ದಂಡ, ಸೆಸ್‌ಗಳನ್ನು ಏರಿಕೆ ಮಾಡಲಿದೆಯೇ ಸರ್ಕಾರ?
ಬೆಂಗಳೂರು, ನವೆಂಬರ್ 27; ಗ್ಯಾರಂಟಿ ಯೋಜನೆಗಳ ಭಾರದಿಂದ ಆದಾಯ ಹೊಂದಿಸಲು ಕರ್ನಾಟಕ ಸರ್ಕಾರ ಮುಂದಾಗಿದೆ. ಇಂತಹ ಸಂದರ್ಭದಲ್ಲಿಯೇ ದಂಡ, ಸೆಸ್ ಹೆಚ್ಚಿಸಿ ಎಂದು ಸರ್ಕಾರಕ್ಕೆ ಶಿಫಾರಸು ಸಲ್ಲಿಕೆಯಾಗಿದೆ. ಸರ್ಕಾರ ಈ ಶಿಫಾರಸು ಒಪ್ಪಲಿದೆಯೇ? ಕಾದು ನೋಡಬೇಕಿದೆ.
ಕರ್ನಾಟಕ ಆಡಳಿತ ಸುಧಾರಣಾ ಆಯೋಗ ಮುಖ್ಯಮಂತ್ರಿ ಸಿದ್ದರಾಮಯ್ಯಗೆ 6ನೇ ವರದಿಯನ್ನು ಸಲ್ಲಿಕೆ ಮಾಡಿದೆ. ಸರ್ಕಾರದ 7 ಇಲಾಖೆಗಳ 882 ಶಿಫಾರಸುಗಳನ್ನು ಸಲ್ಲಿಸಿದೆ. ಇಲಾಖೆಗಳ ಆದಾಯ ವೃದ್ಧಿಗೆ ಹಲವು ಶಿಫಾರಸುಗಳನ್ನು ಮಾಡಲಾಗಿದೆ.

ಸರ್ಕಾರ ಎಲ್ಲಾ ಇಲಾಖೆಗಳ ಆಡಳಿತ ಸುಧಾರಣೆಗೆ ಕೈಗೊಳ್ಳಬೇಕಾದ ಕ್ರಮಗಳ ಕುರಿತಂತೆ ವರದಿ ನೀಡುವಂತೆ 2ನೇ ಕರ್ನಾಟಕ ಆಡಳಿತ ಸುಧಾರಣಾ ಆಯೋಗವು ಶನಿವಾರ ಹಣಕಾಸು ಸಚಿವರೂ ಆಗಿರುವ ಸಿದ್ದರಾಮಯ್ಯಗೆ ವರದಿ ಸಲ್ಲಿಸಿದೆ.
ಯಾವ-ಯಾವ ಇಲಾಖೆಗಳು?; ಕರ್ನಾಟಕ ಸರ್ಕಾರದ ನಿವೃತ್ತ ಮುಖ್ಯ ಕಾರ್ಯದರ್ಶಿ ಟಿ. ಎಂ. ವಿಜಯ ಭಾಸ್ಕರ್ ನೇತೃತ್ವದ ಆಯೋಗ ವಸತಿ, ಜಲಸಂಪನ್ಮೂಲ, ಅರಣ್ಯ ಪರಿಸರ ಮತ್ತು ಜೀವಶಾಸ್ತ್ರ ಸೇರಿದಂತೆ 7 ಇಲಾಖೆಗಳಲ್ಲಿ ತರಬಹುದಾದ ಬದಲಾವಣೆಗಳನ್ನು ಶಿಫಾರಸು ಮಾಡಿದೆ.
ಹಲವು ಕಾಯ್ದೆ ಮತ್ತು ನಿಯಮಗಳಡಿ ವಿಧಿಸುವ ದಂಡ, ಸೆಸ್ ಪರಿಷ್ಕರಣೆ ಮಾಡಿಲ್ಲ. ಈ ನಿಯಮದಲ್ಲಿ ಬದಲಾವಣೆ ತಂದು ಹಣದುಬ್ಬರಕ್ಕೆ ಅನುಗುಣವಾಗಿ ದಂಡ, ಶುಲ್ಕ, ಶಿಕ್ಷೆಯ ಉಪಬಂಧಗಳನ್ನು ಪರಿಷ್ಕರಣೆ ಮಾಡಬೇಕು ಎಂದು ಶಿಫಾರಸು ಮಾಡಲಾಗಿದೆ.
ನಗರ ಸ್ಥಳೀಯ ಸಂಸ್ಥೆಗಳಿಂದ ವಸೂಲಿ ಮಾಡುವ ಆಸ್ತಿ ತೆರಿಗೆ ಸೇರಿದಂತೆ ಇತರ ತೆರಿಗೆ, ಸೆಸ್ ಹೆಚ್ಚಳ, ಕೈಗಾರಿಕೆಗಳ ನೀರು ಬಳಕೆ ಶುಲ್ಕವನ್ನು ಪ್ರತಿ ವರ್ಷ ಶೇ 5ರಷ್ಟು ಹೆಚ್ಚಳ, ಗಣಿ ಮತ್ತು ಭೂ ವಿಜ್ಞಾನ ಇಲಾಖೆ ವಸೂಲಿ ಮಾಡುವ ರಾಜಧನವನ್ನು ಪ್ರತಿ ವರ್ಷ ಪರಿಷ್ಕರಣೆ ಮಾಡುವುದು ಸೇರಿದಂತೆ ವಿವಿಧ ಶಿಫಾರಸು ಮಾಡಲಾಗಿದೆ.
