ಬಜರಂಗದಳ ನಿಷೇಧದ ಭರವಸೆಯಿಂದ ಯಾವುದೇ ನಷ್ಟವಿಲ್ಲ, ಬದಲಾಗಿ ಲಾಭವಾಗಲಿದೆ: ಇದು ಕಾಂಗ್ರೆಸ್ ಲೆಕ್ಕಾಚಾರ
ಬೆಂಗಳೂರು, ಮೇ 03: ದ್ವೇಷವನ್ನು ಹರಡುವ ಬಜರಂಗದಳ ಮತ್ತು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ) ನಂತಹ ಸಂಘಟನೆಗಳ ವಿರುದ್ಧ ಕಾಂಗ್ರೆಸ್ ಸರ್ಕಾರವು ಕ್ರಮವನ್ನು ತೆಗೆದುಕೊಳ್ಳುತ್ತದೆ ಎಂದು ಮಂಗಳವಾರ ಬಿಡುಗಡೆಯಾದ ಕಾಂಗ್ರೆಸ್ ಪ್ರಣಾಳಿಕೆಯು ಹೇಳಿದೆ. 'ಹನುಮಾನ್ ಭಕ್ತರನ್ನು' ಕಾಂಗ್ರೆಸ್ ಬೆದರಿಸುತ್ತಿದೆ ಎಂದು ಬಿಜೆಪಿ ಹೇಳುತ್ತಿದೆ. ಇದು ಯಾರಿಗೆ ಲಾಭ ತಂದುಕೊಡಬಲ್ಲದು ಎಂಬ ಚರ್ಚೆಗಳು ಎದ್ದಿವೆ.
ಕರ್ನಾಟಕ ಚುನಾವಣಾ ಪ್ರಣಾಳಿಕೆಯಲ್ಲಿ ಬಜರಂಗದಳದ ಪ್ರಸ್ತಾಪವನ್ನು ಪಕ್ಷದೊಳಗೆ ಒಪ್ಪಿಕೊಳ್ಳದಿರುವ ಒಂದು ವಿಭಾಗವಿದ್ದರೂ, ಈ ವಿಚಾರದ ಬಗ್ಗೆ ಕುಲಂಕೂಷವಾಗಿ ಚರ್ಚೆ ನಡೆಸಿದ ನಂತರವೇ ಅಂಶವನ್ನು ಪ್ರಣಾಳಿಕೆಯಲ್ಲಿ ಸೇರಿಸಲಾಗಿದೆ ಎಂದು ಕಾಂಗ್ರೆಸ್ ತಿಳಿಸಿದೆ ಎಂದು 'ಡೆಕ್ಕನ್ ಹೆರಾಲ್ಡ್' ಪತ್ರಿಕೆ ವರದಿ ಮಾಡಿದೆ.

ಕರ್ನಾಟಕದಲ್ಲಿ ಕಾಂಗ್ರೆಸ್ ಚುನಾವಣಾ ಪ್ರಚಾರದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ನಾಯಕರೊಬ್ಬರು ಬಜರಂಗದಳದ ನಿಷೇದದ ಭರವಸೆಯು ನಿಲುವಿಗೆ ಅನುಗುಣವಾಗಿದೆ ಎಂದು ಹೇಳಿದ್ದಾರೆ. ಪಿಎಫ್‌ಐ ಅನ್ನು ನಿಷೇಧಿಸಿದಾಗ ರಾಹುಲ್ ಗಾಂಧಿಯವರ ಕಾಮೆಂಟ್‌ಗಳನ್ನು ಈ ನಾಯಕರು ಪ್ರಸ್ತಾಪಿಸಿದ್ದಾರೆ. ಇದಕ್ಕೆ ಬಜರಂಗದಳವನ್ನು ಸೇರಿಸುವುದು ಈ ಪ್ರಕ್ರಿಯೆಯ ವಿಸ್ತರಣೆಯಾಗಿದೆ ಎಂದು ಅವರು ತಿಳಿಸಿದ್ದಾರೆ.
ಬಜರಂಗದಳದ ಭಯೋತ್ಪಾದನೆ ವಿರುದ್ಧ ಹೋರಾಡುತ್ತಿರುವ ಅಲ್ಪಸಂಖ್ಯಾತ ಸಮುದಾಯಗಳು ಮತ್ತು ನಾಗರಿಕ ಸಮಾಜಕ್ಕೆ ಸಂದೇಶವನ್ನು ಕಾಂಗ್ರೆಸ್ ಕಳುಹಿಸಿದೆ ಎಂಬುದನ್ನು ಇದು ಸ್ಪಷ್ಟಪಡಿಸುತ್ತದೆ. ಇದರಿಂದ ಪಕ್ಷಕ್ಕೆ ಸಕಾರಾತ್ಮಕ ಬಲ ಬರುತ್ತದೆ ಎಂದು ಮತ್ತೊಬ್ಬ ನಾಯಕ 'ಡೆಕ್ಕನ್ ಹೆರಾಲ್ಡ್' ತಿಳಿಸಿದ್ದಾರೆ.
ಕರಾವಳಿ ಕರ್ನಾಟಕದಲ್ಲಿ ಬಜರಂಗದಳ ಪ್ರಮುಖ ಅಸ್ತಿತ್ವವನ್ನು ಹೊಂದಿದೆ. ಉಳಿದ ಭಾಗದಲ್ಲಿ ಹೊಂದಿಲ್ಲ. ಇದು ಪಕ್ಷದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಕಾಂಗ್ರೆಸ್ ಪದಾಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ.

