ಆಟೋ ಪ್ರಯಾಣಿಕರಿಗೆ ಬಿಗ್ ಶಾಕ್: ಮೇ 13ರಿಂದ ಆಟೋ ಪ್ರಯಾಣ ದರ ಏರಿಕೆ
ಬೆಂಗಳೂರು ಮೇ 1: ರಾಜ್ಯದಲ್ಲಿ ಬೆಲೆ ಏರಿಕೆ ನಿಲ್ಲುವಂತೆ ಕಾಣಿಸುತ್ತಿಲ್ಲ. ಒಂದಾದ ಮೇಲೊಂದರಂತೆ ಅಗತ್ಯ ವಸ್ತುಗಳ ಬೆಲೆ ಮಾತ್ರವಲ್ಲದೆ, ಮೆಟ್ರೋ, ಸಾರಿಗೆ ಬಸ್‌ಗಳ ಪ್ರಯಾಣ ದರವೂ ಹೆಚ್ಚಾಗುತ್ತಿದೆ. ಇದರಿಂದಾಗಿ ಜನಸಾಮಾನ್ಯರಿಗೆ ಆರ್ಥಿಕ ಹೊರೆಯಾಗಿದ್ದು ಬೆಲೆ ಏರಿಕೆ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ. ಹೀಗಿರುವಾಗ ಇದೀಗ ಆಟೋ ಪ್ರಯಾಣ ದರ ಕೂಡ ಹೆಚ್ಚಾಗುವ ಸಾಧ್ಯತೆ ಇದ್ದು ಜನ ಸಾಮಾನ್ಯರ ಜೇಬಿಗೆ ಕತ್ತರಿ ಬೀಳುವುದು ಖಚಿತವಾಗಿದೆ.
ಹೌದು ಕರ್ನಾಟಕದ ಕೆಎಂಎಫ್ ನಂದಿನಿ ಹಾಗೂ ಮದರ್ ಡೈರಿ ಹಾಲಿನ ದರ ಹೆಚ್ಚಳವಾದ ಬೆನ್ನಲ್ಲೇ ಇದೀಗ ಡೈರಿ ಬ್ರಾಂಡ್ ಅಮುಲ್ ಹಾಲಿನ ದರ ಕೂಡ ಏರಿಕೆ ಮಾಡಿಲಾಗಿದೆ. ಇದೀಗ ಆಟೋ ಪ್ರಯಾಣ ದರದ ಸರದಿ ಶುರುವಾಗಿದೆ. ಕಳೆದ ಮೂರು ವರ್ಷದಿಂದ ಆಟೋ ಚಾಲಕ ಹಾಗೂ ಮಾಲೀಕರ ಸಂಘಟನೆಗಳು ಬೆಲೆ ಏರಿಕೆ ಮಾಡುವಂತೆ ನಿರಂತರ ಹೋರಾಟ ಮಾಡುತ್ತಾ ಬಂದಿತ್ತು. ಇದೀಗ ಒತ್ತಡ ಹೆಚ್ಚಾದ ಬೆನ್ನಲ್ಲೆ ರಾಜ್ಯ ಸರ್ಕಾರ ಆಟೋ ಚಾಲಕರ ಮನವಿಯನ್ನು ಪುರಸ್ಕರಿಸಿದೆ. ಹೀಗಾಗಿ ಆಟೋ ಪ್ರಯಾಣ ದರ ಹೆಚ್ಚಿಸಲು ಜಿಲ್ಲಾಡಳಿತ ಗ್ರೀನ್ ಸಿಗ್ನಲ್ ಕೊಟ್ಟಿದೆ.

ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದಾಗಿ ಆರ್ಥಿಕ ಹೊರೆ ಹೆಚ್ಚಾಗಿದ್ದು ಆಟೋ ಚಾಲಕರು ಆಟೋ ಮೀಟರ್ ದರ ಏರಿಕೆ ಮಾಡಲು ಜಿಲ್ಲಾಧಿಕಾರಿ ಕೂಡಲೇ ಒಪ್ಪಿಗೆ ನೀಡಬೇಕು ಎಂದು ಒತ್ತಾಯಿಸಿದ್ದರು. ಹೀಗಾಗಿ ಜಿಲ್ಲಾಡಳಿತ ಇದಕ್ಕೆ ಒಪ್ಪಿಗೆ ಸೂಚಿಸಿದ್ದು ಅಧಿಕೃತವಾಗಿ ಆದೇಶ ಹೊರ ಬೀಳುವುದು ಮಾತ್ರ ಬಾಕಿ ಇದೆ. ಮೇ13ಕ್ಕೆ ಆದೇಶ ಹೊರಡಿಸುವ ಸಾಧ್ಯತೆ ಇದೆ.
ಬೆಂಗಳೂರಿನಲ್ಲಿ ಕನಿಷ್ಠ ಆಟೋ ಪ್ರಯಾಣ ದರ ಮೂವತ್ತು ರೂಪಾಯಿ ಇದೆ. ನಂತರ ಪ್ರತಿ ಕಿಲೋ ಮೀಟರ್‌ಗೆ ಹದಿನೈದು ರೂಪಾಯಿ ದರ ಆಗುತ್ತದೆ. ಪರಿಷ್ಕೃತ ದರ ಪಟ್ಟಿ ಪ್ರಕಾರ ಕನಿಷ್ಠ ಪ್ರಯಾಣ ದರವನ್ನು ಮೂವತ್ತೈದು ರೂಪಾಯಿ ಮಾಡುವಂತೆ ಆಟೋ ಚಾಲಕರು ಒತ್ತಾಯಿಸಿದ್ದಾರೆ. ಇದೀಗ ಹೊಸ ದರ ಜಾರಿಗೆ ಬಂದರೆ ಆಟೋದ ಕನಿಷ್ಠ ಪ್ರಯಾಣ ದರ 30 ರೂಪಾಯಿಯಿಂದ 35 ರೂಪಾಯಿ ಆಗಲಿದೆ. ಅಂದರೆ 5 ರೂಪಾಯಿ ಹೆಚ್ಚಾಗಲಿದೆ.
ಅಲ್ಲದೆ ಪ್ರತಿ ಕಿಲೋ ಮೀಟರ್ ದರ ಹದಿನೈದು ರೂಪಾಯಿಯಿಂದ ಹದಿನೆಂಟು ರೂಪಾಯಿ ಏರಿಕೆ ಮಾಡಲು ಒತ್ತಾಯಿಸಲಾಗಿದೆ. ಆಟೋ ದರ ಪರಿಷ್ಕರಣೆ ಸಮಿತಿಯು ಮಾರ್ಚ್ 12ರಂದು ದರ ಏರಿಕೆ ಸಂಬಂಧ ನಡೆದಿದ್ದ ಸಭೆಯಲಿ ಆಟೋ ಚಾಲಕರ ಅಹವಾಲು ಸ್ವೀಕರಿಸಿತ್ತು. ನಂತರ ಸಭೆಯ ನಿರ್ಣಯವನ್ನು ಜಿಲ್ಲಾಧಿಕಾರಿಗಳಿಗೆ ನೀಡಿತ್ತು. ಈ ವರದಿ ಪರಿಷ್ಕರಿಸಿದ ಜಿಲ್ಲಾಧಿಕಾರಿಗಳು ದರ ಏರಿಕೆಗೆ ಒಪ್ಪಿಗೆ ಸೂಚನೆ ನೀಡಿದೆ.

ಈ ನಡುವೆ ಬಿಎಂಟಿಸಿ, ಕೆಎಸ್‌ಆರ್‌ಟಿಸಿ ಮತ್ತು ಮೆಟ್ರೋ ಪ್ರಯಾಣ ದರ ಕೂಡ ಹೆಚ್ಚಳವಾಗಿದೆ. ಹೀಗಾಗಿ ಆಟೋ ಮೀಟರ್ ದರ ಏರಿಕೆಗೂ ಒತ್ತಡ ಹೆಚ್ಚಾಗಿತ್ತು. ಹೀಗಾಗಿ ಇದೇ ಮೇ 13ರಂದು ಆಟೋದ ಕನಿಷ್ಠ ಪ್ರಯಾಣ ದರ 30 ರಿಂದ 35 ರೂಪಾಯಿವರೆಗೆ ಹೆಚ್ಚಳವಾಗಲಿದೆ. ಜೊತೆಗೆ ಪ್ರತಿ ಕಿ.ಮೀಟರ್‌ಗೆ 15-18ರೂಪಾಯಿ ಹೆಚ್ಚಾಗಲಿದೆ.












Click it and Unblock the Notifications