ತುಮಕೂರು-ಚಿತ್ರದುರ್ಗ-ದಾವಣಗೆರೆ ನೇರ ರೈಲು ಮಾರ್ಗ; ಮಹತ್ವದ ಅಪ್‌ಡೇಟ್ ಕೊಟ್ಟ ಸಚಿವ ಅಶ್ವಿನಿ ವೈಷ್ಣವ್
ತುಮಕೂರು - ಚಿತ್ರದುರ್ಗ - ದಾವಣಗೆರೆ ನೇರ ರೈಲು ಮಾರ್ಗ ಕಾಮಗಾರಿ ಆರಂಭವಾಗಿ ದಶಕ ಕಳೆದರೂ ಇನ್ನೂ ಪೂರ್ಣವಾಗಿಲ್ಲ. ವಿ ಸೋಮಣ್ಣ ರಾಜ್ಯ ರೈಲ್ವೆ ಖಾತೆ ಸಚಿವರಾದ ಬಳಿಕ ದಾವಣಗೆರೆ-ತುಮಕೂರು ನಡುವಿನ ನೇರ ರೈಲು ಮಾರ್ಗ ಕಾಮಗಾರಿ ವೇಗ ಪಡೆದುಕೊಂಡಿದ್ದು, 2027ರ ಜನವರಿಯಲ್ಲಿ ಮುಗಿಯುತ್ತದೆ ಎಂದು ಭರವಸೆ ನೀಡಿದ್ದರು. ಆದರೆ ಯೋಜನೆಗೆ ಭೂಸ್ವಾಧೀನ ಪ್ರಕ್ರಿಯೆ ದೊಡ್ಡ ತಲೆನೋವಾಗಿತ್ತು. ಇದೀಗ ಕಾಮಗಾರಿ ಬಗ್ಗೆ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಮಹತ್ವದ ಮಾಹಿತಿ ನೀಡಿದ್ದಾರೆ.
ಸಂಸತ್‌ನಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದಲ್ಲಿ ಸಂಸದ ಗೋವಿಂದ ಕಾರಜೋಳ, ತುಮಕೂರು - ಚಿತ್ರದುರ್ಗ - ದಾವಣಗೆರೆ ನೇರ ರೈಲು ಮಾರ್ಗ ಯೋಜನೆಯ ಭೂಸ್ವಾಧೀನ, ಕಾಮಗಾರಿ ಬಗ್ಗೆ ಮಾಹಿತಿ ಕೇಳಿದರು. ಕಾಮಗಾರಿ ವಿಳಂಬವಾಗುತ್ತಿರುವ ಬಗ್ಗೆ ರಾಜ್ಯ ಸರ್ಕಾರದ ರೈಲ್ವೆ ಇಲಾಖೆ ಸಭೆಗಳನ್ನು ಮಾಡಿದೆಯಾ ಎಂದು ಕೇಳಿದರು.

ಇದಕ್ಕೆ ಉತ್ತರ ನೀಡಿದ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್, ಯೋಜನೆಗೆ ಸಂಬಂಧಿಸಿದಂತೆ ಈಗಾಗಲೇ 875 ಹೆಕ್ಟೇರ್ ಭೂಮಿಯನ್ನು ಸ್ವಾಧೀನ ಪಡಿಸಿಕೊಂಡಿದ್ದು, ಆ ಭಾಗದಲ್ಲಿ ಟೆಂಡರ್ ಕರೆದು ಈಗಾಗಲೇ ಕಾಮಗಾರಿ ಆರಂಭಿಸಲಾಗಿದೆ ಎಂದು ಹೇಳಿದ್ದಾರೆ.
ತುಮಕೂರು - ದಾವಣಗೆರೆ ನಡುವಿನ 191 ಕಿ.ಮೀ ಉದ್ದದ ರೈಲು ಮಾರ್ಗ ಕಾಮಗಾರಿಗೆ ಮಾರ್ಚ್ 2024ರ ವರೆಗೆ ಈಗಾಗಲೇ 359.32 ಕೋಟಿ ರೂಪಾಯಿ ಖರ್ಚು ಮಾಡಲಾಗಿದೆ. 2024-25 ರ ಸಾಲಿಗೆ 150 ಕೋಟಿ ರೂಪಾಯಿ ಅನುದಾನ ಒದಗಿಸಲಾಗಿದೆ. ರೈಲ್ವೆ ಯೋಜನೆ ತ್ವರಿತಗತಿಯಲ್ಲಿ ಮುಗಿಯಲು ರಾಜ್ಯ ಸರ್ಕಾರಗಳು ಸಹಕಾರ ನೀಡಬೇಕು ಎಂದರು.
ಭೂಸ್ವಾಧೀನ ಪ್ರಕ್ರಿಯೆ ವೇಗವಾಗಿರಬೇಕು, ಅರಣ್ಯ ತೀರುವಳಿ, ತನ್ನ ಪಾಲಿನ ಅನುದಾನ ಹಂಚಿಕೆಯನ್ನು ನೀಡುವುದನ್ನು, ಯೋಜನೆ ಅನುಷ್ಠಾನ ಪ್ರದೇಶದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವುದು ಸೇರಿದಂತೆ ಅನೇಕ ಅಂಶಗಳು ಕಾಮಗಾರಿ ಮುಗಿಯುವಲ್ಲಿ ಮಹತ್ವದ ಪಾತ್ರ ವಹಿಸುತ್ತವೆ. ತುಮಕೂರು ದಾವಣಗೆರೆ ನೇರ ರೈಲು ಮಾರ್ಗ ಯೋಜನೆಯಲ್ಲೂ ಇಂತಹ ಅನೇಕ ಸಮಸ್ಯೆಗಳಿವೆ ಎಂದು ತಿಳಿಸಿದರು.
ಹಲವು ಕಡೆಗಳಲ್ಲಿ ಈಗಾಗಲೇ ಕಾಮಗಾರಿ ಭರದಿಂದ ಸಾಗುತ್ತಿದೆ. ಆದರೆ ಭೂಸ್ವಾಧೀನ ಪ್ರಕ್ರಿಯೆ ವಿಳಂಬವಾಗಿದ್ದು ಕಾಮಗಾರಿ ವಿಳಂಬಕ್ಕೆ ಪ್ರಮುಖ ಕಾರಣವಾಗಿದೆ. ದಶಕದಿಂದ ರೈಲು ಮಾರ್ಗ ಯೂಜನೆ ಯಾವಾಗ ಮುಗಿಯುತ್ತದೆ ಎಂದು ಈ ಭಾಗದ ಜನ ಕಾಯುತ್ತಿದ್ದಾರೆ.












Click it and Unblock the Notifications