ಸಣ್ಣ ನಗರ, ಪಟ್ಟಣಗಳಲ್ಲೂ ಕೈಗಾರಿಕಾ ಪಾರ್ಕ್‌ಗಳ ಸ್ಥಾಪನೆಯಾಗಬೇಕು. ಇದಕ್ಕಾಗಿ 2020-25ರ ಕೈಗಾರಿಕಾ ನೀತಿಯಲ್ಲಿ ಬದಲಾವಣೆ ತರಬೇಕು ಎಂಬುದು ಸೇರಿದಂತೆ 882 ಶಿಫಾರಸುಗಳನ್ನು ಸಲ್ಲಿಕೆ ಮಾಡಲಾಗಿದೆ. ಆದರೆ ಸರ್ಕಾರ ಇದರಲ್ಲಿ ಎಷ್ಟು ಒಪ್ಪಲಿದೆ? ಎಂಬದು ಕುತೂಹಲಕ್ಕೆ ಕಾರಣವಾಗಿದೆ.
ಕರ್ನಾಟಕ ಆಡಳಿತ ಸುಧಾರಣಾ ಆಯೋಗ 30 ಇಲಾಖೆಗೆ ಸಂಬಂಧಿಸಿದಂತೆ 6 ವರದಿಗಳನ್ನು ಸಲ್ಲಿಕೆ ಮಾಡಿದೆ. ಒಟ್ಟು 4,512 ಶಿಫಾರಸುಗಳನ್ನು ಮಾಡಿದೆ. ಹಿಂದಿನ 5 ವರದಿಗಳಲ್ಲಿ 23 ಇಲಾಖೆಗೆ ಸಂಬಂಧಿಸಿದ 3,640 ಶಿಫಾರಸು ಮಾಡಲಾಗಿದೆ. ಇದರಲ್ಲಿ 66 ಶಿಫಾರಸು ಮಾತ್ರ ಅಂಗೀಕಾರವಾಗಿದೆ. 284 ಶಿಫಾರಸು ಬಗ್ಗೆ ಕ್ರಮ ಕೈಗೊಳ್ಳಲಾಗುತ್ತಿದೆ.
90 ಶಿಫಾರಸುಗಳನ್ನು ಪರಿಶೀಲಿಸಿ 13 ಶಿಫಾರಸು ತಿರಸ್ಕಾರ ಮಾಡಲಾಗಿದೆ. 3,177 ಶಿಫಾರಸುಗಳ ಬಗ್ಗೆ ಯಾವುದೇ ಕ್ರಮಗಳನ್ನು ಕೈಗೊಂಡಿಲ್ಲ. ಆದ್ದರಿಂದ ಆಯೋಗ ನೀಡಿದ ಶಿಫಾರಸುಗಳನ್ನು ಸರ್ಕಾರ ಒಪ್ಪಲೇಬೇಕು ಎಂದೇನಿಲ್ಲ.
ಸರ್ಕಾರಕ್ಕೆ ಮಾಡಿರುವ ಪ್ರಮುಖ ಶಿಫಾರಸುಗಳು
* ಲೇಔಟ್‌ಗಳಲ್ಲಿ ನಿವೇಶನಗಳನ್ನು ದೀರ್ಘ ಕಾಲದ ತನಕ ಖಾಲಿ ಬಿಡುವವರಿಗೆ ಮಾಲೀಕರಿಗೆ ಮಾರ್ಗಸೂಚಿ ದರದ ಶೇ 25ರಷ್ಟು ದಂಡ ವಿಧಿಸಬೇಕು.
* ಲೇಔಟ್‌ಗಳ ಅನುಮೋದನೆಗೆ ವೇಗ ನೀಡಲು ಕೆಎಚ್‌ಬಿಯನ್ನು ಸ್ಥಳೀಯ ಪ್ರಾಧಿಕಾರವೆಂದು ಅಧಿಸೂಚಿಸಲು ಕೆಟಿಸಿಪಿ ಕಾಯ್ದೆ ಮತ್ತು ಕೆಎಚ್‌ಬಿ ಕಾಯ್ದೆಯಲ್ಲಿ ತಿದ್ದುಪಡಿ ತರುವುದು.
* ಅರಣ್ಯ ವ್ಯಾಪ್ತಿಯಲ್ಲಿ ಕೆಲಸ ಮಾಡುವ ಹೊರಗುತ್ತಿಗೆ ಸಿಬ್ಬಂದಿಗೂ ಮರಣ ಮತ್ತು ಅಂಗವೈಕಲ್ಯ ವಿಮೆ ವಿಸ್ತರಣೆ ಮಾಡಬೇಕು.
* ಬೀಟೆ ಮರಗಳನ್ನು ಕಡಿಯಲು ಮತ್ತು ಸಾಗಿಸಲು ಇರುವ ವಿಶೇಷ ನಿಯಮಾವಳಿಗಳನ್ನು ಸಡಿಲಿಸಬೇಕು.
* ಲೋಕೋಪಯೋಗಿ ಇಲಾಖೆಯಿಂದ ರಸ್ತೆ ಕಾಮಗಾರಿಗೆ ಬಿಲ್ ಪಾವತಿಸಲು ಆನ್‌ಲೈನ್ ರಸ್ತೆ ವಿವರ ನವೀಕರಣ ಕಡ್ಡಾಯಗೊಳಿಸುವುದು.












Click it and Unblock the Notifications