Bengaluru: ಬೆಂಗಳೂರು, ಮಂಗಳೂರು, ಮೈಸೂರಿಗೆ ಎಚ್ಚರಿಕೆ ಕೊಟ್ಟ ಗ್ರೀನ್‌ಪೀಸ್ ಸಂಶೋಧನೆ
ಭಾರತದ ಸಿಲಿಕಾನ್ ವ್ಯಾಲಿ, ಸ್ಟಾರ್ಟಪ್ ರಾಜಧಾನಿ, ಐಟಿ ಸಿಟಿ ಎಂದೆಲ್ಲಾ ಹೆಸರು ಪಡೆದಿರುವ ಬೆಂಗಳೂರಿಗೆ, ಹೊಸ ಆತಂಕ ಎದುರಾಗಿದೆ. ಗ್ರೀನ್ ಸಿಟಿ ಎನ್ನುವ ಹೆಗ್ಗಳಿಕೆ ಹೊಂದಿದ್ದ ಬೆಂಗಳೂರಿನಲ್ಲಿ ಇದೀಗ ವಾಯುಮಾಲಿನ್ಯದ ಆತಂಕ ಹೆಚ್ಚಾಗಿದೆ. ಗ್ರೀನ್‌ಪೀಸ್ ಇಂಡಿಯಾ ವರದಿ ಪ್ರಕಾರ ಬೆಂಗಳೂರು ಸೇರಿ ಹಲವು ನಗರಗಳಲ್ಲಿ ವಾಯುಮಾಲಿನ್ಯ ಆತಂಕದ ಪ್ರಮಾಣದಲ್ಲಿ ಹೆಚ್ಚಾಗಿದೆ.
"ಸ್ಪೇರ್ ದಿ ಏರ್-2" ಎಂಬ ಶೀರ್ಷಿಕೆಯಡಿ ಗ್ರೀನ್‌ಪೀಸ್ ಇಂಡಿಯಾ ವರದಿಯನ್ನು ಪ್ರಕಟಿಸಿದ್ದು, ಬೆಂಗಳೂರಿಗೆ ಎಚ್ಚರಿಕೆಯನ್ನು ಕೊಟ್ಟಿದೆ. ಬೆಂಗಳೂರು, ಮಂಗಳೂರು, ಮೈಸೂರು ಸೇರಿದಂತೆ ದಕ್ಷಿಣ ಭಾರತದ ಪ್ರಮುಖ ನಗರಗಳಲ್ಲಿ ಗಾಳಿಯ ಗುಣಮಟ್ಟ ತೀವ್ರವಾಗಿ ಕುಸಿತ ಕಂಡಿದೆ ಎಂದು ತಿಳಿಸಿದೆ.

ವಿಶ್ವ ಆರೋಗ್ಯ ಸಂಸ್ಥೆ ನಿಗದಿ ಮಾಡಿರುವ ವಾಯು ಗುಣಮಟ್ಟದ ಮಾನದಂಡಗಳನ್ನು ಮೀರಿ ಈ ನಗರಗಳಲ್ಲಿ ವಾಯು ಮಾಲಿನ್ಯವಾಗಿದೆ ಎಂದು ವರದಿಯಲ್ಲಿ ಆತಂಕ ವ್ಯಕ್ತಪಡಿಸಲಾಗಿದೆ. ಈ ನಗರಗಳಲ್ಲಿ ವಾಯುಮಾಲಿನ್ಯ ಪರ್ಟಿಕ್ಯುಲೇಟ್ ಮ್ಯಾಟರ್ (PM) 2.5 ಮತ್ತು ಪಿಎಂ10 ಸಾಂದ್ರತೆಯನ್ನು ಮೀರಿದೆ ಎಂದು ದಿ ಹಿಂದೂ ವರದಿಯಲ್ಲಿ ತಿಳಿಸಿದೆ.
ದಕ್ಷಿಣ ಭಾರತದ ನಗರಗಳಿಗೆ ಆತಂಕ
ದಕ್ಷಿಣ ಭಾರತದ ಹತ್ತು ಪ್ರಮುಖ ನಗರಗಳಾದ ಹೈದರಾಬಾದ್, ಚೆನ್ನೈ, ಕೊಚ್ಚಿ, ಮಂಗಳೂರು, ಅಮರಾವತಿ, ವಿಜಯವಾಡ, ವಿಶಾಖಪಟ್ಟಣಂ, ಬೆಂಗಳೂರು, ಮೈಸೂರು ಮತ್ತು ಪುದುಚೇರಿಗಳಲ್ಲಿ ವಾಯು ಮಾಲಿನ್ಯ ಪ್ರಮಾಣದಲ್ಲಿ ಏರಿಕೆಯಾಗಿದೆ ಎಂದು ವರದಿ ತಿಳಿಸಿದೆ.
