ಅಂದು 'ಜಲೀಲ' ಬರೆದಿದ್ದು ವಿದಾಯದ ಪತ್ರವೇ?
ಬೆಂಗಳೂರು, ನವೆಂಬರ್ 25: 'ಅಂಬಿ ನಿಂಗೆ ವಯಸ್ಸಾಯ್ತೋ' ಈ ಸಿನಿಮಾ ನೋಡಿದವರ ಕಣ್ಣಿಗೆ ಅಂಬರೀಶ್ ತುಸು ಬಳಲಿದಂತೆ ಕಂಡರೂ, ಅವರಲ್ಲಿನ ಉತ್ಸಾಹ ಕುಗ್ಗಿದಂತೆ ಅನಿಸುತ್ತಿರಲಿಲ್ಲ.
ನಾಯಕನಟನಾಗಿ ಚಿತ್ರರಂಗವನ್ನು ಸುದೀರ್ಘ ಕಾಲ ಪ್ರತಿನಿಧಿಸಿದ ಅವರು, 'ವಯಸ್ಸಾದ' ಬಳಿಕ ಪೋಷಕ ಪಾತ್ರಗಳಲ್ಲಿ ಕಾಣಿಸಿಕೊಂಡರೂ ಅವರ ಪಾತ್ರಗಳಲ್ಲಿ ಕಾಣಿಸುತ್ತಿದ್ದ 'ಹೀರೋ' ವರ್ಚಸ್ಸು ಕುಂದಿರಲಿಲ್ಲ.
ಇತ್ತೀಚೆಗೆ ಬಿಡುಗಡೆಯಾದ 'ಅಂಬಿ ನಿಂಗೆ ವಯಸ್ಸಾಯ್ತೋ' ಸಿನಿಮಾ ಒಂದು ರೀತಿ ನಾಯಕನಟನಾಗಿಯೇ ಅಂಬರೀಶ್ ಮತ್ತೊಮ್ಮೆ ಚಿತ್ರರಂಗಕ್ಕೆ ಹೊಸ ರೀತಿಯಲ್ಲಿ ಪರಿಚಯಿಸಿಕೊಂಡಂತೆ ಇತ್ತು.
ಈ ಚಿತ್ರದ ಬಿಡುಗಡೆಗೂ ಮುನ್ನ ಸಿನಿಮಾ ಪ್ರಚಾರಕ್ಕಾಗಿ ಅಂಬಿ, ಅಭಿಮಾನಿಗಳಿಗಾಗಿ ಒಂದು ಪತ್ರ ಬರೆದಿದ್ದರು. ಅದರಲ್ಲಿ ತಮ್ಮ ಬದುಕಿನ ಎಳೆಯನ್ನು ಪ್ರಸ್ತಾಪಿಸಿದ್ದರು. 'ನನಗೆ ವಯಸ್ಸಾಯ್ತು ಅಂದ್ಕೋಬೇಡಿ...' ಎನ್ನುತ್ತಲೇ ತಮ್ಮಲ್ಲಿನ ಹುಡುಗುತನವನ್ನು ನೆನಪಿಸಿದ್ದರು.
ಆದರೆ, ಈಗಿನ ಸಂದರ್ಭಕ್ಕೆ ಅಂಬಿ ಅಂದು ಬರೆದ ಪತ್ರ, ವಿದಾಯದ ಮಾತುಗಳಂತೆ ಭಾಸವಾಗುತ್ತಿದೆ...
ಅವರು ಅಂದು ಬರೆದ ಪತ್ರದಲ್ಲೇನಿತ್ತು ಓದಿ...

'ಎಲ್ರಿಗೂ ನಮಸ್ಕಾರ,
ಇದೇನಪ್ಪಾ ಅಂಬರೀಷ್ ಅವ್ರು ನಮಸ್ಕಾರ ಅಂತ ಹೇಳ್ತ ಇದ್ದಾರೆ, ಅವರಿಗೆ ವಯಸ್ಸಾಯ್ತು ಅಂದ್ಕೋಬೇಡಿ. ತುಂಬಾ ವರ್ಷಗಳ ನಂತರ ನಿಮ್ಮನ್ನೆಲ್ಲ ಈ ಪತ್ರದ ಮುಖಾಂತರ ಮಾತಾಡ್ಬೇಕು ಅನ್ನುಸ್ತು. ಅದಕ್ಕೊಂದು ಕಾರಣನೂ ಇದೆ.
