ಸಚಿವ ಕೆಜೆ ಜಾರ್ಜ್ ಹೇಳಿದ ಹುಲಿ, ಇಲಿ ಕಥೆ!
ಬೆಂಗಳೂರು, ಜ. 27 : ಅರ್ಕಾವತಿ ಡಿನೋಟಿಫಿಕೇಶನ್ ಹಗರಣ ಮತ್ತೊಂದು ಸುತ್ತಿನ ವಾಕ್ಸಮರಕ್ಕೆ ಕಾರಣವಾಗಿದೆ. 'ಬಿಜೆಪಿಯವರು ಹುಲಿ ಬಂತು ಹುಲಿ ಎಂದು ಹೇಳುತ್ತಿತ್ತು. ಆದರೆ, ಇದುವರೆಗೂ ಒಂದು ಇಲಿಯೂ ಬಂದಿಲ್ಲ' ಎಂದು ಗೃಹ ಸಚಿವ ಕೆ.ಜೆ.ಜಾರ್ಜ್ ಬಿಜೆಪಿಯ ಅರ್ಕಾವತಿ ಡಿನೋಟಿಫಿಕೇಶನ್ ಹೋರಾಟವನ್ನು ಲೇವಡಿ ಮಾಡಿದ್ದಾರೆ.
ಬೆಂಗಳೂರಿನಲ್ಲಿ ಮಂಗಳವಾರ ಪತ್ರಿಕಾಗೋಷ್ಠಿ ನಡೆಸಿದ ಕೆ.ಜೆ.ಜಾರ್ಜ್, 'ಅರ್ಕಾವತಿ ಬಡಾವಣೆ ಡಿ ನೋಟಿಫಿಕೇಶನ್ ವಿಚಾರದಲ್ಲಿ ಯಾವುದೇ ಅಕ್ರಮ ನಡೆದಿಲ್ಲ, ಪ್ರಚಾರಕ್ಕಾಗಿ ಬಿಜೆಪಿ ಅನಗತ್ಯ ಆರೋಪ ಮಾಡುತ್ತಿದೆ. ಅಕ್ರಮ ನಡೆದಿರುವುದಕ್ಕೆ ದಾಖಲೆ ಇದ್ದರೆ ಅದನ್ನು ವಿಚಾರಣಾ ಆಯೋಗದ ಮುಂದಿಡುವಂತೆ' ಸಚಿವರು ಸವಾಲು ಹಾಕಿದರು. [ಅರ್ಕಾವತಿ ಬಡಾವಣೆ ಫೈಟ್ ಯಾರು, ಏನು ಹೇಳಿದರು?]

ಬಿಜೆಪಿಯವರು ಅರ್ಕಾವತಿ ಡಿನೋಟಿಫಿಕೇಶನ್ ಬಗ್ಗೆ ಸಿದ್ದರಾಮಯ್ಯ ವಿರುದ್ಧ ಅನಗತ್ಯ ಆರೋಪ ಮಾಡುತ್ತಿದ್ದಾರೆ. ದಾಖಲೆಗಳಿಲ್ಲದೇ ಆರೋಪ ಮಾಡುತ್ತಾ, ಜನರ ದಾರಿ ತಪ್ಪಿಸುವ ಪ್ರಯತ್ನ ನಡೆಸಿದ್ದಾರೆ. ಅವರ ಬಳಿ ದಾಖಲೆಗಳಿದ್ದರೆ ಈ ವೇಳೆಗಾಗಲೆ ಸಲ್ಲಿಸುತ್ತಿದ್ದರು ಎಂದು ಜಾರ್ಜ್ ಹೇಳಿದರು. [ಸಿದ್ದರಾಮಯ್ಯ ವಿರುದ್ಧ ದೂರು ನೀಡಲು ಬಿಜೆಪಿ ಸಿದ್ಧತೆ]
ಸಿಎಂ ಸಿದ್ದರಾಮಯ್ಯ ಅವರು ಹೈಕೋರ್ಟ್ ಆದೇಶದಂತೆ ಡಿನೋಟಿಫಿಕೇಶನ್ ಮಾಡಿದ್ದಾರೆ. ಅದನ್ನು ಹೊರತುಪಡಿಸಿ ಯಾವುದೇ ಡಿನೋಟಿಫಿಕೇಶನ್ ಮಾಡಿಲ್ಲ ಎಂದು ಜಾರ್ಜ್ ಸಿಎಂ ಅವರನ್ನು ಬೆಂಬಲಿಸಿದರು. ಬಿಜೆಪಿಯವರು ರಾಜಭವನವನ್ನು ದುರುಪಯೋಗ ಮಾಡಿಕೊಳ್ಳುವ ಪ್ರಯತ್ನ ನಡೆಸುತ್ತಿದ್ದಾರೆ. ಆದರೆ, ರಾಜ್ಯಪಾಲರು ಇಂತಹ ಪ್ರಯತ್ನಗಳಿಗೆ ಬೆಂಬಲ ನೀಡುವುದಿಲ್ಲ ಎಂಬ ವಿಶ್ವಾಸವಿದೆ ಎಂದರು.
ಬಿದರಿ ಅವರಿಗೆ ಹಳೆಯ ದಿನಗಳ ನೆನಪಾಗುತ್ತಿದೆ : 'ಕರ್ನಾಟಕದಲ್ಲಿ ಸೆಟ್ಲಮೆಂಟ್ ಸರ್ಕಾರವಿದೆ' ಎಂದು ಹೇಳಿದ್ದ ಬಿಜೆಪಿ ಮುಖಂಡ ಶಂಕರ ಬಿದರಿ ಮಾತಿಗೆ ತಿರುಗೇಟು ಕೊಟ್ಟ ಕೆಜೆ ಜಾರ್ಜ್ ಅವರು, 'ಶಂಕರ ಬಿದರಿಯವರಿಗೆ ತಮ್ಮ ಹಳೆಯ ದಿನಗಳು ನೆನೆಪಾಗುತ್ತಿದೆ. ಅವರ ಕಾಲದಲ್ಲಿ ಹಾಗೇ ನಡೆಯುತ್ತಿತ್ತು ಎಂದು ಕಾಣುತ್ತದೆ. ಈಗಲೂ ಅದೇ ಮುಂದುವರೆಯುತ್ತದೆ ಎಂದು ತಿಳಿದಿದ್ದಾರೆ' ಎಂದು ಕುಟುಕಿದರು.












Click it and Unblock the Notifications