Amit Shah Bengaluru Visit : ಅಮಿತ್ ಶಾ ಭೇಟಿ: ಬೆಂಗಳೂರಿಗರೇ ನಾಳೆ ಹಲವು ರಸ್ತೆಗಳಲ್ಲಿ ಸಂಚಾರ ನಿರ್ಬಂಧ, ಒಮ್ಮೆ ಗಮನಿಸಿ
ಬೆಂಗಳೂರು ಸಂಚಾರ ಪೊಲೀಸರು ಗುರುವಾರದಿಂದ ಶುಕ್ರವಾರ ಮಧ್ಯಾಹ್ನದವರೆಗೆ ಸಂಚಾರ ನಿರ್ಬಂಧಗಳನ್ನು ಘೋಷಿಸಿದ್ದಾರೆ
ಬೆಂಗಳೂರು, ಫೆಬ್ರವರಿ. 22: ರಾಜ್ಯ ವಿಧಾನಸಭಾ ಚುನಾವಣೆಗೆ ಮುನ್ನ ಕೇಂದ್ರ ಗೃಹ ಸಚಿವ ಅಮಿತ್ ಶಾ ಗುರುವಾರ (ಫೆಬ್ರವರಿ 23) ರಂದು ಮತ್ತೆ ಬೆಂಗಳೂರಿಗೆ ಭೇಟಿ ನೀಡಲಿದ್ದಾರೆ. ಅವರ ಭೇಟಿಯ ಹಿನ್ನೆಲೆಯಲ್ಲಿ ಬೆಂಗಳೂರು ಸಂಚಾರ ಪೊಲೀಸರು ಬೆಂಗಳೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸಂಚಾರ ನಿರ್ಬಂಧಗಳನ್ನು ವಿಧಿಸಿದ್ದಾರೆ.
ವರದಿಗಳ ಪ್ರಕಾರ, ಅಮಿತ್ ಶಾ ಅವರು ಬಳ್ಳಾರಿಯ ಸಂಡೂರಿಗೆ ಭೇಟಿ ನೀಡಿದ ನಂತರ ಗುರುವಾರ ಬೆಂಗಳೂರಿಗೆ ತಲುಪಲಿದ್ದಾರೆ. ರೇಸ್ ಕೋರ್ಸ್ ರಸ್ತೆ ಬಳಿಯ ತಾಜ್ ವೆಸ್ಟ್ ಎಂಡ್ ಹೋಟೆಲ್‌ನಲ್ಲಿ ರಾಜ್ಯ ಬಿಜೆಪಿ ನಾಯಕರೊಂದಿಗೆ ಸಭೆ ನಡೆಸಲಿದ್ದಾರೆ.

ಸಂಚಾರ ದಟ್ಟಣೆಯಾಗುವ ಹಿನ್ನೆಲೆ, ನಗರ ಸಂಚಾರ ಪೊಲೀಸರು ಗುರುವಾರದಿಂದ ಶುಕ್ರವಾರ ಮಧ್ಯಾಹ್ನದವರೆಗೆ ಸಂಚಾರ ನಿರ್ಬಂಧಗಳನ್ನು ಘೋಷಿಸಿದ್ದಾರೆ. ಈ ಕೆಳಗಿನ ರಸ್ತೆಗಳ ಎರಡೂ ಬದಿಗಳಲ್ಲಿ ವಾಹನ ನಿಲುಗಡೆಯನ್ನು ನಿಷೇಧಿಸಲಾಗಿದೆ ಎಂದು ಪೊಲೀಸರು ಸಂಚಾರ ಸಲಹೆಯಲ್ಲಿ ತಿಳಿಸಿದ್ದಾರೆ.
ಬಳ್ಳಾರಿ ರಸ್ತೆ, ಮೇಖ್ರಿ ವೃತ್ತ, ಕಾವೇರಿ ಥಿಯೇಟರ್ ಜಂಕ್ಷನ್, ರೇಸ್ ಕೋರ್ಸ್ ರಸ್ತೆ, ತಾಜ್ ವೆಸ್ಟ್ ಎಂಡ್, ಟೌನ್ ಹಾಲ್, ಲಾಲ್ ಬಾಗ್ ರಸ್ತೆ, ಮಿನರ್ವ ರಸ್ತೆ, ಜೆಸಿ ರಸ್ತೆ, ಎನ್ ಆರ್ ಚೌಕ್, ಮೈಸೂರು ಬ್ಯಾಂಕ್ ವೃತ್ತ, ಅರಮನೆ ರಸ್ತೆ, ಸಿಐಡಿ ಜಂಕ್ಷನ್, ಬಸವೇಶ್ವರ ಜಂಕ್ಷನ್, ಅಲಿ ಆಸ್ಕರ್ ರಸ್ತೆ, ಇನ್‌ಫೆಂಟ್ರಿ ರಸ್ತೆ, ಕಾಫಿ ಬೋರ್ಡ್ ಜಂಕ್ಷನ್ (ಬಿಆರ್ ರಸ್ತೆ), ಮಣಿಪಾಲ್ ಜಂಕ್ಷನ್, ಎಂಜಿ ರಸ್ತೆ, ಟ್ರಿನಿಟಿ ಸರ್ಕಲ್, ಕಮಾಂಡ್ ಆಸ್ಪತ್ರೆ, ದೊಮ್ಮಲೂರು ವಾಟರ್ ಟ್ಯಾಂಕ್, ಇಂದಿರಾನಗರ 100 ಅಡಿ ರಸ್ತೆ, ಇಸ್ರೋ ಜಂಕ್ಷನ್, ಎಚ್‌ಎಎಲ್ ಮತ್ತು ಏರ್‌ಪೋರ್ಟ್ ರಸ್ತೆಗಳಲ್ಲಿ ವಾಹನ ನಿಲುಗಡೆಯನ್ನು ನಿಷೇಧಿಸಲಾಗಿದೆ.
ವಾಹನ ಸವಾರರು ಮತ್ತು ಪ್ರಯಾಣಿಕರು ಈ ರಸ್ತೆಗಳ ಬದಲಿಗೆ ಪರ್ಯಾಯ ಮಾರ್ಗಗಳನ್ನು ಬಳಸಬೇಕೆಂದು ಪೊಲೀಸರು ಮನವಿ ಮಾಡಿದ್ದಾರೆ.

