ಉಡುಪಿ ಜಿಲ್ಲಾ ಉಸ್ತುವಾರಿ, ಕ್ರೀಡಾ ಸಚಿವ, ಪ್ರಮೋದ್ ಮಧ್ವರಾಜ್ ಸಂದರ್ಶನ

By: ಬಾಲರಾಜ್ ತಂತ್ರಿ
Subscribe to Oneindia Kannada
ಕೃಷ್ಣಮಠಕ್ಕೆ ಸಿಎಂ ಭೇಟಿ ನೀಡಬಹುದಾ ಉಡುಪಿ ಜಿಲ್ಲಾ ಉಸ್ತುವಾರಿ, ಕ್ರೀಡಾ ಸಚಿವ, ಪ್ರಮೋದ್ ಮಧ್ವರಾಜ್ ಸಂದರ್ಶನ

ಉಡುಪಿ ಜಿಲ್ಲಾ ಉಸ್ತುವಾರಿ, ರಾಜ್ಯ ಮೀನುಗಾರಿಕಾ, ಯುವಜನ, ಕ್ರೀಡಾ ಸಚಿವ ಜೊತೆಗೆ ದೇಶದ ಶ್ರೀಮಂತ ರಾಜಕಾರಣಿಗಳ ಪೈಕಿ ಹತ್ತನೇ ಸ್ಥಾನದಲ್ಲಿರುವ ಪ್ರಮೋದ್ ಮಧ್ವರಾಜ್ ತಮ್ಮ ರಾಜಕೀಯ ಜೀವನದ ಮೊದಲ ಪ್ರಯತ್ನದಲ್ಲೇ ಸೋಲು ಅನುಭವಿಸಿದ್ದರು.

2008ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಟಿಕೆಟಿನಿಂದ (ಉಡುಪಿ ಕ್ಷೇತ್ರ)ಮೊದಲ ಬಾರಿಗೆ ಸ್ಪರ್ಧಿಸಿದ್ದ ಪ್ರಮೋದ್, ಬಿಜೆಪಿಯ ರಘುಪತಿ ಭಟ್ ವಿರುದ್ದ ಸೋಲು ಅನುಭವಿಸಿದ್ದರು. 2013ರ ಚುನಾವಣೆಯಲ್ಲಿ ಮತ್ತೆ ಸ್ಪರ್ಧಿಸಿದ ಪ್ರಮೋದ್, ಬಿಜೆಪಿಯ ಸುಧಾಕರ್ ಶೆಟ್ಟಿಯವರನ್ನು ಭಾರೀ ಅಂತರದಿಂದ ಸೋಲಿಸಿ, ಮೊದಲ ಬಾರಿಗೆ ಅಸೆಂಬ್ಲಿಗೆ ಆಯ್ಕೆಯಾಗಿದ್ದರು.

ಬಿಜೆಪಿಯತ್ತ ಪ್ರಮೋದ್ : ಏನದು ಉಡುಪಿಯಿಂದ ಸದ್ದು

ಮೊದಲ ಬಾರಿಗೆ ಕರ್ನಾಟಕ ಅಸೆಂಬ್ಲಿಗೆ ಆಯ್ಕೆಯಾದರೂ, ಸಿದ್ದರಾಮಯ್ಯನವರ ಸರಕಾರದಲ್ಲಿ ಸಚಿವ ಸ್ಥಾನಗಿಟ್ಟಿಸಿಕೊಳ್ಳುವಲ್ಲಿ ಸಫಲರಾಗಿದ್ದ ಪ್ರಮೋದ್ ಮಧ್ವರಾಜ್ ಅವರ ಈ ಪ್ರಯತ್ನದ ಹಿಂದೆ, ಏನೇನೋ ಸುದ್ದಿಗಳು ಹರಿದಾಡುತ್ತಿದ್ದವು.

