ಮತ್ತೆ ಸದ್ದು ಮಾಡಿದ ಅಡ್ಜಸ್ಟ್ ಮೆಂಟ್ ಪಾಲಿಟಿಕ್ಸ್; ಯತ್ನಾಳ್ ವಿರುದ್ದ ಮುರುಗೇಶ್ ನಿರಾಣಿ ಹೊಸ ಬಾಂಬ್
ವಿಜಯಪುರ, ಜೂನ್ 29: ರಾಜ್ಯ ರಾಜಕಾರಣದಲ್ಲಿ ಅಡ್ಜಸ್ಟ್ ಮೆಂಟ್ ಪಾಲಿಟಿಕ್ಸ್ ಸಿಕ್ಕಾಪಟ್ಟೆ ಸುದ್ದು ಮಾಡುತ್ತಿದೆ. ಪ್ರತಾಪ್ ಸಿಂಹ ಹಾಗೂ ಸಿ.ಟಿ ರವಿ ಹಾಕಿರುವ ಬಾಂಬ್ ಪಕ್ಷದೊಳಗೆ ಬೆಂಕಿ ಹಚ್ಚಿದೆ. ನಾಯಕರ ನಡುವೆಯೇ ಅಂತರ್ ಯುದ್ಧಕ್ಕೆ ಕಾರಣವಾಗಿದೆ. ಪರೋಕ್ಷವಾಗಿ ಬಿ ಎಸ್ ಯಡಿಯೂರಪ್ಪ ಹಾಗೂ ಬಸವರಾಜ ಬೊಮ್ಮಾಯಿಯವರ ವಿರುದ್ದವಾಗಿ ಪಕ್ಷದಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ.
ಇನ್ನೂ ಶಾಸಕ ಬಸವನಗೌಡ ಪಾಟೀಲ್ ಹಾಗೂ ಮುರುಗೇಶ್ ನಿರಾಣಿ ನಡುವೆ ವಾಕ್ಸಮರ ಮತ್ತೆ ಮುಂದುವರೆದಿದ್ದು, ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರ ಪಾಪದ ಕೊಡ ತುಂಬಿದೆ. ವಿಜಯಪುರ ಜಿಲ್ಲೆಯಲ್ಲಿ ಬಿಜೆಪಿ ಅಭ್ಯರ್ಥಿಗಳನ್ನು ಗೆಲ್ಲಿಸಲಿಲ್ಲ. ಒಳ ಒಪ್ಪಂದ ಯತ್ನಾಳ ಮಾಡಿಕೊಂಡಿದ್ದಾರೆ ಎಂದು ಮುರುಗೇಶ್ ನಿರಾಣಿ ಹೊಸ ಬಾಂಬ್ ಸಿಡಿಸಿದ್ದಾರೆ.

ಈ ಕುರಿತು ಮಾಜಿ ಸಚಿವ ಮುರುಗೇಶ್ ನಿರಾಣಿ ಮಾತನಾಡಿ, ನಾವು ಮುಂಬರುವ ಲೋಕಸಭೆ ಚುನಾವಣೆಯಲ್ಲಿ ರಾಜ್ಯದ ಎಲ್ಲಾ 28 ಲೋಕಸಭೆ ಕ್ಷೇತ್ರಗಳಲ್ಲಿ ಬಿಜೆಪಿ ಗೆಲ್ಲಿಸಲು ಕೆಲಸ ಮಾಡುತ್ತೇವೆ. ನನ್ನ ವಿರುದ್ಧ ಆರೋಪ ಮಾಡುವ ಯತ್ನಾಳ ಅವರು, ನಿರಾಣಿ ಯಾರನ್ನು ಸೋಲಿಸಲು ಯಾರಿಗೆ, ಯಾವಾಗ ಹಣ ನೀಡಿದ್ದಾರೆ ಸ್ಪಷ್ಡಪಡಿಸಲಿ ಎಂದು ಆಗ್ರಹಿಸಿದ್ದಾರೆ.
2012ರಲ್ಲಿ ನಾನು ಕೈಗಾರಿಕೆ ಸಚಿವನಾಗಿದ್ದಾಗ ಬಹುಮತ ಇಲ್ಲದಿದ್ದರೂ ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವನಾಗಿ ಜಿ. ಪಂ. ನಲ್ಲಿ ಬಿಜೆಪಿ ಸದಸ್ಯರನ್ನು ಅಧ್ಯಕ್ಷ ಮತ್ತು ಉಪಾಧ್ಯಕ್ಷರನ್ನು ಮಾಡಿದ್ದೆ. ನೀವು ಇಂಥ ಯಾವ ಕೆಲಸ ಮಾಡಿದ್ದೀರಿ? ನಾಲ್ಕು ವರ್ಷ ಬಿಜೆಪಿ ಅಧಿಕಾರದಲ್ಲಿದ್ದರೂ ವಿಜಯಪುರ ಮಹಾನಗರ ಪಾಲಿಕೆಗೆ ಯಾಕೆ ಚುನಾವಣೆ ನಡೆಸಲಿಲ್ಲ? ಸದಸ್ಯರ ಅಧಿಕಾರವನ್ನು ನೀವೆ ಅನುಭವಿಸಲಿಲ್ಲ? ಶುದ್ಧ ಹಸ್ತ ಎಂದು ಹೇಳಿಕೊಳ್ಳುವವರು ಅಧಿಕಾರಿಗಳಿಗೆ ಗೋಶಾಲೆ ಯಾಕೆ ಸಹಾಯ ನೀಡಲು ಹೇಳಿದ್ದೀರಿ? ಎಂದು ಮುರುಗೇಶ ನಿರಾಣಿ ಆಕ್ರೋಶ ವ್ಯಕ್ತಪಡಿಸಿದರು.

