Actor Vijay Rally Stampede: ತಮಿಳುನಾಡು ಕಾಲ್ತುಳಿತ: ಕರ್ನಾಟಕ ರಾಜಕೀಯ ನಾಯಕರು ಹೇಳಿದ್ದೇನು ?
Actor Vijay Rally Stampede: ತಮಿಳುನಾಡಿನಲ್ಲಿ ಮುಂದಿನ ವರ್ಷ ಸಾರ್ವತ್ರಿಕ ಚುನಾವಣೆ ನಡೆಯಲಿದೆ. ಇನ್ನೇನು ಚುನಾವಣೆಗೆ ಆರು ತಿಂಗಳು ಬಾಕಿ ಇರುವಾಗಲೇ ಭಾರೀ ದೊಡ್ಡ ದುರಂತ ಸಂಭವಿಸಿದ್ದು, ಇದು ಕರ್ನಾಟಕದಲ್ಲೂ ರಾಜಕೀಯ ಸಂಚಲನಕ್ಕೆ ಕಾರಣವಾಗಿದೆ. ತಮಿಳಗ ವೆಟ್ರಿ ಕಳಗಂ (ಟಿವಿಕೆ)ಮುಖ್ಯಸ್ಥ ಹಾಗೂ ನಟ ವಿಜಯ್ ಅವರು ತಮಿಳುನಾಡಿನ ಕರೂರು ಜಿಲ್ಲೆಯಲ್ಲಿ ಆಯೋಜಿಸಿದ್ದ ರ್ಯಾಲಿಯಲ್ಲಿ ಭಾರೀ ಕುಲ್ತುಳಿತ ಸಂಭವಿಸಿದ್ದು 38ಕ್ಕೂ ಹೆಚ್ಚು ಜನ ಮೃತಪಟ್ಟಿದ್ದು. ಇದು ಕರ್ನಾಟಕದಲ್ಲೂ ಸಂಚಲನಕ್ಕೆ ಕಾರಣವಾಗಿದೆ. ಕರ್ನಾಟಕದಲ್ಲೂ ಈಚೆಗೆ ಭಾರೀ ಕಾಲ್ತುಳಿತ ಸಂಭವಿಸಿತ್ತು. ಈ ವಿಚಾರವಾಗಿ ಕರ್ನಾಟಕ ಪ್ರಮುಖ ರಾಜಕೀಯ ನಾಯಕರು ರಿಯಾಕ್ಟ್ ಮಾಡಿದ್ದಾರೆ.
ತಮಿಳುನಾಡಿನ ಕರೂರಿನಲ್ಲಿ ನಡೆದ ರಾಜಕೀಯ ಮೆರವಣಿಗೆ ಸಂದರ್ಭದಲ್ಲಿ ಸಂಭವಿಸಿರುವ ದುರಂತದಲ್ಲಿ ಅನೇಕರು ಧಾರುಣ ಸಾವನ್ನಪ್ಪಿ, ಇನ್ನೂ ಅನೇಕರು ತೀವ್ರವಾಗಿ ಗಾಯಗೊಂಡಿರುವ ವಿಷಯ ತಿಳಿದು ತೀವ್ರ ಆಘಾತ ಉಂಟಾಯಿತು. ಇದು ಅತ್ಯಂತ ದುಃಖಕರ ಘಟನೆ. ಮೃತರ ಕುಟುಂಬಗಳಿಗೆ ನನ್ನ ಹೃದಯಪೂರ್ವಕ ಸಂತಾಪಗಳು. ಈ ಪ್ರಾಣ ನಷ್ಟವನ್ನು ಭರಿಸುವ ಶಕ್ತಿ ಅವರಿಗೆ ಸಿಗಲಿ ಹಾಗೂ ಮೃತರ ಆತ್ಮಕ್ಕೆ ಭಗವಂತ ಸದ್ಗತಿ ಕರುಣಿಸಲಿ. ಗಾಯಗೊಂಡವರೆಲ್ಲರೂ ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಪ್ರಾರ್ಥಿಸುತ್ತೇನೆ. 🙏 ಎಂದು ಕೇಂದ್ರ ಸಚಿವ ಎಚ್.ಡಿ ಕುಮಾರಸ್ವಾಮಿ ಅವರು ಹೇಳಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ತಮಿಳುನಾಡಿನ ಕರೂರಿನಲ್ಲಿ ನಡೆದ ರ್ಯಾಲಿಯಲ್ಲಿ ಸಂಭವಿಸಿದ ಕಾಲ್ತುಳಿತದಲ್ಲಿ ದುರಂತ ಸಾವು ನನಗೆ ದುಃಖ ತಂದಿದೆ. ಮೃತರ ಕುಟುಂಬದವರಿಗೆ ನನ್ನ ಹೃತ್ಪೂರ್ವಕ ಸಂತಾಪಗಳು ಮತ್ತು ಗಾಯಾಳುಗಳು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಪ್ರಾರ್ಥಿಸುತ್ತೇನೆ. ಈ ದುಃಖದ ಸಮಯದಲ್ಲಿ ಕರ್ನಾಟಕವು ತಮಿಳುನಾಡಿನ ಜನರೊಂದಿಗೆ ಒಗ್ಗಟ್ಟಿನಿಂದ ನಿಲ್ಲುತ್ತದೆ ಎಂದು ಹೇಳಿದ್ದಾರೆ.
