆಗೆ ಒಳಪಡಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ಆರೋಪಿಗಳಿಗೆ ಕಠಿಣ ಶಿಕ್ಷೆ, ಗಡಿಪಾರಿಗೆ ಆಗ್ರಹ
ಜನವರಿ 3ರಂದು ಬಿ.ಆರ್.ಅಂಬೇಡ್ಕರ್ ಅವರ ಹೆಸರಿನಲ್ಲಿ ಕೋಲಾರ್ ಬಂದ್ ಮಾಡಿದ್ದ ದಲಿತಪರ ಸಂಘಟನೆಗಳು ಶ್ರೀಕೃಷ್ಣನ ಸಂದೇಶ ಸಾರುವ ಬ್ಯಾನರ್ ಹರಿದು ಹಾಕಿದ್ದರು. ಈ ಕಿಡಿಗೇಡಿಗಳನ್ನು ಗುರುತಿಸಿ ಪ್ರಕರಣದ ದಾಖಲಿಸಿ ಶಿಕ್ಷಿಸಬೇಕು. ಆರೋಪಿಗಳನ್ನು ಗಡಿಪಾರು ಮಾಡುವಂತೆ ಕೆಲವು ಹಿಂದೂಪರ ಸಂಘಟನೆಗಳು ಮುಖಂಡರು ಆಗ್ರಹಿಸಿದ್ದಾರೆ.
ಕೋಲಾರ್ ಬಂದ್ ಪ್ರತಿಭಟನೆ ಹೆಸರಿನಲ್ಲಿ ದೌರ್ಜನ್ಯ, ದಬ್ಬಾಳಿಕೆ ಮಾಡಲಾಗಿದೆ. ಸರ್ಕಾರಿ ಕಚೇರಿಯಲ್ಲಿ ಹಾಕಲಾಗಿದ್ದ ಭಗವದ್ಗೀತೆ ಸಾರದ ಭಾವಚಿತ್ರ ಹರಿದು ಹಾಕಿದ ಘಟನೆ ನಡೆದಿದೆ. ಇದು ಅನೇಕ ಹಿಂದೂಗಳ ಭಾವನೆಗೆ ಧಕ್ಕೆ ಉಂಟು ಮಾಡಿದೆ. ಭಾರತದಲ್ಲಿ ಹುಟ್ಟಿದ ನಾವೆಲ್ಲರು ಅಣ್ಣ ತಮ್ಮಂದಿರಂತೆ ಇದ್ದೇವೆ. ಕಚೇರಿಯಲ್ಲಿ ಮಾಡಿದ ಕಿಡಿಗೇಡಿಗಳ ಕೃತ್ಯ ಸಮಾಜಕ್ಕೆ ಮಾರಕ ಎಂದು ಯಾದವ ಸಮುದಾಯದ ಮುಖಂಡ ಶಬರೀಶ್ ಪ್ರತಿಕ್ರಿಯಿಸಿದ್ದಾರೆ.












Click it and Unblock the Notifications