45 ವರ್ಷದ ಬಳಿಕ ದಾಖಲೆ ಬರೆದ ಕಾವೇರಿ ಕಣಿವೆಯ 4 ಜಲಾಶಯಗಳು!
Recommended Video

ಬೆಂಗಳೂರು, ಜುಲೈ 16 : ಕಾವೇರಿ ಜಲಾನಯನ ಪ್ರದೇಶದಲ್ಲಿ ಭಾರೀ ಮಳೆಯಾಗುತ್ತಿದ್ದು, ಜಲಾಶಯಗಳು ಭರ್ತಿಯಾಗಿವೆ. 45 ವರ್ಷಗಳ ಬಳಿಕ ಜೂನ್ ತಿಂಗಳಿನಲ್ಲಿ ಕಾವೇರಿ ಜಲಾನಯನ ಪ್ರದೇಶದ ನಾಲ್ಕು ಅಣೆಕಟ್ಟಿಗಳಿಗೆ ಭಾರೀ ಪ್ರಮಾಣದಲ್ಲಿ ನೀರು ಹರಿದುಬಂದಿದೆ.
ಕಾವೇರಿ ಪಾತ್ರದ ಕೆಆರ್‌ಎಸ್, ಕಬಿನಿ, ಹಾರಂಗಿ ಮತ್ತು ಹೇಮಾವತಿ ಜಲಾಶಯಗಳಿಗೆ ಜೂನ್ ತಿಂಗಳಿನಲ್ಲಿ 76.5 ಟಿಎಂಸಿ ನೀರು ಹರಿದುಬಂದಿದೆ. 45 ವರ್ಷಗಳ ಬಳಿಕ ಜೂನ್‌ನಲ್ಲಿ ಇಷ್ಟು ಪ್ರಮಾಣದ ನೀರು ಜಲಾಶಯಗಳಿಗೆ ಬಂದಿದೆ.
ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ವಿಭಾಗದ ನಿರ್ದೇಶಕ ಶ್ರೀನಿವಾಸ ರೆಡ್ಡಿ ಅವರು ಈ ಕುರಿತು ಮಾಹಿತಿ ನೀಡಿದ್ದಾರೆ. ಜುಲೈ ತಿಂಗಳಿನಲ್ಲಿಯೂ ಮಳೆ ಮುಂದುವರೆದಿದೆ. ಜುಲೈ 1 ರಿಂದ 14ರ ತನಕ ಸುಮಾರು 72 ಟಿಎಂಸಿ ನೀರು 4 ಜಲಾಶಯಗಳಿಗೆ ಹರಿದು ಬಂದಿದೆ.
ಕಾವೇರಿ ಕಣಿವೆಯ ಜಲಾಶಯಗಳು ಈಗಾಗಲೇ ಭರ್ತಿಯಾಗಿವೆ. ಅಪಾರ ಪ್ರಮಾಣದ ನೀರನ್ನು ಹೊರ ಬಿಡಲಾಗುತ್ತಿದ್ದು, ನದಿ ಪಾತ್ರದಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿದೆ. ಕೆಆರ್‌ಎಸ್ ಮತ್ತು ಕಬಿನಿ ಜಲಾಶಯದಿಂದ ಭಾನುವಾರ ಸುಮಾರು 1.08 ಲಕ್ಷ ಕ್ಯುಸೆಕ್ ನೀರನ್ನು ನದಿಗೆ ಹರಿಸಲಾಗಿದೆ.

71 ಸಾವಿರ ಕ್ಯೂಸೆಕ್ ಹೊರ ಹರಿವು
ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದಲ್ಲಿ ಕೆಆರ್‌ಎಸ್ ಜಲಾಶಯವಿದೆ. ಗರಿಷ್ಠ ಮಟ್ಟ 124 ಅಡಿ. ಸದ್ಯ, 123 ಅಡಿ ನೀರು ಸಂಗ್ರಹವಾಗಿದ್ದು, 65,777 ಕ್ಯೂಸೆಕ್ ಒಳ ಹರಿವು ಇದೆ. ಜಲಾಶಯದಿಂದ 30 ಗೇಟ್‌ಗಳ ಮೂಲಕ 71,583 ಕ್ಯುಸೆಕ್ ನೀರನ್ನು ನದಿಗೆ ಬಿಡಲಾಗುತ್ತಿದೆ.
ಹೊರಹರಿವಿನ ಪ್ರಮಾಣ ಹೆಚ್ಚಾದ ಹಿನ್ನಲೆಯಲ್ಲಿ ಕಾವೇರಿ ನದಿ ಪಾತ್ರದಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿದೆ. ಕೆಆರ್‌ಎಸ್ ಬೃಂದಾವನ, ಉದ್ಯಾನ ಪ್ರವೇಶ ನಿಷೇಧಿಸಲಾಗಿದೆ. ಕಾರಂಜಿಗಳನ್ನು ಬಂದ್ ಮಾಡಲಾಗಿದೆ.

