ಆರ್ಕಿಡ್ಸ್ ಶಾಲಾ ಸಮೂಹ ಕಾರ್ಯದರ್ಶಿ ರೆಡ್ಡಿ ಬಂಧನ
ಬೆಂಗಳೂರು, ಅ.24: ನಿಯಮ ಬಾಹಿರವಾಗಿ ಶಾಲೆ ನಡೆಸುತ್ತಿದ್ದ ಆರೋಪದ ಮೇಲೆ ಆರ್ಕಿಡ್ಸ್ ಶಾಲಾ ಸಮೂಹ ಕಾರ್ಯದರ್ಶಿ ಕೆ.ಆರ್.ಕೆ.ರೆಡ್ಡಿ ಅವರನ್ನು ಬಂಧಿಸಲಾಗಿದೆ ಎಂದು ಗೃಹ ಸಚಿವ ಕೆ.ಜೆ.ಜಾರ್ಜ್ ತಿಳಿಸದ್ದಾರೆ.
ನಗರದಲ್ಲಿ ಅಪ್ರಾಪ್ತರ ಮೇಲೆ ಹೆಚ್ಚುತ್ತಿರುವ ಲೈಂಗಿಕ ದೌರ್ಜನ್ಯ, ಉತ್ತರ ಭಾರತೀಯ ವಿದ್ಯಾರ್ಥಿಗಳ ಮೇಲೆ ಹಲ್ಲೆ, ರೌಡಿಗಳ ಅಟ್ಟಹಾಸ, ಕಿಡ್ನಾಪ್ ಮತ್ತಿತರ ವಿಧ್ವಂಸಕ ಕೃತ್ಯ ತಡೆಗೆ ಚರ್ಚೆ ನಡೆಸಲು ಹಿರಿಯ ಪೊಲೀಸ್ ಅಧಿಕಾರಿಗಳ ಸಭೆ ನಡೆಸಿದ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.[ಆರ್ಕಿಡ್ಸ್ ಶಾಲೆಗೆ ಈಗ ಕ್ರಿಮಿನಲ್ ಕೇಸ್ ಭೀತಿ]

ಡಿಡಿಪಿಐ ಮಂಜುನಾಥ್ ಜಾಲಹಳ್ಳಿ ಠಾಣೆಯಲ್ಲಿ ಶಾಲೆ ವಿರುದ್ಧ ದೂರು ದಾಖಲಿಸಿರುವ ಹಿನ್ನೆಲೆಯಲ್ಲಿ ಬಂಧನ ಮಾಡಲಾಗಿದೆ ಎಂದು ತಿಳಿಸಿದರು. ಪೊಲೀಸ್ ಮಹಾನಿರ್ದೇಶಕ ಲಾಲ್ ರುಕುಂ ಪಚಾವೋ, ಪೊಲೀಸ್ ಆಯುಕ್ತ ಎಂ.ಎನ್.ರೆಡ್ಡಿ, ಅಲೋಕ್ ಕುಮಾರ್ ಸೇರಿದಂತೆ ಅನೇಕ ಹಿರಿಯ ಅಧಿಕಾರಿಗಳು ಪಾಲ್ಗೊಂಡಿದ್ದರು.
ಸರ್ಕಾರ ಮತ್ತು ವೈದ್ಯರ ನಡುವಿನ ಮಾತುಕತೆ ವಿಫಲ
ಇನ್ನೊಂದೆಡೆ ವೈದ್ಯರ ವಿವಿಧ ಬೇಡಿಕೆ ಈಡೇರಿಕೆ ಕುರಿತು ಆರೋಗ್ಯ ಸಚಿವ ಯು.ಟಿ.ಖಾದರ್ ಮತ್ತು ವೈದ್ಯಾಧಿಕಾರಿಗಳ ಸಂಘದ ಪದಾಧಿಕಾರಿಗಳ ನಡುವೆ ನಡೆದ ಸಂಧಾನ ಸಭೆ ವಿಫಲವಾಗಿದೆ. ಚರ್ಚೆಯಲ್ಲಿ ಅನೇಕ ವಿಚಾರಗಳು ಮಾತುಕತೆಗೆ ಬಂದಿದ್ದು ಒಮ್ಮತದ ಅಭಿಪ್ರಾಯ ಮೂಡಿ ಬರಲಿಲ್ಲ. ಆರೋಗ್ಯ ಇಲಾಖೆ ಕಾರ್ಯದರ್ಶಿ ಶಿವಶೈಲಂ ವರ್ಗಾವಣೆ ಮಾಡುವಂತೆ ಒತ್ತಾಯ ಕೇಳಿಬಂದಿದೆ ಎನ್ನಲಾಗಿದೆ.
ವೈದ್ಯರ ಸಂಘದ ಪದಾಧಿಕಾರಿಗಳಾದ ವೀರಭದ್ರಯ್ಯ, ರವೀಂದ್ರ ಮತ್ತು ಆರೋಗ್ಯ ಇಲಾಖೆ ಕಾರ್ಯದರ್ಶಿಗಳು ಪಾಲ್ಗೊಂಡಿದ್ದರು.

