ಸರ್ಕಾರದ ಪ್ರತಿಷ್ಠಿತ ಪರೀಕ್ಷೆಯ ಪ್ರಶ್ನೆ ಪತ್ರಿಕೆಯಲ್ಲಿ ಗೂಗಲ್ ಟ್ರಾನ್ಸ್‌ಲೇಟರ್ ಬಳಕೆ- ಇದು ಕೆಇಎ ಆವಾಂತರ
ಕರ್ನಾಟಕದಲ್ಲಿ ಆಡಳಿತ ಭಾಷೆಯಾಗಿ ಕನ್ನಡ ಸೂಕ್ತವಾಗಿ ಜಾರಿಯಾಗಿಲ್ಲ ಎಂಬ ಆಕ್ರೋಶ ಆಗಾಗ ಕೇಳಿಬರುತ್ತದೆ. ಹೀಗಿದ್ದಾಗ ರಾಜ್ಯ ಸರ್ಕಾರ ಕೂಡ ಕನ್ನಡಕ್ಕೆ ಒತ್ತು ನೀಡುವುದಿಲ್ಲ ಎಂಬ ಆರೋಪಗಳ ನಡುವೆ, ಇದೀಗ ಸರ್ಕಾರಿ ಅಧಿಕಾರಿಗಳೇ ಪ್ರಮುಖ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಕನ್ನಡಕ್ಕೆ ಅವಮಾನ ಮಾಡಿರುವ ಗಂಭೀರ ಆರೋಪ & ಆಕ್ರೋಶ ಕೇಳಿಬಂದಿದೆ.
ಹೌದು ಇಂದು ಕರ್ನಾಟಕ ರಾಜ್ಯ ಸಹಾಯಕ ಪ್ರಾಧ್ಯಾಪಕರ ಅರ್ಹತಾ ಪರೀಕ್ಷೆ ಅಂದ್ರೆ ಕೆ-ಸೆಟ್ ಇಂದು ನಡೆದಿದೆ. ಇದಕ್ಕಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಸಕಲ ಸಿದ್ಧತೆ ಮಾಡಿಕೊಂಡಿದೆ ಅಂತಾ ಹೇಳಲಾಗಿತ್ತು. ವಿವಿಧ 41 ವಿಷಯಕ್ಕೆ ಪರೀಕ್ಷೆ ನಡೆದಿದ್ದು 1,17,302 ಅಭ್ಯರ್ಥಿಗಳು ಪರೀಕ್ಷೆ ತೆಗೆದುಕೊಂಡಿದ್ದಾರೆ ಎನ್ನಲಾಗಿತ್ತು. ಆದರೆ ಪ್ರಶ್ನೆ ಪತ್ರಿಕೆಯಲ್ಲೇ ದೊಡ್ಡ ಎಡವಟ್ಟು ಮಾಡಿಕೊಂಡಿದ್ದಾರೆ ಅಧಿಕಾರಿಗಳು. ಇಂದು ನಡೆದ ಪರೀಕ್ಷೆಯ ಪ್ರಶ್ನೆ ಪತ್ರಿಕೆಯಲ್ಲಿ, ಭಾರಿ ದೊಡ್ಡ ಎಡವಟ್ಟು ಆಗಿದೆ. ಇಂಗ್ಲಿಷ್ ಭಾಷೆಯಲ್ಲಿ ಇರುವ ಪ್ರಶ್ನೆಗಳನ್ನ ಯಥಾವತ್ತಾಗಿ, ಕನ್ನಡಕ್ಕೆ ಗೂಗಲ್ ಟ್ರಾನ್ಸ್‌ಲೇಟ್ ಮಾಡಿರುವ ಆರೋಪ ಕೇಳಿಬಂದಿದೆ.

