ಸಿದ್ದರಾಮಯ್ಯ ಪತ್ನಿ ವಿರುದ್ಧ ಮತ್ತೊಂದು ಕೇಸ್ ದಾಖಲು
ಮೈಸೂರು, ನವೆಂಬರ್ 27: ರಾಜ್ಯ ರಾಜಕೀಯದಲ್ಲಿ ಮುಡಾ ಹಗರಣ ಸಾಕಷ್ಟು ಸದ್ದು ಮಾಡಿದೆ. ಮುಡಾ ಹಗರಣದ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜೀನಾಮೆ ನೀಡಬೇಕು ಎಂದು ವಿಪಕ್ಷಗಳು ಹೋರಾಟವನ್ನ ನಡೆಸಿದ್ದು, ಇದೀಗ ಮುಡಾ ಹಗರಣ ಸಿದ್ದರಾಮಯ್ಯ ಅವರಿಗೆ ಮತ್ತಷ್ಟು ಸಂಕಷ್ಟವನ್ನ ತಂದಿದೆ.
ಹೌದು, ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ಹಗರಣ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮತ್ತಷ್ಟು ಸಂಕಷ್ಟ ತಂದಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿಯವರ ವಿರುದ್ಧ ಸಿವಿಲ್ ಕೇಸ್ ದಾಖಲಾಗಿದೆ. ಜಮೀನು ಮಾಲೀಕ ದೇವರಾಜು ಅವರ ಅಣ್ಣನ ಮಗಳು ನ್ಯಾಯಾಲಯದಲ್ಲಿ ದಾವೆ ಹೂಡಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿ ಸೇರಿದಂತೆ 12 ಜನರ ವಿರುದ್ಧ ಸಿವಿಲ್ ಕೇಸ್ ದಾಖಲಿಸಿದ್ದಾರೆ.

ಜಮೀನು ಮಾಲೀಕ ದೇವರಾಜು ವಿರುದ್ಧ ಅಣ್ಣನ ಮಗಳು ಜಮುನಾ ಮೈಸೂರಿನ ಜೆಎಂಎಫ್ಸಿ ನ್ಯಾಯಾಲಯದಲ್ಲಿ ದಾವೆ ಹೂಡಿದ್ದಾರೆ. ಜಮುನಾ ಅವರು ದೇವಾರಜು ಅವರ ಅಣ್ಣ ಮೈಲಾರಯ್ಯ ಅವರ ಮಗಳಾಗಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪತ್ನಿ ವಿರುದ್ಧ ಕೇಸ್ ದಾಖಲಿಸಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿಯವರ ಹೆಸರಿನಲ್ಲಿರುವ ಜಮೀನು ದೇವರಾಜು ಅವರದ್ದು ಅಲ್ಲ, ಬದಲಿಗೆ ನಮ್ಮ ತಂದೆ ಮೈಲಾರಯ್ಯ ಅವರಿಗೆ ಸೇರಿದ್ದು ಎಂದು ಜಮುನಾ ದಾವೆ ಹೂಡಿದ್ದಾರೆ. ಹೀಗಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪತ್ನಿ ಪಾರ್ವತಿ ಸೇರಿದಂತೆ 12 ಜನರ ಮೇಲೆ ಸಿವಿಲ್ ಕೇಸ್ ದಾಖಲಿಸಿದ್ದಾರೆ.
