ತಿಂಗಳಲ್ಲಿ 15-20 ದಿನ ಪಕ್ಷಕ್ಕಾಗಿ ಮೀಸಲಿಡುವಂತೆ ಕಾರ್ಯಕರ್ತರಿಗೆ ಡಿಕೆಶಿ ಸಲಹೆ
ಬೆಂಗಳೂರು, ಜೂನ್ 2: ನವ ಸಂಕಲ್ಪ ಶಿಬಿರದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಮಾತನಾಡಿ ಕಾಂಗ್ರೆಸ್ ಪಕ್ಷವನ್ನು 2023 ಅಧಿಕಾರಕ್ಕೆ ತರುವ ಗುರಿಯ ಕುರಿತು ಅಭಿಲಾಷೆಯನ್ನು ವ್ಯಕ್ತಪಡಿಸಿದ್ದಾರೆ. ಡಿಕೆಶಿ ಮಾತನಾಡುವಾಗ ನಾನು ಪಕ್ಷದ ಅಧ್ಯಕ್ಷನಾಗಿ ಜವಾಬ್ದಾರಿ ತೆಗೆದುಕೊಂಡಾಗ, "ಜತೆಗೂಡುವುದು ಆರಂಭ, ಜತೆಗೂಡಿ ಯೋಚಿಸುವುದು ಪ್ರಗತಿ, ಜತೆಗೂಡಿ ಕೆಲಸ ಮಾಡುವುದು ಯಶಸ್ಸು' ಎಂದು ಹೇಳಿದ್ದೆ. ಈ ಚಿಂತನ ಮಂಥನ ಶಿಬಿರವನ್ನು 7-8 ತಿಂಗಳ ಹಿಂದೆಯೇ ನಡೆಸಲು ಯೋಚಿಸಿದ್ದೆವು. ಉಪಚುನಾವಣೆ, ಹೋರಾಟ, ಅಧಿವೇಶನ, ದೆಹಲಿ ಕಾರ್ಯಕ್ರಮ ಮತ್ತಿತರ ಕಾರಣಗಳಿಂದ ನಾಲ್ಕು ಬಾರಿ ಮುಂದೂಡಲಾಗಿತ್ತು. ಕೊಡಗು, ಹುಬ್ಬಳ್ಳಿ, ಮಂಗಳೂರಿನಲ್ಲಿ ಮಾಡಲು ನಿರ್ಧರಿಸಲಾಗಿತ್ತು. ಆದರೆ ಕಾರಣಾಂತರಗಳಿಂದ ಸಾಧ್ಯವಾಗಿರಲಿಲ್ಲ.ಎಐಸಿಸಿ ಕೊಟ್ಟಿರುವ ಸೂಚನೆ, ಮಾರ್ಗದರ್ಶನದ ಪ್ರಕಾರ ನಾನು ಈ ಸಭೆ ಮಾಡುತ್ತಿದ್ದೇವೆ. ಅವರ ಸೂಚನೆಯಂತೆ ಆರು ಸಮಿತಿಗಳನ್ನು ರಚಿಸಲಾಗಿದೆ.
ರಾಷ್ಟ್ರ ಮಟ್ಟದಲ್ಲಿ ಕಾಂಗ್ರೆಸ್ ಯಾವ ದಿಕ್ಕಿನಲ್ಲಿ ಹೋಗಬೇಕು, ಯಾವ ರೀತಿ ಹೋರಾಟ ಮಾಡಬೇಕು ಎಂದು ಉದಯಪುರ ನವಸಂಕಲ್ಪ ಶಿಬಿರದಲ್ಲಿ ತೀರ್ಮಾನ ಮಾಡಲಾಗಿದೆ. ಕಾರ್ಯಾಧ್ಯಕ್ಷರಿದ್ದರೂ ಸಮಿತಿಗಳಿಗೆ ಬೇರೆ ನಾಯಕರನ್ನು ಅಧ್ಯಕ್ಷರನ್ನಾಗಿ ಮಾಡಿದ್ದು, ಉದಯಪುರ ಸಭೆಯಲ್ಲಿ ಭಾಗವಹಿಸಿದ್ದವರಿಗೆ ಅವಕಾಶ ನೀಡಲಾಗಿದೆ. ಎಲ್ಲಾ ಸಮಿತಿಗಳು ನಿನ್ನೆ, ಮೊನ್ನೆ ಚರ್ಚೆ ಮಾಡಿ ಸಲಹೆಗಳ ಪಟ್ಟಿ ಮಾಡಿದ್ದು, ಆ ಬಗ್ಗೆ ಚರ್ಚಿಸಲಾಗುವುದು. ಈ ಸಮಿತಿಗಳಲ್ಲಿ ಇಲ್ಲದ, ಸಲಹೆ ನೀಡಲು ಬಯಸುವವರು ಅದನ್ನು ಲಿಖಿತ ರೂಪದಲ್ಲಿ ನೀಡಬಹುದು. ಅಮೂಲ್ಯ ಸಲಹೆಗಳನ್ನು ಸೇರ್ಪಡೆ ಮಾಡಿಕೊಂಡು ಚರ್ಚಿಸಲಾಗುವುದು.
