ಇಂದು ರಾಜ್ಯದ ಹಲವು ಜಿಲ್ಲೆಗಳಲ್ಲಿ "ಬಕ್ರೀದ್" ಸಂಭ್ರಮ ಹೀಗಿತ್ತು, ಇಲ್ಲಿದೆ ವಿವರ
ಬಳ್ಳಾರಿ, ಜೂನ್, 29: ದೇಶಾದ್ಯಂತ ಇಂದು ಮುಸ್ಲಿಮರು ಬಕ್ರೀದ್ ಸಂಭ್ರಮಾಚರಣೆ ಮಾಡುತ್ತಿದ್ದಾರೆ. ಅದೇ ರೀತಿ ಕರ್ನಾಟಕದ ಹಲವು ಜಿಲ್ಲೆಗಳಲ್ಲಿಯೂ ಸಹ ಮುಸ್ಲಿಂ ಬಾಂಧವರು ಈ ಹಬ್ಬವನ್ನು ಸಂಭ್ರಮಾಚರಣೆ ಮಾಡುತ್ತಿದ್ದಾರೆ.
ತ್ಯಾಗ ಬಲಿದಾನಗಳ ಸಂಕೇತವಾದ ಬ್ರಕ್ರೀದ್ ಹಬ್ಬವನ್ನ ಗಣಿನಾಡು ಬಳ್ಳಾರಿಯಲ್ಲಿ ಮುಸ್ಲಿಂ ಭಾಂದವರು ಶ್ರದ್ಧೆ ಭಕ್ತಿಯಿಂದ ಆಚರಿಸಿದರು. ಬಳ್ಳಾರಿಯ ಈದ್ಗಾ ಮೈದಾನದಲ್ಲಿ ಜಮಾಯಿಸಿದ ಸಾವಿರಾರು ಮುಸ್ಲಿಂ ಭಾಂದವರು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ಪ್ರಾರ್ಥನೆಯ ಬಳಿಕ ಮುಸ್ಲಿಂ ಭಾಂದವರು ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡರು. ಸಾಮೂಹಿಕ ಪ್ರಾರ್ಥನೆಯಲ್ಲಿ ಸಚಿವ ನಾಗೇಂದ್ರ ಅವರು ಕೂಡ ಬಿಳಿ ಟೋಪಿಯನ್ನು ಧರಿಸಿದ್ದು ವಿಶೇಷವಾಗಿತ್ತು .

ಅಲ್ಲದೆ ಸಚಿವ ನಾಗೇಂದ್ರ ಅವರು ಮುಸ್ಲಿಂ ಭಾಂದವರಿಗೆ ಶುಭಾಶಯ ಕೋರಿ ಗಮನ ಸೆಳೆದರು. ಇನ್ನು ಸಾಮೂಹಿಕ ಪ್ರಾರ್ಥನೆಯಲ್ಲಿ ಮಕ್ಕಳು ಕೂಡ ಭಾಗಿಯಾಗಿ ನಮಾಜ್ ಮಾಡಿದರು. ಹಾಗೆಯೇ ಬಕ್ರಿದ್ ಹಬ್ಬದ ಹಿನ್ನೆಲೆ ಈದ್ಗಾ ಮೈದಾನದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕೂಡ ಒದಗಿಸಲಾಗಿತ್ತು.
ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಬಕ್ರೀದ್ ಹಬ್ಬದ ಸಂಭ್ರಮ
ಇನ್ನು ಇಂದು ಬಕ್ರೀದ್ ಹಬ್ಬದ ನಿಮಿತ್ತವಾಗಿ ಹುಬ್ಬಳ್ಳಿಯ ಈದ್ಗಾ ಮೈದಾನದಲ್ಲಿ ಮುಸ್ಲಿಂ ಬಾಂಧವರು ಪ್ರಾರ್ಥನೆ ಸಲ್ಲಿಸಿದರು. ಸಾವಿರಾರು ಸಂಖ್ಯೆಯಲ್ಲಿ ಸೇರಿದ ಮುಸ್ಲಿಂ ಬಾಂಧವರು ಈದ್ಗಾ ಮೈದಾನದಲ್ಲಿ ನಮಾಝ್ ಮಾಡುವುದರ ಮೂಲಕ ತಮ್ಮ ಬಕ್ರೀದ್ ಹಬ್ಬವನ್ನು ಆಚರಣೆ ಮಾಡಿದರು.