ಹೆಚ್ಚೆಂದರೆ, ಕರಾವಳಿ ಕರ್ನಾಟಕದ ಮೂಡಬಿದ್ರಿಯಂತಹ ಒಂದೆರಡು ಸ್ಥಾನಗಳಲ್ಲಿ ಇದು ಪ್ರಭಾವ ಬೀರಬಹುದು ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ. ಆದರೆ ಅದೇ ಸಮಯದಲ್ಲಿ, ಕರಾವಳಿ ಕರ್ನಾಟಕದಲ್ಲಿ ಕಾಂಗ್ರೆಸ್ ಪರವಾಗಿ ಪ್ರತಿಧ್ರುವೀಕರಣವಿದೆ ಎಂದು ಕಾಂಗ್ರೆಸ್ ನಾಯಕರು ಹೇಳಿದ್ದಾರೆ. ಬಜರಂಗದಳದ ಭಯೋತ್ಪಾದನೆ ವಿರುದ್ಧ ಇರುವವರು ಕಾಂಗ್ರೆಸ್ ಬೆಂಬಲಿಸುತ್ತಾರೆ ಎಂದು ತಿಳಿಸಿದ್ದಾರೆ.
ಪ್ರಣಾಳಿಕೆಯನ್ನು ರಚಿಸುವ ಬಗ್ಗೆ ಸಾಕಷ್ಟು ಚಿಂತನೆ ನಡೆಸಲಾಗಿದೆ ಮತ್ತು ಅವರು ಬಜರಂಗದಳ ಮತ್ತು ಪಿಎಫ್‌ಐ ಅನ್ನು ಹೆಸರಿಸದೆ ಬಿಡಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
'ಎರಡನ್ನು ಉಲ್ಲೇಖಿಸದಿರುವುದು ಸಮಸ್ಯೆತಾಗುತ್ತಿತ್ತು. ಬಹುಸಂಖ್ಯಾತ ಮತ್ತು ಅಲ್ಪಸಂಖ್ಯಾತ ಸಂಸ್ಥೆಗಳು ಎಂದು ಹೇಳುವುದು ಒಂದು ಆಯ್ಕೆಯಾಗಿತ್ತು. ನಾವೇನಾದರೂ ಈ ರೀತಿ ರೂಪಿಸಿದ್ದರೆ ಬಿಜೆಪಿಯವರು ಹಿಂದೂ ಭಯೋತ್ಪಾದನೆಯ ಬಗ್ಗೆ ನಾವು ಮಾತನಾಡುತ್ತಿದ್ದೇವೆ ಎಂದು ಗೊಣಗುತ್ತಿದ್ದರು. ನಾವು ಪಿಎಫ್‌ಐ ಅನ್ನು ಉಲ್ಲೇಖಿಸದಿದ್ದರೆ, ಅದು ಸಹ ಸಮಸ್ಯೆಯಾಗುತ್ತಿತ್ತು' ಎಂದು ಅವರು ತಿಳಿಸಿದ್ದಾರೆ.
ಈ ಸಮಯವಲ್ಲದಿದ್ದರೆ, ನಾವು ಅದರ ಬಗ್ಗೆ ಯಾವಾಗ ಮಾತನಾಡಬೇಕು? ಇದರ ಹಿಂದೆ ಒಂದು ಲೆಕ್ಕಾಚಾರವಿದೆ. ಪ್ರಣಾಳಿಕೆ ಕೇವಲ ಬಜರಂಗದಳಕ್ಕೆ ಸಂಬಂಧಿಸಿದ್ದಲ್ಲ. ಸಾಮಾಜಿಕ ನ್ಯಾಯದ ಬಗ್ಗೆ ಸಾಕಷ್ಟು ಮಾತನಾಡಿದ್ದೇವೆ. ಇದು ಪರಿಣಾಮ ಬೀರಲಿದೆ ಎಂದಿದ್ದಾರೆ.












Click it and Unblock the Notifications