ನಿಮ್ಮ ಸಲಹೆ ರಾಜ್ಯ ಹಾಗೂ ದೇಶದ ಭವಿಷ್ಯ, ಪಕ್ಷದ ಬಲವರ್ಧನೆ, 2023 ಹಾಗೂ 2024 ರ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ಇರಲಿ. ಉದಯಪುರ ಸಭೆ ನಿರ್ಣಯಗಳನ್ನು ನಿಮಗೆ ನೀಡಲಾಗುವುದು. ಎಐಸಿಸಿ ಸೂಚನೆ ಅನ್ವಯ ಪಕ್ಷದ ಉಪಾಧ್ಯಕ್ಷರು, ಪ್ರಧಾನ ಕಾರ್ಯದರ್ಶಿಗಳಿಗೆ ನಿರ್ದಿಷ್ಟ ಜವಾಬ್ದಾರಿ ನೀಡಲಾಗಿದ್ದು, ನೀವು ತಿಂಗಳಲ್ಲಿ 15-20 ದಿನ ಪಕ್ಷಕ್ಕೆ ಸಮಯ ನೀಡಬೇಕು.

ರಾಜ್ಯದಲ್ಲಿ 78 ಲಕ್ಷ ಸದಸ್ಯರನ್ನು ನೋಂದಣಿ
ಪಂಚಾಯ್ತಿಗಳಲ್ಲಿ ಸಭೆ ನಡೆಸಿ, ಅಲ್ಲಿನ ಸಮಸ್ಯೆ ಗುರುತಿಸಿ, ಬಗೆಹರಿಸಬೇಕು. ಪಕ್ಷ ಹಾಗೂ ಪಕ್ಷದ ಸಿದ್ಧಾಂತದ ಪರವಾಗಿರುವ ಸ್ಥಳೀಯ ನಾಯಕರನ್ನು ಪಕ್ಷಕ್ಕೆ ಸೇರಿಸಿಕೊಳ್ಳುವ ಕಾರ್ಯಕ್ರಮ ರೂಪಿಸಬೇಕು. ರಾಜ್ಯದಲ್ಲಿ 78 ಲಕ್ಷ ಸದಸ್ಯರನ್ನು ನೋಂದಣಿ ಮಾಡಲಾಗಿದ್ದು, ಅದರಲ್ಲಿ ಶೇ.42 ರಷ್ಟು ಮಂದಿ 35 ವರ್ಷಕ್ಕಿಂತ ಕಡಿಮೆ ವಯಸ್ಸಿನವರು, ಶೇ.42 ರಷ್ಟು ಮಂದಿ ಮಹಿಳೆಯರು. ಸದಸ್ಯತ್ವ ನೋಂದಣಿ ಮುಂದುವರಿಯಲಿದ್ದು, ಬೂತ್ ಮಟ್ಟದ ಸಮಿತಿ ಸೇರಿ ಎಲ್ಲ ಸಮಿತಿಗಳನ್ನು ರಚಿಸಲು ಕಾಲಮಿತಿ ನಿಗದಿ ಮಾಡಲಾಗಿದೆ. ಪ್ರತಿ ಜಿಲ್ಲೆಯಲ್ಲಿ ಆಗಸ್ಟ್ 9 ರಿಂದ ಆಗಸ್ಟ್ 15 ರ ವರೆಗೆ ಜಿಲ್ಲಾ ಮಟ್ಟದಲ್ಲಿ ಪಾದಯಾತ್ರೆ ಹಮ್ಮಿಕೊಳ್ಳಲು ರಾಷ್ಟ್ರ ನಾಯಕರು ಸೂಚಿಸಿದ್ದಾರೆ. ಯುವಕರು, ವಿದ್ಯಾರ್ಥಿಗಳು, ಎಲ್ಲಾ ವರ್ಗದವರನ್ನು ಸೇರಿಸಿಕೊಂಡು ಸರಕಾರದ ವೈಫಲ್ಯಗಳ ವಿರುದ್ಧ ದೊಡ್ಡ ಹೋರಾಟ ಮಾಡಬೇಕಾಗಿದೆ. ನಿಮ್ಮ ಕ್ಷೇತ್ರ, ಜಿಲ್ಲೆ ಹಾಗೂ ರಾಜ್ಯಕ್ಕೆ ಪ್ರತ್ಯೇಕ ಪ್ರಣಾಳಿಕೆ ಮಾಡಬೇಕು. ಕರಾವಳಿ, ಮಲೆನಾಡು, ಬೆಂಗಳೂರು, ಕಲ್ಯಾಣ ಕರ್ನಾಟಕ ಸೇರಿದಂತೆ ಎಲ್ಲಾ ವಲಯಕ್ಕೆ ಪ್ರತ್ಯೇಕ ಕಾರ್ಯಕ್ರಮ ರೂಪಿಸಬೇಕು. ಎಲ್ಲಾ ವರ್ಗದ ಜನರ ಸೇವೆಗೆ ಕಾಂಗ್ರೆಸ್ ಸರ್ಕಾರವನ್ನು ಅಧಿಕಾರಕ್ಕೆ ತರಬೇಕು. ಉತ್ತಮ ಆಡಳಿತ ನೀಡುವ ಸರ್ಕಾರ ರಚಿಸಬೇಕು.

ಆದಾಯ ಪಾತಾಳಕ್ಕೆ ಕುಸಿದಿದೆ
ಹೋರಾಟ ಮಾಡಲು ಬಿಜೆಪಿ ಸರಕಾರ ನಮಗೆ ಸಾಕಷ್ಟು ವಿಚಾರ ಕೊಟ್ಟಿದೆ. ಭ್ರಷ್ಟಾಚಾರ ಗಗನಕ್ಕೆ ಏರಿದೆ. ಆದಾಯ ಪಾತಾಳಕ್ಕೆ ಕುಸಿದಿದೆ. ಯುವಕರು, ಮಹಿಳೆಯರು, ರೈತರ ರಕ್ಷಣೆ ಬಗ್ಗೆ ಚರ್ಚೆ ಆಗಬೇಕು. ಪಕ್ಷದ ಆಂತರಿಕ ವಿಚಾರವನ್ನು ನನ್ನ ಬಳಿ ಅಥವಾ ಶಾಸಕಾಂಗ ಪಕ್ಷದ ನಾಯಕರ ಬಳಿ ಹೇಳಿ. ಈ ಸಭೆಯಲ್ಲಿ ಚರ್ಚೆ ಆಗುವ ವಿಷಯಗಳ ಬಗ್ಗೆ ಯಾರೂ ಕೂಡ ಮಾಧ್ಯಮಗಳ ಮುಂದೆ ಮಾತನಾಡಬಾರದು. ಮಾಧ್ಯಮಗಳ ಮುಂದೆ ಮಾತನಾಡಿದ್ದು ಗೊತ್ತಾದರೆ ನಾವು ಸಮಯ ಬಂದಾಗ ಅವರನ್ನು ಯಾವ ಕಣ್ಣಿಂದ ನೋಡಬೇಕೋ ಆ ಮೂಲಕ ನೋಡುತ್ತೇವೆ. ಇದು ರಾಷ್ಟ್ರ ನಾಯಕರು ನೀಡಿರುವ ಎಚ್ಚರಿಕೆ. ಶಿಬಿರದ ನಂತರ ಅಂತಿಮ ನಿರ್ಣಯಗಳನ್ನು ಪ್ರಕಟಿಸಿ, ಮಾಧ್ಯಮಗಳಿಗೆ ನೀಡಲಾಗುವುದು.