ಇನ್ನು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಅವರು, ರಾಜಕೀಯ ನಾಯಕರು ಹಾಗೂ ಸರ್ಕಾರಗಳಿಗೆ ಜನರ ಸುರಕ್ಷತೆ ಬಗೆಗಿನ ತಾತ್ಸಾರ, ಅಸಡ್ಡೆಯಿದ್ದಾಗ ತಮಿಳುನಾಡಿನಂತಹ ದುರ್ಘಟನೆಗಳು ಸಂಭವಿಸಲಿದೆ. ಬೆಂಗಳೂರಿನ ಕಾಲ್ತುಳಿತದ ದುರಂತ ಘಟನೆ ಮಾಸುವ ಮುನ್ನವೇ ತಮಿಳುನಾಡಿನಲ್ಲಿ ರಣಭೀಕರ ರೀತಿಯಲ್ಲಿ ಮತ್ತೆ ಕಾಲ್ತುಳಿತ ಘಟಿಸಿ ಸಾವು-ನೋವಿನ ದುರಂತ ಸಂಭವಿಸಿರುವುದು ನಿಜಕ್ಕೂ ನೋವಿನ ಸಂಗತಿಯಾಗಿದೆ.
ತಮಿಳುನಾಡಿನಲ್ಲಿ ಚಲನಚಿತ್ರ ನಟರೊಬ್ಬರ ರಾಜಕೀಯ ರ‍್ಯಾಲಿಯಲ್ಲಿ ಸಂಭವಿಸಿರುವ ಕಾಲ್ತುಳಿತ ಘಟನೆಯಿಂದ 38 ಕ್ಕೂ ಹೆಚ್ಚು ಜನ ಮೃತಪಟ್ಟು, ಸಾವಿರಾರು ಜನ ಗಾಯಗೊಂಡು ಅಸ್ವತ್ತಗೊಂಡಿರುವ ಘಟನೆ ಅತ್ಯಂತ ಆಘಾತಕಾರಿ ದುರ್ಘಟನೆಯಾಗಿದೆ. ಇಂತಹ ಘಟನೆಗಳು ಪದೇ ಪದೇ ಘಟಿಸುತ್ತಿರುವುದು ನಾಗರಿಕ ಸಮಾಜ ತಲೆತಗ್ಗಿಸುವಂತಾಗಿದೆ.
ಇದರ ನೇರ ಹೊಣೆಯನ್ನು ತಮಿಳುನಾಡು ಸರ್ಕಾರ ಹಾಗೂ ರ‍್ಯಾಲಿ ಆಯೋಜಿಸಿದ ಮುಖಂಡರು ಹೊರಬೇಕಾಗುತ್ತದೆಯಲ್ಲದೇ, ತಮಿಳುನಾಡಿನಲ್ಲಿ ಕಾನೂನು ಸುವ್ಯವಸ್ಥೆ ನೆಲಕಚ್ಚಿರುವುದನ್ನು ಈ ಘಟನೆ ಸಾಕ್ಷೀಕರಿಸಿದೆ. ರಾಜಕೀಯ ವ್ಯವಸ್ಥೆಯೊಂದು ಇಂತಹ ಕಾರ್ಯಕ್ರಮಗಳನ್ನು ಆಯೋಜಿಸಿ ಮನುಷ್ಯ ಜೀವಗಳೊಂದಿಗೆ ಚೆಲ್ಲಾಟವಾಡಿರುವುದು ನಾಚಿಕೆಗೇಡಿನ ಪರಮಾವಧಿಯಾಗಿದೆ. ಈ ಘಟನೆಯ ಕುರಿತು ಪಾರದರ್ಶಕ ತನಿಖೆ ನಡೆಯಲಿ ಎಂದು ಒತ್ತಾಯಿಸುವೆ.
ಈ ದುರ್ಘಟನೆಯಲ್ಲಿ ಪ್ರಾಣಕಳೆದುಕೊಂಡ ಅಮಾಯಕರಿಗೆ ಸಂತಾಪ ಕೋರುವೆ. ಮೃತರ ಕುಟುಂಬಗಳಿಗೆ ದುಃಖ ಭರಿಸುವ ಶಕ್ತಿಯನ್ನು ದೇವರು ದಯಾಪಾಲಿಸಲಿ. ಈ ಕೂಡಲೇ ಮೃತ ಕುಟುಂಬಗಳಿಗೆ ಹಾಗೂ ಗಾಯಾಳುಗಳಿಗೆ ತಮಿಳುನಾಡು ಸರ್ಕಾರ ಹಾಗೂ ಕಾರ್ಯಕ್ರಮದ ಆಯೋಜಕರು ಸೂಕ್ತ ಪರಿಹಾರ ಒದಗಿಸಲಿ ಎಂದು ಆಗ್ರಹಿಸಿದ್ದಾರೆ.












Click it and Unblock the Notifications