ಸೋರುತಿಹುದು ಅಮೃತಾಪುರದ ಅಮೃತೇಶ್ವರ ದೇವಾಲಯ
ಚಿಕ್ಕಮಗಳೂರು, ಆಗಸ್ಟ್.23: ಬೇಲೂರು, ಹಳೆಬೀಡನ್ನು ಹೊರತುಪಡಿಸಿದರೆ ತನ್ನದೇ ಆದ ಶಿಲ್ಪಕಲೆಗಳ ಮೂಲಕ ರಾಷ್ಟ್ರೀಯ ಸಂಪತ್ತು ಎಂದು ಘೋಷಣೆಯಾಗಿರುವುದು ಚಿಕ್ಕಮಗಳೂರು ಜಿಲ್ಲೆಯ ಅಮೃತೇಶ್ವರ ದೇವಸ್ಥಾನ.
ಆದರೆ ಇಂತಹ ಅದ್ಭುತ ದೇವಾಲಯವೀಗ ಮಹಾಮಳೆಗೆ ಸಿಲುಕಿ ಅಕ್ಷರಶಃ ನಲುಗಿದೆ. ಒಂದೆಡೆ ಅದ್ಭುತ ಶಿಲ್ಪಕಲೆಗಳ ಸಂಪತ್ತನ್ನು ತನ್ನೊಡಲೊಳಗೆ ಒತ್ತು ನಿಂತ ಸುಂದರ ದೇವಾಲಯ. ಮತ್ತೊಂದೆಡೆ ಅಲ್ಲಲ್ಲಿ ಸೋರುತ್ತಿರುವ ದೇವಾಲಯದ ಮಾಳಿಗೆ.
ಇನ್ನೊಂದೆಡೆ ಸುಂದರ ಶಿಲ್ಪಕಲೆಗಳು ಕಳಚಿ ಬಿದ್ದಿರುವ ದೃಶ್ಯ, ಬಿರುಕು ಬಿಟ್ಟ ಕಲಾಕೃತಿಗಳು. ಹೌದು ತರೀಕೆರೆ ತಾಲೂಕಿನ ಅಮೃತಾಪುರದ ಅಮೃತೇಶ್ವರ ದೇವಾಲಯದಲ್ಲಿ ಅಲ್ಲಲ್ಲಿ ಸೋರಿಕೆ ಕಂಡುಬರುತ್ತಿದ್ದು, ದೇವಾಲಯದ ಒಳಗಿನ ಸುಂದರ ಕಲಾಕೃತಿಗಳು ನಶಿಸುತ್ತಿವೆ.

ದೇವಾಲಯದ ಒಳಗೆ ಅಲ್ಲಲ್ಲಿ ನೀರು ನಿಂತಿದ್ದು, ಶಿಲ್ಪಕಲೆಗಳು ತನ್ನ ನೈಜತೆಯನ್ನು ಕಳೆದುಕೊಳ್ಳುತ್ತಿವೆ. ಇನ್ನು ದೇವಾಲಯದ ಹೊರಗಿನ ಸುಂದರ ಕೆತ್ತನೆಗಳು ಬಿರುಕು ಬಿಟ್ಟಿವೆ. ಇನ್ನು ಕೆಲವೆಡೆ ಸುಮಧುರ ಕೆತ್ತನೆಗಳು ಕಳಚಿ ಬಿದ್ದಿದೆ.
ಈ ದೇವಾಲಯದ ವಿಶೇಷವೆಂದರೆ ಕಟಾಂಜನದ ಹಲಗೆಗಳ ಮೇಲೆ ರಾಮಾಯಣ ಮತ್ತು ಮಹಾಭಾರತ ಕಥಾ ಪ್ರಸಂಗಗಳನ್ನು ಕೆತ್ತನೆ ಮಾಡಲಾಗಿದೆ. ಒಂದು ಕಡೆಯಿಂದ ನೋಡುತ್ತಾ ಸಾಗಿದಾಗ ರಾಮಾಯಣ. ತಿರುಗಿ ಇನ್ನೊಂದು ಕಡೆಯಿಂದ ಸಾಗಿದಾಗ ಮಹಾಭಾರತ ನಮ್ಮ ಕಣ್ಮುಂದೆ ಬಂದು ನಿಲ್ಲುತ್ತದೆ.

ಮತ್ತೊಂದು ಕಡೆ ಶ್ರೀಕೃಷ್ಣನ ಜನನ, ಆತನ ಬೆಣ್ಣೆ ಕದಿಯುವುದು, ನಂದಗೋಕುಲದಲ್ಲಿ ಆತನ ತುಂಟಾಟ, ಕಾಳಿಂಗ ಮರ್ದನ ಇತ್ಯಾದಿ ಶ್ರೀಕೃಷ್ಣನ ಲೀಲೆಗಳು ಮನಸೂರೆಗೊಳ್ಳುಸುತ್ತವೆ. ಆದರೆ ಈಗ ಈ ಎಲ್ಲಾ ಕಲಾಕೃತಿಗಳು ಪ್ರಕೃತಿಯ ವೈಪರೀತ್ಯಕ್ಕೆ ಸಿಲುಕಿ ಹಾಳಾಗಿವೆ.

ಇನ್ನು ದೇವಾಲಯದಲ್ಲಿ ಮೂಲಭೂತ ಸೌಲಭ್ಯಗಳು ಇಲ್ಲದೇ ಇರುವುದು ಪ್ರವಾಸಿಗರಲ್ಲಿ ನಿರಾಸೆ ಮೂಡಿಸಿದೆ. ಒಟ್ಟಾರೆ ರಾಷ್ಟ್ರದ ಅಮೂಲ್ಯ ಸಂಪತ್ತೊಂದು ನಶಿಸುವ ಹಂತಕ್ಕೆ ತಲುಪುತ್ತಿದೆ.
ಇನ್ನಾದರೂ ಸಂಬಂಧಪಟ್ಟ ಇಲಾಖೆ ಇತ್ತ ಗಮನಹರಿಸಿ, ಮುಂದಿನ ಪೀಳಿಗೆಗೆ ಈ ಕಲಾ ಸಂಪತ್ತನ್ನು ಉಳಿಸಬೇಕಿದೆ.












Click it and Unblock the Notifications