ಚಾಮರಾಜನಗರದದಲ್ಲಿ ಬಕ್ರೀದ್ ಹಬ್ಬ
ಚಾಮರಾಜನಗರದ ಈದ್ಗಾ ಮೈದಾನದಲ್ಲಿ ಮುಸ್ಲಿಂ ಸಮುದಾಯವು ಇಂದು ಸಂಭ್ರಮ-ಸಡಗರದಿಂದ ಬಕ್ರೀದ್ ಹಬ್ಬ ವಿಶೇಷ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ಚಾಮರಾಜನಗರದ ಕ್ರೀಡಾಂಗಣ ಸಮೀಪದ ಈದ್ಗಾ ಮೈದಾನದಲ್ಲಿ ಹೊಸ ದಿರಿಸು ಧರಿಸಿ ಬಂದ ಚಿಣ್ಣರು ಹಾಗೂ ಹಿರಿಯರು ಕುರಾನ್ ನ ಘೋಷವಾಕ್ಯಗಳನ್ನು ಪಠಿಸಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.
ಇದೇ ವೇಳೆ ಅಲ್ಲಾಹನು ಎಲ್ಲರಿಗೂ ಒಳ್ಳೆಯದು ಮಾಡಲಿ, ಮಕ್ಕಳಿಗೆ ಹೆಚ್ಚಿನ ಆಯಸ್ಸು ಕೊಟ್ಟು ಕಾಪಾಡಲಿ ಎಂದು ಧಾರ್ಮಿಕ ಗುರುಗಳು ಶುಭ ಸಂದೇಶ ತಿಳಿಸಿ ಬಕ್ರೀದ್ ಹಬ್ಬದ ಆಚರಣೆಯ ಮಹತ್ವವನ್ನು ತಿಳಿಸಿಕೊಟ್ಟರು.
ಕಾಫಿನಾಡಲ್ಲಿ ಬಕ್ರೀದ್ ಹಬ್ಬದ ಸಂಭ್ರಮ
ಬಕ್ರೀದ್ ಹಬ್ಬದ ಹಿನ್ನೆಲೆಯಲ್ಲಿ ಚಿಕ್ಕಮಗಳೂರು ನಗರದ ಈದ್ಗಾ ಮೈದಾನದಲ್ಲಿ ಸಾವಿರಾರು ಮುಸ್ಲಿಂ ಬಾಂಧವರು ಪ್ರಾರ್ಥನೆ ಸಲ್ಲಿಸಿದರು. ಇನ್ನು ಈ ವೇಳೆ ಶಾಸಕ ಹೆಚ್.ಡಿ.ತಮ್ಮಯ್ಯ, ಎಂಎಲ್ ಸಿ ಎಸ್.ಎಲ್.ಭೋಜೇಗೌಡ, ಎಸ್.ಪಿ. ಉಮಾ ಪ್ರಶಾಂತ್ ಸೇರಿದಂತೆ ಸಾವಿರಾರು ಮುಸ್ಲಿಂ ಬಾಂಧವರು ಭಾಗವಹಿಸಿದ್ದರು. ಈ ವೇಳೆ ಶಾಸಕ ಹೆಚ್.ಡಿ.ತಮ್ಮಯ್ಯ ರಘುಪತಿ ರಾಘವ ರಾಜಾ ರಾಮ್, ಈಶ್ವರ ಅಲ್ಲಾ ತೇರಾ ನಾಮ್ ಹಾಡು ಹೇಳುವ ಮೂಲಕ ಶಾಕಸರು ಎಲ್ಲರ ಗಮನಸೆಳೆದರು.