ರಾಜ್ಯ ಚುನಾವಣಾ ಈ ವರ್ಷದಲ್ಲಿ ಉಡುಪಿಯ ಐಬಿಯಲ್ಲಿ (IB) ಪ್ರಮೋದ್ ಮಧ್ವರಾಜ್ ಜೊತೆ 'ಒನ್ ಇಂಡಿಯಾ' ನಡೆಸಿದ ಸಂದರ್ಶನದ ಆಯ್ದಭಾಗ ಇಂತಿದೆ. ಸಂದರ್ಶನದಲ್ಲಿ ಬಿಜೆಪಿ ಸೇರುವ ಬಗ್ಗೆ, ಜೊತೆಗೆ ಇತರ ವಿಚಾರಗಳ ಬಗ್ಗೆ ಪ್ರಮೋದ್ ಕಡ್ಡಿತುಂಡಾದ ಹಾಗೆ ಉತ್ತರಿಸಿದ್ದಾರೆ.

1. ಪ್ರ: ಉಡುಪಿ ಜಿಲ್ಲೆಗೆ ಮುಖ್ಯಮಂತ್ರಿಗಳು ಮತ್ತೆ ಬಂದು ಹೋಗಿದ್ದಾರೆ?

ಪ್ರಮೋದ್: ಬೈಂದೂರು, ಬ್ರಹ್ಮಾವರ, ಕಾಪುವಿಗೆ ಆಗಮಿಸಿದ್ದರು. ಸುಮಾರು 1800 ಕೋಟಿ ರೂಪಾಯಿಯ ವಿವಿಧ ಯೋಜನೆಗಳ ಶಂಕುಸ್ಥಾಪನೆ ಮತ್ತು ಉದ್ಘಾಟನೆಯನ್ನು ನಡೆಸಿದ್ದಾರೆ. ಉಡುಪಿ ಜಿಲ್ಲೆಯ ಐದು ಕ್ಷೇತ್ರಗಳ ಚಿತ್ರಣವನ್ನೇ ಮುಖ್ಯಮಂತ್ರಿಗಳು ಬದಲಾಯಿಸಿದ್ದಾರೆ. ಎಲ್ಲಾ ಕೆಲಸ ಆಗಿದೆ ಎಂದು ನಾನು ಹೇಳುವುದಿಲ್ಲ. ಬಾಕಿಯಿರುವ ಎಲ್ಲಾ ಕೆಲಸಗಳಿಗೂ ಮುಖ್ಯಮಂತ್ರಿಗಳ ಸಹಕಾರಕ್ಕೆ ಅವರನ್ನು ಭಿನ್ನವಿಸಿದ್ದೇವೆ. ಮುಂದೆ ಓದಿ..

 ಪ್ರಮೋದ್ ಮಧ್ವರಾಜ್ ಸಂದರ್ಶನ

ಪ್ರಮೋದ್ ಮಧ್ವರಾಜ್ ಸಂದರ್ಶನ

2. ಪ್ರ: ಉಡುಪಿ ಕ್ಷೇತ್ರದ ಯಾವ ಶಾಸಕರೂ ತರದಷ್ಟು ಅನುದಾನವನ್ನು ಪ್ರಮೋದ್ ಮಧ್ವರಾಜ್ ತಂದಿದ್ದಾರೆ. ನಿಮಗೆ ಸಿಎಂ ಸಹಕಾರ ಹೇಗಿದೆ?

ಪ್ರಮೋದ್: ಮುಖ್ಯಮಂತ್ರಿಗಳು, ಸಚಿವರು ಮತ್ತು ಅಧಿಕಾರಿಗಳು ನಮ್ಮ ಬೇಡಿಕೆಗಳಿಗೆ ಸ್ಪಂದಿಸಿದ್ದಾರೆ. ಇದರಿಂದ ನಮಗೆ ಅನುದಾನ ತರಲು ಸಹಕಾರವಾಗಿದೆ, ಜೊತೆಗೆ ಉಡುಪಿಯನ್ನು ಅಭಿವೃದ್ದಿಗೊಳಿಸುವ ನನ್ನ ಕನಸು ಏನಿದೆಯೋ ಅದಕ್ಕೂ ಅನುದಾನ ಸಿಗುವಂತಾಗಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ.

