Rohini Sindhuri: ರೋಹಿಣಿ ಸಿಂಧೂರಿ ಬಳಿಕ ಡಿ.ರೂಪಾಗೂ ಅಧಿಕಾರ!
ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಮತ್ತು ಐಪಿಎಸ್ ಅಧಿಕಾರಿ ಡಿ. ರೂಪ ಕಿತ್ತಾಟ ದೇಶಾದ್ಯಂತ ಸದ್ದು ಮಾಡಿತ್ತು. ಅಂದಿನ ಬಿಜೆಪಿ ಸರ್ಕಾರಕ್ಕೆ ಈ ವಿಚಾರ ತಲೆನೋವಾಗಿ ಇಬ್ಬರನ್ನು ಸ್ಥಳ ನಿಯೋಜನೆ ಮಾಡದೆ ವರ್ಗಾಯಿಸಿ ಮನೆಯಲ್ಲಿ ಕೂರುವಂತೆ ಮಾಡಿತ್ತು. ಇದೀಗ ಇಬ್ಬರಿಗೂ ಸಿದ್ದರಾಮಯ್ಯ ಸರ್ಕಾರ ಅಧಿಕಾರ ನೀಡಿದೆ. ನಿನ್ನೆಯಷ್ಟೇ ರೋಹಿಣಿ ಸಿಂಧೂರಿ ಅವರಿಗೆ ಇಲಾಖೆ ನೀಡಿದ್ದು, ಇಂದು ಡಿ.ರೂಪಾ ಅವರಿಗೂ ಸಿಹಿಸುದ್ದಿ ಸಿಕ್ಕಿದೆ.
ಹೌದು, ಬರೋಬ್ಬರಿ 7 ತಿಂಗಳ ಬಳಿಕ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ (Rohini Sindhuri) ಅವರಿಗೆ ಅಧಿಕಾರ ನೀಡಿ ಕರ್ನಾಟಕ ಗೆಜೆಟಿಯರ್ ಚೀಫ್ ಎಡಿಟರ್ ಆಗಿ ನಿನ್ನೆ ಆದೇಶ ಹೊರಡಿಸಿತ್ತು ರಾಜ್ಯ ಸರ್ಕಾರ. ಇದೀಗ ಐಪಿಎಸ್ ಅಧಿಕಾರಿ ಡಿ.ರೂಪಾ ಅವರಿಗೂ ಅಧಿಕಾರವನ್ನ ನೀಡಿದೆ ಸಿದ್ದರಾಮಯ್ಯ ನೇತೃತ್ವದ ಸರ್ಕಾರ. ಆಂತರಿಕ ಭದ್ರತಾ ವಿಭಾಗದ ಐಜಿ ಆಗಿ ರೂಪಾ ಅವರನ್ನು ಈಗ ನಿಯೋಜನೆ ಮಾಡಿ ಹುದ್ದೆ ಕೊಟ್ಟಿದೆ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ.

ಸರ್ಕಾರವನ್ನೇ ಅಲ್ಲಾಡಿಸಿದ್ದ ಅಧಿಕಾರಿಗಳ ಫೈಟ್!
ಬಿಜೆಪಿ ಸರ್ಕಾರ ಅಧಿಕಾರದಲ್ಲಿ ಇದ್ದಾಗ ರೋಹಿಣಿ ಸಿಂಧೂರಿ ಮತ್ತು ಡಿ.ರೂಪಾ ಮಧ್ಯೆ ನಡೆದ ಕಿತ್ತಾಟ ಸರ್ಕಾವರನ್ನೇ ಅಲ್ಲಾಡಿಸಿತ್ತು. ಕರ್ನಾಟಕ ಮಾತ್ರವಲ್ಲದೆ ದೇಶದ ವಿವಿಧೆಡೆ ಕೂಡ ಈ ವಿಚಾರ ಸದ್ದು ಮಾಡಿತ್ತು. ಇಬ್ಬರೂ ಅಧಿಕಾರಿಗಳು ವೈಯಕ್ತಿಕ ಮಟ್ಟಕ್ಕೆ ಇಳಿದು, ಒಬ್ಬರ ಮೇಲೆ ಒಬ್ಬರು ಆರೋಪ & ಪ್ರತ್ಯಾರೋಪ ಮಾಡಿಕೊಂಡಿದ್ದರು. ಹೀಗೆ ಅಂದಿನ ಸಿಎಂ ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರ ತತ್ತರಿಸಿ ಹೋಗಿತ್ತು.
ಸರ್ಕಾರಕ್ಕೆ ಅಧಿಕಾರಿಗಳ ಮೇಲೆ ಹಿಡಿತ...
ಐಎಎಸ್ & ಐಪಿಎಸ್ ಅಧಿಕಾರಿಗಳು ಕಿತ್ತಾಡುವಾಗ, ರಾಜ್ಯದಲ್ಲಿ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರಕ್ಕೆ ಅಧಿಕಾರಿಗಳ ಮೇಲೆ ಹಿಡಿತ ಇಲ್ವ? ಎಂಬ ಪ್ರಶ್ನೆ ವಿಪಕ್ಷ ನಾಯಕರಿಂದ ಕೇಳಿಬಂದಿತ್ತು. ಈ ಎಲ್ಲಾ ಚರ್ಚೆ ಮಧ್ಯೆ ದಿಢೀರ್ ಇಬ್ಬರನ್ನೂ ಹುದ್ದೆ ನೀಡದೆ ಅಂದಿನ ಸಿಎಂ ಬೊಮ್ಮಾಯಿ ವರ್ಗಾವಣೆ ಮಾಡಲು ಆದೇಶ ನೀಡಿದ್ದರು. ಈ ಕಾರಣಕ್ಕೆ ಸುಮಾರು 7 ತಿಂಗಳಿಂದ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ & ಐಪಿಎಸ್ ಅಧಿಕಾರಿ ಡಿ.ರೂಪಾಗೆ ಯಾವುದೇ ಹುದ್ದೆ ಇರಲಿಲ್ಲ.