ಏನಿದು ಗೂಗಲ್ ಟ್ರಾನ್ಸ್‌ಲೇಟ್?
ಅಂದಹಾಗೆ ಇಂದು ಬೆಂಗಳೂರು ನಗರ, ಧಾರವಾಡ, ಹಾವೇರಿ, ಬಳ್ಳಾರಿ, ದಾವಣಗೆರೆ & ತುಮಕೂರು, ಮೈಸೂರು, ಮಂಡ್ಯ, ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಪರೀಕ್ಷಾ ಕೇಂದ್ರ ತೆರೆದಿದ್ದ ಪರೀಕ್ಷಾ ಪ್ರಾಧಿಕಾರ ಪರೀಕ್ಷೆ ಮುಗಿಸಿದೆ. ಆದರೆ ಪರೀಕ್ಷೆಗಾಗಿ ಕನ್ನಡದಲ್ಲಿ ನೀಡಿದ್ದ ಪ್ರಶ್ನೆ ಸಂಪೂರ್ಣವಾಗಿ ಗೂಗಲ್ ಟ್ರಾನ್ಸ್‌ಲೇಟ್ ಮಾಡಲಾಗಿತ್ತು ಎಂಬ ಆರೋಪ ಕೇಳಿಬಂದಿದೆ. ಹೀಗಾಗಿ ಇದೀಗ ತೀವ್ರ ಆಕ್ರೋಶ ಕೂಡ ಮೊಳಗಿದೆ.
ಅಧಿಕಾರಿಗಳಿಂದಲೇ ನಡೆಯಿತಾ ಪ್ರಮಾದ?
ಬೆಳಗ್ಗೆ 10ರಿಂದ 11 ಗಂಟೆವರೆಗೆ ಎಲ್ಲ ವಿಷಯಗಳ ಅಭ್ಯರ್ಥಿಗಳಿಗೆ ಸಾಮಾನ್ಯ ಪರೀಕ್ಷೆ ಅಂದರೆ ಪೇಪರ್-1 ನಡೆದಿತ್ತು. ನಂತರ ಅದೇ ಪರೀಕ್ಷಾ ಕೇಂದ್ರದಲ್ಲಿ ವಿವಿಧ ವಿಷಯಕ್ಕೆ ಸಂಬಂಧಿಸಿದ ಪ್ರತ್ಯೇಕ ಪರೀಕ್ಷೆ ಅರ್ಥಾತ್ ಪೇಪರ್-2 ನಡೆದಿದೆ. ಮಧ್ಯಾಹ್ನ 12ರಿಂದ 2ರವರೆಗೆ ಈ ಪರೀಕ್ಷೆ ನಡೆದಿದೆ. ಹೀಗಿದ್ದಾಗ ಪರೀಕ್ಷೆ ನಡೆಸಲು ಹಲವು ಕಠಿಣ ಕ್ರಮಗಳನ್ನ ಕೈಗೊಳ್ಳಲಾಗಿತ್ತು. ಇಷ್ಟೆಲ್ಲಾ ಆದರೂ ಪ್ರಶ್ನೆ ಪತ್ರಿಕೆಯಲ್ಲಿ ಮಾತ್ರ ಕನ್ನಡಕ್ಕೆ ಅವಮಾನ ಮಾಡಲಾಗಿದೆ. ಈಗ ಮನಸ್ಸಿಗೆ ಬಂದಂತೆ ಗೂಗಲ್ ಟ್ರಾನ್ಸ್‌ಲೇಟ್ ಮಾಡಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ.

ಒಟ್ನಲ್ಲಿ ಪರೀಕ್ಷೆ ನಡೆಸುವಾಗ ಕಠಿಣ ನಿಯಮಗಳನ್ನ ಜಾರಿ ಮಾಡುವ ಪರೀಕ್ಷಾ ಪ್ರಾಧಿಕಾರ, ಕನ್ನಡದಲ್ಲಿ ಪ್ರಶ್ನೆಗಳನ್ನ ಸರಿಯಾಗಿ ನೋಡಿರಲಿಲ್ವಾ? ಎನ್ನುವ ಪ್ರಶ್ನೆ ಕೇಳಿಬಂದಿದೆ. ಈ ನಡುವೆ ಅಧಿಕಾರಿಗಳ ವಿರುದ್ಧ ಈ ಘಟನೆ ಹಿನ್ನೆಲೆ ಕ್ರಮ ಕೈಗೊಳ್ಳಬೇಕು ಎನ್ನುವ ಆಗ್ರಹ ಕೂಡ ಕೇಳಿಬಂದಿದೆ. ಆದ್ರೆ ಸಂಬಂಧಪಟ್ಟ ಅಧಿಕಾರಿಗಳು ಏನ್ ಮಾಡ್ತಾರೆ? ಅನ್ನೋದನ್ನ ಕಾದು ನೋಡಬೇಕಿದೆ.












Click it and Unblock the Notifications