ಬೆಂಗಳೂರಿನ ನಂತರ ನೆರೆಯ ಜಿಲ್ಲೆಯಲ್ಲಿ ಭೂಮಿಗೆ ಬಂಗಾರದ ಬೆಲೆ ನಿರೀಕ್ಷೆ: ಮತ್ತೊಂದು ಗ್ರೇಟರ್ ಪಾಲಿಕೆ!
ಬೆಂಗಳೂರಿನ ಆಡಳಿತವು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಿಂದ ಗ್ರೇಟರ್ ಬೆಂಗಳೂರು ಪ್ರಾಧಿಕಾರ ರಚನೆಯಾದ ಮೇಲೆ ಬೆಂಗಳೂರಿನ ವಿವಿಧ ಭಾಗದಲ್ಲಿ ಭೂಮಿಗೆ ಬಂಗಾರದ ಬೆಲೆ ಬರಲು ಶುರವಾಗಿದೆ. ಸಾಂಸ್ಕೃತಿಕ ನಗರಿ ಮೈಸೂರು ಗ್ರೇಟರ್ ಮೈಸೂರು ಆಗಬೇಕು. ಆದರೆ ನಗರದ ಈಗಿನ ಘನತೆ, ಸಂಸ್ಕೃತಿಗೆ, ವಿಶಾಲತೆಗೆ ಧಕ್ಕೆ ಆಗಬಾರದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದ್ದಾರೆ.
ಈ ಮೂಲಕ ಮೈಸೂರು ಸಹ ಗ್ರೇಟರ್ ವ್ಯಾಪ್ತಿಗೆ ಒಳಪಡುವ ಮುನ್ಸೂಚನೆ ಸಿಕ್ಕಂತಾಗಿದೆ. ಬೆಂಗಳೂರಿನ ರೀತಿ ಟ್ರಾಫಿಕ್ ಸಮಸ್ಯೆ, ಒಳಚರಂಡಿ, ಫುಟ್ ಪಾತ್, ಕುಡಿಯುವ ನೀರು, ಎಸ್‌ಟಿಪಿ ಯಾವುದರ ಸಮಸ್ಯೆಯೂ ಇರದಂತೆ ಜಿಲ್ಲಾಡಳಿತವು ಸ್ಪಷ್ಟವಾದ, ವೈಜ್ಞಾನಿಕವಾದ ಬ್ಲೂ ಪ್ರಿಂಟ್ ಸಿದ್ಧಪಡಿಸಿ, ಅನುಷ್ಠಾನ ಮಾಡಬೇಕು.
ಗ್ರೇಟರ್ ಮೈಸೂರು ಸುಸಜ್ಜಿತವಾಗಿರಬೇಕು ಮತ್ತು ವ್ಯವಸ್ಥಿತವಾಗಿರಬೇಕು. ಅಗತ್ಯ ಮೂಲಭೂತ ಸೌಕರ್ಯಗಳನ್ನು ಒದಗಿಸುವಾಗ ಈಗಿನ ಜನಸಂಖ್ಯೆಗೆ ಅನುಗುಣವಾಗಿ ಯೋಜನೆ ರೂಪಿಸದೆ, ಮುಂದಿನ 15-20 ವರ್ಷಗಳ ಮುಂದಾಲೋಚನೆಯಿಂದ ವೈಜ್ಞಾನಿಕ ಯೋಜನೆ ರೂಪಿಸಬೇಕಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದ್ದಾರೆ.

ಮೈಸೂರು ಮಹಾನಗರ ಪಾಲಿಕೆ ಕಚೇರಿಯಲ್ಲಿ ನಡೆದ ಗ್ರೇಟರ್ ಮೈಸೂರು ಕುರಿತ ಪ್ರಥಮ ಸಭೆಯಲ್ಲಿಂದು ನಾನು ಅಧಿಕಾರಿಗಳಿಗೆ ನೀಡಿದ ಪ್ರಮುಖ ಸೂಚನೆಗಳಿವು ಎಂದು ಸಿಎಂ ಸಿದ್ದರಾಮಯ್ಯ ಅವರು ಕೆಲವೊಂದು ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಟ್ರಾಫಿಕ್ ಸಮಸ್ಯೆ ಯಾವುದೇ ಕಾರಣಕ್ಕೂ ಇರಬಾರದು.
ಉದ್ಯೋಗ ಸೃಷ್ಟಿಯಿಂದ ಘನ ತ್ಯಾಜ್ಯ ನಿರ್ವಹಣೆವರೆಗೂ ಆಧುನಿಕ ತಂತ್ರಜ್ಞಾನ ಬಳಕೆ ಮಾಡುವ ಬಗ್ಗೆ ಯೋಜನೆ ಸಿದ್ಧಪಡಿಸಿ, ಅನುಷ್ಠಾನ ಮಾಡಬೇಕು.
