ಆಫ್ಘಾನ್ ವಿದ್ಯಾರ್ಥಿಗಳ ದೇಹ ಮಾತ್ರ ಇಲ್ಲಿದೆ, ಮನಸ್ಸು ಅಲ್ಲಿರುವ ಪೋಷಕರ ಮೇಲಿದೆ!
ಬೆಂಗಳೂರು, ಆ. 23: ತಮ್ಮ ದೇಶದಲ್ಲಿ ನಡೆಯುತ್ತಿರುವ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಅಪಘಾನಿಸ್ತಾನ ವಿದ್ಯಾರ್ಥಿಗಳು ಆತಂಕದಲ್ಲಿದ್ದಾರೆ. ರಾಜ್ಯದಲ್ಲಿ ಬಹಳಷ್ಟು ಆಫ್ಘಾನ್ ವಿದ್ಯಾರ್ಥಿಗಳಿದ್ದಾರೆ. ಆ ಕಡೆ ತಮ್ಮ ದೇಶಕ್ಕೂ ತೆರಳಲಾಗದೆ, ಈ ಕಡೆ ಇಲ್ಲಿಯೂ ನೆಮ್ಮದಿಯಿಂದ ಇರಲಾಗದ ಅತಂತ್ರ ಪರಿಸ್ಥಿಯಲ್ಲಿದ್ದಾರೆ ಅವರು.
ಅಪಘಾನಿಸ್ತಾನದಲ್ಲಿ ತಾಲಿಬಾನ್ ಆಡಳಿತ ಶುರುವಾಗಿದೆ. ಅಲ್ಲಿದ್ದ ಸರ್ಕಾರವನ್ನು ತಾಲಿಬಾನ್ ಕಿತ್ತೊಗೆದಿರುವುದು ಬೆಂಗಳೂರಿನಲ್ಲಿರುವ ಆಫ್ಘಾನ್ ಮೂಲದ ವಿದ್ಯಾರ್ಥಿಗಳಲ್ಲಿ ಆತಂಕ ಸೃಷ್ಟಿಸಿದೆ. ಇವರೆಲ್ಲರ ಪೋಷಕರು ತಮ್ಮ ದೇಶದಲ್ಲಿದ್ದಾರೆ. ಆದರೆ ಯಾವಾಗ ಏನಾಗುತ್ತದೆಯೋ ಎಂಬ ಆತಂಕದ ಇವರನ್ನು ಕಾಡುತ್ತಿದೆ.
ಇದೇ ಹಿನ್ನೆಲೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರನ್ನು ವಿದ್ಯಾರ್ಥಿಗಳು ಭೇಟಿ ಮಾಡಿ ತಮ್ಮ ಆತಂಕ ಹಂಚಿಕೊಂಡಿದ್ದಾರೆ. ಅಷ್ಟಕ್ಕು ಆಫ್ಘಾನ್ ವಿದ್ಯಾರ್ಥಿಗಳು ಡಿಕೆಶಿ ಎದುರಿಗೆ ಹೇಳಿಕೊಂಡಿದ್ದೇನು? ಅದಕ್ಕೆ ಡಿ.ಕೆ. ಶಿವಕುಮಾರ್ ಹೇಳಿದ್ದೇನು?

ಡಿಕೆಶಿ ಭೇಟಿ ಮಾಡಿದ ಆಫ್ಘಾನ್ ವಿಧ್ಯಾರ್ಥಿಗಳು!
ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಸ್ನಾತಕೋತ್ತರ ಪದವಿ ಓದುತ್ತಿರುವ ಆಫ್ಘಾನಿಸ್ತಾನದ ವಿದ್ಯಾರ್ಥಿಗಳು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ರನ್ನು ಸದಾಶಿವನಗರ ನಿವಾಸದಲ್ಲಿ ಸೋಮವಾರ ಭೇಟಿ ಮಾಡಿದರು. ತಮ್ಮ ದೇಶ ಆಫ್ಘಾನಿಸ್ತಾನದಲ್ಲಿ ಆಗುತ್ತಿರುವ ಬೆಳವಣಿಗೆಗಳಿಂದ ಅಲ್ಲಿರುವ ತಮ್ಮ ಕುಟುಂಬ ಸದಸ್ಯರು, ಬಂಧುಗಳನ್ನು ಸಂಪರ್ಕಿಸಲು ಆಗದೆ, ಅವರ ಪರಿಸ್ಥಿತಿ ಬಗ್ಗೆ ತಮಗಾಗಿರುವ ಆತಂಕವನ್ನು ವಿದ್ಯಾರ್ಥಿಗಳು ಹೇಳಿಕೊಂಡರು. ತಮ್ಮ ನೆರವಿಗೆ ಬರುವಂತೆ ಮನವಿ ಮಾಡಿಕೊಂಡರು. ಆಫ್ಘಾನ್ ವಿದ್ಯಾರ್ಥಿಗಳಾದ ಜಹಿದುಲ್ಲಾ ಸಾದಿಕ್, ಒಬೆದುಲ್ಲಾ ಸಾದಿಕಿಲಿ, ದಿಯಾನ ಫರ್ಜಾನ್, ಹಾರುನ್ ಬುರಾನ್ ಮತ್ತಿತರರು ಡಿ.ಕೆ. ಶಿವಕುಮಾರ್ ಭೇಟಿ ಮಾಡಿದ್ದರು.