ಹೀಗೆ ಇಬ್ಬರೂ ಅಧಿಕಾರಿಗಳಿಗೆ ಅಂದಿನ ಸರ್ಕಾರವು ಸ್ಥಳ ನಿಯೋಜನೆ ಮಾಡದೆ, ವರ್ಗಾವಣೆ ಮಾಡಿದ್ದ ಹಿನ್ನೆಲೆ ಇಷ್ಟುದಿನ ಅಧಿಕಾರ ಇರಲಿಲ್ಲ. ಆದರೆ ನಿನ್ನೆಯಷ್ಟೆ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಅವರನ್ನು ಕರ್ನಾಟಕ ಗೆಜೆಟಿಯರ್ ಇಲಾಖೆ ಮುಖ್ಯ ಸಂಪಾದಕರನ್ನಾಗಿ ನೇಮಕ ಮಾಡಲಾಗಿದೆ. ಹೀಗೆ ರೋಹಿಣಿ ಸಿಂಧೂರಿ ಅವರಿಗೆ ಹುದ್ದೆ ನಿಯೋಜನೆ ಬೆನ್ನಲ್ಲೇ ಡಿ.ರೂಪಾ ಅವರನ್ನು ಆಂತರಿಕ ಭದ್ರತಾ ವಿಭಾಗದ ಐಜಿಯಾಗಿ ನಿಯೋಜನೆ ಮಾಡಲಾಗಿದೆ.
ಹೊಸ ಸರ್ಕಾರದಲ್ಲಿ ಅಧಿಕಾರಿಗಳಿಗೆ ಚಳಿ!
ಇನ್ನು ಹೊಸ ಸರ್ಕಾರ ಅಧಿಕಾರಕ್ಕೆ ಬರುತ್ತಿದ್ದಂತೆಯೇ ಆಡಳಿತ ಯಂತ್ರಕ್ಕೂ ಮೇಜರ್ ಸರ್ಜರಿ ಮಾಡುತ್ತಿದೆ. ಈಗಾಗಲೇ ಹಲವು ಐಎಎಸ್ ಹಾಗೂ ಐಪಿಎಸ್ ಅಧಿಕಾರಿಗಳನ್ನೂ ವರ್ಗಾವಣೆ ಮಾಡಿರುವ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ನಿನ್ನೆ ಕೂಡ ಇಂತಹದ್ದೇ ಕ್ರಮವನ್ನ ಕೈಗೊಂಡಿತ್ತು. ಇತ್ತೀಚೆಗೆ 10 ಐಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿದ್ದು, ನಿನ್ನೆಯು ಐವರು ಐಎಎಸ್ ಅಧಿಕಾರಿಗಳಿಗೆ ಸ್ಥಳ ನಿಯೋಜಿಸಿ, 2 ಐಎಎಸ್ ಅಧಿಕಾರಿಗಳ ವರ್ಗಾವಣೆಗೆ ಆದೇಶ ನೀಡಲಾಗಿತ್ತು. ಇದರಲ್ಲಿ ರೋಹಿಣಿ ಸಿಂಧೂರಿ ಅವರು ಸೇರಿದ್ದರು. ಹಾಗೇ ನಿನ್ನೆ ಐಪಿಎಸ್ ಅಧಿಕಾರಿಗಳ ವರ್ಗಾವಣೆ ಆದೇಶ ಕೂಡ ಹೊರಬಿದ್ದಿತ್ತು.
ಒಟ್ನಲ್ಲಿ ಕರ್ನಾಟಕದಲ್ಲಿ ಐಎಎಸ್ & ಐಪಿಎಸ್ ಅಧಿಕಾರಿಗಳ ವರ್ಗಾವಣೆ ನಿರಂತರವಾಗಿ ನಡೆಯುತ್ತಿದೆ. ಈ ಬಗ್ಗೆ ವಿರೋಧ ಪಕ್ಷಗಳು ಆರೋಪ ಮತ್ತು ಆಕ್ರೋಶ ಹೊರಹಾಕಿವೆ. ಆದರೆ ಆಡಳಿತ ಯಂತ್ರ ಸರಿಮಾಡಲು, ಬಿಜೆಪಿ ಅವಧಿಯಲ್ಲಿ ಆಗಿದ್ದ ತಪ್ಪು ಸರಿಪಡಿಸಲು ಇದು ಅನಿವಾರ್ಯ ಅಂತಿದೆ ಸಿಎಂ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ.












Click it and Unblock the Notifications