ರಿಯಲ್ ಎಸ್ಟೇಟ್ ನಿಯಂತ್ರಣ; ಸರ್ಕಾರದ ಮಹತ್ವದ ತೀರ್ಮಾನ
ಬೆಂಗಳೂರು, ಫೆಬ್ರವರಿ 29: ಹೈಕೋರ್ಟ್ ಹಿಂದಿನ ವಿಚಾರಣೆ ವೇಳೆ ನೀಡಿದ್ದ ಎಚ್ಚರಿಕೆಯಿಂದ ಜಾಗೃತವಾಗಿರುವ ಕರ್ನಾಟಕ ಸರ್ಕಾರ ಕೊನೆಗೂ 3 ವಾರಗಳಲ್ಲಿ ಕರ್ನಾಟಕ ರಿಯಲ್ ಎಸ್ಟೇಟ್ ನಿಯಂತ್ರಣ ಪ್ರಾಧಿಕಾರ (ರೇರಾ) ಮೇಲ್ಮನವಿ ನ್ಯಾಯಾಧೀಕರಣಕ್ಕೆ ಅಧ್ಯಕ್ಷರು ಮತ್ತು ಸದಸ್ಯರನ್ನು ನೇಮಕ ಮಾಡಲಾಗುವುದು ಎಂದು ಹೈಕೋರ್ಟ್ ಗೆ ತಿಳಿಸಿದೆ. ಹಾಗಾಗಿ ಗೃಹ ಖರೀದಿದಾರರು ಮತ್ತು ಬಿಲ್ಡರ್‌ಗಳು ಇನ್ನು ಮುಂದೆ ರೇರಾ ಆದೇಶಗಳನ್ನು ರೇರಾ ಮೇಲ್ಮನವಿ ಪ್ರಾಧಿಕಾರದ ಮುಂದೆ ಸಲ್ಲಿಸುವುದು ಸುಲಭವಾಗಲಿದೆ.
ಬೆಂಗಳೂರಿನ ಮ್ಯಾಥ್ಯೂ ಥಾಮಸ್ ರೇರಾ ಮೇಲ್ಮನವಿ ನ್ಯಾಯಾಧೀಕರಣಕ್ಕೆ ಮುಖ್ಯಸ್ಥರನ್ನು ನೇಮಿಸುವಂತೆ ಕೋರಿ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಎಂ. ನಾಗಪ್ರಸನ್ನ ನೇತೃತ್ವದ ಏಕಸದಸ್ಯ ಪೀಠ ವಿಚಾರಣೆ ನಡೆಸಿ ಈ ಆದೇಶ ನೀಡಿದೆ. ವಿಚಾರಣೆ ವೇಳೆ ಹಾಜರಾಗಿದ್ದ ಅಡ್ವೋಕೇಟ್ ಜನರಲ್ ಕೆ. ಶಶಿಕಿರಣ್ ಶೆಟ್ಟಿ ಅವರು, ರೇರಾದ ಒಬ್ಬ ಸದಸ್ಯರು 2024ರ ಏಪ್ರಿಲ್ ತಿಂಗಳಲ್ಲಿ ನಿವೃತ್ತರಾಗಲಿದ್ದಾರೆ. ಆ ಹುದ್ದೆಯೂ ಸೇರಿದಂತೆ ಅಧ್ಯಕ್ಷರೂ ಸೇರಿದಂತೆ ಎಲ್ಲ ಸದಸ್ಯರನ್ನು ಭತಿ ಮಾಡುವುದಾಗಿ ಭರವಸೆ ನೀಡಿದರು.

