ಕೋಲಾರದಲ್ಲೇ ಸಿದ್ದರಾಮಯ್ಯ ಸಭೆ, ಮಾತುಕತೆ, ಚರ್ಚೆ ಏಕೆ? ಕುತೂಹಲ ಹುಟ್ಟಿಸಿದ ಮಾಜಿ ಸಿಎಂ ನಡೆ
ಕೋಲಾರ, ಡಿಸೆಂಬರ್ 09: ಈ ಬಾರಿಯ ಕರ್ನಾಟಕದ ವಿಧಾನಸಭೆ ಚುನಾವಣೆಗೂ ಮುನ್ನ ಅತಿ ಹೆಚ್ಚು ಚಾಲ್ತಿಯಲ್ಲಿರುವ ಹೆಸರು ಸಿದ್ದರಾಮಯ್ಯ. ಮಾಜಿ ಮುಖ್ಯಮಂತ್ರಿ ವರ್ಚಸ್ಸು ಇನ್ನೂ ರಾಜ್ಯದಲ್ಲಿ ಉಳಿದಿದೆ ಎಂಬುದಕ್ಕೆ ಅವರು ಹೋದ ಕಡೆಗಳಲ್ಲಿ ಸೇರುವ ಜನಸಾಗರವೇ ಸಾಕ್ಷಿ. ಆದರೆ, ಸಿದ್ದರಾಮಯ್ಯ ಈ ಬಾರಿ ಎಲ್ಲಿಂದ ಸ್ಪರ್ಧಿಸ್ತಾರೆ ಎಂಬ ಪ್ರಶ್ನೆ ಹಲವು ತಿಂಗಳಿಂದ ಚಾಲ್ತಿಯಲ್ಲಿದೆ. ಈ ಕುರಿತು ಕೇವಲ ಮಾಧ್ಯಮ ಹಾಗೂ ರಾಜಕೀಯ ವಲಯದಲ್ಲಿ ಅಷ್ಟೇ ಅಲ್ಲ, ಸಾಮಾನ್ಯ ಜನರಲ್ಲೂ ಚರ್ಚೆಗಳು ನಡೆಯುತ್ತಿವೆ.

ಕೋಲಾರಲ್ಲಿ ಸಭೆ ನಡೆಸಲಿರುವ ಸಿದ್ದರಾಮಯ್ಯ
ಇಂದು (ಸೋಮವಾರ) ಕೋಲಾರ ನಗರಕ್ಕೆ ಸಿದ್ದರಾಮಯ್ಯ ಭೇಟಿ ನೀಡುತ್ತಿದ್ದಾರೆ. ಕೋಲಾರ ವಿಧಾನಸಭಾ ಕ್ಷೇತ್ರದ ಕಾರ್ಯಕರ್ತರ ಸಭೆಯಲ್ಲಿ ಪಾಲ್ಗೊಂಡು ಚರ್ಚೆ ನಡೆಸಲಿದ್ದಾರೆ. ಮಧ್ಯಾಹ್ನ 12.15ಕ್ಕೆ ನಗರದ ಮಿನಿ ಕ್ರೀಡಾಂಗಣದಲ್ಲಿ ಕಾರ್ಯಕರ್ತರ ಸಭೆ ನಡೆಯಲಿದೆ ಎಂದು ಕಾಂಗ್ರೆಸ್ ತಿಳಿಸಿದೆ. 'ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ಕೋಲಾರದಲ್ಲೇ ಸಿದ್ದರಾಮಯ್ಯ ಸ್ಪರ್ಧಿಸಲಿದ್ದಾರೆ' ಎಂದು ವಿಧಾನ ಪರಿಷತ್ ಸದಸ್ಯ ಎಂ.ಎಲ್.ಅನಿಲ್ ಕುಮಾರ್ ಸೇರಿ ಹಲವು ನಾಯಕರು ಹೇಳಿಕೆ ನೀಡಿದ್ದಾರೆ.

