ಮುಡಾ ಬೆನ್ನಲ್ಲೇ ಸಿಎಂ ವಿರುದ್ಧ ಮತ್ತೊಂದು ದೂರು!
ಸಿಎಂ ಸಿದ್ದರಾಮಯ್ಯ ಅವರ ಮೇಲಿನ ಮುಡಾ ಬದಲಿ ನಿವೇಶನ ಹಂಚಿಕೆ ಕೇಸ್‌ನ ವಿಚಾರಣೆ ತನಿಖೆ ಹಂತದಲ್ಲಿದೆ. ಹೀಗಿರುವಾಗಲೇ ಸಿದ್ದರಾಮಯ್ಯ ಅವರಿಗೆ ಮತ್ತೊಂದು ಆಘಾತ ಎದುರಾಗಿದೆ. ಅರ್ಕಾವತಿ ಬಡಾವಣೆಯ ನಿವೇಶನದಾರರು ಕೂಡ ಸಿಎಂ ಸಿದ್ದರಾಮಯ್ಯ ವಿರುದ್ಧ ರಾಜ್ಯಪಾಲರಿಗೆ ದೂರು ನೀಡಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ಅರ್ಕಾವತಿ ಲೇಔಟ್‌ನಲ್ಲಿ ಸೈಟ್ ಪಡೆದಿರುವ ಶಿವಲಿಂಗಪ್ಪ, ವೆಂಕಟಕೃಷ್ಣಪ್ಪ, ರಾಮಚಂದ್ರಯ್ಯ ಎಂಬುವವರು ಸಿಎಂ ಸಿದ್ದರಾಮಯ್ಯ ಹಾಗೂ ಬಿಡಿಎ ಅಧಿಕಾರಿಗಳ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ಸಿಎಂ ಹಾಗೂ ಬಿಡಿಎ ಅಧಿಕಾರಿಗಳು ಅಧಿಕಾರ ದುರ್ಬಳಕೆ ಮಾಡಿಕೊಂಡಿದ್ದಾರೆ. ಈ ಹಿಂದೆ ಅರ್ಕಾವತಿ ಲೇಔಟ್‌ನಲ್ಲಿ ಹಂಚಿಕೆಯಾಗಿದ್ದ ಸೈಟ್‌ಗಳನ್ನು ಭೂಗಳ್ಳರು ದೋಚುತ್ತಿದ್ದಾರೆ. ಇವರ ಅಧಿಕಾರ ದುರ್ಬಳಕೆಯಿಂದಾಗಿ ಸೈಟುದಾರರಿಗೆ ಸಮಸ್ಯೆಯಾಗುತ್ತಿದೆ ಎಂದು ರಾಜ್ಯಪಾಲರಿಗೆ ದೂರು ಕೊಟ್ಟಿದ್ದಾರೆ ಎಂದು ತಿಳಿದುಬಂದಿದೆ.

ಬೆಂಗಳೂರಿನ ಥಣಿಸಂದ್ರ, ಸಂಪಿಗೆಹಳ್ಳಿ, ಜಕ್ಕೂರು, ಕೆ.ನಾರಾಯಣಪುರ ಸೇರಿದಂತೆ ಒಟ್ಟು 16 ಹಳ್ಳಿಗಳಲ್ಲಿನ 800 ಎಕರೆ ಜಮೀನನ್ನು ಸರ್ಕಾರ ರೈತರಿಂದ ಖರೀದಿಸಿತ್ತು. ಇದನ್ನು ಬಿಡಿಎ ಸೈಟ್‌ಗಳಾಗಿ ಪರಿವರ್ತಿಸಲಾಗಿದೆ. ಇದಕ್ಕೆ ಹೊಸದಾಗಿ ಅರ್ಕಾವತಿ ಲೇಔಟ್ ಎಂದೂ ಹೆಸರಿಡಲಾಗಿತ್ತು. ಬಿಡಿಎ ಹಲವು ವರ್ಷಗಳ ಹಿಂದೆ ಈ ಲೇಔಟ್‌ನಲ್ಲಿ ಅರ್ಜಿ ಕರೆದಿತ್ತು. ಲಕ್ಷಾಂತರ ಜನ ಇಲ್ಲಿ ಸೈಟ್ ಬೇಕೆಂದು ಮುಗಿಬಿದ್ದಿದ್ದರು.
ಬಳಿಕ ಸುಮಾರು ಹನ್ನೆರಡು ಸಾವಿರ ಫಲಾನುಭವಿಗಳೆಂದು ಗುರುತಿಸಿ, ಖರೀದಿಸಿದ್ದ ಜಮೀನಿಗೆ ರೈತರಿಗೆ ಪರಿಹಾರದ ಹಣ ಕೂಡ ನೀಡಲಾಗಿತ್ತು ಎನ್ನಲಾಗಿದೆ. ಬಳಿಕ ಫಲಾನುಭವಿಗಳಿಂದ ಹಣ ಪಡೆದು ಸೈಟ್ ಹಂಚಿಕೆ ಕೂಡ ಮಾಡಿತ್ತು. ನಂತರ ಕರಾರಿನಂತೆ ಸೈಟ್ ಮಾಲೀಕರು ಈ ಸೈಟ್‌ಗಳನ್ನು ಹತ್ತು ವರ್ಷ ಮಾರಾಟ ಮಾಡಬಾರದು ಎಂದು ಸೂಚಿಸಿತ್ತು. ಹಾಗಾಗಿ ಫಲಾನುಭವಿಗಳು ಇನ್ನೂ ಆ ಜಾಗಕ್ಕೆ ಟ್ಯಾಕ್ಸ್ ಕಟ್ಟುತ್ತಲೇ ಇದ್ದಾರೆ ಎನ್ನಲಾಗಿದೆ.