ಈ ಅಂಶವನ್ನು ದಾಖಲಿಸಿಕೊಂಡ ನ್ಯಾಯಪೀಠ, ರೇರಾದ ಅಧ್ಯಕ್ಷರು ಮತ್ತು ಸದಸ್ಯರ ನೇಮಕದಲ್ಲಿ ಯಾವುದೇ ರೀತಿಯ ವಿಳಂಬವಿಲ್ಲದೆ ನೇಮಕ ಮಾಡುವ ಪ್ರಕ್ರಿಯೆ ಪ್ರಾರಂಭಿಸಬೇಕು, ಅವರು ಸದಸ್ಯರ ನಿವೃತ್ತಿಯ ನಂತರ ತಕ್ಷಣವೇ ಅಧಿಕಾರ ವಹಿಸಿಕೊಳ್ಳುವಂತಿರಬೇಕು. ಯಾವುದೇ ರೀತಿಯ ವಿಳಂಬ ಮಾಡಬಾರದು ಎಂದು ತಿಳಿಸಿ ವಿಚಾರಣೆಯನ್ನು ಮುಂದೂಡಿತು.
ಬಿಲ್ಡರ್ ಗಳು ಹೈಕೋರ್ಟ್ ಮೊರೆ: ಈ ಹಿಂದೆ ನಡೆದ ವಿಚಾರಣೆ ವೇಳೆ ನ್ಯಾಯಪೀಠ ನ್ಯಾಯಾಧೀಕರಣಕ್ಕೆ ಅಧ್ಯಕ್ಷರನ್ನು ನೇಮಿಸಲು ಹಾಗೂ ಅಲ್ಲಿನ ಖಾಲಿ ಹುದ್ದೆಗಳನ್ನು ಭರ್ತಿ ಮಾಡಲು ರಾಜ್ಯ ಸರ್ಕಾರ ಕ್ರಮಕೈಗೊಂಡಿಲ್ಲ. ರೇರಾದ ಸೆಕ್ಷನ್ 22ರ ಪ್ರಕಾರ ರಾಜ್ಯ ಸರ್ಕಾರ ಹುದ್ದೆಗಳನ್ನು ತುಂಬಿದರೆ ಪ್ರಕ್ರಿಯೆ ಮುಂದುವರಿಯಲಿದೆ.
ರೇರಾ ಹೊರಡಿಸಿದ ಆದೇಶಗಳನ್ನು ಕಾಯಿದೆಯ ಸೆಕ್ಷನ್ 44(5)ರ ಅಡಿ ಪ್ರಶ್ನಿಸಬಹುದಾಗಿದೆ. ಮೇಲ್ಮನವಿ ನ್ಯಾಯಾಧೀಕರಣವು 60 ದಿನಗಳ ಒಳಗಾಗಿ ಮೇಲ್ಮನವಿ ಇತ್ಯರ್ಥಪಡಿಸಬೇಕು. ಆದರೆ, ನ್ಯಾಯಾಧಿಕರಣಕ್ಕೆ ಅಧ್ಯಕ್ಷರನ್ನು ನೇಮಕ ಮಾಡದಿರುವುದರಿಂದ ಸಕ್ಷಮ ಪ್ರಾಧಿಕಾರ ಮಾಡಿದ ಆದೇಶಗಳನ್ನು ಬಿಲ್ಡರ್‌ಗಳು ಹೈಕೋರ್ಟ್‌ಗೆ ಸಲ್ಲಿಸುತ್ತಿದ್ದಾರೆ.
ಅಲ್ಲದೆ, ಈ ಎಲ್ಲ ಅರ್ಜಿಗಳು ನ್ಯಾಯಾಧೀಕರಣದ ಮುಂದೆ ಸಲ್ಲಿಸಬೇಕಾಗಿದೆ. ನ್ಯಾಯಾಧೀಕರಣ ಕಾರ್ಯನಿರ್ವಹಿಸುತ್ತಿಲ್ಲ ಎಂಬ ಏಕೈಕ ಕಾರಣಕ್ಕೆ ಈ ನ್ಯಾಯಾಲಯದಲ್ಲಿ ಸಾಕಷ್ಟು ಅರ್ಜಿಗಳು ಬಾಕಿ ಉಳಿದಿವೆ. ರಾಜ್ಯ ಸರ್ಕಾರವು ಅಧ್ಯಕ್ಷರನ್ನು ನೇಮಕ ಮಾಡದಿರುವುದರಿಂದ ನ್ಯಾಯಾಧೀಕರಣ ಕೆಲಸ ಮಾಡುತ್ತಿಲ್ಲ. ಹೀಗಾಗಿ, ಮೇಲ್ನೋಟಕ್ಕೆ ಹೈಕೋರ್ಟ್‌ನಲ್ಲಿ ಬಾಕಿ ಪ್ರಕರಣ ಹೆಚ್ಚಲು ಕಾರಣವಾಗುತ್ತಿದೆ ಎಂದು ಪೀಠ ತಿಳಿಸಿದೆ.
