ಮಂಡ್ಯ : ಅಮೃತ ಮಹೋತ್ಸವ ವೆಬ್ ಸೈಟ್ ಆರಂಭ
ಮಂಡ್ಯ ಫೆ.8: ಮಂಡ್ಯ ಜಿಲಾ ಅಮೃತ ಮಹೋತ್ಸವದ ಅಂಗವಾಗಿ ಸಾರ್ವಜನಿಕರಿಗೆ ಆನ್ ಲೈನ್ ಮೂಲಕ ಹೆಚ್ಚಿನ ಮಾಹಿತಿ ಒದಗಿಸಲು ಅನುಕೂಲವಾಗುವಂತೆ ವೆಬ್ ಸೈಟ್ ಆರಂಭಿಸಲಾಗಿದ್ದು, ವಸತಿ ಹಾಗೂ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವರಾದ ಎಂ.ಎಚ್.ಅಂಬರೀಷ್ ಅವರು ಶನಿವಾರ ಚಾಲನೆ ನೀಡಿದರು.
www.mandya75.com ಹೆಸರಿನಲ್ಲಿ ವೆಬ್ ಸೈಟ್ ಆರಂಭಿಸಲಾಗಿದೆ. ಅಮೃತ ಮಹೋತ್ಸವಕ್ಕೆ ಸಂಬಂಧಿಸಿದಂತೆ, ಜಿಲ್ಲೆಯ ಸಾಮಾನ್ಯ ಮಾಹಿತಿಯನ್ನು ಈ ವೆಬ್ ಸೈಟ್ ನಲ್ಲಿ ನೀಡಲಾಗಿದ್ದು, ಈ ವರೆಗೆ ಲಭ್ಯವಿರುವ ಮಾಹಿತಿಯನ್ನು ಅಳವಡಿಸಲಾಗಿದೆ. ಇನ್ನು ಎರಡು ಮೂರು ದಿನಗಳಲ್ಲಿ ಸಾಕಷ್ಟು ಮಾಹಿತಿಯನ್ನು ವೆಬ್ ಸೈಟ್ ಅಳವಡಿಸಲಾಗುವುದು ಎಂದು ಸಚಿವರಿಗೆ ಅಧಿಕಾರಿಗಳು ಮಾಹಿತಿ ನೀಡಿದರು.
ಕಾರ್ಯಕ್ರಮಗಳ ಬಗ್ಗೆ ಮಾಧ್ಯಮಗಳಲ್ಲಿ ಸಾಕಷ್ಟು ಪ್ರಚಾರ ಮಾಡಲಾಗುವುದು. ಬೇರೆ ಬೇರೆ ದಿನ ನಡೆಯುವ ವಿವಿಧ ಕಾರ್ಯಕ್ರಮಗಳ ಬಗ್ಗೆ ಇಲ್ಲಿ ಮಾಹಿತಿ ಒದಗಿಸಲಾಗುವುದು ಎಂದು ಅಧಿಕಾರಿಗಳು ಮಾಹಿತಿ ನೀಡಿದರು. [ಸಿದ್ದರಾಮಯ್ಯಗೆ ಅಂಬರೀಷ್ ರಿಂದ ಆತ್ಮೀಯ ಆಹ್ವಾನ]

ಅಮೃತ ಮಹೋತ್ಸವ ಕಾರ್ಯಕ್ರಮವನ್ನು ಸುಗಮವಾಗಿ ಸಂಘಟಿಸಲು ವಿವಿಧ ಸಮಿತಿಗಳನ್ನು ರಚಿಸಲಾಗಿದೆ. ಆಯಾ ಸಮಿತಿಯ ಸಂಪರ್ಕ ವಿವರವನ್ನು ಈಗ ವೆಬ್‍ಸೈಟ್‍ನಲ್ಲಿ ಅಳವಡಿಸಲಾಗಿದೆ. ವಿವಿಧ ವೇದಿಕೆಗಳಲ್ಲಿ ನಡೆಯುವ ವಿವಿಧ ಕಾರ್ಯಕ್ರಮಗಳನ್ನು ದಿನಾಂಕವಾರು ಪ್ರತ್ಯೇಕವಾಗಿ ಇಲ್ಲಿ ನೀಡಲಾಗುವುದು ಎಂದು ಹೇಳಿದರು.
ಮಂಡ್ಯ ಜಿಲ್ಲಾ ಅಮೃತ ಮಹೋತ್ಸವದ ಮುಖ್ಯ ಕಾರ್ಯಕ್ರಮಗಳು ಫೆಬ್ರವರಿ 20, 21 ಮತ್ತು 22 ರಂದು ಆಯೋಜಿಸಿದ್ದು, ಪೂರಕ ಕಾರ್ಯಕ್ರಮಗಳು ಫೆಬ್ರವರಿ 7 ರಿಂದಲೇ ಆರಂಭವಾಗಿವೆ. ಈ ಎಲ್ಲಾ ಮಾಹಿತಿಯನ್ನು ವೆಬ್ ಸೈಟ್ ನಲ್ಲಿ ನೀಡಲಾಗುವುದು ಎಂದರು.

ಮಂಡ್ಯ ಜಿಲ್ಲೆಯ 75 ವರ್ಷಗಳ ಇತಿಹಾಸದಲ್ಲಿ ಕಲೆ, ಸಾಹಿತ್ಯ, ಸಂಗೀತ, ರಾಜಕೀಯ, ಆಡಳಿತ ಮುಂತಾದ ಕ್ಷೇತ್ರದಲ್ಲಿ ಹಲವಾರು ಮಹನಿಯರು ತಮ್ಮ ಅಮೂಲ್ಯವಾದ ಕೊಡುಗೆ ನೀಡಿ, ಜಿಲ್ಲೆಗೆ ಕೀರ್ತಿ ತಂದಿದ್ದಾರೆ. ಅಂತಹವರನ್ನು ಸ್ಮರಿಸುವ ಕಾರ್ಯವನ್ನು ಈ ವೆಬ್ ಸೈಟ್ ನಲ್ಲಿ ಮಾಡಲಾಗಿದ್ದು, ಲಭ್ಯವಾಗುವ ಎಲ್ಲಾ ಛಾಯಾಚಿತ್ರಗಳನ್ನು ಇಲ್ಲಿ ಅಳವಡಿಸಲಾಗುವುದು ಎಂದು ಅಂಬರೀಷ್ ಹೇಳಿದರು.
ಮಂಡ್ಯ ಜಿಲ್ಲೆಯ ಈ ಅಮೃತ ಘಳಿಗೆಯಲ್ಲಿ ಹಮ್ಮಿಕೊಂಡಿರುವ ಅಮೃತ ಮಹೋತ್ಸವ ಕಾರ್ಯಕ್ರಮದಲ್ಲಿ ಜಿಲ್ಲೆಯ ಸಮಸ್ತ ಬಾಂಧವರು ಭಾಗಿಯಾಗಬೇಕೆಂದು ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವರು ನೀಡಿರುವ ವೀಡಿಯೋ ಸಂದೇಶವನ್ನು ಈ ವೆಬ್ ಸೈಟ್ ನಲ್ಲಿ ಅಳವಡಿಸಲಾಗುವುದು ಎಂದು ಅಧಿಕಾರಿಗಳು ಹೇಳಿದರು.












Click it and Unblock the Notifications