ರಾಜ್ಯ ಹಾಗೂ ರಾಷ್ಟ್ರಕ್ಕಾಗಿ ದುಡಿಯಿರಿ
ವೈಯಕ್ತಿಕ ಅಜೆಂಡಾ ಬಿಟ್ಟು ರಾಜ್ಯ ಹಾಗೂ ರಾಷ್ಟ್ರದ ಭವಿಷ್ಯದ ಬಗ್ಗೆ ಒಟ್ಟಾಗಿ ಚರ್ಚಿಸುವ ಸಭೆ ಇದಾಗಿದೆ. ಸ್ಪಷ್ಟ ಸೂಚನೆ, ಸಂದೇಶ ಕೊಡುವ ಸಭೆ ಇದು. ಸೋನಿಯಾ ಗಾಂಧಿ ಅವರು ಒಂದು ಸೂಚನೆ ನೀಡಿದ್ದಾರೆ. ಪಕ್ಷ ನಮಗೆ ಅಧಿಕಾರ, ಶಕ್ತಿ ಸೇರಿದಂತೆ ಎಲ್ಲವನ್ನೂ ಕೊಟ್ಟಿದೆ. ಈಗ ಪಕ್ಷಕ್ಕೆ ನೀವೆಲ್ಲರೂ ಋಣ ತೀರಿಸುವ ಸಮಯ ಬಂದಿದೆ. ಆ ನಿಟ್ಟಿನಲ್ಲಿ ಕೆಲಸ ಮಾಡಿ ಎಂಬುದೇ ಆ ಸೂಚನೆ. ಜಿಲ್ಲಾ ಮಟ್ಟದಲ್ಲೂ ಈ ಸಭೆ ಮಾಡಬೇಕು ಎಂದು ರಾಷ್ಟ್ರೀಯ ನಾಯಕರು ಆದೇಶಿಸಿದ್ದಾರೆ.

2023ರಲ್ಲಿ ಕಾಂಗ್ರೆೆಸ್ ಪಕ್ಷ ಅಧಿಕಾರಕ್ಕೆ
ನಾವೆಲ್ಲರೂ ಆಲದಮರದಂತೆ ಎಲ್ಲರಿಗೂ ಆಶ್ರಯ ನೀಡಲು ತ್ಯಾಗದ ಮನೋಭಾವದಲ್ಲಿ ಕೆಲಸ ಮಾಡಬೇಕಿದೆ. ಕಾಂಗ್ರೆಸ್ ಪಕ್ಷವನ್ನು ಸಾಯಿಸಲು ಯಾರಿಂದಲೂ ಸಾಧ್ಯವಿಲ್ಲ. ದೇಶದ ಅಂತ್ಯವಾದಾಗ ಈ ಪಕ್ಷ ಅಂತ್ಯವಾಗಲಿದೆ. ಇಂತಹ ಪಕ್ಷದ ಸದಸ್ಯರಾಗಿ ಪಕ್ಷ, ರಾಜ್ಯ ಹಾಗೂ ದೇಶ ಉಳಿಸಲು ನಾವೆಲ್ಲರೂ ಕೆಲಸ ಮಾಡಬೇಕಿದೆ. ಇದು ನಿಮ್ಮ ಪಕ್ಷ. ನಾನು ಸಾಮಾನ್ಯ ಕಾರ್ಯಕರ್ತನಾಗಿ ದುಡಿಯಲು, ಎಲ್ಲಾ ರೀತಿಯ ತ್ಯಾಗಕ್ಕೂ ಸಿದ್ಧನಾಗಿದ್ದೇನೆ. ನನ್ನಿಂದ ಏನಾದರೂ ತಪ್ಪಾಗಿದ್ದರೆ ಕ್ಷಮಿಸಿ. ತಪ್ಪು ತಿದ್ದಿಕೊಂಡು, ನಿಮ್ಮ ಜತೆ ದುಡಿಯಲು ಬದ್ಧನಿದ್ದೇನೆ. ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಅವರ ಮಾರ್ಗದರ್ಶನದಲ್ಲಿ ದುಡಿಯುತ್ತೇನೆ. 2023 ರಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರುವುದು ನಿಮ್ಮೆಲ್ಲರ ಜವಾಬ್ದಾರಿ ಎಂದು ಡಿಕೆಶಿ ತಿಳಿಸಿದ್ದಾರೆ.












Click it and Unblock the Notifications