ನನಗೆ ಮೂಡ್ ಇದ್ದಂತೆ ಮಾಡುತ್ತೇನೆ
'ನನಗೆ ಮೂಡ್ ಇದ್ದಂತೆ ಮಾಡುತ್ತೇನೆ, ವೈದ್ಯರು ರಾಜೀನಾಮೆ ಕೊಟ್ಟರೆ ಕೊಡಲಿ ಬಿಡ್ರಿ, ಸರ್ಕಾರ ಏನೂ ಕೈಕಟ್ಟಿ ಕುಳಿತುಕೊಳ್ಳಲ್ಲ' ಇದು ಆರೋಗ್ಯ ಸಚಿವ ಯು.ಟಿ.ಖಾದರ್ ಖಡಕ್ ಶುಕ್ರವಾರ ಮಧ್ಯಾಹ್ನ ಹೇಳಿದ್ದ ಮಾತು. [ಖಾಲಿ ಹುದ್ದೆ ಭರ್ತಿ ಮಾಡಿಕೊಳ್ಳಲು ನಿಮಗೇನು ಧಾಡಿǃ]
ವೇತನ ಪರಿಷ್ಕರಣೆ, ಜಿಲ್ಲಾಸ್ಪತ್ರೆಗಳನ್ನು ಮೇಲ್ದರ್ಜೆಗೆ ಏರಿಸುವುದು ಸೇರಿದಂತೆ ಮತ್ತಿತರ ಬೇಡಿಕೆಗೆ ಒತ್ತಾಯಿಸಿ ಸಾಮೂಹಿಕ ರಾಜೀನಾಮೆ ನೀಡುತ್ತೇವೆ ಎಂದು ಹೇಳಿರುವ ಸರ್ಕಾರಿ ವೈದ್ಯರಿಗೆ ಆರೋಗ್ಯ ಸಚಿವರು ನೀಡಿದ ಉತ್ತರ ಇದಾಗಿತ್ತು.
ವೈದ್ಯರ ಸಾಮೂಹಿಕ ರಾಜೀನಾಮೆ ಕುರಿತು ವಿಕಾಸಸೌಧಲ್ಲಿ ಶುಕ್ರವಾರ ಮಾತನಾಡಿದ ಸಚಿವರು, ನಾನು ಕಚೇರಿಯಲ್ಲಿಲ್ಲದ ವೇಳೆ ವೈದ್ಯರ ಸಮಿತಿ ಆಗಮಿಸಿ ಮನವಿ ನೀಡಿ ಹೋಗಿದೆ. ಇಂಥ ಬೆದರಿಕೆಗಳಿಗೆ ಸರ್ಕಾರ ಬೆಲೆ ನೀಡಲ್ಲ ಎಂದು ಎಚ್ಚರಿಸಿದ್ದರು.
ವೇತನ ಪರಿಷ್ಕರಣೆ ಕುರಿತು ಹಣಕಾಸು ಇಲಾಖೆಯೊಂದಿಗೆ ಮಾತುಕತೆ ನಡೆಸಲಾಗಿದೆ. ವೈದ್ಯರು ನೀಡಿರುವ ಬೇಡಿಕೆಗಳ ಪಟ್ಟಿಯಲ್ಲಿ ಹೊಸದೇನೂ ಇಲ್ಲ. ಜನರ ಹಿತ ಕಾಯಲು ಸರ್ಕಾರ ಬದ್ಧವಿದ್ದು ಸೂಕ್ತ ನಿರ್ಧಾರ ತೆಗೆದುಕೊಳ್ಳಲಿದೆ ಎಂದು ತಿಳಿಸಿದ್ದರು. ಆದರೆ ಶುಕ್ರವಾರ ಸಂಜೆ ನಡೆದ ಸಂಧಾನ ಸಭೆ ವಿಫಲವಾಗಿದೆ.












Click it and Unblock the Notifications