ಸಿದ್ಧವಾಗುತ್ತಿದೆ ಅಕ್ರಮ-ಸಕ್ರಮ ಮಾರ್ಗಸೂಚಿ
ಬೆಂಗಳೂರು, ಮೇ 21 : ಅಕ್ರಮ-ಸಕ್ರಮ ಕಾಯ್ದೆ ಮತ್ತೊಮ್ಮೆ ಜಾರಿಗೆ ಬರಲಿದೆ. ಬಿಬಿಎಂಪಿ ಸೇರಿದಂತೆ ಮಹಾನಗರ ಪಾಲಿಕೆ ಹಾಗೂ ನಗರ ಪ್ರದೇಶಗಳಲ್ಲಿ ನಕ್ಷೆ ಮಂಜೂರಾತಿ ಉಲ್ಲಂಘಿಸಿ ನಿರ್ಮಿಸಿದ ಕಟ್ಟಡಗಳು ಮತ್ತು ಭೂ ಬಳಕೆ ನಿಯಮಾವಳಿ ಉಲ್ಲಂಘನೆ ಪ್ರಕರಣಗಳ ಬಗ್ಗೆ ಮಾರ್ಗಸೂಚಿ ಸಿದ್ಧಪಡಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಮಂಗಳವಾರ ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ನಡೆದ ನಗರಾಭಿವೃದ್ಧಿ ಇಲಾಖೆ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಸಿದ್ದರಾಮಯ್ಯ, ಅಕ್ರಮವಾಗಿ ನಿರ್ಮಿಸಲಾಗಿದ್ದ ಬಡಾವಣೆ, ರಚನೆಯಾಗಿದ್ದ ನಿವೇಶನಗಳು, ಬೈ-ಲಾ ಉಲ್ಲಂಘಿಸಿ ನಿರ್ಮಿಸಿದ್ದ ಕಟ್ಟಡಗಳನ್ನು ಸಕ್ರಮಗೊಳಿಸಲು ಮಾರ್ಗಸೂಚಿ ಸಿದ್ದಪಡಿಸಲು ಸೂಚನೆ ನೀಡಿದ್ದಾರೆ.

ಆದರೆ, ಈ ಸಕ್ರಮ 2009ರ ಡಿಸೆಂಬರ್ 2ರಿಂದ 2013ರ ಅಕ್ಟೋಬರ್ 19ರವರೆಗೆ ನಿರ್ಮಾಣವಾಗಿರುವ ಕಟ್ಟಡ ಹಾಗೂ ಬಡಾವಣೆಗಳಿಗೆ ಮಾತ್ರ ಅನ್ವಯವಾಗಲಿದೆ. ಮಾರ್ಗಸೂಚಿ ಪ್ರಕಾರ ಭೂ ಪರಿವರ್ತನೆ ಇಲ್ಲದೆ ಕಂದಾಯ ಜಮೀನುಗಳಲ್ಲಿ ಸಕ್ಷಮ ಪ್ರಾಧಿಕಾರದ ಅನುಮತಿ ಪಡೆಯದೆ ರಚಿಸಿರುವ ಬಡಾವಣೆಗಳ ನಿವೇಶನ, ನಕ್ಷೆ ಮಂಜೂರಾತಿ ಪಡೆಯದೆ ನಿರ್ಮಿಸಿರುವ ಕಟ್ಟಡಗಳನ್ನು ಸಕ್ರಮಗೊಳಿಸಿಕೊಳ್ಳಬಹುದಾಗಿದೆ.
ದಂಡ ಎಷ್ಟು ವಿಧಿಸಬಹುದು : ಅಕ್ರಮ ಕಟ್ಟಡಗಳನ್ನು ಸಕ್ರಮಗೊಳಿಸಲು ದಂಡ ವಿಧಿಸಲಾಗುತ್ತದೆ. ಆಯಾ ಪ್ರದೇಶದ ಮಾರ್ಗಸೂಚಿ ದರದ ಅನ್ವಯ ದಂಡ ಶುಲ್ಕವನ್ನು ನಿಗದಿಪಡಿಸುವಂತೆ ಸಿದ್ದರಾಮಯ್ಯ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. [ಅಕ್ರಮ-ಸಕ್ರಮ ಗಡುವು ವಿಸ್ತರಣೆ]
ಸರ್ಕಾರ ನಿಗದಿಪಡಿಸಿದ ಅವಧಿಗಿಂತ ಮುಂಚಿತವಾಗಿ ನಿರ್ಮಾಣಗೊಂಡ ಬಡಾವಣೆ, ಕಟ್ಟಡಗಳಿಗೆ ಮಾತ್ರ ಅನ್ವಯಿಸುವಂತೆ ಮಾತ್ರ ಅಕ್ರಮ-ಸಕ್ರಮ ಜಾರಿಮಾಡಬೇಕು. ಮತ್ತೊಮ್ಮೆ ಇದನ್ನು ವಿಸ್ತರಿಸುವಂತಹ ಕ್ರಮಗಳನ್ನು ಕೈಗೊಳ್ಳಬಾರದು ಎಂದು ಸಿಎಂ ಖಡಕ್ ಎಚ್ಚರಿಕೆ ನೀಡಿದ್ದಾರೆ.
ನಗರಾಭಿವೃದ್ಧಿ ಸಚಿವ ವಿನಯಕುಮಾರ್ ಸೊರಕೆ, ಕಂದಾಯ ಸಚಿವ ಶ್ರೀನಿವಾಸ ಪ್ರಸಾದ್, ಗೃಹ ಸಚಿವ ಕೆ.ಜೆ.ಜಾರ್ಜ್, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಟಿ.ಬಿ.ಜಯಚಂದ್ರ ಮುಂತಾದವರು ಸಭೆಯಲ್ಲಿ ಪಾಲ್ಗೊಂಡಿದ್ದರು.












Click it and Unblock the Notifications