ವಿಧಾನಸಭೆ ಪ್ರಶ್ನೋತ್ತರ ಕಲಾಪ; ಡಿಸಿಎಂ ಡಿಕೆ ಶಿವಕುಮಾರ್ ಉತ್ತರ
ಬೆಂಗಳೂರು, ಜುಲೈ 21; ಕರ್ನಾಟಕ ವಿಧಾನಸಭೆಯ ಬಜೆಟ್ ಅಧಿವೇಶನ ನಡೆಯುತ್ತಿದೆ. ಶುಕ್ರವಾರದ ಕಲಾಪದಲ್ಲಿ ವಿವಿಧ ಸದಸ್ಯರು ಕೇಳಿದ್ದ ಪ್ರಶ್ನೆಗೆ ಉಪಮುಖ್ಯಮಂತ್ರಿ ಮತ್ತು ಬೆಂಗಳೂರು ನಗರಾಭಿವೃದ್ಧಿ, ಜಲಸಂಪನ್ಮೂಲ ಸಚಿವ ಡಿ. ಕೆ. ಶಿವಕುಮಾರ್ ಉತ್ತರ ನೀಡಿದರು.
ಭಾಗಮಂಡಲದ ಮೇಲ್ಸೇತುವೆ ಕಾಮಗಾರಿ, ಶಿಕ್ಷಕರ ನೇಮಕದ ಕುರಿತು ಉಪಸಭಾಪತಿಗಳ ಪ್ರಶ್ನೆ, ಲೋಕೋಪಯೋಗಿ ಇಲಾಖೆ ಸೇರಿದಂತೆ ವಿವಿಧ ಪ್ರಶ್ನೆಗಳಿಗೆ ಡಿ. ಕೆ. ಶಿವಕುಮಾರ್ ಉತ್ತರ ಕೊಟ್ಟಿದ್ದಾರೆ.

ಭಾಗಮಂಡಲ ಮೇಲ್ಸೇತುವೆ; ವಿರಾಜಪೇಟೆ ಕ್ಷೇತ್ರದ ಶಾಸಕ ಎ. ಎಸ್ ಪೊನ್ನಣ್ಣ ಕೊಡಗು ಜಿಲ್ಲೆ ಭಾಗಮಂಡಲದಲ್ಲಿ ನಿರ್ಮಿಸುತ್ತಿರುವ ಮೇಲ್ಸೇತುವೆ ಕಾಮಗಾರಿ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಡಿ. ಕೆ. ಶಿವಕುಮಾರ್, "ಈ ಕಾಮಗಾರಿ ಮಾಡಲು 6/10/2016ರಲ್ಲಿ ಅನುಮೋದನೆ ನೀಡಲಾಗಿದ್ದು, ಸದರಿ ಕಾಮಗಾರಿ ಟೆಂಡರ್ ಆಧಾರದ ಮೇಲೆ 30 ಕೋಟಿಗೆ 2018ರಲ್ಲಿ ವಹಿಸಲಾಗಿದ್ದು, ಪ್ರಸ್ತುತ ಮೇಲ್ಸೇತುವೆ ಬಹುತೇಕ ಪೂರ್ಣಗೊಂಡಿದ್ದು, ಸಾರ್ವಜನಿಕರ ಓಡಾಟಕ್ಕೆ ಅನುಕೂಲವಾಗಲಿದೆ. 2023ರ ಅಕ್ಟೋಬರ್ ಅಂತ್ಯದ ವೇಳೆಗೆ ಈ ಕಾಮಗಾರಿ ಪೂರ್ಣಗೊಳಿಸಲಾಗುವುದು" ಎಂದು ತಿಳಿಸಿದರು.
ನಂತರ ಮಾತನಾಡಿದ ಶಾಸಕ ಎ. ಎಸ್. ಪೊನ್ನಣ್ಣ, "ಮೇಲ್ಸೇತುವೆಗೆ ರ‍್ಯಾಂಪ್‌ಗಳನ್ನು ನೀಡಿಲ್ಲ. ಮಳೆಯಲ್ಲಿ ಕೆಸರು ತುಂಬಿಕೊಂಡಿದ್ದು, ಈ ಯೋಜನೆ ಆರಂಭವಾಗಿ 5 ವರ್ಷವಾಗಿದ್ದು, ಕಾಮಗಾರಿ ಪೂರ್ಣಗೊಂಡಿಲ್ಲ. ಗುತ್ತಿಗೆದಾರರಿಗೆ ನೋಟಿಸ್ ಕೂಡ ಕೊಟ್ಟಿಲ್ಲ" ಎಂದರು.