ನನ್ನ ಕೈಲಾದಷ್ಟು ಅವರಿಗೆ ಧೈರ್ಯ ತುಂಬಿದ್ದೇನೆ!
ಅಫಘಾನಿಸ್ತಾನದ ವಿದ್ಯಾರ್ಥಿಗಳನ್ನು ಭೇಟಿ ಮಾಡಿದ ಬಳಿಕ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಮಾಧ್ಯಮಗಳೊಂದಿಗೆ ಮಾತನಾಡಿದ್ದಾರೆ. "ಅಫ್ಘಾನ್ ವಿಧ್ಯಾರ್ಥಿಗಳು ಭೇಟಿಗೆ ಬಂದಿದ್ದರು. ನಮ್ಮ ರಾಜ್ಯದಲ್ಲಿ ಅವರಿಗೆ ಎಲ್ಲ ತರಹದ ರಕ್ಷಣೆಯನ್ನು ಕೊಡ ಬೇಕಾಗುತ್ತದೆ. ಅವರೆಲ್ಲರೂ ಮಾನಸಿಕವಾಗಿ ಕುಗ್ಗಿ ಹೋಗಿದ್ದಾರೆ. ನನ್ನ ಕೈಲಾದಷ್ಟು ಅವರಿಗೆ ಧೈರ್ಯ ತುಂಬವ ಕೆಲಸ ಮಾಡಿದ್ದೇನೆ. ನಮ್ಮ ರಾಜ್ಯದಲ್ಲಿ ಓದುವ ಎಲ್ಲ ಎಲ್ಲರೂ ನಮ್ಮ ಮಕ್ಕಳೇ. ಅವರ ಧರ್ಮ ಯಾವುದೇ ಆದರೂ ಅವು ನಮ್ಮ ಮಕ್ಕಳು. ನಮಗೆ ಮಾನವೀಯತೆ ಮುಖ್ಯವಾಗುತ್ತದೆ" ಎಂದು ಹೇಳಿದ್ದಾರೆ.

ಆಫ್ಘಾನ್ ವಿದ್ಯಾರ್ಥಿಗಳ ದೇಹ ಮಾತ್ರ ಇಲ್ಲಿದೆ!
'ಅಫ್ಘಾನಿಸ್ತಾನದಲ್ಲಿ ಆಗುತ್ತಿರುವ ಬೆಳವಣಿಗೆಗಳಿಂದ ಅವರೆಲ್ಲರೂ ನೊಂದಿದ್ದಾರೆ. ಅವರ ದೇಹ ಮಾತ್ರ ಇಲ್ಲಿದ್ದು, ಅವರ ಮನಸ್ಸು ಅಲ್ಲಿರುವ ಪೋಷಕರ ಮೇಲಿದೆ" ಎಂದು ಡಿಕೆಶಿ ವಿವರಿಸಿದ್ದಾರೆ.
