ಅಮಿತ್ ಶಾ ನಮ್ಮ ಮನೆಯಲ್ಲಿ ಕುಳಿತುಕೊಂಡು ಜೀವ ತೆಗೆದ್ರು: 2 ಗಂಟೆಗಳ ಕಾಲ ನಡೆದ ಸತ್ಯ ಬಿಚ್ಚಿಟ್ಟ ವಿ ಸೋಮಣ್ಣ
ತುಮಕೂರು, ನವೆಂಬರ್ 25: 2025 ವಿಧಾನಸಭೆ ಚುನಾವಣೆಯಲ್ಲಿ ಹೀನಾಯವಾಗಿ ಸೋಲು ಕಂಡ ಮಾಜಿ ಸಚಿವ ವಿ ಸೋಮಣ್ಣ ಅವರು, ಬಿಜೆಪಿ ಹೈಕಮಾಂಡ್ ಹಾಗೂ ರಾಜ್ಯ ಬಿಜೆಪಿ ನಾಯಕರ ವಿರುದ್ಧ ಬಹಿರಂಗವಾಗಿ ಅಸಮಾಧಾನ ಹೊರ ಹಾಕಿರುವ ವಿ ಸೋಮಣ್ಣ ಅವರು ಸೋಲಿನ ಬೇಸರವನ್ನು ತುಮಕೂರು ಸಿದ್ಧಗಂಗಾ ಮಠದ ಸಿದ್ದಲಿಂಗ ಸ್ವಾಮೀಜಿ ಬಳಿ ಹಂಚಿಕೊಂಡಿದ್ದಾರೆ.
ನನ್ನ ಕ್ಷೇತ್ರವನ್ನ ಬಿಟ್ಟು ಅಲ್ಲಿ ಹೋಗಿ ಸ್ಪರ್ಧೆ ಮಾಡಿದ್ದೇ ನಾನು ಮಾಡಿದ ಮಹಾ ಅಪರಾಧವಾಯ್ತು. ಕೇಂದ್ರ ಗೃಹ ಸಚಿವ ಅಮಿತ್ ಶಾ ನಮ್ಮ ಮನೆಯಲ್ಲಿ ಕುಳಿತುಕೊಂಡು ಜೀವ ತೆಗೆದರು. ಎರಡು ಗಂಟೆ ಮನೆಯಲ್ಲಿ ಕುಳಿತುಕೊಂಡಿದ್ದರು, ಆಗಲ್ಲ ಅಂತಾ ಹೇಳಿದ್ದೆ.

ಪ್ರಧಾನಿ ಮೋದಿಯವರು ದೆಹಲಿಗೆ ಕರೆಸಿ ನೀನು ಸ್ಪರ್ಧೆ ಮಾಡು ಅಂದರು, ಏನ್ಮಾಡಲಿ ಎಂದು ತುಮಕೂರು ಸಿದ್ಧಗಂಗಾ ಮಠದ ಸಿದ್ದಲಿಂಗ ಸ್ವಾಮೀಜಿ ಬಳಿ ಬೇಸರ ವ್ಯಕ್ತಪಡಿಸುವ ಮೂಲಕ ಎರಡು ಕ್ಷೇತ್ರದಲ್ಲಿ ಸ್ಪರ್ಧಿಸಲು ಕಾರಣವನ್ನ ವಿ ಸೋಮಣ್ಣ ಬಹಿರಂಗಪಡಿಸಿದ್ದಾರೆ.
ಪ್ರಧಾನಿಯವರು ನನಗೆ ಕರೆ ಮಾಡಿ ಸ್ಪರ್ಧಿಸುವಂತೆ ಹೇಳಿದರು. ಡಿಸೆಂಬರ್ 7, 8, 9, 10ರೊಳಗೆ ದೆಹಲಿಗೆ ಹೋಗಿ ನಮ್ಮ ಭಾವನೆ ವ್ಯಕ್ತಪಡಿಸುತ್ತೇವೆ. ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಅರವಿಂದ ಲಿಂಬಾವಳಿ, ಶಾಸಕ ಅರವಿಂದ ಬೆಲ್ಲದ್, ಶಾಸಕ ರಮೇಶ್ ಜಾರಕಿಹೊಳಿ ಸೇರಿದಂತೆ ಹಲವು ನಾಯಕರು ಹೈಕಮಾಂಡ್ ಬಳಿ ನಮ್ಮ ನೋವು ಹೇಳುತ್ತೇವೆ. ಅದನ್ನೆಲ್ಲ ಹೈಕಮಾಂಡ್ ನಾಯಕರ ಮುಂದೆ ಹೇಳುತ್ತೇವೆ ಎಂದು ವಿ ಸೋಮಣ್ಣ ಹೇಳಿದರು.
