ಕರ್ನಾಟಕದ ಚುನಾವಣೆ : ಮಂಗಳವಾರ ಮಹತ್ವದ ಸಭೆ
ಬೆಂಗಳೂರು, ಜನವರಿ 08 : ಕೇಂದ್ರ ಚುನಾವಣಾ ಆಯೋಗದ ಉಪ ನಿರ್ದೇಶಕರು ಮಂಗಳವಾರ ಬೆಂಗಳೂರಿಗೆ ಆಗಮಿಸಲಿದ್ದಾರೆ. ಮುಂಬರುವ ವಿಧಾನಸಭೆ ಚುನಾವಣೆ ಹಿನ್ನಲೆಯಲ್ಲಿ ಈ ಭೇಟಿ ಮಹತ್ವ ಪಡೆದಿದೆ.
ವಿಧಾನಸಭೆ ಚುನಾವಣೆ ಸಿದ್ಧತೆ ಕುರಿತು ಚರ್ಚೆ ನಡೆಸಲು ಉಪ ನಿರ್ದೇಶಕರು ಆಗಮಿಸಲಿದ್ದಾರೆ. ಮಂಗಳವಾರದ ವಿವಿಧ ಸಭೆಗಳನ್ನು ಅವರು ನಡೆಸಲಿದ್ದು, ನಂತರ ಕೇಂದ್ರ ಚುನಾವಣಾ ಆಯೋಗಕ್ಕೆ ವರದಿ ನೀಡಲಿದ್ದಾರೆ.
ಕರ್ನಾಟಕದ ಮುಖ್ಯ ಚುನಾವಣಾಧಿಕಾರಿ ಸಂಜೀವ್ ಕುಮಾರ್ ಜೊತೆ ಉಪ ನಿರ್ದೇಶಕರು ಸಭೆ ನಡೆಸಲಿದ್ದಾರೆ. ಬಳಿಕ ಸರ್ಕಾರದ ಮುಖ್ಯ ಕಾರ್ಯದರ್ಶಿ ಕೆ.ರತ್ನಪ್ರಭಾ, ರಾಜ್ಯ ಪೊಲೀಸ್ ಆಯುಕ್ತರಾದ ನೀಲಮಣಿ ರಾಜು ಅವರ ಜೊತೆ ಸಭೆ ನಡೆಸಲಿದ್ದಾರೆ.

ರಾಜ್ಯದ ಎಲ್ಲಾ ಜಿಲ್ಲೆಗಳ ಜಿಲ್ಲಾಧಿಕಾರಿಗಳು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಮಂಗಳವಾರ ಬೆಂಗಳೂರಿಗೆ ಆಗಮಿಸಲಿದ್ದಾರೆ. ಜಿಲ್ಲಾಧಿಕಾರಿಗಳ ಜೊತೆ ಪ್ರತ್ಯೇಕ ಸಭೆ ನಡೆಸಲಿದ್ದಾರೆಯೇ? ಎಂಬುದು ಇನ್ನೂ ಅಂತಿಮವಾಗಿಲ್ಲ.
ಕರ್ನಾಟಕ ವಿಧಾನಸಭೆ ಚುನಾವಣೆ ಮೇ ತಿಂಗಳಿನಲ್ಲಿ ನಡೆಯುವ ಸಾಧ್ಯತೆ ಇದೆ. ಮಂಗಳವಾರದ ಸಭೆಯ ಬಳಿಕ ದೆಹಲಿಯಲ್ಲಿ ಅಧಿಕಾರಿಗಳು ಮತ್ತೊಮ್ಮೆ ಸಭೆ ನಡೆಸಿ, ಚುನಾವಣಾ ಸಿದ್ಧತೆಗಳ ಕುರಿತು ಚರ್ಚೆ ನಡೆಸಲಿದ್ದಾರೆ.












Click it and Unblock the Notifications