ಬೆಂಗಳೂರು ಶಿಕ್ಷಣ ಹಬ್ ಆಗಿದ್ದು, ಅನೇಕ ಅಂತಾರಾಷ್ಟ್ರೀಯ ವಿದ್ಯಾರ್ಥಿಗಳು ಇಲ್ಲಿದ್ದಾರೆ. ಅವರಿಗೆ ಧೈರ್ಯ ತುಂಬಬೇಕು. ಧರ್ಮ ಯಾವುದೇ ಆಗಿರಲಿ, ಮಾನವೀಯತೆ ದೃಷ್ಟಿಯಿಂದ ಅವರಿಗೆ ಧೈರ್ಯ ತುಂಬಬೇಕು. ಅಫ್ಘಾನಿಸ್ತಾನದಲ್ಲಿರುವ ಕನ್ನಡಿಗರನ್ನು ವಾಪಸ್ ಕರೆತರುವುದು ಭಾರತ ಸರ್ಕಾರಕ್ಕೆ ಸಂಬಂಧಿಸಿದ ವಿಚಾರ. ಈಗ ನಾನು ಆ ಬಗ್ಗೆ ಪ್ರತಿಕ್ರಿಯೆ ನೀಡುವುದಿಲ್ಲ. ಈ ಬಗ್ಗೆ ಮುಖ್ಯಮಂತ್ರಿಗಳು ಮಾತನಾಡಲಿ' ಎಂದು ಡಿಕೆಶಿ ತಿಳಿಸಿದರು. ಇದೇ ಸಂದರ್ಭದಲ್ಲಿ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮೇಲೆ ಡಿಕೆಶಿ ಹರಿಹಾಯ್ದಿದ್ದಾರೆ.

ಆ ಹುಚ್ಚನಿಗೆ ನ್ಯೂಸ್‌ನಲ್ಲಿಬೇಕೆಂಬ ಬಯಕೆ!
ರಾಹುಲ್ ಗಾಂಧಿ ಹುಚ್ಚು ಎಂದಿದ್ದ ಯತ್ನಾಳ್ ಹೇಳಿಕೆಗೆ ಡಿ.ಕೆ. ಶಿವಕುಮಾರ್ ಇದೇ ವೇಳೆಯಲ್ಲಿ ತಿರುಗೇಟು ಕೊಟ್ಟಿದ್ದಾರೆ. "ಪಾಪಾ ಏನು ಮಾಡ್ತೀರಾ? ಆತ ನ್ಯೂಸ್‌ನಲ್ಲಿ ಇರಬೇಕು. ಆ ಹುಚ್ಚನಿಗೆ ನ್ಯೂಸ್‌ನಲ್ಲಿಬೇಕೆಂಬ ಬಯಕೆ. ಅದಕ್ಕೆ ಏನೇನೋ ಮಾತಾಡುತ್ತಾನೆ. ಪ್ರಚಾರದಲ್ಲಿ ಇರಬೇಕಲ್ಲ? ಅದಕ್ಕೆ ಏನೇನಾದರೂ ಮಾತನಾಡುತ್ತಾನೆ ಎಂದು ಶಾಸಕ ಬಸನಗೌಡ ಯತ್ನಾಳ್ ವಿರುದ್ಧ ಡಿ.ಕೆ. ಶಿವಕುಮಾರ್ ಮಾತನಾಡಿದ್ದಾರೆ.
'ದೇಶದಲ್ಲಿ ಕೋವಿಡ್ ಜತೆಗೆ ನಿರುದ್ಯೋಗ, ಬೆಲೆ ಏರಿಕೆಯಿಂದ ಜನಸಾಮಾನ್ಯರಿಗೆ ಇನ್ನಿಲ್ಲದ ತೊಂದರೆ ಆಗುತ್ತಿದೆ. ಇದೆಲ್ಲವನ್ನು ಮರೆಸಲು ಈ ರೀತಿ ಮಾತನಾಡಿ ಪ್ರಯತ್ನಿಸುತ್ತಿದ್ದಾರೆ. ಕಾಂಗ್ರೆಸ್ ನಾಯಕರ ವಿರುದ್ಧ ಇಂತಹ ಹೇಳಿಕೆ ನೀಡಿ ಜನರ ದಾರಿ ತಪ್ಪಿಸುತ್ತಿದ್ದಾರೆ' ಎಂದು ತಿರುಗೇಟು ನೀಡಿದ್ದಾರೆ. ಜೊತೆಗೆ ಮಾಜಿ ಸಚಿವ ವಿನಯ್ ಕುಲಕರ್ಣಿ ಜೊತೆಗೆ ಕಾಂಗ್ರೆಸ್ ಪಕ್ಷ ಇದೆ ಎಂದು ಡಿಕೆಶಿ ಮತ್ತೊಮ್ಮೆ ಸ್ಪಷ್ಟವಾಗಿ ಹೇಳಿದ್ದಾರೆ.












Click it and Unblock the Notifications