 ಕ್ರೀಡಾ ಇಲಾಖೆಗಿದ್ದ ಬಜೆಟ್ ಅನ್ನು 285 ಕೋಟಿ ರೂಪಾಯಿಗೆ ಏರಿಸಿದ್ದೇವೆ

ಕ್ರೀಡಾ ಇಲಾಖೆಗಿದ್ದ ಬಜೆಟ್ ಅನ್ನು 285 ಕೋಟಿ ರೂಪಾಯಿಗೆ ಏರಿಸಿದ್ದೇವೆ

3. ಪ್ರ: ಕ್ರೀಡಾ ಸಚಿವರಾಗಿ ನೀವು ತೆಗೆದುಕೊಂಡ ಕ್ರಮಗಳ ಬಗ್ಗೆ ಸ್ವಲ್ಪ ವಿವರಿಸುತ್ತೀರಾ?

ಪ್ರಮೋದ್: ವರ್ಷಕ್ಕೆ ಕ್ರೀಡಾ ಇಲಾಖೆಗಿದ್ದ ಬಜೆಟ್ ಅನ್ನು 285 ಕೋಟಿ ರೂಪಾಯಿಗೆ ಏರಿಸಿದ್ದೇವೆ. NSS ಬಲಪಡಿಸಿದ್ದೇವೆ, ಯುವಕರಿಗಾಗಿ ಹೊಸ ಯೋಜನೆ ಜಾರಿಗೆ ತಂದಿದ್ದೇವೆ. ಹೊಸ ಕ್ರೀಡಾಂಗಣದ ಕೆಲಸವನ್ನು ಮುಗಿಸಿದ್ದೇವೆ. ಕ್ರೀಡಾ ಸಚಿವಾಲಯಕ್ಕೆ ಜೀವಕಳೆ ತಂದಿದ್ದೇನೆ ಎನ್ನುವ ತೃಪ್ತಿ ನನಗಿದೆ, ಇದಕ್ಕೆ ಸಿಎಂ ಸಹಕಾರವೂ ಸಾಕಷ್ಟಿದೆ. ಹೊಸ ಕ್ರೀಡಾನೀತಿ ಸಂಬಂಧ ಕರಡುನೀತಿ ಸಿದ್ದವಾಗಿದೆ, ಸಂಬಂಧಪಟ್ಟ ಇಲಾಖೆಗೆ ಅದನ್ನು ಕಳುಹಿಸಿಕೊಡಲಾಗಿದೆ. ಮುಂದಿನ ಸಂಪುಟಸಭೆಯಲ್ಲಿ ಅದನ್ನು ಮಂಡಿಸಲಿದ್ದೇವೆ.

 ಪ್ರಮೋದ್ ಸ್ವಜನಪಕ್ಷ ಮಾಡುತ್ತಿದ್ದಾರೆ ಎನ್ನುವ ಆರೋಪ

ಪ್ರಮೋದ್ ಸ್ವಜನಪಕ್ಷ ಮಾಡುತ್ತಿದ್ದಾರೆ ಎನ್ನುವ ಆರೋಪ

4. ಪ್ರ: ಉಡುಪಿ ನಗರ ಮತ್ತು ಗ್ರಾಮೀಣ ಭಾಗಕ್ಕೆ ನರ್ಮ್ ಬಸ್‌ ಸಂಚಾರ ಆರಂಭವಾಗಿದೆಯಾ? ಖಾಸಗಿ ಬಸ್ ಮಾಲೀಕರಿಂದ ಒತ್ತಡವಿತ್ತೇ?

ಪ್ರಮೋದ್: ಬಸ್ ಸಂಚಾರ ಆರಂಭವಾಗಿದೆ. ಖಾಸಗಿ ಬಸ್ ಮಾಲೀಕರು ಹೈಕೋರ್ಟಿನಲ್ಲಿ ದಾವೆ ಹೂಡಿದ್ದರು. ಅದನ್ನು ನ್ಯಾಯಾಲಯದಲ್ಲಿ ಸಮರ್ಥವಾಗಿ ಎದುರಿಸಿದ್ದೇವೆ. ಇನ್ನೂ ಹೆಚ್ಚಿನ ಬಸ್ಸುಗಳು ಬೇಕೆಂದು ಬೇಡಿಕೆ ಸಲ್ಲಿಸಿದ್ದೇವೆ. ನ್ಯಾಯಾಲಯದ ಆದೇಶಕ್ಕೆ ಚ್ಯುತಿ ಬರದಂತೆ ಈ ವಿಷಯವನ್ನು ನಿಭಾಯಿಸಿದ್ದೇವೆ.