ಇನ್ನು 2014ರಲ್ಲಿ ಅಧಿಕಾರದಲ್ಲಿದ್ದ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಈ ಅರ್ಕಾವತಿ ಲೇಔಟ್‌ನ ಸೈಟ್‌ಗಳನ್ನು ವಾಪಸ್ ಪಡೆದಿತ್ತು. ಹಾಗಾಗಿ ಈ ಹಿಂದೆ ಅಲ್ಲಿ ಸೈಟ್ ಖರೀದಿಸಿದ್ದ ಜನರಿಗೆ ಒಳಗೆ ಪ್ರವೇಶ ಕೂಡ ನೀಡುತ್ತಿಲ್ಲ. ಹಿಂಪಡೆದಿದ್ದ ಜಾಗವನ್ನು ರೈತರಿಗೂ ವಾಪಸ್ ಕೊಟ್ಟಿಲ್ಲ. ಈ ಬಗ್ಗೆ ಕೇಳಿದರೆ ಅಧಿಕಾರಿಗಳು ಸಬೂಬು ಕೊಡುತ್ತಿದ್ದಾರೆ ಎಂದು ನೊಂದ ಮಾಲೀಕರು ದೂರಿದ್ದಾರೆ.
ಬಿಡಿಎ ಅಧಿಕಾರಿಗಳ ನಡೆಯ ಬಗ್ಗೆ ಅನುಮಾನ ವ್ಯಕ್ತಪಡಿಸಿರುವ ನಿವೇಶನದಾರರು ಈ ಅರ್ಕಾವತಿ ಲೇಔಟ್ ಹೆಸರಲ್ಲೂ ದೊಡ್ಡ ಅಕ್ರಮ ನಡೆದಂತಿದೆ. ಈ ಜಾಗವು ಭೂಗಳ್ಳರ ಪಾಲಾಗುತ್ತಿದ್ದು, ನಿವೇಶನದಾರರಿಗೆ ಮೋಸ ಮಾಡಿದ್ದಾರೆ ಎಂದು ಆರೋಪಿಸಿ ರಾಜ್ಯಪಾಲ ಥಾವರ್‌ಚಂದ್ ಗೆಹಲೋಟ್ ಅವರಿಗೆ ದೂರ ನೀಡಿದ್ದಾರೆ ಎನ್ನಲಾಗಿದೆ.
ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ (ಮುಡಾ) ಬದಲಿ ನಿವೇಶನ ಹಂಚಿಕೆ ಪ್ರಕರಣವು ಸಿಎಂ ಸಿದ್ದರಾಮಯ್ಯ ಅವರಿಗೆ ಈಗಾಗಲೇ ಸುತ್ತಿಕೊಂಡಿದೆ. ಮೊದಲಿಗೆ ಸಣ್ಣ ಕೇಸ್ ಎಂದುಕೊಂಡಿದ್ದ ಮುಡಾ, ಕೊನೆಗೆ ಸಿಎಂ ರಾಜೀನಾಮೆ ಕೂಗು ಎಲ್ಲೆಡೆ ಕೇಳಿಸುವ ಮಟ್ಟಿಗೆ ತಲುಪಿತ್ತು. ಇದೇ ಕೇಸ್‌ನಲ್ಲಿ ಸಿದ್ದರಾಮಯ್ಯ ವಿರುದ್ಧ ಲೋಕಾಯುಕ್ತ ಎಫ್‌ಐಆರ್ ಕೂಡ ದಾಖಲಿಸಿದೆ. ಇದರ ನಡುವೆಯೇ ಸಿದ್ದರಾಮಯ್ಯ ಅವರಿಗೆ ಮತ್ತೊಂದು ದೊಡ್ಡ ಸಂಕಷ್ಟ ಎದುರಾಗುವ ಸಾಧ್ಯತೆ ಇದೆ.












Click it and Unblock the Notifications