ಮಂಗಳೂರು, ಹೈದರಾಬಾದ್, ವಿಜಯವಾಡ, ಕೊಚ್ಚಿ, ಅಮರಾವತಿ ಮತ್ತು ಚೆನ್ನೈ ನಗರಗಳಲ್ಲಿ ವಾರ್ಷಿಕವಾಗಿ ಸರಾಸರಿ ಪಿಎಂ 2.5 ಹೆಚ್ಚಾಗುತ್ತಿದೆ, ಇದು ವಿಶ್ವ ಆರೋಗ್ಯ ಸಂಸ್ಥೆ ಶಿಫಾರಸ್ಸು ಮಾಡಿದ್ದಕ್ಕಿಂತ ಆರರಿಂದ ಏಳು ಪಟ್ಟು ಹೆಚ್ಚಾಗಿದೆ ಎಂದು ಸಂಶೋಧನೆ ಬಹಿರಂಗಪಡಿಸಿದೆ. ಪುದುಚೆರಿ ಮತ್ತು ಮೈಸೂರಿನಲ್ಲಿ ಪಿಎಂ10 ಮಟ್ಟ ವಿಶ್ವ ಆರೋಗ್ಯ ಸಂಸ್ಥೆಯ ಮಾರ್ಗಸೂಚಿಗಿಂತ ನಾಲ್ಕರಿಂದ ಐದು ಪಟ್ಟು ಹೆಚ್ಚಾಗಿದೆ.
ಬೆಂಗಳೂರು ನಗರದಲ್ಲಿ ಕೂಡ ಪಿಎಂ 2.5 ಮಟ್ಟವು ವಿಶ್ವ ಆರೋಗ್ಯ ಸಂಸ್ಥೆಯ ಮಾನದಂಡಗಳಿಗಿಂತ ಐದರಿಂದ ಆರು ಪಟ್ಟು ಹೆಚ್ಚಾಗಿದ್ದು, ಪಿಎಂ 10 ಮಟ್ಟವು 3 ರಿಂದ 4.5 ಪಟ್ಟು ಹೆಚ್ಚಾಗಿದೆ ಎಂದು ವರದಿಯಾಗಿದೆ. ಫೆಬ್ರವರಿ, ಮಾರ್ಚ್, ಏಪ್ರಿಲ್, ಅಕ್ಟೋಬರ್, ನವೆಂಬರ್ ಮತ್ತು ಡಿಸೆಂಬರ್ ಸೇರಿದಂತೆ ಹಲವು ತಿಂಗಳಲ್ಲಿ ಪಿಎಂ10 ಮಟ್ಟಗಳು ರಾಷ್ಟ್ರೀಯ ವಾಯು ಗುಣಮಟ್ಟ ಮಾನದಂಡಗಳನ್ನು (NAAQS) ಮೀರಿರುವುದಾಗಿ ತಿಳಿಸಿದೆ.
ವೇಗವಾಗಿ ಬೆಳೆಯುತ್ತಿರುವ ನಗರಗಳಿಗೆ ಇದು ಎಚ್ಚರಿಕೆಯಾಗಿದೆ. ಮಿತಿ ಮೀರಿದ ಕೈಗಾರಿಕೀಕರಣ, ವಾಹನ ಸಂಖ್ಯೆಗಳ ಹೆಚ್ಚಳ, ಹಸಿರು ಮನೆ ಪರಿಣಾಮ, ಕಡಿಮೆಯಾಗುತ್ತಿರುವ ಮರಗಳ ಸಂಖ್ಯೆ, ಅರಣ್ಯ ನಾಶ ಸೇರಿದಂತೆ ಹಲವು ಸಂಗತಿಗಳು ವಾಯು ಮಾಲಿನ್ಯ ಹೆಚ್ಚಳಕ್ಕೆ ಕಾರಣವಾಗಿದೆ.












Click it and Unblock the Notifications