ಯತ್ನಾಳ ಹೇಳಿಕೆ ಮತ್ತು ವರ್ತನೆಯಿಂದ ಬಿಜೆಪಿಗೆ ಡ್ಯಾಮೇಜ್ ಆಗಿದ್ದು, ಅವರ ಪಾಪದ ಕೊಡ ತುಂಬಿದೆ ಎಂದು ಮಾಜಿ ಸಚಿವ ಮುರುಗೇಶ ನಿರಾಣಿ ಕಿಡಿ ಕಾರಿದ್ದಾರೆ. ಅಟಲ್ ಬಿಹಾರಿ ವಾಜಪೇಯಿ ಅವರು ಪ್ರಧಾನಿಯಾಗಿದ್ದಾಗ ಅಂದಿನ ಸಂಸದ ವಿಜಯ ಸಂಕೇಶ್ವರ ಅವರು ಕಾರ್ಯ ಬಾಹುಳ್ಯದಿಂದಾಗಿ ಸಚಿವ ಸ್ಥಾನ ಒಪ್ಪಿರಲಿಲ್ಲ. ಅವರ ತ್ಯಾಗ ಮತ್ತು ಸಲಹೆಯಂತೆ ಅಂದಿನ ಬಿಜೆಪಿ ರಾಜ್ಯಾಧ್ಯಕ್ಷ ಬಸವರಾಜ ಪಾಟೀಲ ಸೇಡಂ ಅವರು ಶಿಫಾರಸು ಮಾಡಿದ್ದರಿಂದ ಯತ್ನಾಳ ಅವರು ಕೇಂದ್ರ ಸಚಿವರಾಗಿದ್ದರು. ಜವಳಿ ಮತ್ತು ರೈಲ್ವೆ ಸಚಿವರಾಗಿದ್ದರೂ ಅವರು ಯಾವುದೇ ಅಭಿವೃದ್ಧಿ ಕೆಲಸ ಮಾಡಲಿಲ್ಲ ಎಂದು ಮುರುಗೇಶ ನಿರಾಣಿ ಕಿಡಿ ಕಾರಿದರು.
ವಿಜಯಪುರದಲ್ಲಿ ಹೇಗೆ ಗೆದ್ದಿದ್ದೀರಿ ಎಂಬುದು ಎಲ್ಲರಿಗೂ ಗೊತ್ತಿದೆ, ಬೇರೆ ಜಿಲ್ಲೆಯಲ್ಲಿ ಬಿಡಲಿ ವಿಜಯಪುರ ಜಿಲ್ಲೆಯಲ್ಲೂ ಯಾರೊಬ್ಬ ಬಿಜೆಪಿ ಶಾಸಕರನ್ನು ಅವರು ಗೆಲ್ಲಿಸಲಿಲಿಲ್ಲ. ಈ ಮುಂಚೆ ಯಡಿಯೂರಪ್ಪ, ಈಶ್ವರಪ್ಪ, ಶೋಭಾ ಕರಂದ್ಲಾಜೆ, ಜಗದೀಶ ಶೆಟ್ಟರ, ಪ್ರಹ್ಲಾದ ಜೋಶಿ, ವಿಜಯ ಸಂಕೇಶ್ವರ, ನನಗೆ ಸೇರಿದಂತೆ ಎಲ್ಲರಿಗೂ ಬೈದಿದ್ದಾರೆ. ಈಗಲೂ ಸ್ವಪಕ್ಷೀಯರ ವಿರುದ್ಧ ಮತ್ತೆ ಆರೋಪಿಸುತ್ತಿದ್ದಾರೆ ಎಂದು ದೂರಿದರು.
ಭಾರತ ಅಣು ಪರೀಕ್ಷೆ ನಡೆಸಿದ ಸಂದರ್ಭದಲ್ಲಿ ಮತ್ತು ನಂತರ ಅಂದಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಸರಕಾರ ಪತನವಾಗುವ ವೇಳೆ ಇದೇ ಯತ್ನಾಳ ಕಾಂಗ್ರೆಸ್ ಸೇರಲು ತುದಿಗಾಲ ಮೇಲೆ ನಿಂತಿದ್ದರು. ಆದರೆ, ಅಂದು ಬಿಜೆಪಿ ಮುಖಂಡ ಅನಂತಕುಮಾರ ಅವರು ಇವರನ್ನು ತಡೆದಿದ್ದರು. ನಂತರ ಪಕ್ಷ ವಿರೋಧಿ ಚಟುವಟಿಕೆ ಆರೋಪದ ಹಿನ್ನೆಲೆಯಲ್ಲಿ ಬಿಜೆಪಿಯಿಂದ ಜೆಡಿಎಸ್ ಸೇರಿದ್ದರು ಆಗ ಅವರು ಟೋಪಿ ಹಾಕಿಕೊಂಡು ನಮಾಜ್ ಮಾಡಿದ್ದರು. ಈಗ ಹಿಂದೂ ಹುಲಿ ಎಂದು ಹೇಳುವುದು ಹಾಸ್ಯಾಸ್ಪದವಾಗಿದೆ ಎಂದು ಟೀಕಿಸಿದರು.












Click it and Unblock the Notifications