ಹುಟ್ಟಿದ್ದು ಮಂಡ್ಯ, ಕುಡಿದಿದ್ದು ಕಾವೇರಿ ನೀರು ಅನ್ನೋ ಹಾಗೆ, ಹುಟ್ಟಿದಾಗ ಅಮರ್‌ನಾಥ್ ಆಗಿದ್ದ ನಾನು ಬೆಳಿತಾ ಬೆಳಿತಾ ನಿಮ್ಮ ಅಂಬರೀಷ್ ಆದೆ. ಪುಟ್ಟಣ್ಣನ ಜಲೀಲನ ಪಾತ್ರ ಮಾಡ್ತಾ ಮಾಡ್ತಾ ನನಗೇ ಗೊತ್ತಿಲ್ಲದೆ ನನ್ನೊಳಗೆ ಒಬ್ಬ ಪರಿಪೂರ್ಣ ಕಲಾವಿದ ಬೆಳಿತಾ ಹೋದ. ಹಿಂದಿನ 45 ವರ್ಷಗಳ ಕಾಲ ನೀವು ನನ್ನ ಮೇಲಿಟ್ಟ ಪ್ರೀತಿ, ಅಭಿಮಾನದಿಂದ ನೀವು ನನಗೆ ಕೊಟ್ಟ ಬಿರುದು "ರೆಬೆಲ್ ಸ್ಟಾರ್".
ಇಷ್ಟ ಪಟ್ಟ ಹುಡುಗಿ ಜತೆ ಮುಂದೆ ಮದುವೆ ಆಯ್ತು, ಮುದ್ದಾದ ಮಗ ಕೂಡ ಹುಟ್ಟಿದ.
ಜೀವನ ನಿಧಾನವಾಗಿ ರಾಜಕೀಯದ ಕಡೆ ಹರೀತು. ಜನ ಸೇವೆಯನ್ನು ಮಾಡ್ತಾ ಬಂದೆ, ಸಿನಿಮಾ ನಟನೆಯನ್ನೇನು ಬಿಟ್ಟಿರಲಿಲ್ಲ. ಚಿತ್ರರಂಗದ ಆತ್ಮೀಯರು, ಹಿತೈಷಿಗಳು, ಸ್ನೇಹಿತರು ಒತ್ತಾಯಕ್ಕೆ, ಪ್ರೀತಿಗೆ ಸೋತು ಅಲ್ಲೊಂದು ಇಲ್ಲೊಂದು ಪಾತ್ರಗಳನ್ನು ಮಾಡ್ತಾ ಇದ್ದೆ.
ಸಂತೋಷದ ಜೀವನ ಸಾಗ್ತಾ ಬಂತು. ಅನಾರೋಗ್ಯದಿಂದ ಆಸ್ಪತ್ರೆಲಿ ಇದ್ದೆ. ಆಗ ನನ್ನೊಳಗಿನ ಕಲೆ ಹಾಗೇ ಇತ್ತು. ಮಾತನಾಡಲು ಶುರುಮಾಡಿದೆ. ಆಗ ಹುಟ್ಟಿಕೊಂಡದ್ದೇ ಈ ಚಡವಡಿಕೆ, ಒಳ್ಳೆ ಪಾತ್ರಗಳನ್ನು ಮಾಡೋ ಚಡವಡಿಕೆ. ವಯಸ್ಸಿಗೊಪ್ಪುವ ಪರಿಪೂರ್ಣವಾದ ಪಾತ್ರವನ್ನು ಮಾಡುವ ಚಡಪಡಿಕೆ.
ಆಗ ಜತೆಯಾದವನು ಮಗನಂತಹ ಗೆಳೆಯ ಸುದೀಪ. ಇನ್ನೇನು ಇಬ್ಬರು ಸೇರಿಕೊಂಡು ನಿಮ್ಮ ಇಡೀ ಕುಟುಂಬದ ಜೊತೆ ಕುಳಿತು ನೋಡುವ ಚಿತ್ರ ಮಾಡುವುದಾಗಿ ನಿಶ್ಚಯ ಮಾಡಿದ್ದೀವಿ. ಇನ್ನೇನು ತಡ ಇಲ್ಲ, ಆದಷ್ಟು ಬೇಗ
ಇಂತಿ ನಿಮ್ಮ ಪ್ರೀತಿಯಾ'












Click it and Unblock the Notifications