ಒಳಗೆ ಹೋಯಿತು ಎಣ್ಣೆ- ಹಾಸನದಲ್ಲಿ ಸುತ್ತಿಗೆ, ಚಿಕ್ಕಮಗಳೂರಿನಲ್ಲಿ ಚಾಕು- ಜನರ ಪಾಡು ಸಾಕು.. ಸಾಕು..
ಕುಡಿದ ಅಮಲಿನಲ್ಲಿ ಯುವಕ ಹುಚ್ಚಾಟ ಮೆರೆದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ. ಯುವಕನೊಬ್ಬ ಕೈಯಲ್ಲಿ ಸುತ್ತಿಗೆ ಹಿಡಿದು ಸಿಕ್ಕ ಸಿಕ್ಕವರ ಮೇಲೆ ಹಲ್ಲೆಗೆ ಯತ್ನ ಮಾಡುತ್ತಾ ರಸ್ತೆಯಲ್ಲಿ ಓಡಾಡುತ್ತಿರುವ ದೃಶ್ಯವನ್ನು ಸ್ಥಳೀಯರು ಸೆರೆ ಹಿಡಿದಿದ್ದಾರೆ.
ಹಾಸನ ನಗರದ ಶಾಂತಿನಗರ ಬಡಾವಣೆಯಲ್ಲಿ ಈ ಘಟನೆ ನಡೆದಿದೆ. ಕಟ್ಟಡ ನಿರ್ಮಾಣ ಕೆಲಸಕ್ಕೆಂದು ಹಾಸನಕ್ಕೆ ಬಂದಿದ್ದ ಬಿಹಾರ ಮೂಲದ ಕಾರ್ಮಿಕನ ಹುಚ್ಚಾಟಕ್ಕೆ ಜನ ಬೆಚ್ಚಿಬಿದ್ದಿದ್ದಾರೆ. ನಿನ್ನೆ ಮಧ್ಯಾಹ್ನ ಅರೆಬೆತ್ತಲಾಗಿ ಕೈಯಲ್ಲಿ ಸುತ್ತಿಗೆ ಹಿಡಿದು ದಾರಿಯಲ್ಲಿ ಹೋಗ್ತಿದ್ದ ಕಾರನ್ನು ಅಡ್ಡಗಟ್ಟಿ ಕಾರಿನ ಮೇಲೂ ದಾಳಿ ಮಾಡಿದ್ದಾನೆ.

ಈ ಹುಚ್ಚಾಟವನ್ನು ಮೆರೆದ ವ್ಯಕ್ತಿಯನ್ನು ಹಿಡಿದು ಸ್ಥಳೀಯರು ಆತಂಕವನ್ನು ದೂರ ಮಾಡಿದ್ದಾರೆ. ಪೆನ್ಷನ್ ಮೊಹಲ್ಲಾ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಇನ್ನೂ ಚಿಕ್ಕಮಗಳೂರಿನಲ್ಲೂ ಇಂತಹದ್ದೇ ಘಟನೆ ನಡೆದಿದೆ.
ಚಿಕ್ಕಮಗಳೂರಿನಲ್ಲಿ ಸಿಕ್ಕಸಿಕ್ಕವರಿಗೆ ಚಾಕು ಇರಿತ
ಚಿಕ್ಕಮಗಳೂರು ನಗರದ ಬೇಲೂರು -ಹಿರೇಮಗಳೂರು ರಸ್ತೆಯಲ್ಲಿ ಕುಡಿತದ ಅಮಲಿನಲ್ಲಿ ವ್ಯಕ್ತಿಯೊಬ್ಬ ರಸ್ತೆಯಲ್ಲಿ ಸಾಗುವವರಿಗೆ ಚಾಕು ಇರಿಯಲು ಯತ್ನಿಸಿದ ಘಟನೆ ನಡೆದಿದೆ.
ರಸ್ತೆಯಲ್ಲಿ ಸಿಕ್ಕಸಿಕ್ಕವರಿಗೆ ಚಾಕು, ರಾಡು, ಡ್ರ್ಯಾಗರ್ ನಿಂದ ಚುಚ್ಚಲು ಯತ್ನಿಸಿ ವ್ಯಕ್ತಿಯೊಬ್ಬ ರಂಪಾಟ ಮಾಡಿದ್ದಾನೆ. ಎಣ್ಣೆ, ಗಾಂಜಾ ಮತ್ತಿನಲ್ಲಿದ್ದ ವ್ಯಕ್ತಿ ಪೊಲೀಸರ ಮೇಲು ಚಾಕು ರಾಡಿದಿಂದ ಹಲ್ಲೆಗೆ ಯತ್ನಿಸಿದ್ದು ಕಂಡು ಬಂದಿದೆ. ವ್ಯಕ್ತಿಯ ರಂಪಾಟಕ್ಕೆ ಪೊಲೀಸರು ಅಸಹಾಯಕರಾಗಿ ನಿಂತಿದ್ದು ದೃಶ್ಯದಲ್ಲಿ ಸೆರೆಯಾಗಿದೆ.