ಪ್ರಕರಣದ ಹಿನ್ನೆಲೆ: 2021ರ ಮಾರ್ಚ್ 17ರಂದು ನಿರ್ಮಾಣ ಯೋಜನೆಯೊಂದಕ್ಕೆ ಸಂಬಂಧಿಸಿದಂತೆ ರೇರಾ ರಿಯಲ್ಎಸ್ಟೇಟ್ ಸಂಸ್ಥೆಗೆ ಆದೇಶಿಸಿತ್ತು. ಇದನ್ನು ಪ್ರಶ್ನಿಸಿ ಸಂಸ್ಥೆ ನ್ಯಾಯಾಧೀಕರಣದಲ್ಲಿ ಮೇಲ್ಮನವಿ ಸಲ್ಲಿಸಿದ್ದು, ಅದನ್ನು ಪುರಸ್ಕರಿಸಿ ಪ್ರಕರಣವನ್ನು ರೇರಾಕ್ಕೆ ಮರಳಿಸಲಾಗಿತ್ತು. ಆನಂತರ ರೇರಾ ಮತ್ತೆ 2022ರ ಸೆಪ್ಟೆಂಬರ್ 2ರಂದು ಅರ್ಜಿದಾರರ ಪರವಾಗಿ ಆದೇಶಿಸಿದ್ದು, ಇದನ್ನು ಪ್ರಶ್ನಿಸಿ 2023ರ ಫೆಬ್ರವರಿ 2ರಂದು ಸಂಸ್ಥೆ ನ್ಯಾಯಾಧೀಕರಣದಲ್ಲಿ ಮೇಲ್ಮನವಿ ಸಲ್ಲಿಸಿದ್ದರು.
ನ್ಯಾಯಾಧೀಕರಣ ರಚನೆಯಾಗದಿರುವುದರಿಂದ ಅದು ಬಾಕಿ ಉಳಿದಿದೆ. ಈ ಹಿನ್ನೆಲೆಯಲ್ಲಿ ಅರ್ಜಿದಾರರು ನ್ಯಾಯಾಧೀಕರಣದಲ್ಲಿ ಬಾಕಿ ಇರುವ ಹುದ್ದೆಗಳನ್ನು ತುಂಬುವಂತೆ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದರು. 2023ರ ಜೂನ್ 2ರಂದು ನ್ಯಾಯಾಧೀಕರಣವು ಖಾಲಿಯಿದ್ದು, ಅರ್ಜಿದಾರರು ರೇರಾ ಮೇಲ್ಮನವಿ ನ್ಯಾಯಾಧೀಕರಣಕ್ಕೆ ಸದಸ್ಯರು ಮತ್ತು ಅಧ್ಯಕ್ಷರನ್ನು ನೇಮಿಸುವಂತೆ ಕೋರಿ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದಾರೆ. ಇದಕ್ಕೆ ಸೂಕ್ತ ಸ್ಪಂದನೆ ದೊರೆಯದ ಹಿನ್ನೆಲೆಯಲ್ಲಿ ಅರ್ಜಿದಾರರು ಮೊರೆ ಹೋಗಿದ್ದರು.












Click it and Unblock the Notifications