ಈ ಕಾರಣಕ್ಕೆ ದರ್ಶನ್ ಅವರನ್ನ ಮದುವೆಗೆ ಕರೆಯಲಿಲ್ಲ: ಡಾಲಿ ಹೇಳಿದ್ದೇನು?
ನಟ ಡಾಲಿ ಧನಂಜಯ್ ಅವರ ಮದುವೆ ಮೈಸೂರಿನಲ್ಲಿ ನಡೆಯುತ್ತಿದ್ದು, ಧನ್ಯತಾ ಅವರೊಂದಿಗೆ ಸಪ್ತಪದಿ ತುಳಿಯಲು ಇನ್ನು ಕೆಲವೇ ದಿನ ಬಾಕಿ ಇದೆ. ಈಗಾಗಲೇ ಚಿತ್ರರಂಗದ ನಟ ನಟಿಯರು ಹಾಗೂ ರಾಜಕಾರಣಿಗಳಿಗೆ ಖುದ್ದಾಗಿ ತೆರಳಿ ಆಹ್ವಾನ ನೀಡಿ ಬಂದಿದ್ದಾರೆ. ಅಭಿಮಾನಿಗಳಿಗೂ ಡಾಲಿ ವಿಶೇಷವಾಗಿ ಮದುವೆಗೆ ಆಹ್ವಾನಿಸಿದ್ದಾರೆ. ಆದರೆ ನಟ ದರ್ಶನ್ ತೂಗುದೀಪ ಅವರು ಮದುವೆಗೆ ಬರ್ತಾರಾ ಎನ್ನುವ ಕುರಿತು ಅಪ್ಡೇಟ್ ಇಲ್ಲಿದೆ..
ನಟ ದರ್ಶನ್ ತೂಗುದೀಪ ಅವರನ್ನು ಡಾಲಿ ಮದುವೆಗೆ ಆಹ್ವಾನಿಸಿಲ್ಲ ಎನ್ನುವ ವಿಚಾರವಾಗಿ ಸೋಶಿಯಲ್ ಮೀಡಿಯಾದಲ್ಲಿ ಭಾರಿ ಚರ್ಚೆ ನಡೆಯುತ್ತಿತ್ತು. ಈ ಬಗ್ಗೆ ಪ್ರೆಸ್‌ಮೀಟ್‌ನಲ್ಲಿ ಡಾಲಿ ಹೇಳಿದ್ದ ಮಾತಿಗೂ ಕೆಲವರು ಸಿಟ್ಟಾಗಿದ್ದರು. ಇದೀಗ ಡಾಲಿ ಅವರಿಗೆ ಮತ್ತೆ ಇದೇ ಪ್ರಶ್ನೆ ಮೈಸೂರಿನಲ್ಲಿ ಎದುರಾಗಿದೆ. ಇದಕ್ಕೆ ಉತ್ತರಿಸಿರುವ ನಟ ಡಾಲಿ ಧನಂಜಯ್, ದರ್ಶನ್ ಅವರನ್ನು ಯಾವ ಕಾರಣಕ್ಕೆ ಮದುವೆಗೆ ಆಹ್ವಾನಿಸಲಿಲ್ಲ ಎಂಬ ಬಗ್ಗೆ ಸ್ಪಷ್ಟನೆಯೂ ನೀಡಿದ್ದಾರೆ.