ಸಗಣಿಪುರದ ಕಿರಿಕ್ ಕೌಶಿಕ್ ಎಂಬಾತನಿಂದ ಈ ರೌಡಿಸಂ ನಡೆದಿದೆ. ರಾಷ್ಟ್ರೀಯ ಹೆದ್ದಾರಿ ಬೈಪಾಸ್ ರಸ್ತೆಯಲ್ಲಿ ಈ ಕೌಶಿಕ್ ಆತಂಕ ಸೃಷ್ಟಿಸಿದ ವಿಡಿಯೋ ಸೆರೆಯಾಗಿದೆ. ವಶಕ್ಕೆ ಪಡೆಯಲು ಬಂದ ಪೊಲೀಸರ ಮೇಲೆನೇ ಕೌಶಿಕ್ ದಾಳಿಗೆ ಯತ್ನಿಸಿದ್ದು ಆತನ ರಂಪಾಟಕ್ಕೆ ಪೊಲೀಸರೇ ದಂಗಾಗಿ ಹೋಗಿದ್ದಾರೆ.
ಸರ್ಕಾರಿ ಶಾಲೆ ಆವರಣದಲ್ಲಿ ಎಣ್ಣೆ ಪಾರ್ಟಿ
ಸರ್ಕಾರಿ ಶಾಲೆಯ ಆವರಣದಲ್ಲಿ ಪುಂಡರು ಎಣ್ಣೆ ಪಾರ್ಟಿ ಮಾಡಿದ ಘಟನೆ ಬೆಳಕಿಗೆ ಬಂದಿದೆ. ಚಿಕ್ಕಮಗಳೂರು ತಾಲೂಕಿನ ವಸ್ತಾರೆ ಗ್ರಾಮದಲ್ಲಿ ಕಿಡಿಗೇಡಿಗಳು ಶಾಲಾ ಆವರಣವನ್ನೇ ಬಾರ್ ಮಾಡಿಕೊಂಡಿರುವುದು ಕಂಡು ಬಂದಿದೆ. ಗ್ರಾಮದ ಪ್ರಾಥಮಿಕ ಸರ್ಕಾರಿ ಶಾಲೆಯಲ್ಲಿ ಮದ್ಯದ ಬಾಟಲಿಗಳು ಪತ್ತೆಯಾಗಿವೆ.
ಈ ಶಾಲೆಯ ಆವರಣದಲ್ಲಿ ಕೆಲ ಕಿಡಿಗೇಡಿಗಳು ರಾತ್ರಿಯಿಡೀ ಎಣ್ಣೆ ಪಾರ್ಟಿ ಮಾಡಿ ಬೆಳಗಿನ ಜಾವ ಮನೆಗೆ ಹೋಗುತ್ತಾರೆ. ಆದರೆ ಬೆಳಗ್ಗೆ ಶಾಲೆಗೆ ಬರುವ ಮಕ್ಕಳು ಬಾಟಲಿಗಳು, ತಿಂದು ಉಳಿದ ಮಾಂಸಾಹಾರವನ್ನು ಹಾಗೂ ಇತರ ತ್ಯಾಜ್ಯವನ್ನು ನೋಡಿಕೊಂಡು ಶಾಲಾ ಕೊಠಡಿಗಳಿಗೆ ತೆರಳಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಇದರಿಂದಾಗಿ ಕಿಡಿಗೇಡಿಗಳ ವಿರುದ್ಧ ಸೂಕ್ತ ಕ್ರಮಕ್ಕೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.












Click it and Unblock the Notifications