ನಕ್ಸಲರನ್ನ ಕರೆಸಿಕೊಂಡವರಿಗೆ ಆಶಾ ಕಾರ್ಯಕರ್ತೆಯರ ಕಷ್ಟ ಕೇಳಲು ಸಮಯವಿಲ್ಲವೇ: ಬಿಜೆಪಿ ತರಾಟೆ
ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಆಶಾ ಕಾರ್ಯಕರ್ತೆಯರು ನಡೆಸುತ್ತಿರುವ ಹೋರಾಟವು ಇಂದು ನಾಲ್ಕನೇ ದಿನಕ್ಕೆ ಕಾಲಿಟ್ಟಿದೆ. ರಾಜ್ಯ ಸರ್ಕಾರವು ಇವರ ಬೇಡಿಕೆ ಈಡೇರಿಸುವಲ್ಲಿ ವಿಫಲವಾಗಿದೆ ಎಂದು ಬಿಜೆಪಿ ಕಿಡಿಕಾರಿದೆ. ನಕ್ಸಲರನ್ನು ಗೃಹ ಕಚೇರಿಗೆ ಕರೆಸಿ ಭೇಟಿಯಾಗುವ ಸರ್ಕಾರಕ್ಕೆ ಆಶಾ ಕಾರ್ಯಕರ್ತೆಯರ ಸಂಕಷ್ಟ ಕಾಣುತ್ತಿಲ್ಲವೇ ಎಂದು ಗುಡುಗಿದೆ.
ವಚನ ಭ್ರಷ್ಟ ಕಾಂಗ್ರೆಸ್ ಸರ್ಕಾರದ ವಿರುದ್ಧ ಆಶಾ ಕಾರ್ಯಕರ್ತೆಯರು ನಾಲ್ಕನೇ ದಿನವೂ ಉಗ್ರವಾಗಿ ಹೋರಾಟ ಮಾಡುತ್ತಿದ್ದಾರೆ. ರಾಜ್ಯದಲ್ಲಿ ಮಹಿಳೆಯರ ಪರ ನಿಂತುಕೊಳ್ಳಬೇಕಾದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಫ್ರಸ್ಟ್ರೇಷನ್ ಲಕ್ಷ್ಮೀ ಹೆಬ್ಬಾಳ್ಕರ್ ಅವರೇ, ಎಲ್ಲಿ ನಾಪತ್ತೆ ಆಗಿದ್ದೀರಿ? ಎಂದು ಟೀಕಿಸಿದೆ.

ಸುಮಾರು 20 ಸಾವಿರ ಆಶಾ ಕಾರ್ಯಕರ್ತೆಯರು ರಸ್ತೆ ಬದಿಯಲ್ಲಿ ಮೈಕೊರೆಯುವ ಚಳಿಯಲ್ಲಿ ಮಲಗಿ ಉಗ್ರ ಹೋರಾಟ ಮಾಡುತ್ತಿದ್ದರೂ ನಿಮ್ಮ ಕರುಳು ಚೂರ್ ಎನ್ನುತ್ತಿಲ್ಲವೇ? ಸಿದ್ದರಾಮಯ್ಯನವರೇ, ನಕ್ಸಲರನ್ನು ಗೃಹ ಕಚೇರಿಗೆ ಕರೆಸಿ ಭೇಟಿಯಾಗುವುದಕ್ಕೆ ಸಮಯವಿದೆ. ಆದರೆ, ಆಶಾ ಕಾರ್ಯಕರ್ತೆಯರ ಅಳಲು ಕೇಳಲು ನಿಮಗೆ ಸಮಯವಿಲ್ಲವೇ? ಎಂದು ತರಾಟೆಗೆ ತೆಗೆದುಕೊಂಡಿದೆ.
ಆಶಾ ಕಾರ್ಯಕರ್ತೆಯರು ತಮಗೆ ಪ್ರತಿ ತಿಂಗಳು 15,000 ರೂಪಾಯಿ ಗೌರವಧನ ನೀಡುವುದು ಸೇರಿದಂತೆ ಹಲವು ಬೇಡಿಕೆಗಳನ್ನು ಮುಂದಿಟ್ಟುಕೊಂಡು ಧರಣಿ ನಡೆಸುತ್ತಿದೆ. ಆಶಾ ಕಾರ್ಯಕರ್ತೆಯರು ಮತ್ತು ಸರ್ಕಾರದ ಪ್ರತಿನಿಧಿಗಳ ನಡುವೆ ನಡೆದ ಮತ್ತೊಂದು ಮಾತುಕತೆ ಕೂಡ ವಿಫಲವಾಗಿದೆ. ಸಿಎಂ ಸಿದ್ದರಾಮಯ್ಯ ಅವರೇ ಈ ವಿಚಾರಕ್ಕೆ ಮಧ್ಯಪ್ರವೇಶಿಸಬೇಕು ಎಂದು ಪಟ್ಟು ಹಿಡಿದಿದ್ದಾರೆ. ಅಲ್ಲದೆ ನಾವ್ಯಾರೂ ಸಂಕ್ರಾಂತಿ ಆಚರಿಸಲ್ಲ ಎಂದೂ ಎಚ್ಚರಿಕೆ ನೀಡಿದ್ದಾರೆ.
ಆಶಾ ಕಾರ್ಯಕರ್ತೆಯರು ಕಳೆದ ಮಂಗಳವಾರದಿಂದ ಅಹೋರಾತ್ರಿ ಅನಿರ್ದಿಷ್ಟಾವಧಿ ಧರಣಿ ನಡೆಸುತ್ತಿದ್ದಾರೆ. ಇಂದು ಸಿಎಂ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಎಲ್.ಕೆ.ಅತೀಕ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಪ್ರಧಾನ ಕಾರ್ಯದರ್ಶಿ ಹರ್ಷ ಗುಪ್ತಾ ಅವರು ಆಶಾ ಕಾರ್ಯಕರ್ತೆಯರೊಂದಿಗೆ ಸಭೆ ನಡೆಸಿದ್ದು, ಸಂಧಾನ ವಿಫಲವಾಗಿದೆ.

ಗೌರವಧನ ಹೆಚ್ಚಳ ಸೇರಿದಂತೆ ವಿವಿಧ ನ್ಯಾಯಯುತ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಬೀದಿಗಿಳಿದಿರುವ 25 ಸಾವಿರಕ್ಕೂ ಅಧಿಕ ಆಶಾ ಕಾರ್ಯಕರ್ತೆಯರು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಎರಡನೇ ದಿನವೂ ಕೊರೆವ ಚಳಿಯಲ್ಲಿಯೇ ರಾತ್ರಿ ಕಳೆದು ಮುಷ್ಕರ ನಡೆಸುತ್ತಿದ್ದರೂ ದಪ್ಪ ಚರ್ಮದ ಕಾಂಗ್ರೆಸ್ ಸರ್ಕಾರ ಕಿವಿ ಕೊಡದಿರುವುದು ಶ್ರಮಿಕ ವರ್ಗಗಳ ಮೇಲೆ ಈ ಸರ್ಕಾರಕ್ಕಿರುವ ಅಸಡ್ಡೆ ತನವನ್ನು ಸಾಕ್ಷೀಕರಿಸುತ್ತಿದೆ ಎಂದು ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಕೂಡ ಆಕ್ರೋಶ ಹೊರಹಾಕಿದ್ದಾರೆ.
ಅಧಿಕಾರಕ್ಕೆ ಬರುವ ಮುನ್ನ ಆಶಾ ಕಾರ್ಯಕರ್ತೆಯರ ಮತ ಪಡೆಯಲು ಬೆಟ್ಟದಷ್ಟು ಪೊಳ್ಳು ಆಶ್ವಾಸನೆಗಳನ್ನು ನೀಡಿ ಅಧಿಕಾರಕ್ಕೆ ಬಂದು ಒಂದು ವರ್ಷ ಕಳೆದರೂ ಬೇಡಿಕೆ ಈಡೇರಿಸದೇ ಆಶಾ ಕಾರ್ಯಕರ್ತೆಯರ ಹೋರಾಟಕ್ಕೆ ಬೆಲೆ ಕೊಡದ ಈ ಸರ್ಕಾರಕ್ಕೆ ನಾಡಿನ ಜನ ಹಿಡಿಶಾಪ ಹಾಕುತ್ತಿದ್ದಾರೆ. ಈ ಕೂಡಲೇ ರಾಜ್ಯ ಸರ್ಕಾರ ಆಶಾ ಕಾರ್ಯಕರ್ತೆಯರ ನ್ಯಾಯಸಮ್ಮತ ಬೇಡಿಕೆಗಳನ್ನು ಈಡೇರಿಸಲಿ ಎಂದು ಒತ್ತಾಯಿಸಿದ್ದಾರೆ.












Click it and Unblock the Notifications