5. ಪ್ರ: ಪ್ರಮೋದ್ ಸ್ವಜನಪಕ್ಷ ಮಾಡುತ್ತಿದ್ದಾರೆ ಎನ್ನುವ ಆರೋಪ ಇದೆಯಲ್ಲವೇ?

ಪ್ರಮೋದ್: ಜನರು ನನ್ನನ್ನು ಒಂದು ಪಕ್ಷದ ವ್ಯಕ್ತಿಯೆಂದು ಆರಿಸಿದ್ದಾರೆ. ನಮ್ಮ ಅಧಿಕಾರದ ಅವಧಿಯಲ್ಲಿ ಏನೇನು ಮಾಡಿದ್ದೇವೆ, ನಮ್ಮ ಸಾಧನೆ ಏನು ಎನ್ನುವುದನ್ನು ಜನರಿಗೆ ತಿಳಿಸುವಂತದ್ದು ನಮ್ಮ ಕರ್ತವ್ಯ. ಅದನ್ನೇ ಸ್ವಜನ ಪಕ್ಷಪಾತ ಎಂದು ವಿರೋಧ ಪಕ್ಷದವರು ಕರೆದರೆ ಅದಕ್ಕೆ ನನ್ನ ಅಭ್ಯಂತರವಿಲ್ಲ.

 ಕೃಷ್ಣಮಠಕ್ಕೆ ಸಿಎಂ ಭೇಟಿ ನೀಡಬಹುದಾ

ಕೃಷ್ಣಮಠಕ್ಕೆ ಸಿಎಂ ಭೇಟಿ ನೀಡಬಹುದಾ

6.ಪ್ರ: ಪೇಜಾವರ ಶ್ರೀಗಳ ಪರ್ಯಾಯ ಅವಧಿ ಇನ್ನೇನು ಕೆಲವೇ ದಿನಗಳಲ್ಲಿ ಮುಗಿಯಲಿದೆ. ಕೃಷ್ಣಮಠಕ್ಕೆ ಸಿಎಂ ಭೇಟಿ ನೀಡಬಹುದಾ?

ಪ್ರಮೋದ್: ಮುಖ್ಯಮಂತ್ರಿಗಳು ಕೃಷ್ಣಮಠಕ್ಕೆ ಹೋಗಬೇಕೋ, ಬೇಡವೋ ಅದು ಅವರ ವಿವೇಚನೆಗೆ ಬಿಟ್ಟ ವಿಚಾರವೇ ಹೊರತು ಅದನ್ನು ಜನರು ತೀರ್ಮಾನ ಮಾಡುವುದಲ್ಲ. ನಾನು ಕೊಲ್ಲೂರು ಮೂಕಾಂಬಿಕೆಗೆ ಹೋಗುತ್ತೇನೆ, ಉಚ್ಚಿಲ ಮಹಾಲಕ್ಷ್ಮಿ ದೇವಸ್ಥಾನಕ್ಕೆ ಹೋಗುತ್ತೇನೆ. ಇದು ನನ್ನ ಮತ್ತು ದೇವರ ನಡುವಿನ ಸಂಬಂಧ. ಪ್ರಧಾನಮಂತ್ರಿಗಳು ಧರ್ಮಸ್ಥಳಕ್ಕೆ ಹೋಗಿದ್ದರು, ಕುಕ್ಕೇ ಸುಬ್ರಮಣ್ಯ ದೇವಾಲಯ, ಕುದ್ರೋಳಿ ದೇವಸ್ಥಾನಕ್ಕೆ ಯಾಕೆ ಹೋಗಲಿಲ್ಲ ಎಂದು ಕೇಳಿದ್ದೀರಾ ಎನ್ನುವ ಪ್ರಶ್ನೆಯೂ ಬರುತ್ತದೆ. ಮುಖ್ಯಮಂತ್ರಿಗಳು ಕೃಷ್ಣ ಮಠಕ್ಕೆ ಹೋಗಲಿಲ್ಲ ಎನ್ನುವುದನ್ನು ವಿರೋಧ ಪಕ್ಷದವರು ಸುಮ್ಮನೆ ಸುದ್ದಿ ಮಾಡುತ್ತಿದ್ದಾರೆ.