ಸಂಜೆ ಬೆಂಗಳೂರಿನ ಟೌನ್ ಹಾಲ್‌ನಲ್ಲಿ "ಭಾರತದ ರಾಜಕೀಯ ಮತ್ತು ನರೇಂದ್ರ ಮೋದಿಯವರ ಮಾದರಿ ಸುಧಾರಣೆಗಳು" ಕುರಿತು ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
ಇನ್ನು, ಪ್ರಧಾನಿ ನರೇಂದ್ರ ಮೋದಿ ಭೇಟಿ ನೀಡುತ್ತಿರುವ ಬೆನ್ನಲ್ಲೇ ಕೇಂದ್ರ ಗೃಹ ಸಚಿವ ಅಮಿತ್ ಶಾ ಗುರುವಾರ ರಾಜ್ಯಕ್ಕೆ ಮತ್ತೊಂದು ಸುತ್ತಿನ ಭೇಟಿ ನೀಡುತ್ತಿದ್ದಾರೆ ಗುರುವಾರ ಮಧ್ಯಾಹ್ನ ಬಳ್ಳಾರಿ ಜಿಲ್ಲೆಯ ಸಂಡೂರಿನಲ್ಲಿ ಬಿಜೆಪಿ ಆಯೋಜಿಸಿರುವ ಸಾರ್ವಜನಿಕ ಸಭೆಯಲ್ಲಿ ಅಮಿತ್ ಶಾ ಭಾಗವಹಿಸಲಿದ್ದಾರೆ.
ರಾಜ್ಯಕ್ಕೆ ಎರಡು ತಿಂಗಳೊಳಗೆ ಅಮಿತ್ ಶಾ ಅವರ ನಾಲ್ಕನೇ ಭೇಟಿ ಇದಾಗಿದೆ. ಅವರು ಡಿಸೆಂಬರ್ 2022 ರ ಅಂತ್ಯದಲ್ಲಿ ಬೆಂಗಳೂರು ನಗರ, ಮಂಡ್ಯ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದರು. ನಂತರ, ಜನವರಿ ಅಂತ್ಯದಲ್ಲಿ ಗಡಿ ಜಿಲ್ಲೆ ಬೆಳಗಾವಿಗೆ ಭೇಟಿ ನೀಡಿದರು. ಇದರ ನಂತರ ಫೆಬ್ರವರಿ 11 ರಂದು ದಕ್ಷಿಣ ಕನ್ನಡಕ್ಕೆ ಭೇಟಿ ನೀಡಿದ ಅವರು ಕರಾವಳಿ ಮತ್ತು ಮಲೆನಾಡು ಪ್ರದೇಶಗಳಲ್ಲಿ ಪಕ್ಷದ ಸಂಘಟನೆ ಮತ್ತು ಅದರ ಚುನಾವಣಾ ಸಿದ್ಧತೆಗಳ ಮೇಲೆ ಗಮನ ಹರಿಸಿದ್ದರು.
ಕರ್ನಾಟಕದ ನಂತರ ಅಮಿತ್ ಶಾ ಮಧ್ಯಪ್ರದೇಶದ ಸತ್ನಾ ಮತ್ತು ಬಿಹಾರದ ಪಾಟ್ನಾಗೆ ಭೇಟಿ ನೀಡಲಿದ್ದಾರೆ. ಫೆಬ್ರವರಿ 23 ರಿಂದ 25 ರವರೆಗೆ ಮೂರು ರಾಜಕೀಯವಾಗಿ ನಿರ್ಣಾಯಕ ರಾಜ್ಯಗಳಿಗೆ ಅಮಿತ್ ಶಾ ಅವರ ಭೇಟಿ ನೀಡಲಿದ್ದಾರೆ. ರಾಜ್ಯದಲ್ಲಿ ಮೇ ತಿಂಗಳಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದ್ದು, ಈ ವರ್ಷದ ಕೊನೆಯಲ್ಲಿ ಮಧ್ಯಪ್ರದೇಶದಲ್ಲಿ ಚುನಾವಣೆ ನಡೆಯಲಿದೆ.












Click it and Unblock the Notifications