ಇದಕ್ಕೆ ಉತ್ತರ ನೀಡಿದ ಡಿಸಿಎಂ, "ಶಾಸಕರ ಮಾತನ್ನು ಗಂಭೀರವಾಗಿ ಪರಿಗಣಿಸಿ ಈ ಕುರಿತು ವರದಿ ತರಿಸಿಕೊಳ್ಳುತ್ತೇನೆ. ಆ ಭಾಗಕ್ಕೆ ಭೇಟಿ ಮಾಡಿದಾಗ ನಾನೇ ಖುದ್ದಾಗಿ ಭೇಟಿ ನೀಡಿ ಪರಿಶೀಲನೆ ಮಾಡುತ್ತೇನೆ" ಎಂದು ತಿಳಿಸಿದರು.
ಶಾಲೆಗಳಿಗೆ ನೇಮಕಾತಿ; ರುದ್ರಪ್ಪ ಲಮಾಣಿ ನಮ್ಮ ಜಿಲ್ಲೆಯಲ್ಲಿ ಕಳೆದ 8 ವರ್ಷಗಳಿಂದ ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳಲ್ಲಿ ಯಾವುದೇ ಹುದ್ದೆ ಭರ್ತಿಯಾಗಿಲ್ಲ. ಈ ಬಗ್ಗೆ ನಮ್ಮ ಮೇಲೆ ಒತ್ತಡವಿದೆ. ಈ ವಿಚಾರವಾಗಿ ಡಿಸಿಎಂ, ಮುಖ್ಯಮಂತ್ರಿ ಹಾಗೂ ಶಿಕ್ಷಣ ಸಚಿವರ ಜತೆ ಮಾತನಾಡಿ ತೀರ್ಮಾನ ಮಾಡಬೇಕು ಎಂದರು.
ಡಿ. ಕೆ. ಶಿವಕುಮಾರ್ ಉತ್ತರ ನೀಡಿ, "ನಾವು ನಮ್ಮ ಪ್ರಣಾಳಿಕೆಯಲ್ಲಿ ನವೋದಯ ಮಾದರಿ, ಕರ್ನಾಟಕ ಪಬ್ಲಿಕ್ ಶಾಲೆಗಳ ಮಾದರಿಯಲ್ಲಿ ಪ್ರತಿ ಪಂಚಾಯಿತಿಯಲ್ಲಿ ಉತ್ತಮ ಗುಣಮಟ್ಟದ ಶಾಲೆ ಆರಂಭಿಸುವ ಉದ್ದೇಶವಿದೆ. ನೀವು ಶಾಲೆಗಳಲ್ಲಿ ಶಿಕ್ಷಕರ ನೇಮಕಾತಿ ಬಗ್ಗೆ ವಿಚಾರ ಪ್ರಸ್ತಾಪಿಸಿದ್ದು, ನಮ್ಮ ಮಕ್ಕಳಿಗೆ ಉನ್ನತ ಗುಣಮಟ್ಟದ ಶಿಕ್ಷಣ ಪಡೆಯಬೇಕು. ಜಾಗತಿಕ ಮಟ್ಟದಲ್ಲಿ ಸ್ಪರ್ಧಿಸುವಂತೆ ತಯಾರು ಮಾಡಬೇಕು. ಇದಕ್ಕಾಗಿ ಹೊಸರೂಪ ನೀಡಲು ಚಿಂತನೆ ಇದೆ. ಪ್ರತಿಯೊಬ್ಬ ಸಂಸ್ಥೆಗಳು ಶಾಲೆಗಳ ನಿರ್ವಹಣೆ ಮಾಡಲು ರಾಜ್ಯಮಟ್ಟದಲ್ಲಿ ಸಮಿತಿ ರಚಿಸಿದ್ದೇವೆ. ಶಿಕ್ಷಕರ ನೇಮಕಾತಿ ಜೊತೆಗೆ ಬೆಂಗಳೂರಿನ ದೊಡ್ಡ ಸಂಸ್ಥೆಗಳು ಗ್ರಾಮೀಣ ಭಾಗದ ಶಾಲೆಗಳ ಜವಾಬ್ದಾರಿ ಪಡೆದು ಶಿಕ್ಷಕರು ಹಾಗೂ ಮಾನವ ಸಂಪನ್ಮೂಲ ನೀಡಬೇಕು ಈ ಬಗ್ಗೆ ಸಿಎಸ್‌ಆರ್ ರೂಪದಲ್ಲಿ ಮಾಡಲು ಚಿಂತನೆ ನಡೆಸಿದ್ದೇವೆ" ಎಂದು ತಿಳಿಸಿದರು.