ತ್ಯಾಜ್ಯ ವಿಲೇವಾರಿ, ಕೈಗಾರಿಕಾ ತ್ಯಾಜ್ಯ ವಿಲೇವಾರಿ ಎಲ್ಲವೂ ವೈಜ್ಞಾನಿಕವಾಗಿರಬೇಕು. ಬಡಾವಣೆಗಳ ನಿರ್ಮಾಣ ಆಗುವಾಗ ಚರಂಡಿ, ರಸ್ಯೆಗಳು, ಒಳಚರಂಡಿ, ನೀರು, ವಿದ್ಯುತ್ ಸಂಪರ್ಕದ ಜೊತೆಗೆ ಪಾರ್ಕ್ ಗಳು ಕೂಡ ವ್ಯವಸ್ಥಿತವಾಗಿರಬೇಕು ಎಂದು ಸಿ.ಎಂ ಸಿದ್ದರಾಮಯ್ಯ ಅವರು ಹೇಳಿದ್ದಾರೆ.
ಮುಂದುವರಿದು ಮೈಸೂರಿಗೆ ಮತ್ತೊಂದು ಹೊರ ವರ್ತುಲ ರಸ್ತೆ ಅಗತ್ಯ ಬೀಳುತ್ತದೆ. ಇದಕ್ಕೆ ಈಗಲೇ ಯೋಜನೆ ಸಿದ್ಧ ಮಾಡಬೇಕು. ಆದಾಯವೂ ಹೆಚ್ಚಾಗಬೇಕು. ಇದಕ್ಕೆ ಸ್ಪಷ್ಟ ಅಂದಾಜು, ಯೋಜನೆ ರೂಪಿಸಿಕೊಳ್ಳಬೇಕು. ವಿಶಾಲವಾದ ರಸ್ತೆಗಳು ಮೈಸೂರಿನ ಹೆಗ್ಗಳಿಕೆ, ಗ್ರೇಟರ್ ಮೈಸೂರು ಇನ್ನಷ್ಟು ಯೋಜನಾ ಬದ್ಧವಾಗಿರಬೇಕು.
ಜನಸಂಖ್ಯೆಗೆ ಅನುಗುಣವಾಗಿ ಪೌರ ಕಾರ್ಮಿಕರ ಸಂಖ್ಯೆ ಹೆಚ್ಚಾಗಬೇಕಿದೆ. ಈ ಎಲ್ಲಾ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಜಿಲ್ಲಾಡಳಿತವು ಒಂದು ಸಮಗ್ರವಾದ ಪ್ರಗತಿ ಯೋಜನೆ ಸಿದ್ಧಪಡಿಸಬೇಕಿದೆ ಎಂದಿದ್ದಾರೆ.
ಮೈಸೂರಿನಲ್ಲಿ ಭೂಮಿ ಬೆಲೆ ಹೆಚ್ಚಳ ನಿರೀಕ್ಷೆ: ಬೆಂಗಳೂರಿನ ನಂತರ ಮೈಸೂರಿನಲ್ಲಿ ರಿಯಲ್ ಎಸ್ಟೇಟ್‌ಗೆ ಬೂಸ್ಟ್ ಸಿಕ್ಕಿದೆ. ಬೆಂಗಳೂರಿನಲ್ಲಿ ಸಮಸ್ಯೆಗಳು ಹೆಚ್ಚಾಗುತ್ತಿರುವ ಕಾರಣಕ್ಕೆ ಜನ ಮೈಸೂರಿನ ಕಡೆ ಹೋಗುವುದು ಇದೆ. ಅಲ್ಲದೇ ಬೆಂಗಳೂರಿನ ನಂತರ ಮೈಸೂರು ಡಿಮ್ಯಾಂಡ್ ಹೆಚ್ಚಾಗಿದೆ. ಭೂಮಿಯ ಬೆಲೆ ಈ ಭಾಗದಲ್ಲಿ ಹೆಚ್ಚಾಗುತ್ತಿದೆ. ಇದೀಗ ಮೈಸೂರು ಗ್ರೇಟರ್ ಮೈಸೂರು ಆಗಬೇಕು ಎಂದು ಸಿಎಂ ಸಿದ್ದರಾಮಯ್ಯ ಅವರು ಹೇಳಿರುವುದು ಮೈಸೂರು ಪಾಲಿಕೆ ವ್ಯಾಪ್ತಿಗೆ ಹೊಸ ಪ್ರದೇಶಗಳ ಸೇರ್ಪಡೆ ಹಾಗೂ ಭೂಮಿ ಬೆಲೆ ಹೆಚ್ಚಳವಾಗುವ ನಿರೀಕ್ಷೆ ಮೂಡಿದೆ.












Click it and Unblock the Notifications