ಸಿಎಂ ಸಿದ್ದರಾಮಯ್ಯ ಅವರಿಗೆ ಅಂಬರೀಷ್ ರಿಂದ ಆತ್ಮೀಯ ಆಹ್ವಾನ
ಮಂಡ್ಯ.ಫೆ.5: ಮಂಡ್ಯ ಜಿಲ್ಲಾ ಅಮೃತ ಮಹೋತ್ಸವದ ಪ್ರಧಾನ ಕಾರ್ಯಕ್ರಮಕ್ಕೆ ಆಗಮಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಎಂ.ಎಚ್.ಅಂಬರೀಷ್ ಅವರು ಆತ್ಮೀಯವಾಗಿ ಆಹ್ವಾನಿಸಿದ್ದಾರೆ. ಬುಧವಾರ ಅಂಬರೀಷ್ ನೇತೃತ್ವದ ಅಮೃತ ಮಹೋತ್ಸವದ ಉನ್ನತಾಧಿಕಾರ ಸಮಿತಿ ಸದಸ್ಯರು ಸಿದ್ದರಾಮಯ್ಯ ಅವರನ್ನು ಅಧಿಕೃತವಾಗಿ ಆಹ್ವಾನ ನೀಡಿದರು.
ಮಂಡ್ಯ ಜಿಲ್ಲಾ ಅಮೃತ ಮಹೋತ್ಸವದ ಫೆಬ್ರವರಿ 20, 21 ಹಾಗೂ 22 ರಂದು ಬಹಳ ಸಂಭ್ರಮ ಸಡಗರದಿಂದ ಆಚರಿಸಲಾಗುತ್ತದೆ. ಫೆಬ್ರವರಿ 22 ರಂದು ನಡೆಯುವ ಪ್ರದಾನ ಕಾರ್ಯಕ್ರಮದಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕೆಂದು ಉಸ್ತುವಾರಿ ಸಚಿವ ಅಂಬರೀಷ್ ಇದೇ ಸಂದರ್ಭದಲ್ಲಿ ಸಿದ್ದರಾಮಯ್ಯ ಅವರನ್ನು ಕೋರಿದರು.
ಮಂಡ್ಯ ಜಿಲ್ಲೆಗೆ 75 ವರ್ಷ ತುಂಬಿದ ಹಿನ್ನೆಲೆಯಲ್ಲಿ ಬಹಳ ಅರ್ಥಪೂರ್ಣವಾಗಿ ಅಮೃತ ಮಹೋತ್ಸವ ಆಚರಿಸಲಾಗುತ್ತದೆ. ಜಿಲ್ಲೆಯ ಸಂಸ್ಕೃತಿ, ಪರಂಪರೆಯನ್ನು ಬಿಂಬಿಸುವಂತೆ ಹಲವಾರು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಮನರಂಜನಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಉಸ್ತುವಾರಿ ಸಚಿವ ಅಂಬರೀಷ್ ಅವರು ಮುಖ್ಯಮಂತ್ರಿಗಳಿಗೆ ವಿವರಿಸಿದರು.

ವೈವಿಧ್ಯಮಯ ಕಾರ್ಯಕ್ರಮ : ಸ್ಥಳೀಯ ಕಲಾವಿದರು ಸೇರಿದಂತೆ ಹೆಸರಾಂತ ಕಲಾವಿದರಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ವಸ್ತುಪ್ರದರ್ಶನ, ವಿಚಾರಗೋಷ್ಠಿಗಳು ಹಾಗೂ ವಿವಿಧ ವೇದಿಕೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಈ ಅಮೃತ ಮಹೋತ್ಸವವು ಮಂಡ್ಯ ಜಿಲ್ಲೆಗೆ ಅಮೃತ ಘಳಿಗೆಯಾಗಿದ್ದು, ಜನಮಾನಸದಲ್ಲಿ ಉಳಿಯುವಂತೆ ಆಚರಿಸಲಾಗುತ್ತಿದೆ.
ಇದೇ ಸಂದರ್ಭದಲ್ಲಿ ಅಮೃತ ಮಹೋತ್ಸವ ಆಚರಿಸುತ್ತಿರುವ ಮಂಡ್ಯ ಜಿಲ್ಲೆಗೆ ಮುಂದಿನ ರಾಜ್ಯಸರ್ಕಾರದ ಆಯವ್ಯಯದಲ್ಲಿ ವಿಶೇಷ ಅನುದಾನ ನೀಡಬೇಕೆಂದು ಮನವಿ ಸಲ್ಲಿಸಲಾಯಿತು. ಅಂಬರೀಷ್ ಅವರ ಜೊತೆಗೆ ಮಂಡ್ಯ ಲೋಕಸಭಾ ಸದಸ್ಯರಾದ ಸಿ.ಎಸ್.ಪುಟ್ಟರಾಜು, ಶಾಸಕರಾದ ಎನ್.ಚಲುವರಾಯಸ್ವಾಮಿ, ಡಿ.ಸಿ.ತಮ್ಮಣ್ಣ, ಎ.ಬಿ.ರಮೇಶ್ ಬಂಡಿಸಿದ್ದೇಗೌಡ, ಜಿಲ್ಲಾಧಿಕಾರಿಗಳಾದ ಡಾ. ಅಜಯ್ ನಾಗಭೂಷಣ್ ಮತ್ತಿತರರು ಉಪಸ್ಥಿತರಿದ್ದರು.

ಕಲಾವಿದರುಗಳ ನೋಂದಣಿಗೆ ಅರ್ಜಿ ಆಹ್ವಾನ
ಫೆಬ್ರವರಿ 20 ರಂದು ನಡೆಯುವ ಅಮೃತ ಮಹೋತ್ಸವದ ರಥ ಯಾತ್ರೆಯ ಮೆರವಣಿಗೆಯಲ್ಲಿ ಪಾಲ್ಗೊಳ್ಳಲು ಜಿಲ್ಲೆಯ ಎಲ್ಲಾ ಪ್ರಕಾರದ ಜಾನಪದ ಕಲಾತಂಡಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಎಲ್ಲಾ ಕಲಾವಿದರ ತಂಡಗಳು ಫೆಬ್ರವರಿ 7 ರಂದು ಸಂಜೆ 5-30 ಗಂಟೆಯೊಳಗಾಗಿ ಸಹಾಯಕ ನಿರ್ದೇಶಕರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವರಿಗೆ ಅರ್ಜಿಗಳನ್ನು ಸಲ್ಲಿಸುವಂತೆ ಕೋರಿದೆ. ಒಂದು ತಂಡದಲ್ಲಿ ಕನಿಷ್ಠ 10 ಜನ ಕಲಾವಿದರಿರಬೇಕು.
ಸ್ವಚ್ಛವಾದ ಉಡುಪುಗಳು ಹೊಂದಿರಬೇಕು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಲ್ಲಿ ಹೆಚ್ಚು ಕಾರ್ಯಕ್ರಮವನ್ನು ನೀಡಿರಬೇಕು. ಸಂಭಾವನೆಯ ಮತ್ತು ಯಾವುದೇ ತೀರ್ಮಾನಗಳಿಗೆ ಸಮಿತಿಯವರು ತೆಗೆದುಕೊಳ್ಳುವ ನಿಲುವಿಗೆ ಬದ್ಧರಾಗಿರಬೇಕು ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.












Click it and Unblock the Notifications