ಹೇಮಾವತಿ ಜಲಾಶಯ
ಹಾಸನ ನಗರದಿಂದ ಸುಮಾರು 15 ಕಿ.ಮೀ.ದೂರದಲ್ಲಿರುವ ಗೊರೂರಿನಲ್ಲಿ ಹೇಮಾವತಿ ಜಲಾಶಯವಿದೆ. ಗರಿಷ್ಠ ಮಟ್ಟ 2,922 ಅಡಿ. ಸದ್ಯ, 2,920 ಅಡಿ ನೀರಿನ ಸಂಗ್ರಹವಿದೆ. 30,319 ಕ್ಯುಸೆಕ್ ನೀರು ಹರಿದು ಬರುತ್ತಿದ್ದು, 31,900 ಕ್ಯುಸೆಕ್ ನೀರನ್ನು ನದಿಗೆ ಬಿಡಲಾಗುತ್ತಿದೆ.
ಹೇಮಾವತಿಯಿಂದ ಬಿಟ್ಟ ನೀರು ಸಹ ಕೆಆರ್‌ಎಸ್ ಸೇರುತ್ತದೆ. 4 ವರ್ಷಗಳ ಬಳಿಕ ಜಲಾಶಯ ಭರ್ತಿಯಾಗಿದ್ದು ರೈತರ ಮೊಗದಲ್ಲಿ ಮಂದಹಾಸ ಮೂಡಿದೆ. ಜಲಾಶಯದ ಹಿನ್ನೀರಿನಲ್ಲಿರುವ ಶೆಟ್ಟಿಹಳ್ಳಿ ಚರ್ಚ್ ಜಲಾವೃತಗೊಂಡಿದೆ.

ಕಬಿನಿ ಜಲಾಶಯ
ಮೈಸೂರು ಜಿಲ್ಲೆಯ ಎಚ್.ಡಿ.ಕೋಟೆ ತಾಲೂಕಿನಲ್ಲಿರುವ ಕಬಿನಿ ಜಲಾಶಯ ಭರ್ತಿಯಾಗಿದೆ. ಕಾವೇರಿ ನದಿ ಪಾತ್ರದ ಪ್ರಮುಖ ಜಲಾಶಯಗಳಲ್ಲಿ ಇದೂ ಒಂದು.
2,284 ಅಡಿ ಎತ್ತರದ ಜಲಾಶಯದಲ್ಲಿ 2,281 ಅಡಿ ನೀರಿನ ಸಂಗ್ರಹವಿದೆ. 36,137 ಕ್ಯುಸೆಕ್ ನೀರು ಹರಿದು ಬರುತ್ತಿದ್ದು, 33,300 ಕ್ಯುಸೆಕ್ ನೀರನ್ನು ನದಿಗೆ ಬಿಡಲಾಗುತ್ತಿದೆ.

ಹಾರಂಗಿ ಜಲಾಶಯ
ಕಾವೇರಿ ಕಣಿವೆಯ ಪ್ರಮುಖ ಜಲಾಶಯ ಹಾರಂಗಿ. ಕೊಡಗು ಜಿಲ್ಲೆಯ ಕುಶಾಲನಗರದಿಂದ ಸುಮಾರು 9 ಕಿ.ಮೀ.ದೂರದಲ್ಲಿದೆ. ಜಲಾಶಯದ ಗರಿಷ್ಠ ಮಟ್ಟ 2,859 ಅಡಿ.
ಜುಲೈ 7ರಂದೇ ಜಲಾಶಯ ಭರ್ತಿಯಾಗಿದೆ. ಸದ್ಯ ಜಲಾಶಯದಲ್ಲಿ 2,856 ಅಡಿ ನೀರಿನ ಸಂಗ್ರಹವಿದೆ. 13,029 ಕ್ಯುಸೆಕ್ ಒಳ ಹರಿವು ಇದ್ದು, ನಾಲ್ಕು ಗೇಟ್‌ಗಳನ್ನು ತೆರೆದು 14,785 ಕ್ಯುಸೆಕ್ ನೀರನ್ನು ನದಿಗೆ ಬಿಡಲಾಗುತ್ತಿದೆ.












Click it and Unblock the Notifications