ನಮ್ಮ ಮದುವೆಗೆ ಸ್ಯಾಂಡಲ್‌ವುಡ್‌ನ ಎಲ್ಲರನ್ನೂ ಆಹ್ವಾನಿಸಿದ್ದೇನೆ. ನಟ ದರ್ಶನ್ ಅವರನ್ನೂ ಕರೆಯುವ ಪ್ರಯತ್ನ ಮಾಡುತ್ತಿದ್ದೇನೆ. ಆದರೆ, ದರ್ಶನ್ ಅವರು ಸಿಗುತ್ತಿಲ್ಲ. ಈಗಿನ ಪರಿಸ್ಥಿತಿಯಲ್ಲಿ ಅವರನ್ನು ಭೇಟಿ ಮಾಡಲು ಸಾಧ್ಯವಾಗುತ್ತಿಲ್ಲ. ದರ್ಶನ್ ಅವರು ನನ್ನ ಮದುವೆಗೆ ಬಂದರೆ ನನಗೆ ತುಂಬಾ ಸಂತೋಷ ಎಂದು ಡಾಲಿ ಹೇಳಿದ್ದಾರೆ.
ಕೆಲ ದಿನಗಳ ಹಿಂದೆ ಪ್ರೆಸ್‌ಮೀಟ್‌ನಲ್ಲೂ ಡಾಲಿ ಅವರಿಗೆ ದರ್ಶನ್ ಅವರಿಗೆ ಆಹ್ವಾನ ನೀಡಿದ್ದೀರಾ? ಎಂದು ಪ್ರಶ್ನೆ ಕೇಳಲಾಗಿತ್ತು. ಇದಕ್ಕೆ ಉತ್ತರಿಸಿದ್ದ ಡಾಲಿ ಧನಂಜಯ್, ಮದುವೆಗೆ ಎಲ್ಲರನ್ನೂ ಕರೆಯುತ್ತಿದ್ದೇನೆ ಎಂದಾದ ಮೇಲೆ ದರ್ಶನ್ ಅವರನ್ನೂ ಕರೆಯುವ ಪ್ರಯತ್ನ ಮಾಡಿರುತ್ತೀನಿ ಅಲ್ಲವೇ? ಆದ್ರೆ ದರ್ಶನ್ ಅವರನ್ನು ನಾನು ರೀಚ್ ಮಾಡಲಿಕ್ಕೆ ಆಗ್ತಿಲ್ಲ. ನಾನು ತುಂಬಾ ಪ್ರೀತಿಯಿಂದ ಎಲ್ಲರನ್ನೂ ಕರೆಯುತ್ತಿದ್ದು, ಅವರನ್ನು ಇಲ್ಲಿಂದಲೇ ಕರೆಯುತ್ತೇನೆ ಎಂದು ಧನಂಜಯ್ ಹೇಳಿದ್ದರು.
ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ದರ್ಶನ್ ಅಭಿಮಾನಿಗಳು ಕೂಡ ಡಾಲಿ ಧನಂಜಯ್ ಅವರ ಬಗ್ಗೆ ಗರಂ ಆಗಿದ್ದರು. ದರ್ಶನ್ ಅವರನ್ನು ಡಾಲಿ ಬೇಕಂತಲೇ ಕಡೆಗಣಿಸಿದ್ದಾರೆ ಎಂದೆಲ್ಲ ಕಾಮೆಂಟ್ ಮಾಡಿದ್ದರು. ಆದರೆ ಡಾಲಿ ಈ ಬಗ್ಗೆ ಸ್ಪಷ್ಟನೆ ನೀಡುತ್ತಲೇ ಇದ್ದು ಕೂಡ ಅವರು ದರ್ಶನ್ ಅವರ ಬಗ್ಗೆ ತಮ್ಮ ನಿಲುವು ವ್ಯಕ್ತಪಡಿಸಿದ್ದಾರೆ. ದರ್ಶನ್ ಅವರು ಭೇಟಿಗೆ ಸಿಗುತ್ತಿಲ್ಲ, ಈ ಕಾರಣದಿಂದ ನಾನು ಅವರನ್ನು ಖುದ್ದಾಗಿ ಮದುವೆಗೆ ಆಹ್ವಾನಿಸಲು ಆಗಲಿಲ್ಲ. ಅವರು ಬಂದರೆ ತುಂಬಾ ಖುಷಿ ಎನ್ನುವ ಮೂಲಕ ಮಾಧ್ಯಮಗಳ ಮುಂದೆಯೇ ಅವರು ದರ್ಶನ್‌ರನ್ನ ಮದುವೆಗೆ ಆಹ್ವಾನಿಸಿದ್ದಾರೆ.

ಚಿತ್ರದುರ್ಗ ಮೂಲದ ವೈದ್ಯೆ ಧನ್ಯತಾ ಅವರೊಂದಿಗೆ ನಟ ಡಾಲಿ ಮದುವೆ ಆಗುತ್ತಿದ್ದಾರೆ. ಈ ಬಗ್ಗೆ ಕೆಲ ತಿಂಗಳ ಹಿಂದೆ ನಟ ಸೋಶಿಯಲ್ ಮೀಡಿಯಾದಲ್ಲಿ ಅನೌನ್ಸ್ ಮಾಡಿದ್ದರು. ಅಲ್ಲೇ ತಮ್ಮ ಭಾವಿ ಪತ್ನಿಯನ್ನು ಎಲ್ಲರಿಗೂ ಪರಿಚಯಿಸಿದ್ದರು. ಬಳಿಕ ಸಿಂಪಲ್ ಆಗಿ ಎಂಗೇಜ್‌ಮೆಂಟ್ ಕೂಡ ಆಗಿದ್ದರು. ಈಗ ಮೈಸೂರಿನಲ್ಲಿ ಮದುವೆ ನಡೆಯಲಿದ್ದು, ಮದುವೆ ಆಮಂತ್ರಣವನ್ನು ತುಂಬಾ ಸಿಂಪಲ್ ಆಗಿ ಕೈಬರಹದಲ್ಲಿ ಬರೆಸಿ ಎಲ್ಲರಿಗೂ ಆಹ್ವಾನಿಸಿದ್ದಾರೆ. ಮೈಸೂರಿನಲ್ಲಿ ಫೆಬ್ರವರಿ 15 ಹಾಗೂ 16ರಂದು ಡಾಲಿ-ಧನ್ಯತಾ ಮದುವೆ ನಡೆಯಲಿದೆ.
ಮೈಸೂರಿನ ವಸ್ತುಪ್ರದರ್ಶನ ಆವರಣದಲ್ಲಿ ಇವರ ಮದುವೆ ನಡೆಯಲಿದ್ದು, ಮದುವೆಗೆ ಈಗಾಗಲೇ ಎಲ್ಲ ರೀತಿಯ ಸಿದ್ಧತೆಗಳು ನಡೆದಿವೆ. ಮೈಸೂರಿನಲ್ಲೇ ಮದುವೆ ಆಗಬೇಕು ಎನ್ನುವುದು ನಮ್ಮ ಕನಸಾಗಿದ್ದು, ನನ್ನ ವಿದ್ಯಾಭ್ಯಾಸ, ಚಿತ್ರರಂಗಕ್ಕೆ ಕಾಲಿಟ್ಟಿದ್ದು ಎಲ್ಲವೂ ಮೈಸೂರಿನಿಂದಲೇ ಎಂದು ಡಾಲಿ ಹೇಳಿದ್ದರು. ಹಾಗಾಗಿ ತಾಯಿ ಚಾಮುಂಡೇಶ್ವರಿ ನೆಲದಲ್ಲೇ ನಾವು ಮದುವೆಯಾಗುತ್ತಿದ್ದೇವೆ ಎಂದು ನಟ ಧನಂಜಯ್ ಹೇಳಿದ್ದಾರೆ.












Click it and Unblock the Notifications