7. ಪ್ರ: ಟಿಪ್ಪು ಜಯಂತಿ ಕಾರ್ಯಕ್ರಮದಲ್ಲಿ ನೀವು ಭಾಗವಹಿಸದೇ ಇದ್ದದ್ದು ಭಾರೀ ಸುದ್ದಿಯಾಗಿತ್ತು?

ಪ್ರಮೋದ್: ನನಗೆ ಪೂರ್ವನಿಗದಿತ ಕಾರ್ಯಕ್ರಮವಿತ್ತು, ಬೇರೆ ಕಾರ್ಯಕ್ರಮ ಮುಗಿಸಿ ನಾನು ಬರುವಷ್ಟರಲ್ಲಿ ಟಿಪ್ಪು ಜಯಂತಿ ಕಾರ್ಯಕ್ರಮ ಮುಗಿದಿತ್ತು. ಹಾಗಾಗಿ ನನಗೆ ಭಾಗವಹಿಸಲು ಸಾಧ್ಯವಾಗಲಿಲ್ಲ.

 ನೀವು ಕಾಂಗ್ರೆಸ್ ಬಿಡ್ತೀರಾಂತ ಯಾಕೆ ಹೇಳಿಕೆ ನೀಡುತ್ತಾ ಇದ್ದಾರೆ

ನೀವು ಕಾಂಗ್ರೆಸ್ ಬಿಡ್ತೀರಾಂತ ಯಾಕೆ ಹೇಳಿಕೆ ನೀಡುತ್ತಾ ಇದ್ದಾರೆ

8.ಪ್ರ: ಚುನಾವಣಾ ವರ್ಷದಲ್ಲಿ ಹೇಗಿದೆ ಉಡುಪಿ ರಾಜಕೀಯ?

ಪ್ರಮೋದ್ : ಕಳೆದ ಬಾರಿ ಜಿಲ್ಲೆಯ 5 ಕ್ಷೇತ್ರಗಳಲ್ಲಿ 3ರಲ್ಲಿ ಕಾಂಗ್ರೆಸ್ ಗೆದ್ದಿತ್ತು, ಉಡುಪಿಯಲ್ಲಿ ಜನರ ಆಶೀರ್ವಾದದಿಂದ ಗೆಲ್ಲುವ ವಿಶ್ವಾಸದಲ್ಲಿದ್ದೇವೆ. ಈ ಬಾರಿ ಹೆಚ್ಚು ಶ್ರಮವಹಿಸಿ ಕೆಲಸ ಮಾಡಿದರೆ, ಐದಕ್ಕೆ ಐದೂ ಗೆಲ್ಲಬಹುದು.

9.ಪ್ರ: ಬಿಜೆಪಿಯವರು ನೀವು ಕಾಂಗ್ರೆಸ್ ಬಿಡ್ತೀರಾಂತ ಯಾಕೆ ಹೇಳಿಕೆ ನೀಡುತ್ತಾ ಇದ್ದಾರೆ?

ಪ್ರಮೋದ್: ನೀವು ಇದನ್ನು ಬಿಜೆಪಿಯವರಿಗೇ ಕೇಳಿ..

 ದಕ್ಷಿಣಕನ್ನಡದಲ್ಲಿ ನಡೆಯುತ್ತಿರುವ ಕೋಮು ಅಶಾಂತಿ

ದಕ್ಷಿಣಕನ್ನಡದಲ್ಲಿ ನಡೆಯುತ್ತಿರುವ ಕೋಮು ಅಶಾಂತಿ

10. ಪ್ರ: ದಕ್ಷಿಣಕನ್ನಡದಲ್ಲಿ ನಡೆಯುತ್ತಿರುವ ಕೋಮು ಅಶಾಂತಿಯ ಬಗ್ಗೆ?