ಈ ಸಭೆಯಲ್ಲಿ ಮುನಿಯಪ್ಪ ಬಣ ಗೈರಾಗುವ ಸಾಧ್ಯತೆ
ಕೋಲಾರ ಜಿಲ್ಲಾ ಕಾಂಗ್ರೆಸ್‌ನಲ್ಲಿ ಎರಡು ಬಣಗಳಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ. ಮಾಜಿ ಸ್ಪೀಕರ್ ರಮೇಶ್ ಕುಮಾರ್ ಹಾಗೂ ಮಾಜಿ ಕೇಂದ್ರ ಸಚಿವ ಕೆ. ಎಚ್. ಮುನಿಯಪ್ಪ ಅವರದ್ದು ಒಂದು ಬಣ. ಈ ಎರಡೂ ಬಣಗಳ ನಡುವೆ ಅಸಮಾಧಾನವಿದೆ. ಸಿದ್ದರಾಮಯ್ಯನವರ ಕೋಲಾರದ ಕನಸಿಗೆ ಇದು ಅಡ್ಡಿಯಾಗಬಹುದು ಎಂಬ ಮಾತುಗಳು ಕೇಳಿಬಂದಿವೆ.
ಸಿದ್ದರಾಮಯ್ಯ ಕೋಲಾರದಲ್ಲೇ ಸ್ಪರ್ಧಿಸಲಿ. ಅವರ ಗೆಲುವಿಗಾಗಿ ನಾವು ಶ್ರಮಿಸುತ್ತೇವೆ. ಆದರೆ, ಕೋಲಾರ ಜಿಲ್ಲೆಯಲ್ಲಿರುವ ಬಣ ರಾಜಕೀಯವನ್ನು ಅವರು ಮೊದಲು ಪರಿಹರಿಸಲಿ ಎಂಬ ಮಾತುಗಳನ್ನು ಮುನಿಯಪ್ಪ ಬಣದ ಮುಖಂಡರು ಹೇಳುತ್ತಿದ್ದಾರೆ. ಇಂದು ನಡೆಯುತ್ತಿರುವ ಸಭೆಗೆ ಮುನಿಯಪ್ಪ ಬಣದ ಮುಖಂಡರು ಗೈರಾಗುವ ಸಾಧ್ಯತೆಗಳೂ ಇವೆ.

ಸಿದ್ದರಾಮಯ್ಯನವರೇ ಮುಂದಿನ ಸಿಎಂ ಎಂದ ರಮೇಶ್ ಕುಮಾರ್
ಸಿದ್ದರಾಮಯ್ಯನವರ ನಿಕಟ ಸ್ನೇಹಿತರೆಂದೇ ರಮೇಶ್ ಕುಮಾರ್ ಗುರುತಿಸಿಕೊಂಡಿದ್ದಾರೆ. ಅವರು ಸಿದ್ದರಾಮಯ್ಯ ಪರ ಬ್ಯಾಟ್ ಬೀಸಿದ್ದಾರೆ. ನಿನ್ನೆ ಕೋಲಾರ ಜಿಲ್ಲೆಯಲ್ಲಿ ಮಾತನಾಡಿರುವ ಅವರು, 'ಸಿದ್ದರಾಮಯ್ಯನವರೇ ಮುಂದಿನ ಮುಖ್ಯಮಂತ್ರಿಯಾಗಲಿದ್ದಾರೆ. ಅದಕ್ಕಾಗಿ ಮುಂದಿನ ನಾಲ್ಕು ತಿಂಗಳು ಕಾಯಬೇಕಷ್ಟೇ' ಎಂದು ತಿಳಿಸಿದ್ದಾರೆ. ಒಂದು ವೇಳೆ, ಕೋಲಾರದಲ್ಲಿ ಸಿದ್ದರಾಮಯ್ಯ ಸ್ಪರ್ಧಿಸುವುದೇ ಆದರೆ, ರಮೇಶ್ ಕುಮಾರ್ ಬಣವು ಅವರ ಗೆಲುವಿಗಾಗಿ ಸ್ಪರ್ಧಿಸಲಿದೆ ಎಂಬುದಂತೂ ಸ್ಪಷ್ಟ. ಇನ್ನು ಮುನಿಯಪ್ಪ ಬಣವನ್ನು ಸಿದ್ದರಾಮಯ್ಯ ಒಲಿಸಿಕೊಳ್ಳಬೇಕಿದೆ. ಇಲ್ಲದಿದ್ದರೆ, ಸಿದ್ದರಾಮಯ್ಯನವರ ಗೆಲುವಿನ ನಾಗಾಲೋಟಕ್ಕೆ ಇದು ಅಡ್ಡಿಯಾಗಬಹುದು ಎಂಬ ಮಾತುಗಳು ರಾಜಕೀಯ ವಲಯದಲ್ಲಿ ಕೇಳಿಬಂದಿವೆ.