ದ್ವೇಷ ಹುಟ್ಟುಹಾಕುವ ಶಕ್ತಿಗಳಿಗೆ ಮಹತ್ವ ನೀಡಬೇಡಿ
ಹಾಗೆಯೇ ನಾವೆಲ್ಲಾರೂ ವಿವಿಧ ಧರ್ಮ, ಜಾತಿಗೆ ಸೇರಿದ್ದರೂ ನಾವೆಲ್ಲ ಮನುಷ್ಯರು. ಎಲ್ಲರೂ ಪರಸ್ಪರ ಪ್ರೀತಿ, ವಿಶ್ವಾಸದಿಂದ ಬದುಕಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬೆಂಗಳೂರಿನಲ್ಲಿ ಕರೆ ನೀಡಿದರು.
ಇಂದು ಬಕ್ರೀದ್ ಹಬ್ಬದ ಅಂಗವಾಗಿ ಸಿಎಂ ಸಿದ್ದರಾಮಯ್ಯ ಅವರು ಚಾಮರಾಜಪೇಟೆಯ ಈದ್ಗಾ ಮೈದಾನದಲ್ಲಿ ನಡೆದ ಸಾಮೂಹಿಕ ಪ್ರಾರ್ಥನೆಯಲ್ಲಿ ಪಾಲ್ಗೊಂಡು ಮಾತನಾಡಿದರು. ನಮ್ಮ ನಮ್ಮಲ್ಲೇ ದ್ವೇಷ ಹುಟ್ಟುಹಾಕುವ ಅನೇಕ ಶಕ್ತಿಗಳಿವೆ. ಆ ಶಕ್ತಿಗಳು ಉದ್ದೇಶಪೂರ್ವಕವಾಗಿಯೇ ಇದನ್ನು ಮಾಡುತ್ತವೆ. ಅದಕ್ಕೆ ನಾವು ಸೊಪ್ಪು ಹಾಕುವುದಾಗಲಿ, ಮಹತ್ವ ನೀಡುವುದಾಗಲಿ ಮಾಡಬಾರದು ಎಂದರು.
ಮನುಷ್ಯರು ಪ್ರೀತಿ, ವಿಶ್ವಾಸದಿಂದ ಮನುಷ್ಯರಂತೆ ಬದುಕುವ ವಾತಾವರಣ ನಿರ್ಮಾಣ ಮಾಡಬೇಕಿದೆ. ರಾಜ್ಯದ ಅಭಿವೃದ್ಧಿಯ ಜೊತೆಗೆ ಜನತೆಯೂ ಅಭಿವೃದ್ಧಿ ಆಗಬೇಕು. ದೇವರು ಎಲ್ಲರಿಗೂ ಸದ್ಭುದ್ದಿ ನೀಡಿ ಮನುಷ್ಯರಾಗಿ ಬಾಳುವ ಗುಣವನ್ನು ನೀಡಲಿ ಎಂದು ಪ್ರಾರ್ಥನೆ ಮಾಡಿದರು.
ಹಾಗೆಯೇ ಇದೇ ವೇಳೆ ಅವರು ರಾಜ್ಯದ ಮುಸಲ್ಮಾನ ಬಾಂಧವರಿಗೆ ಬಕ್ರೀದ್ ಹಬ್ಬದ ಶುಭಾಶಯಗಳನ್ನು ತಿಳಿಸಿದರು. ಬಕ್ರೀದ್ ಹಬ್ಬ ತ್ಯಾಗದ ಸಂಕೇತವಾಗಿದೆ. ಮನುಕುಲಕ್ಕೆ ಒಳ್ಳೆಯದಾಗಲಿ ಎಂದು ದೇವರಲ್ಲಿ ಪ್ರಾರ್ಥನೆ ಮಾಡಿರುವುದಾಗಿ ತಿಳಿಸಿದರು.












Click it and Unblock the Notifications