Bagalkote: ಸಂಯುಕ್ತ ಪಾಟೀಲ್ ನಾಮಪತ್ರ ಸಲ್ಲಿಕೆ: ಮೆರವಣಿಗೆಯಲ್ಲಿ ಕಾಶಪ್ಪನವರ್ ಭರ್ಜರಿ ಡಾನ್ಸ್
ಬಾಗಲಕೋಟೆ, ಏಪ್ರಿಲ್ 19: ಬಾಗಲಕೋಟೆ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸಂಯುಕ್ತ ಪಾಟೀಲ್ ಅವರು ಇಂದು ನಾಮಪತ್ರ ಸಲ್ಲಿಕೆಗೂ ಮೊದಲು ಬೃಹತ್ ರೋಡ್ ಶೋ ನಡೆಸಿದರು. ರೋಡ್ ಶೋ ಉದ್ದಕ್ಕೂ ಸಾವಿರಾರು ಜನರು ಸೇರಿ ತಮ್ಮ ಮೆಚ್ಚಿನ ಅಭ್ಯರ್ಥಿಗೆ ಬೆಂಬಲ ವ್ಯಕ್ತಪಡಿಸಿದರು. ಬಿಸಿಲಿನ ಬೇಗೆಯಲ್ಲೂ ಅಪಾರ ಸಂಖ್ಯೆಯಲ್ಲಿ ಜನರು ಸೇರಿದ್ದರು.
ಮೆರವಣಿಗೆಯಲ್ಲಿ ವಾದ್ಯಗೋಷ್ಠಿ, ಡೊಳ್ಳು ಗಮನ ಸೆಳೆಯಿತು. ಕಾಂಗ್ರೆಸ್ ಧ್ವಜವನ್ನು ಹಿಡಿದ ಕಾರ್ಯಕರ್ತರು ಜೈಕಾರ ಕೂಗುತ್ತಾ ಹೆಜ್ಜೆ ಹಾಕಿದರು. ಸಕ್ರಿ ಶಾಲೆ ಹತ್ತಿರದ ಕಾಂಗ್ರೆಸ್ ಕಚೇರಿಯಿಂದ ರೋಡ್ ಶೋ ನಡೆಸಿದರು. ಸಂಯುಕ್ತ ಪಾಟೀಲ್ ಜನರತ್ತ ಕೈ ಬೀಸಿ ಬೆಂಬಲ ಕೋರಿದರು.

ಸಂಯುಕ್ತ ಪಾಟೀಲ್ ಅವರೊಂದಿಗೆ ತೆರೆದ ವಾಹನದಲ್ಲಿ ಪಕ್ಷದ ಹಲವಾರು ಮುಖಂಡರು ಭಾಗಿಯಾಗಿದ್ದರು. ಸಚಿವರಾದ ಎಚ್ ಕೆ ಪಾಟೀಲ್, ಸತೀಶ್ ಜಾರಕಿಹೊಳಿ, ಆರ್ ಬಿ ತಿಮ್ಮಾಪುರ, ಮಾಜಿ ಸಚಿವರಾದ ಎಸ್ ಆರ್ ಪಾಟೀಲ್, ಉಮಾಶ್ರೀ, ಶಾಸಕರಾದ ವಿಜಯಾನಂದ ಕಾಶಪ್ಪನವರ್, ಜಿ ಟಿ ಪಾಟೀಲ್, ಬಿ ಬಿ ಚಿಮ್ಮನಕಟ್ಟಿ, ಅಶೋಕ ಮನಗೂಳಿ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ನಂಜಯ್ಯ ಮಠ, ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ರಕ್ಷಿತಾ ಈಟಿ, ಮುಖಂಡರಾದ ವೀಣಾ ಕಾಶಪ್ಪನವರ್, ಸಿದ್ದು ಕೊಣ್ಣೂರ, ಆನಂದ ನ್ಯಾಮಗೌಡ ಮತ್ತಿತರರು ಉಪಸ್ಥಿತರಿದ್ದರು.

ಜನರೊಂದಿಗೆ ಹೆಜ್ಜೆ ಹಾಕಿದ ಕಾಶಪ್ಪನವರ್
ಮೆರವಣಿಗೆ ಸಾಗುತ್ತಿದ್ದ ಮಾರ್ಗದಲ್ಲಿ ಶಾಸಕ ವಿಜಯಾನಂದ ಕಾಶಪ್ಪನವರ್ ಜನರೊಂದಿಗೆ ಹೆಜ್ಜೆ ಹಾಕಿದ ಗಮನ ಸೆಳೆದರು. ಕಾಂಗ್ರೆಸ್ ಧ್ವಜ ಹಿಡಿದು ಜನರೊಂದಿಗೆ ಘೋಷಣೆ ಕೂಗುತ್ತಾ ಸಾಗಿದರು. ವೀಣಾ ಕಾಶಪ್ಪನವರ್ ಕೂಡ ಭಾಗಿಯಾಗಿದ್ದರು. ಅಂಬೇಡ್ಕರ್ ಸರ್ಕಲ್‌ನಲ್ಲಿ ರ‍್ಯಾಲಿ ಸಾಗುತ್ತಿದ್ದ ವೇಳೆ ವೀಣಾ ಕಾಶಪ್ಪನವರ್ ಅವರು ಕೈ ಅಭ್ಯರ್ಥಿ ಸಂಯುಕ್ತ ಪಾಟೀಲ್ ಅವರೊಂದಿಗೆ ಒಗ್ಗೂಡಿ ಡಾ. ಬಿ ಆರ್ ಅಂಬೇಡ್ಕರ್ ಅವರ ಪ್ರತಿಮೆಗೆ ಹಾರ ಹಾಕಿದರು. ಚುನಾವಣಾ ಸಂದರ್ಭದಲ್ಲಿ ಕಾಶಪ್ಪನವರ್ ಹಾಗೂ ಸಂಯುಕ್ತ ಪಾಟೀಲ್ ಅವರು ಒಗ್ಗೂಡಿದ್ದು, ಕಾಂಗ್ರೆಸ್ ಪಕ್ಷಕ್ಕೆ ಬೂಸ್ಟರ್ ದೊರೆತಂತಾಗಿದೆ.












Click it and Unblock the Notifications