ಇನ್ನೂ ವಿ ಸೋಮಣ್ಣ ಹೇಳಿಕೆ ಕುರಿತು ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಮಾತನಾಡಿ, ಸೋಮಣ್ಣ ಅವರನ್ನು ಸಂಪರ್ಕಿಸಲು ಪ್ರಯತ್ನಿಸುತ್ತಿರುವುದಾಗಿ ಹೇಳಿದ್ದಾರೆ. ನಾನು ವಿಡಿಯೋ ನೋಡಿದೆ. ನಾನು ಅವನಿಗೆ ಕರೆ ಮಾಡಲು ಪ್ರಯತ್ನಿಸಿದೆ, ಆದರೆ ಅವನು ಫೋನ್ ಅನ್ನು ತೆಗೆದುಕೊಳ್ಳಲಿಲ್ಲ. ಅವರನ್ನು ಪಕ್ಷದಲ್ಲಿ ಉಳಿಸಿಕೊಳ್ಳಲು ಪ್ರಯತ್ನಿಸುತ್ತಿದ್ದೇವೆ. ಅವರು ಉಳಿಯಲು ಬಯಸದಿದ್ದರೆ ನಾವು ಏನು ಮಾಡಬಹುದು ಎಂದು ಹೇಳಿದ್ದಾರೆ.
ನಾವು ಹಿರಿಯರಿದ್ದೇವೆ. ನಮ್ಮದೇ ಆದ ಅನುಭವ, ಸೇವೆ ಇದೆ. ಆಲೋಚನಾ ಶಕ್ತಿ ಇದೆ. ಇವೆಲ್ಲವನ್ನೂ ಹೈಕಮಾಂಡ್ ಬಳಿ ಹೇಳಿಕೊಳ್ಳುತ್ತೇವೆ. ಮಗು ಅತ್ತರೆ ಮಾತ್ರ ತಾಯಿ ಹಾಲು ಕೊಡೋದು. ಹಾಗಾಗಿ, ನಾವು ಕೂಡ ನಮ್ಮಲ್ಲಿನ ನೋವನ್ನ ನಮ್ಮ ಹೈಕಮಾಂಡ್ ಬಳಿ ಹೇಳಿಕೊಳ್ಳುತ್ತೇವೆ ಅಂತಾ ಹೇಳುವ ಮೂಲಕ ಬಿ.ವೈ ವಿಜಯೇಂದ್ರ ಅವರಿಗೆ ರಾಜ್ಯಾಧ್ಯಕ್ಷ ಪಟ್ಟ ಕಟ್ಟಿರೋದಕ್ಕೆ ಪರೋಕ್ಷವಾಗಿ ಅಸಮಾದಾನ ವ್ಯಕ್ತಪಡಿಸಿದರು.
ರಾಜ್ಯಾಧ್ಯಕ್ಷ ಸ್ಥಾನಕ್ಕಾಗಿ ವಿ ಸೋಮಣ್ಣ ಬೇಸರ!
ರಾಜ್ಯಾಧ್ಯಕ್ಷ ಸ್ಥಾನಕ್ಕೆ ಲಿಂಗಾಯತ ಹಿರಿಯ ನಾಯಕ ವಿ ಸೋಮಣ್ಣ ರೇಸ್‌ನಲ್ಲಿದ್ದು, ಬಹಿರಂಗವಾಗಿ ಪಕ್ಷದ ಹೈಕಮಾಂಡ್ ಮುಂದೆ ತಮ್ಮ ಬೇಡಿಕೆಗಳನ್ನ ಇಟ್ಟಿದ್ರು. ಆದರೆ, ಕೇಂದ್ರ ನಾಯಕರು ಬಿ.ವೈ.ವಿಜಯೇಂದ್ರ ಅವರನ್ನು ನೇಮಿಸಿದರು. ಅಂದಿನಿಂದ ಸೋಮಣ್ಣ ಪಕ್ಷದೊಂದಿಗೆ ಮತ್ತಷ್ಟು ಅಸಮಾಧಾನಗೊಂಡಿದ್ದಾರೆ. ಇತ್ತ ಕಾಂಗ್ರೆಸ್ ನಾಯಕರು ವಿ ಸೋಮಣ್ಣ ಅವರನ್ನ ಸಂಪರ್ಕಿಸಿದ್ದು, ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರೊಂದಿಗೆ ವಿ ಸೋಮಣ್ಣ ಸಂಪರ್ಕದಲ್ಲಿದ್ದಾರೆ ಮತ್ತು ಶೀಘ್ರದಲ್ಲೇ ಕಾಂಗ್ರೆಸ್ ಸೇರುವ ಸಾಧ್ಯತೆಯಿದೆ ಎಂದು ಹೇಳಲಾಗಿದೆ.












Click it and Unblock the Notifications