ಇನ್ನೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ ಅವರ ವಿರುದ್ಧ ಕೇಸ್ ದಾಖಲಿಸಿರುವ ಕುರಿತು ಮಾಧ್ಯಮಗಳ ಜೊತೆ ಜಮುನಾ ಸಹೋದರ ಮಂಜುನಾಥಸ್ವಾಮಿ ಮಾತನಾಡಿ, ನಮ್ಮ ಚಿಕ್ಕಪ್ಪ ದೇವರಾಜು ಮೋಸದಿಂದ ಜಮೀನು ಮಾರಾಟ ಮಾಡಿದ್ದಾರೆ. ಜಮೀನು ಮೊದಲು ನನ್ನ ತಂದೆ ಮೈಲಾರಯ್ಯ ಅವರ ಹೆಸರಿನಲ್ಲಿ ಇತ್ತು. ನಮ್ಮ ಹೆಸರಿಗೆ ಮಾಡಿಸಿಕೊಡುತ್ತೇನೆ ಎಂದು ನಮ್ಮ ಚಿಕ್ಕಪ್ಪ ದೇವರಾಜು ನನ್ನ ಹಾಗೂ ತಾಯಿ ಬಳಿ ಸಹಿ ಪಡೆದುಕೊಂಡರು. ನನ್ನ ರೀತಿ ನನ್ನ ಸಹೋದರಿ ಜಮುನಾಗು ಅನ್ಯಾಯವಾಗಿದೆ ಎಂದು ಮಾಧ್ಯಮಗಳ ಮುಂದೆ ಅಳಲು ತೋಡಿಕೊಂಡಿದ್ದಾರೆ.
ಸಹೋದರಿ ಜಮುನಾ ಪ್ರಕರಣ ದಾಖಲಿಸಲು ನನ್ನ ಸಹಮತ ಇದೆ. ಜಮೀನಿನ ಪರಿಹಾರ ನಮಗೆ ಕೊಡಬೇಕಾಗಿತ್ತು, ನನ್ನ ತಾತ ನಿಂಗ ಅಲಿಯಾಸ್ ಜವರ ಅವರಿಗೆ ಮಲ್ಲಯ್ಯ, ಮೈಲಾರಯ್ಯ ಹಾಗೂ ದೇವರಾಜು ಮೂರು ಜನ ಗಂಡು ಮಕ್ಕಳು. ಕೆಸರೆ ಸರ್ವೇ ನಂ 464ರ 3.16 ಎಕರೆ ಭೂಮಿ ನನ್ನ ತಂದೆ ಮೈಲಾರಯ್ಯ ಪಾಲಿಗೆ ಬಂದಿತ್ತು. ನಮ್ಮ ಹೆಸರಿಗೆ ಮಾಡಿಸಿಕೊಡುತ್ತೇನೆ ಎಂದು ನಮ್ಮ ಚಿಕ್ಕಪ್ಪ ದೇವರಾಜು ನನ್ನ ಹಾಗೂ ತಾಯಿ ಬಳಿ ಸಹಿ ಪಡೆದುಕೊಂಡು, ಮೋಸದಿಂದ ಮಾರಾಟ ಮಾಡಿದ್ದಾರೆ ಎಂದು ತಿಳಿಸಿದರು.
ಇನ್ನೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ ಅವರ ವಿರುದ್ಧ ಜಮುನಾ ಅವರು ದಾವೆ ಹೂಡಿರುವ ಡಿಜಿಟಲ್ ಪ್ರತಿಯನ್ನು ದೂರುದಾರ ಸ್ನೇಹಮಯಿಕೃಷ್ಣ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ. ಈ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಸ್ನೇಹಮಯಿಕೃಷ್ಣ ಆರೋಪ ಮುಂದುವರೆದಿದೆ. ಸದ್ಯ ಮುಡಾ ಹಗರಣದ ತನಿಖೆಯನ್ನು ಲೋಕಾಯುಕ್ತ ಮತ್ತು ಇಡಿ ನಡೆಸುತ್ತಿದೆ. ಇನ್ನೂ ಮುಡಾ ಹಗರಣದಲ್ಲಿ ನನ್ನ ಪಾತ್ರ ಏನು ಇಲ್ಲ ಎಂದಿರುವ ಸಿದ್ದರಾಮಯ್ಯ ಅವರು ಒಂದಲ್ಲ ಒಂದು ರೀತಿಯಲ್ಲಿ ಮುಡಾ ಸಂಕಷ್ಟವನ್ನ ಅನುಭವಿಸುವಂತಾಗಿದೆ.












Click it and Unblock the Notifications