ಪ್ರಮೋದ್: ಕರಾವಳಿ ಜಿಲ್ಲೆ ಬುದ್ದಿವಂತರ ಜಿಲ್ಲೆ. ಒಬ್ಬರನ್ನು ಸಾಯಿಸುವುದು ಸಭ್ಯ ಸಮಾಜದ ಗುಣಲಕ್ಷಣವಲ್ಲ. ಬುದ್ದಿವಂತರ ಜಿಲ್ಲೆಯಲ್ಲಿ ಇಂತದ್ದು ನಡೆಯುತ್ತಿರುವುದು ಖೇದಕರ. ಜಿಲ್ಲೆಯಲ್ಲಿ ಅಶಾಂತಿಯಿದ್ದರೆ, ಪ್ರಗತಿ ಕುಂಠಿತವಾಗುತ್ತದೆ. ಭವಿಷ್ಯದ ದೃಷ್ಟಿಯಲ್ಲಿ ಯಾವುದೇ ಕೆಟ್ಟಕೆಲಸವನ್ನು ಯಾರೂ ಮಾಡಬಾರದು. ಎಲ್ಲರೂ ಒಟ್ಟಾಗಿ ಬದುಕಬೇಕು ಎನ್ನುವುದು ನನ್ನ ಮನವಿ.

 ಭ್ರಷ್ಟಾಚಾರರಹಿತವಾಗಿ ಸಿದ್ದರಾಮಯ್ಯ ಸರಕಾರ ಕೆಲಸ

ಭ್ರಷ್ಟಾಚಾರರಹಿತವಾಗಿ ಸಿದ್ದರಾಮಯ್ಯ ಸರಕಾರ ಕೆಲಸ

11. ಪ್ರ: ಜನರ ನಿರೀಕ್ಷೆಗೆ ತಕ್ಕಂತೆ ಪ್ರಾಮಾಣಿಕವಾಗಿ, ಭ್ರಷ್ಟಾಚಾರರಹಿತವಾಗಿ ಸಿದ್ದರಾಮಯ್ಯ ಸರಕಾರ ಕೆಲಸ ಮಾಡುತ್ತಿದೆಯಾ?

ಪ್ರಮೋದ್: ಒಂದು ಸರಕಾರ ಏನೇನು ಕೆಲಸ ಮಾಡಲು ಸಾಧ್ಯವಿದೆಯೋ ಅದನ್ನೆಲ್ಲಾ ನಾವು ಮಾಡಿದ್ದೇವೆ. ಕಟ್ಟಕಡೆಯ ಬಡವನಿಗೆ, ಗ್ರಾಮಕ್ಕೆ ಸಹಾಯವಾಗುವ ರೀತಿಯಲ್ಲಿ ನಾವು ಕೆಲಸ ಮಾಡಿದ್ದೇವೆ. ಪ್ರತಿಯೊಂದು ಇಲಾಖೆಯ ಸರ್ವಾಂಗೀಣ ಅಭಿವೃದ್ದಿಯತ್ತ ನಮ್ಮ ಸರಕಾರ ಕೆಲಸ ಮಾಡಿದೆ.

12. ಪ್ರ: ಉಡುಪಿಯಲ್ಲಿ ಬಿಜೆಪಿಯಿಂದ ಯಾರು ಸ್ಪರ್ಧಿಸಬಹುದು?

ಪ್ರಮೋದ್: ನನಗೆ ಗೊತ್ತಿಲ್ಲ, ನಾಲ್ಕೈದು ಜನರ ಹೆಸರು ಕೇಳಿ ಬರುತ್ತಿದೆ. ಅಮಿತ್ ಶಾ ಏನು ಹೇಳಿದ್ದಾರೆಂದರೆ, ಯಾರೂ ಟಿಕೆಟ್ ಬಗ್ಗೆ ಆಶ್ವಾಸನೆ ಕೊಡಬೇಡಿ ಎಂದು ಸೂಚನೆ ನೀಡಿದ್ದಾರೆ ಎನ್ನುವ ಮಾತಿದೆ. ಹಾಗಾಗಿ, ಎಲ್ಲಾ ಸ್ಪರ್ಧಾಳುಗಳು ಗೊಂದಲದಲ್ಲಿ ಇರುವಂತೆ ಕಾಣಿಸುತ್ತದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
An exclusive interview with Udupi district in-charge and Karnataka Youth Services, Fisheries and Sports Minister Pramod Madhwaraj. Pramod is a first-term member of the Karnataka Legislative Assembly and in June 2016 Madhvaraj was inducted into the Siddaramaiah led government.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