ಕೋಲಾರದಲ್ಲಿ ಸ್ಪರ್ಧೆ: ಸಿದ್ದರಾಮಯ್ಯ ನೀಡುತ್ತಿರುವ ಕಾರಣವೇನು?
ಪ್ರಸ್ತುತ ಬಾದಾಮಿಯಲ್ಲಿ ಸಿದ್ದರಾಮಯ್ಯ ಶಾಸಕರಾಗಿದ್ದಾರೆ. ಅವರು ಈ ಹಿಂದಿನ ಚುನಾವಣೆಯಲ್ಲಿ ಮೈಸೂರು ಜಿಲ್ಲೆಯ ಚಾಮುಂಡೇಶ್ವರಿಯಲ್ಲಿ ನಿಂತು ಸೋಲು ಅನುಭವಿಸಿದ್ದಾರೆ. 2013ರ ವಿಧಾನಸಭಾ ಚುನಾವಣೆಯಲ್ಲಿ ಸಿದ್ದರಾಮಯ್ಯ ವರುಣಾ (ಮೈಸೂರು ಜಿಲ್ಲೆ) ಕ್ಷೇತ್ರದಿಂದ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು. ಈ ಮೂರು ಕ್ಷೇತ್ರಗಳ ಹೆಸರು ಸಿದ್ದರಾಮಯ್ಯನವರ ಸ್ಪರ್ಧೆ ವಿಚಾರವಾಗಿ ಕೇಳಿಬಂದಿದ್ದವು. ಆದರೆ, ಈಗ ಕೋಲಾರದ ಹೆಸರು ಹೆಚ್ಚು ಮುನ್ನೆಲೆಗೆ ಬಂದಿದೆ. ಕೋಲಾರವನ್ನೇ ಯಾಕೆ ಸಿದ್ದರಾಮಯ್ಯ ಆಯ್ಕೆ ಮಾಡಿಕೊಳ್ಳಬಹುದು ಎಂಬುದಕ್ಕೆ ಅವರೇ ಕಾರಣಗಳನ್ನು ನೀಡಿದ್ದಾರೆ. 'ರಾಜ್ಯ ರಾಜಧಾನಿ ಬೆಂಗಳೂರಿಗೆ ಸಮೀಪವಿರುವ ಕ್ಷೇತ್ರವನ್ನು ಆರಿಸಿಕೊಳ್ಳಬೇಕೆಂದು ಬಯಸಿದ್ದೇನೆ. ಇದರಿಂದ ಕೆಲಸ ಮಾಡಲು, ಅಲ್ಲಿಗೆ ಹೋಗಿ ಬರಲು ಅನುಕೂಲವಾಗುತ್ತದೆ' ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಅಭಿಪ್ರಾಯ ಪಟ್ಟಿದ್ದಾರೆ.












Click it and Unblock the Notifications