26 ಗ್ರಾಮಗಳ ಪುನರ್ವಸತಿ; ಶಾಸಕ ವಿಜಯಾನಂದ ಕಾಶಪ್ಪನವರ್, "ಹುನಗುಂದ ಕ್ಷೇತ್ರದ ಕೃಷ್ಣ ಹಾಗೂ ಮಲಪ್ರಭಾ ನದಿ ದಂಡೆ ಮೇಲಿರುವ 26 ಗ್ರಾಮಗಳಿಗೆ ಪುನರ್ವಸತಿ ಕಲ್ಪಿಸಬೇಕು. ನಂದವಾಡಗಿ ಏತ ನೀರಾವರಿಯಲ್ಲಿ 26 ಗ್ರಾಮಗಳಿಗೆ ನೀರವಾರಿ ಕಲ್ಪಿಸಿಕೊಡಬೇಕು" ಎಂದು ಒತ್ತಾಯಸಿದರು.
ಡಿ. ಕೆ. ಶಿವಕುಮಾರ್ ಮಾತನಾಡಿ, "ಬಾಕಿ ಉಳಿದಿರುವ 13 ಗ್ರಾಮಗಳ ಪುನರ್ವಸತಿ ಕೇಂದ್ರ ಸ್ಥಾಪನೆಗೆ 10 ಕೋಟಿ ಮೊತ್ತದ ಅನುದಾನ ಬಿಡುಗಡೆ ಮಾಡಲಾಗಿದೆ. ಗ್ರಾಮ ಪಂಚಾಯಿತಿ ಹಸ್ತಾಂತರ ಮಾಡಲಾಗಿದೆ. ಇನ್ನು ನಿರಾವರಿಗೆ 1 ಟಿಎಂಸಿ ನೀಡುವ ಬೇಡಿಕೆ ಸರ್ಕಾರದ ಸಮ್ಮತಿ ಇದೆ. ನಂದವಾಡಿ ಏತನೀರಾವರಿಯಲ್ಲಿ ನೀರಾವರಿ ಒದಗಿಸಲು ಅಂದಾಜು ಪಟ್ಟಿ ಸಿದ್ಧಪಡಿಸಿದ್ದೇವೆ. ಮುಂದಿನ ಕೆಬಿಜೆಎಲ್ ಸಭೆಯಲ್ಲಿ ತೀರ್ಮಾನ ಮಾಡುತ್ತೇವೆ"ಎಂದರು.
ರಾಮನಗರ ಶಾಸಕ ಇಕ್ಬಾಲ್ ಕೇಳಿದ ಪ್ರಶ್ನೆಗೆ ಉತ್ತರ ನೀಡಿ, "ನಾನು ಕೂಡ ಈ ಕ್ಷೇತ್ರದಲ್ಲಿ ಭೇಟಿ ನೀಡಿ ಅಲ್ಲಿ ಅರ್ಕಾವತಿ ನದಿ ಭಾಗ ಸೇರಿದಂತೆ ಕೆಲವು ಭಾಗಗಳಲ್ಲಿ ಸಮಸ್ಯೆ ಇದೆ. ಈ ವಿಚಾರವಾಗಿ ಪ್ರತ್ಯೇಕ ಸಭೆ ಮಾಡಿ ಅವರ ಬೇಡಿಕೆ ಈಡೇರಿಸುವಂತೆ ಲೋಕೋಪಯೋಗಿ ಇಲಾಖೆ ಸಚಿವರಿಗೆ ಮನವಿ ಮಾಡುತ್ತೇನೆ. ಆಮೂಲಕ ಪರಿಹಾರ ಒದಗಿಸುವ ಕೆಲಸ ಮಾಡಿಸಿಕೊಡುತ್ತೇವೆ" ಎಂದು ತಿಳಿಸಿದರು.












Click it and Unblock the Notifications